ಮಿಲಿಟರಿ ಗೂಢಚರ್ಯೆಗೆ ಆಗಸದ ಕಣ್ಣು: ಯುದ್ಧದ ನಡೆ ನಿರ್ಧರಿಸುವ ಉಪಗ್ರಹ ಮಾಹಿತಿ

ಮಿಲಿಟರಿ ಉಪಗ್ರಹಗಳು ಎಂದರೆ ಯಾವುದೇ ಸೇನೆಯ ಪಾಲಿಗೆ ಆಗಸದಲ್ಲಿ ಕಣ್ಣಿದ್ದಂತೆ. ಅತ್ಯಂತ ನಿಖರವಾಗಿ ಅತಿಸೂಕ್ಷ್ಮ ಮಾಹಿತಿಗಳನ್ನು ಇವು ತಕ್ಷಣಕ್ಕೆ ರವಾನಿಸಬಲ್ಲವು.

ಮಿಲಿಟರಿ ಗೂಢಚರ್ಯೆಗೆ ಆಗಸದ ಕಣ್ಣು: ಯುದ್ಧದ ನಡೆ ನಿರ್ಧರಿಸುವ ಉಪಗ್ರಹ ಮಾಹಿತಿ
ಉಪಗ್ರಹದಲ್ಲಿ ಸೆರೆಯಾದ ರಷ್ಯಾದ ಸೇನಾ ಜಮಾವಣೆ (Image Credit & Copyright: 2022 Maxar Techonologies)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 30, 2022 | 1:30 PM

ಮಿಲಿಟರಿ ಉಪಗ್ರಹಗಳು ಎಂದರೆ ಯಾವುದೇ ಸೇನೆಯ ಪಾಲಿಗೆ ಆಗಸದಲ್ಲಿ ಕಣ್ಣಿದ್ದಂತೆ. ಅತ್ಯಂತ ನಿಖರವಾಗಿ ಅತಿಸೂಕ್ಷ್ಮ ಮಾಹಿತಿಗಳನ್ನು ಇವು ತಕ್ಷಣಕ್ಕೆ ರವಾನಿಸಬಲ್ಲವು. ಯುದ್ಧದ ನಡೆಯ ಜೊತೆಗೆ ಸೋಲು-ಗೆಲುವನ್ನೂ ಸಹ ಉಪಗ್ರಹ ಮಾಹಿತಿಗಳು ಹಲವು ಬಾರಿ ನಿರ್ಣಾಯಕ ರೀತಿಯಲ್ಲಿ ನಿರ್ಧರಿಸಿದ್ದು ಉಂಟು. ಮಾಹಿತಿ ತಂತ್ರಜ್ಞಾನವು ಸರ್ವವ್ಯಾಪಿ ಆಗಿರುವ ಈ ಕಾಲದಲ್ಲಿ ಮಿಲಿಟರಿ ಉಪಗ್ರಹಗಳ ಪ್ರಾಮುಖ್ಯತೆಯನ್ನು ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪರಿಶೀಲಿಸಿದ್ದಾರೆ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ.

ಕಳೆದ ಎರಡು ದಶಕಗಳಲ್ಲಿ ಮಿಲಿಟರಿ ಸೇರಿದಂತೆ ಹತ್ತಾರು ವಿಚಾರಗಳಲ್ಲಿ ದತ್ತಾಂಶ ಸಂಗ್ರಹ ಮತ್ತು ಮಾಹಿತಿ ಪ್ರಸಾರ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಗೂಢಚರ್ಯೆ ದೃಷ್ಟಿಯಿಂದ ಉಪಗ್ರಹ ಸೆರೆಹಿಡಿದ ಮತ್ತು ರೂಪಿಸಿದ ವಿಷಯಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತಿವೆ. ಇದರ ಜೊತೆಗೆ ನಾಗರಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ದತ್ತಾಂಶಗಳು ಸಹ ಗೂಢಚರ್ಯೆಯ ಬಲ ಹೆಚ್ಚಿಸಿವೆ. ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದಾಗಿನಿಂದಲೂ ಜಗತ್ತು ಈ ಎರಡೂ ಮೂಲಾಧಾರಗಳ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಉಪಗ್ರಹ ತೆಗೆದ ಚಿತ್ರಗಳು ಉಕ್ರೇನ್​ನತ್ತ ರಷ್ಯಾ ಪಡೆಗಳು ಮುನ್ನುಗ್ಗಿ ಬರುತ್ತಿರುವುದನ್ನು ಸಾರಿ ಹೇಳಿದವು. ಇದರ ಜೊತೆಗೆ ನಾಗರಿಕರು ತೆಗೆದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ದತ್ತಾಂಶಗಳು ದಾಳಿಯಿಂದ ಆದ ಹಾನಿಯ ಮಟ್ಟ ಎಷ್ಟಿತ್ತು ಎಂಬುದನ್ನು ಬಹಿರಂಗಪಡಿಸಿದವು.

ಅಂತರಿಕ್ಷ ಕಕ್ಷೆಯಲ್ಲಿ ಮೊದಲಿಗಿಂತಲೂ ಅತಿ ಹೆಚ್ಚು ಉಪಗ್ರಹಗಳಿರುವುದು ಸ್ಪಷ್ಟವಾಗಿರುವ ಸಂಗತಿ. ಉಪಗ್ರಹಗಳು ಚಿತ್ರಗಳನ್ನು ತೆಗೆದು ಕಳುಹಿಸುವುದು ಹೊಸದೇನೂ ಅಲ್ಲ. ಆದರೆ ಅವುಗಳು ಕಳುಹಿಸುವ ಚಿತ್ರಗಳ ಗುಣಮಟ್ಟ ಮತ್ತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವುಗಳು ನೀಡುತ್ತಿರುವ ಸಹಾಯ ಮಾತ್ರ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಇತ್ತೀಚಿನ ದಿನಗಳಲ್ಲಿ ಪ್ರಸಾರವಾದ ಕೆಲ ಉಪಗ್ರಹ ಚಿತ್ರಗಳು ರಷ್ಯಾದ ನಾಶಗೊಂಡ ಹೆಲಿಕಾಪ್ಟರ್​ಗಳು, ಮರಿಯುಪೋಲ್​ನ ಶಾಪಿಂಗ್ ಸೆಂಟರ್ ಮತ್ತು ವಿವಿಧ ಜಿಲ್ಲೆಗಳಲ್ಲಿ ಆದ ಬೃಹತ್ ಹಾನಿಯ ಅಂದಾಜು ನೀಡಿದವು. ಕಪ್ಪು ಸಮುದ್ರದಲ್ಲಿ ನಾಗರಿಕ ಟ್ಯಾಂಕರ್ ಹೊತ್ತಿ ಉರಿದ ವಿಷಯವೂ ಇಂಥದ್ದೇ ಪೋಸ್ಟ್ ಒಂದರ ಮೂಲಕ ಬಹಿರಂಗವಾಯಿತು.

ಇಂದು ಅನೇಕ ಖಾಸಗಿ ಸಂಸ್ಥೆಗಳು ಸಹ ತಮ್ಮದೇ ಆದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿವೆ ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತವೆ. ಉದಾಹರಣೆಗೆ ಪ್ಲಾನೆಟ್ ಮತ್ತು ಮ್ಯಾಕ್ಸರ್ ಉಪಗ್ರಹಗಳು ಯುದ್ಧ ವಲಯದ ಹಲವು ಚಿತ್ರಗಳನ್ನು ಹಂಚಿಕೊಂಡಿವೆ. ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರಗಳು ವೈರಲ್ ಆಗಿದ್ದವು. ಸಾವಿರಾರು ಮೈಲಿಗಳಷ್ಟು ದೂರದಿಂದ ತೆಗೆದ ಚಿತ್ರಗಳ ಸಹಾಯದಿಂದ ರಷ್ಯಾದ ಸೈನ್ಯ ಪಡೆಗಳು ಎಷ್ಟರ ಮಟ್ಟಿಗೆ ಉಕ್ರೇನ್ ಒಳಗೆ ನುಸುಳುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.

ಸರ್ಕಾರಿ ಮತ್ತು ಗೂಢಚರ್ಯೆ ಸಂಘಟನೆಗಳ ಉಪಗ್ರಹಗಳು ಹೆಚ್ಚು ಗೌಪ್ಯವಾದ ಮಾಹಿತಿಗಳನ್ನು ನಿಖರವಾಗಿ ಸಂಗ್ರಹಿಸಿದರೆ, ಖಾಸಗಿ ವಾಣಿಜ್ಯ ಸಂಸ್ಥೆಗಳು ಹಲವು ವರ್ಷಗಳಿಂದ ತಮ್ಮದೇ ಆದ ಚಿತ್ರಗಳನ್ನು ಮತ್ತು ಪ್ರಮುಖ ದತ್ತಾಂಶಗಳನ್ನು ಮಾರಾಟ ಮಾಡುತ್ತಿವೆ. ಇಂದು ಈ ವಿಷಯಗಳು ಸಾರ್ವಜನಿಕರ ಕೈಗೆಟುಕುವ ಸೈಬರ್ ಕ್ಷೇತ್ರದಲ್ಲಿ ಸುಲಭವಾಗಿ ಲಭ್ಯವಿದೆ.

ವಿವಿಧ ಪ್ರಕಾರದ ವ್ಯವಹಾರ ವಲಯಗಳು ಮತ್ತು ಸಂಘಟನೆಗಳು ಉಪಗ್ರಹಗಳು ಒದಗಿಸುವ ಚಿತ್ರಗಳನ್ನು ಉಪಯೋಗಿಸಿಕೊಂಡು ನೈಸರ್ಗಿಕ ವೈಪರೀತ್ಯಗಳಿಂದ ಹಿಡಿದು, ಬದಲಾಗುತ್ತಿರುವ ಹಸಿರು ವಲಯಗಳು, ಸಾಗರ ಚಟುವಟಿಕೆ, ಹಿಮಚ್ಛಾದಿತ ಪ್ರದೇಶಗಳ ಚಟುವಟಿಕೆ ಮತ್ತು ಹಡಗುಗಳ ಚಲನವಲನಗಳನ್ನು ಗಮನಿಸುತ್ತವೆ. ಕ್ವಿಲ್ಟಿ ಅನಾಲಿಟಿಕ್ಸ್​ನಲ್ಲಿ ಪಾಲುದಾರರಾಗಿರುವ ಕ್ರಿಸ್ ಕ್ವಿಲ್ಟಿ ಈ ಕುರಿತು ವಿಶ್ಲೇಷಿಸಿ, ಅಂತರಿಕ್ಷ ಕಕ್ಷೆಯಲ್ಲಿ ವಾಣಿಜ್ಯ ಉಪಗ್ರಹಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕಾರಣ ಡೇಟಾ ಹಂಚಿಕೊಳ್ಳುವ ಸಾಧ್ಯತೆಗಳು ಕೂಡ ಅದೇ ಪ್ರಮಾಣದಲ್ಲಿ ಹೆಚ್ಚಾಗಿದೆ. ಆಕಾಶದಲ್ಲಿ ಕಣ್ಣುಗಳ ಸಂಖ್ಯೆ ಹೆಚ್ಚಾಗಿವೆ ಎಂದು ಹೇಳುತ್ತಾರೆ.

ಸಾರ್ವಜನಿಕರು ಪ್ರತಿ ಚದರ ಕಿಮೀಗೆ 10 ಡಾಲರ್ (ಸುಮಾರು ₹ 780) ನೀಡಿ ಅತ್ಯುತ್ತಮ ಗುಣಮಟ್ಟದ ಉಪಗ್ರಹ ಚಿತ್ರಗಳನ್ನು ಖರೀದಿಸಬಹುದಾಗಿದೆ. ಈ ಚಿತ್ರಗಳು ಅತ್ಯಧಿಕ ರೆಸಲ್ಯೂಶನ್ ಹೊಂದಿದ್ದು ಘಟನೆಯ ಸ್ಥಳದ 30 ಸೆಂಮೀ ಉದ್ದ ಮತ್ತು 30 ಸೆಂಮೀ ಅಗಲದ ಅತಿಸೂಕ್ಷ್ಮ ವಿವರಗಳನ್ನು ಕೂಡ ತೋರಿಸಬಲ್ಲವು. ತಾಂತ್ರಿಕ ಸಾಮರ್ಥ್ಯದಿಂದಾಗಿ ನಿರ್ದಿಷ್ಟ ವಾಹನಗಳನ್ನು ಮತ್ತು ರಸ್ತೆ ಗುರುತುಗಳನ್ನು ಕೂಡ ಗುರುತಿಸಲು ನಿಮಗೆ ಸಹಾಯವಾಗುತ್ತದೆ. ಪ್ರತಿ 24 ಗಂಟೆಗಳಲ್ಲಿ ನಿರ್ದಿಷ್ಟ ಜಾಗಗಳಲ್ಲಾಗುವ ಬದಲಾವಣೆಗಳ ಮೇಲೆ ನಿಗಾವಹಿಸುವುದು ಈಗ ಸಾಧ್ಯವಿದೆ. ಆದ್ದರಿಂದ ತಕ್ಷಣಕ್ಕೆ ಉಂಟಾಗುವ ಪ್ರತಿಯೊಂದು ಸಣ್ಣ ಬದಲಾವಣೆಯನ್ನು ಕೂಡ ಗುರುತಿಸುವುದು ಸಾಧ್ಯ.

ಕನ್ ಫ್ಲಿಕ್ಟ್ ನ್ಯೂಸ್ ಸಹ-ಸಂಸ್ಥಾಪಕರು ಮತ್ತು ಬ್ರಿಟನ್​ನ ವೇಲ್ಸ್ ಪ್ರದೇಶದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಕೈಲ್ ಗ್ಲೆನ್ ಅವರಿಗೆ ಒಂದು ಹವ್ಯಾಸವಿದೆ. ಅವರು ಉಪ್ರಗಹ ಆಧರಿತ ಚಿತ್ರಗಳನ್ನು ನಿಯಮಿತವಾಗಿ ಗಮನಿಸುತ್ತಿರುತ್ತಾರೆ. ಅರ್ಥೈಸಿಕೊಳ್ಳಲು ಹೆಚ್ಚು ಕಷ್ಟಕರವಾದ ಸಿಂಥೆಟಿಕ್ ಅಪರ್ಚರ್ ರಡಾರ್ (ಎಸ್‌ಎಆರ್) ಚಿತ್ರವನ್ನು ಸಹ ಆಪ್ಟಿಕಲ್ ಲೆನ್ಸ್ ನಿಂದ ಸೆರೆಹಿಡಿಯಲಾಗುತ್ತಿದೆ. ಉಪಗ್ರಹಗಳು ಮೋಡಗಳ ಆವರಣದ ಮುಖಾಂತರ ಕೂಡ ಎಸ್‌ಎಆರ್ ಚಿತ್ರಗಳನ್ನು ಸೆರೆಹಿಡಿಯುವಷ್ಟು ಸಶಕ್ತವಾಗಿವೆ. ಇಲ್ಲಿ ದೊರೆಯುವ ಬ್ಲಾಕ್-ಅಂಡ್-ವೈಟ್ ಚಿತ್ರಗಳು ಟ್ಯಾಂಕ್ ಗಳನ್ನು ಒಳಗೊಂಡಂತೆ ವಾಹನಗಳನ್ನು ಬಿಳಿ ಚುಕ್ಕೆಗಳ ಸಾಲುಗಳ ರೂಪದಲ್ಲಿ ತೋರಿಸಬಹುದು ಎನ್ನುತ್ತಾರೆ ಅವರು.

ಕಳೆದ 10 ರಿಂದ 15 ವರ್ಷಗಳಿಂದ ಆಧುನಿಕ ಯುದ್ಧತಂತ್ರಗಳಲ್ಲಿ ಉಪ್ರಗ್ರಹ ಚಿತ್ರಗಳು ಬಳಕೆಯಾಗುತ್ತಲೇ ಇವೆ. ಆದರೆ ಉಕ್ರೇನ್-ರಷ್ಯಾ ಯುದ್ಧ ಆರಂಭವಾದಂದಿನಿಂದ ಉಪಗ್ರಹ ಚಿತ್ರಣದ ವ್ಯಾಪ್ತಿ ಮತ್ತು ಲಭ್ಯತೆ ವಿಭಿನ್ನವಾಗಿದೆ. ಇದರರ್ಥ ಉಪಗ್ರಹ ಚಿತ್ರಣವು ಆಕ್ರಮಣದ ಬಗ್ಗೆ ಯಾವುದೇ ತಪ್ಪು ಮಾಹಿತಿಗೆ ಅವಕಾಶವಿಲ್ಲದಂತೆ ಮಾಡಿದೆ. ಯುದ್ಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿ ಬರುವ ಮಾಹಿತಿಗಳನ್ನು ಜನರು ಸ್ವತಃ ತಾವೇ ವಿಶ್ಲೇಷಿಸಬಹುದಾಗಿದೆ. ಉಪಗ್ರಹ ಚಿತ್ರಗಳನ್ನು ಪ್ರಮಾಣೀಕರಿಸಲು ಈಗ ಜನರಿಗೆ ಅವಕಾಶವಿದೆ.

Girish-Linganna

ಒಳಚಿತ್ರದಲ್ಲಿ ಗಿರೀಶ್ ಲಿಂಗಣ್ಣ

(ಲೇಖಕ ಗಿರೀಶ್ ಲಿಂಗಣ್ಣ ಅವರು ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ)

ಇದನ್ನೂ ಓದಿ: National Defence: ಭಾರತೀಯ ಸಶಸ್ತ್ರಪಡೆಗಳ ಬಲವರ್ಧನೆಗೆ ಬೇಕಿದೆ ಮಾರಿಟೈಮ್ ಥಿಯೇಟರ್ ಕಮಾಂಡ್

ಇದನ್ನೂ ಓದಿ: National Defence: ಭಾರತಕ್ಕೆ ಬೇಕು, ನಿಖರ ದಾಳಿಯ ಪ್ರಬಲ ಹೆಲಿಕಾಪ್ಟರ್‌ಗಳು

Published On - 1:29 pm, Wed, 30 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್