ಪ್ರತಿ ವರ್ಷದಂತೆ ಈ ವರ್ಷವೂ ಗ್ಲೋಬಲ್ ಫೈರ್ ಪವರ್ ಸಂಸ್ಥೆ (Global Fire Power) ಜಾಗತಿಕವಾಗಿ ಅತ್ಯಂತ ಶಕ್ತಿಶಾಲಿ ಸೇನಾಪಡೆಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಸಂಶೋಧನೆ ಒಟ್ಟು ಜಗತ್ತಿನ ಒಟ್ಟಾರೆ 140 ರಾಷ್ಟ್ರಗಳನ್ನು ವ್ಯಾಪಿಸಿದೆ. 2023ರಲ್ಲಿ, ಮೊದಲ ನಾಲ್ಕು ರಾಷ್ಟ್ರಗಳು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇನ್ನೊಂದೆಡೆ ಇತರ ರಾಷ್ಟ್ರಗಳ ಸ್ಥಾನಗಳು 2022ರ ಬಳಿಕ ಒಂದಷ್ಟು ಬದಲಾವಣೆ ಕಂಡಿವೆ. ಗ್ಲೋಬಲ್ ಫೈರ್ ಪವರ್ ಒಂದು ವಿಶ್ಲೇಷಣೆ ನಡೆಸಿ, ಈ ರ‍್ಯಾಂಕಿಂಗ್ ಅನ್ನು ಅಭಿವೃದ್ಧಿ ಪಡಿಸಲು ಕನಿಷ್ಠ 50 ಗುಣಲಕ್ಷಣಗಳನ್ನು ಪಟ್ಟಿಮಾಡಿದೆ. ಆಯುಧಗಳು, ರಾಷ್ಟ್ರೀಯ ಆಯವ್ಯಯದಲ್ಲಿ ಮಿಲಿಟರಿಗೆ ಮೀಸಲಿಡುವ ಹಣ, ನೈಸರ್ಗಿಕ ಸಂಪನ್ಮೂಲಗಳು, ಸಜ್ಜುಗೊಳಿಸಿದ ಉಪಕರಣಗಳು, ಭೂ, ವಾಯು ಹಾಗೂ ನೌಕಾಸೇನೆಗಳು ಇದರಲ್ಲಿ ಗಮನಿಸಲ್ಪಡುವ ಪ್ರಮುಖ ಅಂಶಗಳಾಗಿವೆ.
ಈ ಎಲ್ಲ ಮಾಹಿತಿಗಳ ಆಧಾರದಲ್ಲಿ, ಪವರ್ ಇಂಡೆಕ್ಸ್ ಎಂದು ಕರೆಯಲ್ಪಡುವ ಅಂಕವನ್ನು ನೀಡಲಾಗುತ್ತದೆ. ಆದ್ದರಿಂದ, ಒಂದು ದೇಶದ ಮಿಲಿಟರಿ ಸೂಚ್ಯಂಕ ಶೂನ್ಯಕ್ಕೆ ಸಮೀಪವಿದ್ದಷ್ಟೂ ಅದು ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. 2023ರಲ್ಲಿ ಈ ಕೆಳಗಿನ ರಾಷ್ಟ್ರಗಳು ಜಗತ್ತಿನಲ್ಲಿ ಅತ್ಯಧಿಕ ಮಿಲಿಟರಿ ಸಾಮರ್ಥ್ಯ ಹೊಂದಿವೆ.
2023ನೇ ಇಸವಿಯಲ್ಲಿ ಅಮೆರಿಕಾದ ಫೈರ್ ಪವರ್ ಇಂಡೆಕ್ಸ್ ಅಂಕ 0.0712 ಆಗಿದೆ. ಅಮೆರಿಕಾದ ಸೇನಾಪಡೆಗಳಲ್ಲಿ 1.4 ಮಿಲಿಯನ್ ಸಕ್ರಿಯ ಯೋಧರಿದ್ದು, 4,40,000 ಮೀಸಲು ಯೋಧರಿದ್ದಾರೆ. ಅಮೆರಿಕಾದ ಬಳಿ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನಾಪಡೆಯಿದ್ದು, 770 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಬಜೆಟ್ ಹೊಂದಿದೆ. ಇದು 688.8 ಬಿಲಿಯನ್ ಯೂರೋಗೆ ಸಮನಾಗಿದೆ.
ಅಮೆರಿಕಾ ತನ್ನ ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇರುವುದನ್ನು ಒಪ್ಪಿಕೊಂಡಿದೆ. ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪ್ರಿ) ಅಮೆರಿಕಾದ ಬಳಿ ಅಂದಾಜು 5,550 ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ಅಂದಾಜಿಸಿದೆ.
ಇದನ್ನೂ ಓದಿ: ಬೆಳೆಯುತ್ತಿರುವ ಭಾರತದ ವೈಮಾನಿಕ ಮಾರುಕಟ್ಟೆಯಲ್ಲಿ ವಿಮಾನಯಾನ ಸಂಸ್ಥೆಗಳೇಕೆ ವೈಫಲ್ಯ ಕಾಣುತ್ತಿವೆ?
ರಷ್ಯಾದ ಪವರ್ ಇಂಡೆಕ್ಸ್ ಸ್ಕೋರ್ 0.0714 ಆಗಿದೆ. ರಷ್ಯಾ ಜಗತ್ತಿನ ಎರಡನೆಯ ಅತ್ಯಂತ ಶಕ್ತಿಶಾಲಿ ಸೇನೆಯಾಗಿದ್ದು, 8,50,000 ಸಕ್ರಿಯ ಸೈನಿಕರು ಮತ್ತು 2,50,000 ಮೀಸಲು ಯೋಧರನ್ನು ಹೊಂದಿದೆ. ರಷ್ಯಾದ ಮಿಲಿಟರಿ ಬಜೆಟ್ 154 ಬಿಲಿಯನ್ ಡಾಲರ್ (ಅಂದಾಜು 137.8 ಬಿಲಿಯನ್ ಯೂರೋ) ಆಗಿದೆ. ಸಿಪ್ರಿಯ ಅಂದಾಜಿನ ಪ್ರಕಾರ, ರಷ್ಯಾದ ಬಳಿ 6,255 ಅಣ್ವಸ್ತ್ರ ಸಿಡಿತಲೆಗಳಿವೆ.
ಚೀನಾಗೆ ಪವರ್ ಇಂಡೆಕ್ಸ್ 0.0722 ನೀಡಲಾಗಿದೆ. ಜಗತ್ತಿನಲ್ಲಿ ಮೂರನೇ ಅತ್ಯಂತ ಶಕ್ತಿಶಾಲಿ ಸೇನೆಯಾಗಿರುವ ಚೀನಾದ ಬಳಿ ಅತ್ಯಧಿಕ ಸೈನಿಕರಿದ್ದಾರೆ. ಚೀನಾ ಬಳಿ 2 ಮಿಲಿಯನ್ ಸಕ್ರಿಯ ಯೋಧರಿದ್ದು, 5,10,000 ಮೀಸಲು ಯೋಧರಿದ್ದಾರೆ. ಚೀನಾ ರಕ್ಷಣೆಗಾಗಿ 250.2 ಬಿಲಿಯನ್ ಡಾಲರ್ (227.4 ಯೂರೋ) ವೆಚ್ಚ ಮಾಡುತ್ತದೆ.
ಸಿಪ್ರಿಯ ಅಂದಾಜಿನ ಪ್ರಕಾರ, ರಷ್ಯಾ ಬಳಿ 350 ನ್ಯೂಕ್ಲಿಯರ್ ಬಾಂಬ್‌ಗಳಿವೆ.
ಭಾರತದ ಪವರ್ ಇಂಡೆಕ್ಸ್ ಸ್ಕೋರ್ 0.1025 ಆಗಿದೆ. ಭಾರತದ ಸೇನಾಪಡೆಗಳು 1.45 ಮಿಲಿಯನ್ ಯೋಧರನ್ನು ಹೊಂದಿದ್ದು, 1.15 ಮಿಲಿಯನ್ ಮೀಸಲು ಯೋಧರನ್ನು ಹೊಂದಿದೆ. ಭಾರತದ ಮಿಲಿಟರಿ ಬಜೆಟ್ 49.6 ಬಿಲಿಯನ್ ಡಾಲರ್ (44.4 ಬಿಲಿಯನ್ ಯೂರೋ) ಆಗಿದೆ.
ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಜಗತ್ತಿನ ನಾಲ್ಕು ರಾಷ್ಟ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಪ್ರಿ ಭಾರತದ ಬತ್ತಳಿಕೆಯಲ್ಲಿ 156 ಸಿಡಿತಲೆಗಳಿರಬಹುದು ಎಂದು ಅಂದಾಜಿಸಿದೆ.
ಇದನ್ನೂ ಓದಿ: ಮತದಾನ ಸಾಂವಿಧಾನಿಕ ಹಕ್ಕು, ಅರ್ಹ ನಾಯಕರನ್ನು ಆಯ್ಕೆ ಮಾಡಲು ಇರುವ ಅವಕಾಶ
ಯುನೈಟೆಡ್ ಕಿಂಗ್‌ಡಮ್ 0.1435 ಪವರ್ ಇಂಡೆಕ್ಸ್ ಸ್ಕೋರ್ ಹೊಂದಿದೆ. ಬ್ರಿಟಿಷ್ ಸೇನೆ ಜಗತ್ತಿನ ಆರನೇ ಶಕ್ತಿಶಾಲಿ ಸೇನೆಯಾಗಿದೆ. ಯುನೈಟೆಡ್ ಕಿಂಗ್‌ಡಮ್ ಬಳಿ 1,94,000 ಸಕ್ರಿಯ ಯೋಧರು ಮತ್ತು 37,000 ಮೀಸಲು ಯೋಧರಿದ್ದಾರೆ. ಬ್ರಿಟಿಷ್ ಮಿಲಿಟರಿಯ ವಾರ್ಷಿಕ ಬಜೆಟ್ 38 ಬಿಲಿಯನ್ ಡಾಲರ್ ಅಥವಾ 34.4 ಬಿಲಿಯನ್ ಯೂರೋ ಆಗಿದೆ.
ಸಿಪ್ರಿ ಯುನೈಟೆಡ್ ಕಿಂಗ್‌ಡಮ್ ಬಳಿ 225 ಅಣ್ವಸ್ತ್ರ ಬಾಂಬ್‌ಗಳಿವೆ ಎಂದು ಅಂದಾಜಿಸಿದೆ.
ಗ್ಲೋಬಲ್ ಫೈರ್ ಪವರ್ ಪಟ್ಟಿಯಲ್ಲಿ ಜಾಗತಿಕ ಮಿಲಿಟರಿ ದೈತ್ಯರು
ದಕ್ಷಿಣ ಕೊರಿಯಾ 0.1505 ಪವರ್ ಇಂಡೆಕ್ಸ್ ಸ್ಕೋರ್ ಸಂಪಾದಿಸಿದೆ. ಉತ್ತರ ಕೊರಿಯಾದೊಡನೆ ಗಡಿ ಹಂಚಿಕೊಳ್ಳುವ ದಕ್ಷಿಣ ಕೊರಿಯಾದ ಬಳಿ 5,55,000 ಸಕ್ರಿಯ ಯೋಧರು ಮತ್ತು 5,00,000 ಮೀಸಲು ಪಡೆಗಳಿವೆ. ದಕ್ಷಿಣ ಕೊರಿಯಾದ ಮಿಲಿಟರಿ ಬಜೆಟ್ 46.3 ಬಿಲಿಯನ್ ಡಾಲರ್ ಅಥವಾ 41.4 ಬಿಲಿಯನ್ ಯೂರೋ ಆಗಿದೆ.
ದಕ್ಷಿಣ ಕೊರಿಯಾದ ಬಳಿ ಪರಮಾಣು ಶಸ್ತ್ರಾಸ್ತ್ರಗಳಿಲ್ಲ.
ಪಾಕಿಸ್ತಾನದ ಪವರ್ ಇಂಡೆಕ್ಸ್ ಸ್ಕೋರ್ 0.1694 ಆಗಿದೆ. ಭಾರತ ಮತ್ತು ಚೀನಾದ ಜೊತೆ ಗಡಿ ಹಂಚಿಕೊಳ್ಳುವ ಪಾಕಿಸ್ತಾನದ ಬಳಿ 6,40,000 ಸಕ್ರಿಯ ಯೋಧರಿದ್ದು, 5,00,000 ಮೀಸಲು ಯೋಧರಿದ್ದಾರೆ. ಪಾಕಿಸ್ತಾನದ ವಾರ್ಷಿಕ ಮಿಲಿಟರಿ ಬಜೆಟ್ 7.7 ಬಿಲಿಯನ್ ಡಾಲರ್ ಅಥವಾ 6.9 ಬಿಲಿಯನ್ ಯೂರೋ ಆಗಿದೆ.
ಸಿಪ್ರಿಯ ಪ್ರಕಾರ, ಪಾಕಿಸ್ತಾನದ ಬಳಿ 165 ಅಣ್ವಸ್ತ್ರ ಸಿಡಿತಲೆಗಳು ಮತ್ತು ಆಯುಧಗಳಿವೆ.
ಇದನ್ನೂ ಓದಿ: ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣಾ ಸಿದ್ಧತೆ: ಅಪಾಯ ತಗ್ಗಿಸಿ, ಮುಂದೊತ್ತಿ ಬರುವ ಭಾರತೀಯ ವಾಯುಪಡೆ
ಜಪಾನಿನ ಪವರ್ ಇಂಡೆಕ್ಸ್ ಸ್ಕೋರ್ 0.1711 ಆಗಿದೆ. ಜಪಾನ್ ಬಳಿ 2,40,000 ಸಕ್ರಿಯ ಯೋಧರಿದ್ದು, 55,000 ಮೀಸಲು ಯೋಧರಿದ್ದಾರೆ. ಜಪಾನಿನ ರಕ್ಷಣಾ ಬಜೆಟ್ 47.5 ಬಿಲಿಯನ್ ಡಾಲರ್ ಅಥವಾ 42.5 ಬಿಲಿಯನ್ ಯೂರೋ ಆಗಿದೆ. ಜಪಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ.
ಫ್ರಾನ್ಸ್ ಪವರ್ ಇಂಡೆಕ್ಸ್ 0.1848 ಆಗಿದ್ದು, ಜಗತ್ತಿನ ಒಂಬತ್ತನೇ ಶಕ್ತಿಶಾಲಿ ಸೇನೆಯಾಗಿದೆ. ಫ್ರಾನ್ಸ್ ಬಳಿ 2,00,000 ಸಕ್ರಿಯ ಯೋಧರಿದ್ದು, 35,000 ಮೀಸಲು ಪಡೆ ಯೋಧರಿದ್ದಾರೆ. 2022ರಲ್ಲಿ ಫ್ರಾನ್ಸ್ 40.9 ಬಿಲಿಯನ್ ಡಾಲರ್ (36.6 ಬಿಲಿಯನ್ ಯೂರೋ) ರಕ್ಷಣಾ ಬಜೆಟ್ ಹೊಂದಿತ್ತು.
ಸಿಪ್ರಿಯ ಪ್ರಕಾರ, ಫ್ರಾನ್ಸ್ ಬಳಿ 290 ಅಣ್ವಸ್ತ್ರ ಸಿಡಿತಲೆಗಳಿವೆ. ಕಳೆದ ವರ್ಷದಿಂದ ಫ್ರಾನ್ಸ್ ಈ ರಾಂಕಿಂಗ್‌ನಲ್ಲಿ ಎರಡು ಸ್ಥಾನ ಕುಸಿತ ಕಂಡಿದೆ.
ಇಟಲಿಯ ಪವರ್ ಇಂಡೆಕ್ಸ್ ಸ್ಕೋರ್ 0.1973 ಆಗಿದ್ದು, ಇಟಲಿ ಜಾಗತಿಕ ಮಿಲಿಟರಿ ಶಕ್ತಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಇಟಲಿಯ ಸೇನಾಪಡೆಗಳಲ್ಲಿ 1,70,000 ಸಕ್ರಿಯ ಯೋಧರಿದ್ದು, 20,000 ಮೀಸಲು ಯೋಧರಿದ್ದಾರೆ. ಇಟಲಿ ಸರ್ಕಾರ ತನ್ನ ಮಿಲಿಟರಿ ವೆಚ್ಚವನ್ನು 2028ರ ವೇಳೆಗೆ ಜಿಡಿಪಿಯ 2%ಗೆ ತಲುಪಿಸುವ ಉದ್ದೇಶ ಹೊಂದಿದೆ. ಇಟಲಿಯ ವಾರ್ಷಿಕ ಮಿಲಿಟರಿ ಬಜೆಟ್ 12 ಬಿಲಿಯನ್ ಯೂರೋ ಇರಬಹುದು ಎನ್ನಲಾಗಿದೆ. ಕಳೆದ ವರ್ಷ ಇಟಲಿ ಅಗ್ರ ಹತ್ತು ಮಿಲಿಟರಿ ಶಕ್ತಿಗಳ ಪಟ್ಟಿಯಲ್ಲಿ ಇರಲಿಲ್ಲ.
Girish Linganna
ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
Published On - 1:07 pm, Tue, 9 May 23