ಜಿ20 ಶೃಂಗಸಭೆಗೆ ಭಾರತ ಸನ್ನದ್ಧ: ಪ್ರಮುಖ ವಿಚಾರಗಳು, ರಾಜತಾಂತ್ರಿಕ ಸವಾಲುಗಳೇನು?

G20 Summit; ಜಿ-20 ಸಮ್ಮೇಳನದಲ್ಲಿ ಸಾಮಾನ್ಯವಾಗಿ ಆರ್ಥಿಕತೆ, ಹವಾಮಾನ ಬದಲಾವಣೆ ಮತ್ತು ಶಿಕ್ಷಣದಂತಹ ವಿಚಾರಗಳು ಚರ್ಚಿಸಲ್ಪಡುತ್ತವೆ. ಅದರೊಡನೆ, ಸಮ್ಮೇಳನದ ವರ್ಷದಲ್ಲಿ ಜರುಗುವ ಇತರ ಜಾಗತಿಕ ಕಾಳಜಿಯ ವಿಚಾರಗಳು, ಉದಾಹರಣೆಗೆ ಕೋವಿಡ್-19 ಸಾಂಕ್ರಾಮಿಕದ ಪರಿಣಾಮಗಳು ಅಥವಾ ಪ್ರಸ್ತುತ ಜರುಗುತ್ತಿರುವ ರಷ್ಯಾ ನಡೆಸುತ್ತಿರುವ ಉಕ್ರೇನ್ ಮೇಲಿನ ಆಕ್ರಮಣದಂತಹ ವಿದ್ಯಮಾನಗಳ ಕುರಿತು ಚರ್ಚಿಸಲಾಗುತ್ತದೆ.

ಜಿ20 ಶೃಂಗಸಭೆಗೆ ಭಾರತ ಸನ್ನದ್ಧ: ಪ್ರಮುಖ ವಿಚಾರಗಳು, ರಾಜತಾಂತ್ರಿಕ ಸವಾಲುಗಳೇನು?
ಜಿ20 ಶೃಂಗಸಭೆಗೆ ಭಾರತ ಸನ್ನದ್ಧ: ಪ್ರಮುಖ ವಿಚಾರಗಳು, ರಾಜತಾಂತ್ರಿಕ ಸವಾಲುಗಳೇನು?
Follow us
Jagadish PB
| Updated By: Digi Tech Desk

Updated on:Nov 03, 2023 | 2:27 PM

ಲೇಖಕರು: ಜಗದೀಶ್​ ಪಿಬಿ

ಭಾರತ ಈ ವಾರಾಂತ್ಯದಲ್ಲಿ ಗ್ರೂಪ್ ಆಫ್ 20 ಶೃಂಗಸಭೆಯನ್ನು (G20 Summit) ನವದೆಹಲಿಯಲ್ಲಿ ಆಯೋಜಿಸಲು ಸಿದ್ಧತೆ ನಡೆಸಿಕೊಂಡಿದ್ದು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ವಿಚಾರದ ಮೇಲಿಂದ ಗಮನವನ್ನು ಬೇರೆಡೆ ಸೆಳೆಯಲು ಉದ್ದೇಶಿಸಿದೆ. ಈ ಬಾರಿಯ ಸಮ್ಮೇಳನದಲ್ಲಿ ಅಮೆರಿಕಾ ಅಧ್ಯಕ್ಷರಾದ ಜೋ ಬೈಡನ್, ಯುಕೆ ಪ್ರಧಾನಿ ರಿಷಿ ಸುನಕ್, ಸೌದಿ ಯುವರಾಜ ಮೊಹಮ್ಮದ್‌ ಬಿನ್ ಸಲ್ಮಾನ್ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ. ಜಿನ್‌ಪಿಂಗ್ ಬದಲಿಗೆ ಪ್ರೀಮಿಯರ್ ಲಿ ಕಿಯಾಂಗ್ ಅವರು ಚೀನಾವನ್ನು ಪ್ರತಿನಿಧಿಸಲಿದ್ದಾರೆ.

ಜಿ20 ಎಂದರೇನು? ಇದು ಜಿ7ರಿಂದ ಹೇಗೆ ಭಿನ್ನ?

ಜಿ-7 ಹಾಗೂ ಜಿ-20 ಎರಡೂ ಆರ್ಥಿಕ ಸವಾಲುಗಳಿಗೆ ಉತ್ತರವಾಗಿಯೇ ರೂಪುಗೊಂಡವು. ಜಿ-7 ಒಕ್ಕೂಟ 1975ರಲ್ಲಿ ಸ್ಥಾಪನೆಯಾಗಿದ್ದು, ಇದನ್ನು ಪ್ರಮುಖ ಔದ್ಯಮಿಕ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಹಾಗೂ ಅಮೆರಿಕಾಗಳು ಸಮಾಲೋಚನೆ ನಡೆಸಿ, ಆರಂಭಿಕ ತೈಲ ಬಿಕ್ಕಟ್ಟನ್ನು ಎದುರಿಸುವ ಸಲುವಾಗಿ ಆರಂಭಿಸಿದವು. 1976ರಲ್ಲಿ ಏಳನೇ ರಾಷ್ಟ್ರವಾಗಿ ಕೆನಡಾ ಈ ಒಕ್ಕೂಟಕ್ಕೆ ಸೇರ್ಪಡೆಯಾಗಿ, ಇದು ಜಿ-7 ಆಯಿತು. 1998ರಲ್ಲಿ ರಷ್ಯಾ ಇದಕ್ಕೆ ಸೇರ್ಪಡೆಯಾಗಿ, ಒಕ್ಕೂಟ ಕೆಲಕಾಲ ಜಿ-8 ಆಗಿತ್ತಾದರೂ, 2014ರಲ್ಲಿ ಕ್ರಿಮಿಯಾ ಮೇಲೆ ಆಕ್ರಮಣ ನಡೆಸಿದ ಬಳಿಕ ರಷ್ಯಾವನ್ನು ಒಕ್ಕೂಟದಿಂದ ಹೊರಗಿಡಲಾಯಿತು. ಇನ್ನು ಜಿ-7 ಒಕ್ಕೂಟ 1999ರ ಏಷ್ಯನ್ ಆರ್ಥಿಕ ಬಿಕ್ಕಟ್ಟಿನ ಬಳಿಕ ಸ್ಥಾಪನೆಯಾಗಿದ್ದು, ವಿತ್ತ ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳು ಆರ್ಥಿಕ ಹಾಗೂ ಹಣಕಾಸು ಸ್ಥಿರತೆಯ ಕುರಿತು ಚರ್ಚಿಸಲು ಒಂದು ಅಸಾಂಪ್ರದಾಯಿಕ ವೇದಿಕೆಯಾಗಿತ್ತು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಜಿ-20 ವಿವಿಧ ದೇಶಗಳ ಮುಖಂಡರ ವಾರ್ಷಿಕ ಸಭೆಯಾಗಿ ರೂಪುಗೊಂಡಿತು. ಈ ಎರಡು ಒಕ್ಕೂಟಗಳೂ ಯಾವುದೇ ಶಾಶ್ವತ ಸಿಬ್ಬಂದಿಗಳನ್ನಾಗಲಿ, ಕೇಂದ್ರ ಕಚೇರಿಯನ್ನಾಗಲಿ ಹೊಂದಿಲ್ಲ. ಬದಲಿಗೆ, ಸದಸ್ಯ ರಾಷ್ಟ್ರಗಳು ವರ್ಷದ ಅವಧಿಗೆ ಒಕ್ಕೂಟದ ಅಧ್ಯಕ್ಷ ಪದವಿಯನ್ನು ಹೊಂದುತ್ತವೆ. ಜಿ-7 ಒಕ್ಕೂಟ ಮೂಲತಃ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳನ್ನು ಒಳಗೊಂಡಿದ್ದರೆ, ಜಿ-20 ಹೆಚ್ಚು ವ್ಯಾಪಕವಾದ ಒಕ್ಕೂಟವಾಗಿದ್ದು ಮೂಲ ಬ್ರಿಕ್ಸ್ ರಾಷ್ಟ್ರಗಳನ್ನು ಒಳಗೊಂಡಿದೆ. ಒಟ್ಟಾಗಿ, ಈ ಎರಡೂ ಒಕ್ಕೂಟಗಳು ಜಾಗತಿಕ ಆರ್ಥಿಕತೆಯ 85% ಪಾಲು ಹೊಂದಿದ್ದು, ಅಂತಾರಾಷ್ಟ್ರೀಯ ವ್ಯಾಪಾರದ 75% ಪಾಲು ಮತ್ತು ಜಗತ್ತಿನ ಜನಸಂಖ್ಯೆಯ ಮೂರನೇ ಎರಡರಷ್ಟು ಪಾಲು ಹೊಂದಿವೆ.

ಜಿ-20 ಒಕ್ಕೂಟದ ಸದಸ್ಯ ರಾಷ್ಟ್ರಗಳು

ಜಿ-20 ಒಕ್ಕೂಟದಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಅಮೆರಿಕಾ ಹಾಗೂ ಐರೋಪ್ಯ ಒಕ್ಕೂಟ ಸದಸ್ಯರಾಗಿವೆ.

ಜಿ-20 ಸಭೆಗಳಲ್ಲಿ ಹೆಚ್ಚುವರಿ ಸದಸ್ಯರು ಇದ್ದಾರೆಯೇ?

ಸದಸ್ಯ ರಾಷ್ಟ್ರಗಳು ಮಾತ್ರವಲ್ಲದೆ, ಜಿ-20 ಸಭೆಯಲ್ಲಿ ಹೆಚ್ಚುವರಿ ರಾಷ್ಟ್ರಗಳು ಭಾಗವಹಿಸಲಿದ್ದಾರೆ. ಇದರಲ್ಲಿ ನಿರಂತರ ಆಹ್ವಾನಿತರಾದ ಸ್ಪೇನ್ ಮತ್ತು ಪ್ರಾದೇಶಿಕ ಒಕ್ಕೂಟಗಳಾದ ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ ಆ್ಯಂಡ್ ಆಫ್ರಿಕನ್ ಯೂನಿಯನ್ ಗಳು ಭಾಗವಹಿಸುತ್ತವೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳೂ ಇದರಲ್ಲಿ ಭಾಗಿಯಾಗುತ್ತವೆ. ಅದಲ್ಲದೆ, ಇನ್ನೂ ಆಹ್ವಾನಿತರನ್ನು ಆಯೋಜಕ ರಾಷ್ಟ್ರಗಳು ಅವುಗಳ ಪ್ರಾದೇಶಿಕ ಕಾರ್ಯತಂತ್ರದ ಆದ್ಯತೆಗಳ ಮೇರೆಗೆ ಆಯ್ಕೆ ಮಾಡುತ್ತವೆ. ಈ ವರ್ಷದ ಆಹ್ವಾನಿತರಲ್ಲಿ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೈಜೀರಿಯಾ, ಒಮಾನ್, ಸಿಂಗಾಪುರ, ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿವೆ.

ಜಿ-20 ಸಮ್ಮೇಳನದಲ್ಲಿ ಯಾವ ಅಜೆಂಡಾಗಳಿವೆ?

ಜಿ-20 ಸಮ್ಮೇಳನದಲ್ಲಿ ಸಾಮಾನ್ಯವಾಗಿ ಆರ್ಥಿಕತೆ, ಹವಾಮಾನ ಬದಲಾವಣೆ ಮತ್ತು ಶಿಕ್ಷಣದಂತಹ ವಿಚಾರಗಳು ಚರ್ಚಿಸಲ್ಪಡುತ್ತವೆ. ಅದರೊಡನೆ, ಸಮ್ಮೇಳನದ ವರ್ಷದಲ್ಲಿ ಜರುಗುವ ಇತರ ಜಾಗತಿಕ ಕಾಳಜಿಯ ವಿಚಾರಗಳು, ಉದಾಹರಣೆಗೆ ಕೋವಿಡ್-19 ಸಾಂಕ್ರಾಮಿಕದ ಪರಿಣಾಮಗಳು ಅಥವಾ ಪ್ರಸ್ತುತ ಜರುಗುತ್ತಿರುವ ರಷ್ಯಾ ನಡೆಸುತ್ತಿರುವ ಉಕ್ರೇನ್ ಮೇಲಿನ ಆಕ್ರಮಣದಂತಹ ವಿದ್ಯಮಾನಗಳ ಕುರಿತು ಚರ್ಚಿಸಲಾಗುತ್ತದೆ. ಅದಲ್ಲದೆ, ಆಯೋಜಕ ರಾಷ್ಟ್ರ ಜಿ-20 ಸಭೆಯ ಅಜೆಂಡಾವನ್ನು ನಿರ್ಧರಿಸಲು ಮಹತ್ವದ ಪಾತ್ರ ವಹಿಸುತ್ತದೆ. ಈ ಬಾರಿ, ಭಾರತ ಹವಾಮಾನ ಬದಲಾವಣೆ, ಆಹಾರ ಸುರಕ್ಷತೆಯಂತಹ ವಿಚಾರಗಳಿಗೆ ಮಾನವ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಲು ಉದ್ದೇಶಿಸಿದೆ.

ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣ ಜಿ-20 ಸಮಾವೇಶದ ಮೇಲೆ ಎಂತಹ ಪ್ರಭಾವ ಬೀರಲಿದೆ?

ಇತ್ತೀಚಿನ ಸಮ್ಮೇಳನಗಳ ಮೇಲೆ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಭಾರೀ ಪರಿಣಾಮ ಬೀರಿದೆ. ಜಿ-7 ರಾಷ್ಟ್ರಗಳು ಮತ್ತು ಅಭಿವೃದ್ಧಿಶೀಲ ದೇಶಗಳನ್ನು ಒಳಗೊಂಡಿರುವ ಗ್ಲೋಬಲ್ ಸೌತ್‌ಗಳು ಮಾಸ್ಕೋದ ಕ್ರಮಗಳ ಕುರಿತು ಭಿನ್ನಾಭಿಪ್ರಾಯಗಳನ್ನು ಹೊಂದಿರುವುದರಿಂದ ಅವುಗಳ ನಡುವೆ ಸಮನ್ವಯ ಸಾಧಿಸುವುದು ಕಷ್ಟಕರವಾಗಿದೆ. ಅದರೊಡನೆ, ವ್ಯಾಪಾರದಿಂದ ಆರ್ಥಿಕತೆಯ ತನಕ ವಿವಿಧ ವಲಯಗಳ ಸಚಿವರ ಸಭೆಗಳು ಯಾವುದೇ ಒಮ್ಮತದ ಜಂಟಿ ಹೇಳಿಕೆಗಳನ್ನು ನೀಡಲು ವಿಫಲವಾಗಿವೆ. ರಷ್ಯಾ ಅಧ್ಯಕ್ಷ ಪುಟಿನ್ ಅವರ ಮೇಲೆ ಅಂತಾರಾಷ್ಟ್ರೀಯ ಬಂಧನದ ವಾರಂಟ್ ಇರುವುದರಿಂದ, ಅವರು ಜಿ-20 ಸೇರಿದಂತೆ, ಇತರ ಅಂತಾರಾಷ್ಟ್ರೀಯ ಸಮಾವೇಶಗಳಿಂದ ದೂರ ಉಳಿಯುವಂತಾಗಿದೆ.

ಈ ಸಮ್ಮೇಳನದ ಅಂತ್ಯದ ವೇಳೆಗೆ ಜಂಟಿ ಹೇಳಿಕೆ ಬರಲು ಸಾಧ್ಯವಿದೆಯೇ?

ಈ ಕುರಿತು ಈಗಲೇ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕಳೆದ ವರ್ಷ ಇಂಡೋನೇಷ್ಯಾದಲ್ಲಿ ನಡೆದ ಸಮ್ಮೇಳನದಲ್ಲಿ, ಭಾಗವಹಿಸಿದ ರಾಷ್ಟ್ರಗಳು ಯುದ್ಧವನ್ನು ಖಂಡಿಸುವ ಒಂದು ಹೇಳಿಕೆಯನ್ನು ನೀಡಲು ಯಶಸ್ವಿಯಾದವು. ಇದು ತಡವಾಗಿಯಾದರೂ, ಸೂಕ್ತ ಪದಗಳನ್ನು ಆರಿಸಲು ಚೀನಾ ಬೆಂಬಲಿಸಿದ್ದರಿಂದ ಸಾಧ್ಯವಾಗಿತ್ತು. ಈ ವರ್ಷ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನುಪಸ್ಥಿತಿಯಲ್ಲಿ, ಈಗಾಗಲೇ ಭಾರತ ಮತ್ತು ಚೀನಾಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿರುವುದರಿಂದ, ಒಮ್ಮತಕ್ಕೆ ಬರುವುದು ಇನ್ನಷ್ಟು ಸವಾಲಾಗಲಿದೆ. ಒಂದು ವೇಳೆ, ರಾಷ್ಟ್ರಗಳೇನಾದರೂ ಒಮ್ಮತಕ್ಕೆ ಬರಲು ಸಾಧ್ಯವಾಗದೇ ಹೋದರೆ, ಜಿ-20 ಆರಂಭಗೊಂಡ ಬಳಿಕ, ಇದೇ ಮೊದಲ ಬಾರಿಗೆ ಸದಸ್ಯ ರಾಷ್ಟ್ರಗಳು ಒಂದು ಜಂಟಿ ಹೇಳಿಕೆ ನೀಡಲು ವಿಫಲವಾದಂತಾಗಲಿದೆ. ಅಂತಹ ಸಂದರ್ಭದಲ್ಲಿ, ಆಯೋಜಕ ರಾಷ್ಟ್ರ ಭಾಗವಹಿಸಿದ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಸಾಮಾನ್ಯ ಅಂಶಗಳ ಆಧಾರದಲ್ಲಿ ಅಧ್ಯಕ್ಷೀಯ ಹೇಳಿಕೆಯನ್ನು ಬಿಡುಗಡೆಗೊಳಿಸುತ್ತದೆ.

ಚೀನಾ ಮತ್ತು ಭಾರತದ ಸಂಬಂಧ ಅಷ್ಟೊಂದು ಹದಗೆಟ್ಟಿದೆಯೇ?

ಭಾರತ ಮತ್ತು ಚೀನಾಗಳ ನಡುವಿನ ಪರಿಸ್ಥಿತಿ ಕೊಂಚ ಉದ್ವಿಗ್ನವಾಗಿಯೇ ಇದೆ. 2020ರ ಬಳಿಕ, ಎರಡೂ ರಾಷ್ಟ್ರಗಳ ನಡುವೆ ಹಿಮಾಲಯದ ಗಡಿಯಲ್ಲಿ ಒಂದಷ್ಟು ಉದ್ವಿಗ್ನತೆಗಳಿದ್ದು, ದಶಕಗಳಲ್ಲಿ ಕಾಣದ ಹಿಂಸಾತ್ಮಕ ಚಕಮಕಿಗೆ ಸಾಕ್ಷಿಯಾಯಿತು. ಆಗಸ್ಟ್ ತಿಂಗಳಲ್ಲಿ ಚೀನಾ ಒಂದು ಅಧಿಕೃತ ನಕ್ಷೆಯನ್ನು ಬಿಡುಗಡೆಗೊಳಿಸಿತು. ಅದರಲ್ಲಿ ವಿವಾದಾತ್ಮಕ ಪ್ರದೇಶಗಳನ್ನು, ಭಾರತದ ನೆಲವನ್ನು ತನ್ನದೆಂಬಂತೆ ಚಿತ್ರಿಸಿತು. ಇದನ್ನು ಭಾರತದ ವಿದೇಶಾಂಗ ಸಚಿವರಾದ ಸುಬ್ರಹ್ಮಣ್ಯಂ ಜೈಶಂಕರ್ ಅವರು ಕಟು ಶಬ್ದಗಳಿಂದ ಖಂಡಿಸಿದರು. ಅವರು ಚೀನಾದ ಕ್ರಮವನ್ನು ಅಸಂಬದ್ಧ ನಡೆ ಎಂದಿದ್ದಾರೆ. ಆರ್ಥಿಕ ಮತ್ತು ವ್ಯಾಪಾರ ವಲಯದಲ್ಲೂ ಉದ್ವಿಗ್ನತೆ ತಲೆದೋರಿದ್ದು, ಭಾರತ ಚೀನಾದ ಹಲವಾರು ಸ್ಮಾರ್ಟ್ ಫೋನ್ ಆ್ಯಪ್‌ಗಳನ್ನು ನಿಷೇಧಿಸಿದ್ದು, ಚೀನಾದೊಡನೆ ರಾಜಕೀಯ ಉದ್ವಿಗ್ನತೆಯ ನಡುವೆ, ತನ್ನ ಪೂರೈಕೆ ಸರಪಳಿಯನ್ನು ಉತ್ತಮಪಡಿಸಲು ಅಮೆರಿಕಾದ ಕಂಪನಿಗಳೊಡನೆ ಹೂಡಿಕೆಗಾಗಿ, ಅವಶ್ಯಕ ವಸ್ತುಗಳ ಪೂರೈಕೆಗಾಗಿ ಮಾತುಕತೆ ನಡೆಸುತ್ತಿದೆ. ಅದರೊಡನೆ, ಭಾರತ ಮತ್ತು ಚೀನಾ ಎರಡು ರಾಷ್ಟ್ರಗಳೂ ಗ್ಲೋಬಲ್ ಸೌತ್ ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಯನ್ನು ಪ್ರತಿನಿಧಿಸಲು ಪರಸ್ಪರ ಸ್ಪರ್ಧಿಸುತ್ತಿವೆ.

ಇದನ್ನೂ ಓದಿ: 14 ದಿನಗಳ ಕಾರ್ಯಾಚರಣೆಯ ಬಳಿಕ ಸುಪ್ತಾವಸ್ಥೆಗೆ ಜಾರಿದ ಪ್ರಗ್ಯಾನ್: ರೋವರ್ ಮತ್ತೊಮ್ಮೆ ಎದ್ದು ‘ಹಲೋ’ ಎನ್ನಬಹುದೇ?

ಸಮ್ಮೇಳನದ ಪ್ರಮುಖ ಅಜೆಂಡಾಗಳೇನು?

ಬೆಳೆಯುತ್ತಿರುವ ಮಾರುಕಟ್ಟೆ ಸಾಲದ ಕುರಿತು ಒಂದು ಒಮ್ಮತಕ್ಕೆ ಬರುವುದು ಸಮಾವೇಶದ ಹಾದಿಯಲ್ಲಿನ ಒಂದು ಸವಾಲಾಗಿದ್ದು, ಭಾರತ ಚೀನಾ ನಡುವಿನ ಅಸಮಾಧಾನಗಳ ಕಾರಣದಿಂದ, ಅದು ಇದೇ ರೀತಿ ಮುಂದುವರಿಯುವ ಸಾಧ್ಯತೆಗಳಿವೆ. ಅದರೊಡನೆ, ಜಿ-7 ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳ ನಡುವೆ ವಿಶ್ವಸಂಸ್ಥೆಯ ಪ್ರಸ್ತಾಪಿತ ಗುರಿಯಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ, ಶಿಕ್ಷಣ, ಸ್ವಚ್ಛ ಇಂಧನ ಹಾಗೂ ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಬೆಂಬಲವಾಗಿ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆ ಮಾಡುವ ಕುರಿತು ಭಿನ್ನಾಭಿಪ್ರಾಯಗಳಿವೆ.

Published On - 5:05 pm, Tue, 5 September 23