MLC Election Results: ಈ 10 ಕಾರಣಗಳಿಂದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಿಜೆಪಿಗೆ ಸಮಸ್ಯೆ ತಂದೊಡ್ಡಲಿದೆ

ವಿಧಾನ ಪರಿಷತ್ ಫಲಿತಾಂಶ ವಿರೋಧ ಪಕ್ಷ ಕಾಂಗ್ರೆಸ್​ಗಿಂತ ಆಡಳಿತ ಪಕ್ಷ ಬಿಜೆಪಿಯೊಳಗೆ ಇರುವ ಸಮಸ್ಯೆಯನ್ನು ಎತ್ತಿ ತೋರಿಸಿದೆ. 10 ಅಂಶಗಳ ಮೂಲಕ ಬಿಜೆಪಿಯ ಸಮಸ್ಯೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

MLC Election Results: ಈ 10 ಕಾರಣಗಳಿಂದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಿಜೆಪಿಗೆ ಸಮಸ್ಯೆ ತಂದೊಡ್ಡಲಿದೆ
ರಾಜಕೀಯ ವಿಶ್ಲೇಷಣೆ
Follow us
ಡಾ. ಭಾಸ್ಕರ ಹೆಗಡೆ
|

Updated on:Dec 14, 2021 | 8:39 PM

ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಬಂದಿದೆ. ಜನತಾ ದಳ ಬಿಟ್ಟು, ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಾಯಕರು ತಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ ಎಂದು ಹೇಳಿ ತಮ್ಮ ಬೇಸರವನ್ನು ಹೊರಹಾಕದೇ ಪ್ರತಿಕ್ರಿಯೆ ಹೊರಹಾಕಿದ್ದಾರೆ. ಕಾಂಗ್ರೆಸ್​ ಮಾತ್ರ ಈ ಚುನಾವಣೆಯ ಫಲಿತಾಂಶ 2023ರ ಚುನಾವಣೆಯ ದಿಕ್ಸೂಚಿ. ಬಿಜೆಪಿ ಸರಕಾರದ ಮೇಲೆ ಬೇಸತ್ತಿದ್ದಕ್ಕೆ ಈ ಚುನಾವಣೆಯೇ ನಿದರ್ಶನ, ಹಾಗಾಗಿ ಜನ ಬದಲಾವಣೆ ಬಯಸುತ್ತಿದ್ದಾರೆ. “ನಮಗೆ ಜನ ಆಶೀರ್ವಾದ ಮಾಡಿದ್ದಾರೆ” ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದಾರೆ. ಆದರೆ, ಈ ಚುನಾವಣೆ ನಿಜವಾಗಿಯೂ ಮುಂದಿನ ಚುನಾವಣೆಗೆ ದಿಕ್ಸೂಚಿಯೇ? ಅಥವಾ ಆಡಳಿತಾರೂಢ ಬಿಜೆಪಿ ಮುಗ್ಗರಿಸಿದ ಸೂಚನೆಯೇ? ಈ ಫಲಿತಾಂಶವನ್ನು ಜನ ಹೇಗೆ ನೋಡಬಹುದು? ಈ ಚುನಾವಣಾ ಫಲಿತಾಂಶದ ಬಗೆಗಿನ ಹತ್ತು ಪ್ರಮುಖ ವಿಶ್ಲೇಷಣಾತ್ಮಕ ಅಂಶಗಳು ಇಲ್ಲಿವೆ.

1. ಈ ಫಲಿತಾಂಶವನ್ನು ನೋಡುವ ಮೊದಲು ನಾವು ತಿಳಿದುಕೊಳ್ಳಲೇ ಬೇಕಾಗಿದ್ದುದು-ಈ ಚುನಾವಣೆಯ ಮತದಾರರು ಯಾರಾಗಿದ್ದರು? ಈಗ ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳು ಅಧಿಕಾರದಲ್ಲಿ ಇಲ್ಲ. ಹಾಗಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಸದಸ್ಯರು ಯಾರೂ ಮತ ಹಾಕಿಲ್ಲ. ಗ್ರಾಮ ಪಂಚಾಯತಿ ಮತದಾರರು ಮತ್ತು ನಗರಸಭೆ, ಪುರಸಭೆ. ಪಟ್ಟಣ ಪಂಚಾಯತಿ ಹೀಗೆ-ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ ಹಾಕಿದ್ದಾರೆ. 5728 ಗ್ರಾಮ ಪಂಚಾಯತಿಯ 91,000ಕ್ಕೂ ಹೆಚ್ಚು ಸ್ಥಾನಗಳ ಸದಸ್ಯರು ಈ ಚುನಾವಣೆಯಲ್ಲಿ ಮತ ಹಾಕಿದ್ದಾರೆ. ಈ ಗ್ರಾಮ ಪಂಚಾಯತಿ ಚುನಾವಣೆ 2020ರ ಡಿಸೆಂಬರಿನಲ್ಲಿ ನಡೆದಿತ್ತು. ಆಗ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಗ್ರಾಮ ಪಂಚಾಯತಿ ಸದಸ್ಯರು ಯಾವುದೇ ಪಕ್ಷದ ಚಿಹ್ನೆಯ ಆಧಾರದ ಮೇಲೆ ಗೆದ್ದಿರುವುದಿಲ್ಲ. ಯಾವ ಪಕ್ಷ ಅಧಿಕಾರದಲ್ಲಿರುತ್ತೋ, ಆ ಪಕ್ಷದ ಬೆಂಬಲದಿಂದ ಹೆಚ್ಚು ಸದಸ್ಯರು ಗೆದ್ದು ಬರುವುದು ಸಂಪ್ರದಾಯ. ಆದರೆ ಈಗ ಅವರು ಯಾವ ಆಧಾರದ ಮೇಲೆ ಮತ ಹಾಕಿದ್ದಾರೆ ಎಂಬುದನ್ನು ನಾವು ಊಹಿಸಬಹುದು. 2020 ರ ಚುನಾವಣೆ ನಂತರ ತಮ್ಮ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದು ಬಿಜೆಪಿ ನಾಯಕರು ಟಾಂ ಟಾಂ ಬಾರಿಸಿದ್ದರು. ಆದರೆ, ಆಡಳಿತಾರೂಢ ಬಿಜೆಪಿಗೆ ಈ ಗ್ರಾಮ ಪಂಚಾಯತಿ ಸದಸ್ಯರ ಮನಸ್ಸನ್ನು ಗೆಲ್ಲಲು ಆಗಿಲ್ಲ ಎಂಬುದು ಈ ಚುನಾವಣೆಯಲ್ಲಿ ನಿಚ್ಚಳವಾಗಿದೆ. ಆದರೆ, ಬಿಜೆಪಿ ಈ ವಿಚಾರದಲ್ಲಿ ಇನ್ನು ಪಾಠ ಕಲಿತಿಲ್ಲ ಎಂಬುದಕ್ಕೆ ಇಂದಿನ ಫಲಿತಾಂಶವೇ ನಿದರ್ಶನ. ಇದರ ಅರ್ಥ ಏನೆಂದರೆ, ಮುಂದಿನ, ಜಿಲ್ಲಾ ಪಂಚಾಯತ್​, ವಿಧಾನ ಸಭಾ, ಹಾಗೂ 2024 ರ ಲೋಕಸಭೆ ಚುನಾವಣೆಯಲ್ಲಿ ಕಾಲಾಳುಗಳಾಗಿ ಕೆಲಸ ಮಾಡುವ ಈ  ಗ್ರಾಮ ಪಂಚಾಯತ ಸದಸ್ಯರ ಮನಸ್ಸನ್ನು ಗೆಲ್ಲಲಾಗದ ಬಿಜೆಪಿಗೆ ಇದು ಎಚ್ಚರಿಕೆಯ ಗಂಟೆ.

2. ಮಾಜಿ ಸಚಿವ ಮತ್ತು ಕಾಂಗ್ರೆಸ್​ ನಾಯಕ ಎಂ​.ಬಿ. ಪಾಟೀಲ್​ ಅವರ ಸಹೋದರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ, ಎಚ್​.ಡಿ. ರೇವಣ್ಣ ಅವರ ಎರಡನೇ ಮಗ-ಹೀಗೆ ಎಲ್ಲಾ ಪಕ್ಷಗಳಿಂದ ಕುಟುಂಬ ಸದಸ್ಯರು ಚುನಾವಣೆಗೆ ನಿಂತಿದ್ದರು. ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕೀಯದ ವಾಸನೆಯಲ್ಲಿ ಈ ಚುನಾವಣೆ ನಡೆದಿದ್ದು ನಿಚ್ಚಳ. ಆದರೆ, ಕಾಂಗ್ರೆಸ್​ ಪಕ್ಷ ಹೇಳಿಕೊಂಡಿರುವಂತೆ ಇಂದಿನ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂಬುದಕ್ಕೆ ಯಾವುದೇ ನಿದರ್ಶನ ಸಿಗುತ್ತಿಲ್ಲ.

3. ಈ ಚುನಾವಣೆಯ ಫಲಿತಾಂಶ ಜನರ ಮನೋಭಿಲಾಷೆಯನ್ನು ಪ್ರಚುರಪಡಿಸದೇ ಇರಬಹುದು. ಆದರೆ, ಪದೇ ಪದೇ ಆಡಳಿತ ಪಕ್ಷ ಹಿನ್ನೆಡೆ ಸಾಧಿಸಿದರೆ, ಆ ಪಕ್ಷದ ಬಗ್ಗೆ ಜನರಲ್ಲಿ ಪ್ರಬಲ ಸಂಶಯ ಹುಟ್ಟುವ ಸಾಧ್ಯತೆ ಹೆಚ್ಚು. ಒಮ್ಮೆ, ಈ ರೀತಿಯ ಬೆಳವಣಿಗೆ ಘಟಿಸಿದರೆ ಮುಂದಿನ ಚುನಾವಣೆ ಹೊತ್ತಿಗೆ ಮತದಾರರು ಬಿಜೆಪಿ ವಿರುದ್ಧ ಹೋಗುವ ಸಾಧ್ಯತೆ ಜಾಸ್ತಿ.

4. ಉತ್ತರ ಕರ್ನಾಟಕದಿಂದ ಬಂದಿರುವ ಬಸವರಾಜ್​ ಬೊಮ್ಮಾಯಿ ಪ್ರಬಲ ಲಿಂಗಾಯತ ಸಮುದಾಯದ ನಾಯಕರು. ಅವರು ಬಂದಿರುವ ಮುಂಬೈ ಕರ್ನಾಟಕದಲ್ಲಿಯೇ ಬಿಜೆಪಿ ಅಷ್ಟೇನೂ ಉತ್ತಮ ಫಲಿತಾಂಶ ಪಡೆದಿಲ್ಲ. ಇದಕ್ಕೆ ಎರಡು ಕಾರಣ ಇರಬಹುದು. ಒಂದು, ಬಿಜೆಪಿಯಲ್ಲಿರುವ ಲಿಂಗಾಯತ ಸಮುದಾಯದ ನಾಯಕರು ಬೊಮ್ಮಾಯಿಯವರಿಗೆ ಕೈ ಕೊಟ್ಟಿರುವ ಸಾಧ್ಯತೆ ಇದೆ. ಇಂದಿನ ಚುನಾವಣೆಯಲ್ಲಿ ಬಿಜೆಪಿ ತುಂಬಾ ಚೆನ್ನಾಗಿ ಫಲಿತಾಂಶ ಪಡೆದಿದ್ದರೆ ಅದರ ಕೀರ್ತಿ ಬೊಮ್ಮಾಯಿಯವರಿಗೆ ಹೋಗುತ್ತಿತ್ತು. ಅದನ್ನು ನೀಡಲು ಈ ನಾಯಕರಿಗೆ ಇಷ್ಟ ಇಲ್ಲ. ಇದೇ ಮನೋಭೂಮಿಕೆಯೊಂದಿಗೆ ಈ ನಾಯಕರು ಮುಂದಿನ ಜಿಲ್ಲಾ, ತಾಲೂಕು ಪಂಚಾಯತಿ​ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ವಿರುದ್ಧ ಕೆಲಸ ಮಾಡುವ ಸಾಧ್ಯತೆ ಹೆಚ್ಚು. ಯಾಕೆಂದರೆ, ಬೊಮ್ಮಾಯಿ ವಿರೋಧ ಬಯಸುವ ನಾಯಕರ ಲೆಕ್ಕಾಚಾರ ಹೀಗಿರಬಹುದು-ಬೊಮ್ಮಾಯಿಯವರಿಗೆ ಬಹುಮತ ಸಿಕ್ಕರೆ ತಮಗೇನು ಲಾಭ? ಅದಕ್ಕಿಂತ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು ಉತ್ತಮ ಎಂದು ಲೆಕ್ಕಾಚಾರ ಹಾಕುತ್ತಾರೆ. ಹುರಿಯಾಳು ಆಯ್ಕೆಯಲ್ಲಿ ಕೂಡ ಬಿಜೆಪಿ ಎಡವಿರುವಂತೆ ಕಾಣುತ್ತಿದೆ.

5. ಈ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಚೆನ್ನಾಗಿ ಸ್ಥಾನ ಗೆದ್ದಿಲ್ಲ ಎಂದರೆ, ಲಿಂಗಾಯತ ಮತದಾರರು ಆಡಳಿತಾರೂಢ ಬಿಜೆಪಿಯ ಕೈ ಬಿಡುತ್ತಿದ್ದಾರೆಯೇ ಎಂಬ ಪ್ರಶ್ನೆ ಏಳುವುದು ಸಹಜ. ಇದನ್ನು ಬಿಜೆಪಿ ನಾಯಕರು ಅಲ್ಲಗಳೆಯಬಹುದು. ಆದರೆ, ಈ ಕಟು ವಾಸ್ತವವನ್ನು ಎಷ್ಟು ದಿನ ಅಲ್ಲಗಳೆಯಬಹುದು?

6. ಇನ್ನೊಂದು ಮುಖ್ಯ ಅಂಶವನ್ನು ಇಲ್ಲಿ ಗಮನಿಸಬೇಕು. ಅದುವೇ ಎರಡು ಪಕ್ಷಗಳ ರಾಜ್ಯಾಧ್ಯಕ್ಷರ ಬಲಾಬಲ. ಕಾಂಗ್ರೆಸ್​ನ ಡಿ.ಕೆ. ಶಿವಕುಮಾರ್​ ಅವರಿಗೆ ಹೋಲಿಸಿದರೆ, ಬಿಜೆಪಿಯ ನಳಿನ್​ ಕುಮಾರ್​ ಕಟೀಲ್​ ಯಾವ ಲೆಕ್ಕಕ್ಕೂ ಇಲ್ಲ. ಇದು ಬಿಜೆಪಿಗೆ ಮುಂದಿನ ದಿನಗಳಲ್ಲಿ ಭಾರಿ ಹಾನಿ ತರುವ ಲಕ್ಷಣ ಕಾಣುತ್ತಿದೆ. ಡಿಕೆಶಿ ಬರೀ deep pocket ಇರುವ ನಾಯಕ ಮಾತ್ರ ಅಲ್ಲ. ಸಂಘಟನೆಯ ಚತುರತೆ ಇದೆ. ಎಲ್ಲಾ ಕಡೆ ಮುನ್ನುಗ್ಗಿ ಎದುರಾಳಿಯನ್ನು ಅಧೀರರನ್ನಾಗಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಇತ್ತೀಚೆಗೆ ಚುನಾವಣೆಗೆ ಬೇಕಾಗುವ ತಂತ್ರಗಾರಿಕೆಯಲ್ಲಿಯೂ ಪಳಗುತ್ತಿದ್ದಾರೆ. ಅವರಿಗೆ ಹೋಲಿಸಿದರೆ, ಕಟೀಲ್ ಅವರು​ ಎಲ್ಲ ವಿಭಾಗದಲ್ಲೂ ಪಕ್ಷಕ್ಕೆ ಸಹಾಯ ಮಾಡಬಹುದು ಎಂದು ಯಾರೂ ಎಣಿಸುವುದಿಲ್ಲ.  ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರಿ ಆಘಾತ ನೀಡುವ ಸಾಧ್ಯತೆ ಇದೆ.

7. ಹಾಗೆ ನೋಡಿದರೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ, ಬಿ.ಎಸ್​.ಯಡಿಯೂರಪ್ಪನವರ ತರಹ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮಾಡಿ ಪಳಗಿದವರಲ್ಲ. ಇದು ಕೂಡ ಬಿಜೆಪಿಗೆ ಸ್ವಲ್ಪ ಹಿನ್ನಡೆ ಆಗುವ ವಿಚಾರವೇ ಆಗಿದೆ.

8. ಮೊದಲ ಬಾರಿಗೆ ಬಿಜೆಪಿ ಅನೇಕ ಘಟಾನುಘಟಿ ಒಕ್ಕಲಿಗ ನಾಯಕರುಗಳನ್ನು ಮಂತ್ರಿಗಳನ್ನೇನೋ ಮಾಡಿದೆ. ಆದರೆ, ಅವರು ಯಾರು ಹಳೇ ಮೈಸೂರಿನ ಒಕ್ಕಲಿಗರ ಮನಸ್ಸು ಗೆಲ್ಲಲು ಯಾರೂ ಮನಸ್ಸು ಕೊಟ್ಟು ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಮಂಡ್ಯ, ಹಾಸನ, ಕೋಲಾರ ಹೀಗೆ ಎಲ್ಲಾ ಕಡೆ ಬಿಜೆಪಿಗೆ ಹಿನ್ನಡೆ ಆಗಿದ್ದನ್ನು ನೋಡಿದರೆ, ಒಕ್ಕಲಿಗರನ್ನು ತಮ್ಮತ್ತ ಎಳೆದುಕೊಳ್ಳುವಲ್ಲಿ ಆಡಳಿತಾರೂಢ ಬಿಜೆಪಿ ವಿಫಲವಾಗಿದ್ದಕ್ಕೆ ಈ ಚುನಾವಣೆ ಸಾಕ್ಷಿ. ಅಷ್ಟೇ ಅಲ್ಲ, ಒಕ್ಕಲಿಗೆ ಮತದಾರರ ಮನಸ್ಸು ಗೆಲ್ಲಲು ಯಾವ ತಂತ್ರಗಾರಿಕೆಯನ್ನು ಮಾಡುತ್ತಿಲ್ಲ ಎಂಬುದು ಈ ಫಲಿತಾಂಶ ಮತ್ತೊಮ್ಮೆ ನಿರೂಪಿಸಿದೆ.

9. ಹೊರಗಿನಿಂದ ಬಿಜೆಪಿಗೆ ಬಂದು ಮಂತ್ರಿಗಳಾಗಿರುವ ನಾಯಕರು ಬಿಜೆಪಿಗೆ ಸೀಟು ಗೆಲ್ಲಿಸುವಲ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳುವುದು ಕಷ್ಟ. ಮುಂದೆ ಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆಯಲ್ಲಿ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕೂಡ, ಅವರು ಬಿಜೆಪಿಗೆ ಕೆಲಸ ಮಾಡುತ್ತಾರೆ ಎಂದು ಹೇಳುವುದು ತುಂಬಾ ಕಷ್ಟ.

10. ಈ ಚುನಾವಣೆಯ ಮೂಲಕ ಕಾಂಗ್ರೆಸ್​ನ ಡಿಕೆಶಿ ಅವರು ಜೆಡಿಎಸ್​ನ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದಾರೆ ಎಂಬುದು ನಿಚ್ಚಳ. ಇದರ ಮುಂದುವರಿದ ಭಾಗವಾಗಿ, ಮುಂದಿನ ವಿಧಾನಸಭೆ ಚುನಾವಣೆಯ ಹೊತ್ತಿಗೆ ಒಕ್ಕಲಿಗೆ ಸೀಟುಗಳನ್ನು ಗೆಲ್ಲಲು ಡಿಕೆಶಿ ಸ್ಕೆಚ್​ ಹಾಕಿದರೆ, ಜೆಡಿಎಸ್​ ಅಸ್ತಿತ್ವಕ್ಕೆ ಬಹಳ ಹೊಡೆತ ನೀಡುವ ಸಾಧ್ಯತೆ ಇದೆ. ಇದಕ್ಕೆ ಜೆಡಿಎಸ್​ ಹೇಗೆಯಾವ ತಂತ್ರದ ಮೂಲಕ ಇದನ್ನು ತಡೆಯಬಹುದು? ಈಗಾಗಲೇ ಜಗಜ್ಜಾಹೀರಾಗಿರುವ ಸಿದ್ಧು-ಡಿಕೆಶಿ ಮುಸುಕಿನ ಒಳ ಜಗಳ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯುತ್ತದೆ ಎಂಬುದು ಇನ್ನೊಂದು ಅಂಶ. ಈ ಎರಡು ಅಂಶವನ್ನು ಇಟ್ಟುಕೊಂಡು, ಬಿಜೆಪಿ ತನ್ನ ಮುಂದಿನ ಚುನಾವಣಾ ತಂತ್ರಗಳನ್ನು ಹೇಗೆ ಹೆಣೆಯಬಹುದು ಎಂಬುದು ಕುತೂಹಲಕಾರಿ ಅಂಶ. ಈ ಅಂಶಗಳೇ, ಕರ್ನಾಟಕದಲ್ಲಿ ಮುಂದೆ ಬರುವ ಚುನಾವಣೆಗಳ ಬಗ್ಗೆ ದಿಕ್ಸೂಚಿಯನ್ನು ನೀಡಬಹುದು ಎಂಬುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ: Vidhan Parishad Election 2021: ಕಾಂಗ್ರೆಸ್, ಬಿಜೆಪಿ ಪ್ರತಿಷ್ಠೆಯ ಕಣವಾಗಿದೆ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಭೀಮರಾವ್​ ಪಾಟೀಲ್​ ಗೆಲುವು

ಇದನ್ನೂ ಓದಿ: Karnataka MLC Election Results 2021: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮೊಮ್ಮಗ ಸೂರಜ್ ರೇವಣ್ಣಗೆ ಭರ್ಜರಿ ಗೆಲುವು

(BJP’s electoral problems has been put in 10 points in the wake of its performance in Karnataka Legislative Council polls 2021)

Published On - 6:19 pm, Tue, 14 December 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್