National Defence: ವಿದ್ಯುತ್ ಕ್ಷೇತ್ರದಲ್ಲಿ ಚೀನಾ ಮೇಲಿನ ಅವಲಂಬನೆ: ಭಾರತದ ಆರ್ಥ ವ್ಯವಸ್ಥೆಗೆ, ರಾಷ್ಟ್ರೀಯ ಭದ್ರತೆಗೆ ಮಾರಕ
ವಿದ್ಯುತ್ ಕ್ಷೇತ್ರದ ಇತ್ತೀಚಿನ ಆಗುಹೋಗುಗಳು ಮತ್ತು ಭಾರತದ ರಕ್ಷಣೆ ವಿಚಾರದಲ್ಲಿ ಅದು ಹೊಂದಿರುವ ಸಂಬಂಧಗಳ ಕುರಿತು ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾಡಿರುವ ವಿಶ್ಲೇಷಣೆ ಇಲ್ಲಿದೆ.
‘ವೋಕಲ್ ಫಾರ್ ಲೋಕಲ್’ ಎಂಬುದು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯ ಘೋಷಣೆಯಾಗಿದೆ. ವಿದ್ಯುತ್ ವಲಯವು ಇದನ್ನು ಅಕ್ಷರಶಃ ಉತ್ಸಾಹದಿಂದ ಅನುಸರಿಸಿದರೆ ಭಾರತವು ತನ್ನ ವಿದ್ಯುತ್ ಸ್ಥಾವರಗಳನ್ನು ನಡೆಸುವುದು ಸಾಧ್ಯವೇ? ಇಂಧನ ಸಚಿವ ಆರ್.ಕೆ.ಸಿಂಗ್ ಅವರಿಗೆ ಈ ಪ್ರಶ್ನೆ ಕೇಳಿದರೆ, ಅವರು 2020ರಲ್ಲಿ ಹೇಳಿದ್ದನ್ನೇ ಪುನರುಚ್ಚರಿಸಬಹುದು. ‘ಚೀನಾ ಮತ್ತು ಪಾಕಿಸ್ತಾನದಿಂದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಭಾರತವು ಅನುಮತಿ ನೀಡುವುದಿಲ್ಲ. ಗಡಿ ಸಂಘರ್ಷ ಮತ್ತು ಸೈಬರ್ ಭದ್ರತೆ ಸಮಸ್ಯೆಗಳ ವಿಚಾರದಲ್ಲಿ ಭಾರತವು ಚೀನಾದೊಂದಿಗೆ ಅಸಮಾಧಾನ ಹೊಂದಿದೆ. ವಿದ್ಯುತ್ ಜಾಲವು ಮಾಲ್‌ವೇರ್ ದಾಳಿಗೆ ಗುರಿಯಾಗುವ ಸಾಧ್ಯತೆ ಇದ್ದು, ಇದು ಸಂವಹನ ಸಾಧನಗಳು, ಡೇಟಾಬೇಸ್ ಮತ್ತು ರಕ್ಷಣಾ ವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆಯಿದೆ ಎನ್ನುವುದು ಸರ್ಕಾರದ ಆತಂಕ. ವಿದ್ಯುತ್ ಕ್ಷೇತ್ರದ ಇತ್ತೀಚಿನ ಆಗುಹೋಗುಗಳು ಮತ್ತು ಭಾರತದ ರಕ್ಷಣೆ ವಿಚಾರದಲ್ಲಿ ಅದು ಹೊಂದಿರುವ ಸಂಬಂಧಗಳ ಕುರಿತು ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾಡಿರುವ ವಿಶ್ಲೇಷಣೆ ಇಲ್ಲಿದೆ.
ಚೀನಾದಿಂದ ವಿದ್ಯುತ್ ಉಪಕರಣಗಳ ಆಮದಿನ ಮೇಲೆ ನಿಷೇಧ ಹೇರಬೇಕೆಂದು ಪ್ರತಿಪಾದಿಸುವ ಇಂಧನ ಸಚಿವರು ಅದೇ ಹೊತ್ತಿಗೆ ಮತ್ತೊಂದು ಅಚ್ಚರಿಯ ವಿಚಾರದ ಮಾಹಿತಿ ನೀಡುತ್ತಾರೆ. ಭಾರತವು ₹ 71,000 ಕೋಟಿ ಮೊತ್ತದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ₹ 21,000 ಕೋಟಿ ಮೌಲ್ಯದ ಉಪಕರಣಗಳು ಚೀನಾದಿಂದಲೇ ಬಂದಿವೆ. 2009ರಿಂದ 2010ರ ಅವಧಿಯಲ್ಲಿ ಚೀನಾದಿಂದ ಆಮದು ಮಾಡಿಕೊಂಡ ಉಪಕರಣಗಳ ಮೌಲ್ಯ ₹ 17,289 ಕೋಟಿ. ನವೀಕರಿಸಬಹುದಾದ ಇಂಧನ ಕ್ಷೇತ್ರವು ಬ್ಯಾಟರಿಗಳು ಸೇರಿದಂತೆ ಆಮದು ಮಾಡಿಕೊಳ್ಳುವ ವಿವಿಧ ಉಪಕರಣಗಳನ್ನೇ ಹೆಚ್ಚು ಅವಲಂಬಿಸಿದೆ. ವಾಸ್ತವ ಸ್ಥಿತಿ ಹೀಗಿರುವಾಗ, ಯೂನಿಟ್ಗಳು, ಕಂಡಕ್ಟರ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಮೀಟರ್‌ನ ಬಿಡಿಭಾಗಗಳಂಥ ಇಂಧನ ಕ್ಷೇತ್ರದ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದನ್ನು ರಾಜ್ಯ ಸರ್ಕಾರಗಳು ನಿಲ್ಲಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿತು. ಆಗಸ್ಟ್ 1, 2020ರಿಂದ ಸೌರ ವಿದ್ಯುತ್ ಉಪಕರಣಗಳ ಆಮದಿನ ಮೇಲೆ ಶೇ 25ರ ಸುಂಕ ವಿಧಿಸುವುದಾಗಿ ಘೋಷಿಸಲಾಯಿತು. ಆಮದು ಉತ್ಪನ್ನಗಳನ್ನು ದುಬಾರಿಯಾಗಿಸಲು ಮತ್ತು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರವು ಈ ವರ್ಷದ, ಅಂದರೆ 2022ರ ಏಪ್ರಿಲ್ 1ರಿಂದ ಸೌರ ಘಟಕಗಳ ಮೇಲೆ ಶೇ 40 ಮತ್ತು ಸೌರಕೋಶಗಳ (ಪ್ಯಾನೆಲ್) ಮೇಲೆ ಶೇ 25ರಷ್ಟು ಮೂಲ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿದೆ.
ಸದ್ಯ ಚೀನಾದಿಂದ ಪ್ರಮುಖವಾಗಿ ಆಮದು ಮಾಡಿಕೊಳ್ಳಲಾಗುತ್ತಿರುವ ಅತಿಮುಖ್ಯ ಇಂಧನ ಮತ್ತು ಪ್ರಸರಣ ಸಾಧನಗಳನ್ನು ಉತ್ಪಾದಿಸಲು ಆತ್ಮನಿರ್ಭರ್ ಭಾರತ್ ಉಪಕ್ರಮದ ಅಡಿಯಲ್ಲಿ, ಮೂರು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಇಂಧನ ಸಚಿವಾಲಯವು ಸಿದ್ಧವಾಗಿದೆ. ಪ್ರಸ್ತುತ ಭಾರತವು ಉತ್ಪಾದನೆ ಮಾಡಲು ಸಾಧ್ಯವಿಲ್ಲದ ಹಾಗೂ ಆಮದು ಮಾಡಿಕೊಳ್ಳಬೇಕಾದ 239 ವಸ್ತುಗಳನ್ನು ಸಚಿವಾಲಯವು ಗುರುತಿಸಿದೆ. ಸುಮಾರು 95 ವಸ್ತುಗಳನ್ನು ಭಾರತವು ತಯಾರಿಸುತ್ತಿದ್ದರೂ ವಿದ್ಯುತ್ ವಲಯವು ಅವುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ವಿದ್ಯುತ್ ವಲಯದ ಯಾವುದೇ ಕಂಪನಿ, ಅದು ಖಾಸಗಿ ವಲಯವಾಗಿರಲಿ ಅಥವಾ ಸಾರ್ವಜನಿಕ ಕ್ಷೇತ್ರದ ಉದ್ದಿಮೆಯೇ ಆಗಿರಲಿ, ಈ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ಕೊಡುತ್ತಿಲ್ಲ.
ಭಾರತವು ವಿದ್ಯುತ್ ವಲಯಕ್ಕೆ ಬೇಕಿರುವ ಉಪಕರಣಗಳ ವಿಚಾರದಲ್ಲಿ ಚೀನಾದ ಮೇಲಿನ ಅವಲಂಬಿತವಾಗಿರದಿದ್ದರೆ ಇಂಥ ನಿಯಂತ್ರಣ ಕ್ರಮಗಳು ಅರ್ಥಪೂರ್ಣವಾಗಿರುತ್ತಿದ್ದವು. ಅದಾನಿ ಎಂಟರ್‌ಪ್ರೈಸಸ್ ಸೌರಕೋಶಗಳ ತಯಾರಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿರಬಹುದು. ಆದರೆ ಪ್ರಸ್ತುತ, ಭಾರತದ ಸೌರಶಕ್ತಿ ಯೋಜನೆ ಮಾರುಕಟ್ಟೆಯ ಶೇ 78ರಷ್ಟು ಉತ್ಪನ್ನಗಳನ್ನು ಚೀನಾದಿಂದಲೇ ಪಡೆಯುತ್ತಿದೆ. ಕಳೆದ ಇಪ್ಪತ್ತು ವರ್ಷಗಳಿಂದಲೂ, ಚೀನಾವು ಭಾರತದ ಎಲ್ಲ ರೀತಿಯ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಕಡಿಮೆ ಬೆಲೆಗೆ ಉಪಕರಣಗಳನ್ನು ಪೂರೈಸುತ್ತಿದೆ. ಅದು ಕಲ್ಲಿದ್ದಲು ಚಾಲಿತ ವಿದ್ಯುತ್ ಸ್ಥಾವರವಾಗಿರಲಿ ಅಥವಾ ಸೌರ ವಿದ್ಯುತ್ ಸ್ಥಾವರಗಳಾಗಲಿ ಆ ನಿರ್ದಿಷ್ಟ ಘಟಕದಲ್ಲಿ ಗಮನಿಸಿದರೆ ಚೀನಾ ನಿರ್ಮಿತ ವಸ್ತುಗಳು ಗಮನಾರ್ಹವಾಗಿರುವುದನ್ನು ಗುರುತಿಸಬಹುದಾಗಿದೆ.
ಭಾರತದಲ್ಲಿರುವ 621 ಶಾಖೋತ್ಪನ್ನ ವಿದ್ಯುತ್ ಸ್ಥಾವರ ಘಟಕಗಳ ಪೈಕಿ 118 ಘಟಕಗಳು ಚೀನಾ ನಿರ್ಮಿತ ಟರ್ಬೈನ್ ಮತ್ತು ಬಾಯ್ಲರ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ ಹೇಳಿದೆ. ಭಾರತದ ಒಟ್ಟು ಇಂಧನ ಉತ್ಪಾದನೆಯ ಸುಮಾರು 14% ಕಲ್ಲಿದ್ದಲು ಆಧಾರಿತವಾಗಿದೆ, ಇದಕ್ಕಾಗಿ ಚೀನಾದ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಭಾರತದ ಕಲ್ಲಿದ್ದಲು ವಿದ್ಯುತ್ ಉತ್ಪಾದನೆಯು 123 ಗಿಗಾವ್ಯಾಟ್ಗಳಷ್ಟು ಹೆಚ್ಚಾಗಿದೆ. ಇದರಲ್ಲಿ, ಜನರೇಟರ್‌ಗಳು, ಟರ್ಬೈನ್‌ಗಳು ಮತ್ತು ಬಾಯ್ಲರ್‌ಗಳಂತಹ ಚೀನೀ ಉಪಕರಣಗಳನ್ನು ಬಳಸಿ 31 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಸಂಸ್ಥೆಯು ವಿದ್ಯುತ್ ಉಪಕರಣಗಳ ವೆಚ್ಚದಲ್ಲಿ ಚೀನಾದೊಂದಿಗೆ ಯಾವುದೇ ರೀತಿಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಸರ್ಕಾರಿ ಸ್ವಾಮ್ಯದ ಕಂಪನಿಗಳು ಚೀನಾದಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳದಂತೆ ಕೇಂದ್ರವು ಆದೇಶಿಸಬಹುದು. ಆದರೆ ಖಾಸಗಿ ವಿದ್ಯುತ್ ಸ್ಥಾವರಗಳ ಮಾಲೀಕರ ಕಥೆ ಏನು? ಅಬಕಾರಿ ಸುಂಕದಲ್ಲಿ ನಾಟಕೀಯ ಹೆಚ್ಚಳ ಸೇರಿದಂತೆ ಕಟ್ಟುನಿಟ್ಟಾದ ನಿಯಮಗಳು ಮತ್ತು ಕ್ರಮಗಳ ಮೂಲಕ ಆಮದುಗಳನ್ನು ನಿಯಂತ್ರಿಸಲು ಸರ್ಕಾರವು ಪ್ರಯತ್ನಿಸಿದರೆ ಭಾರತದ ಆರ್ಥಿಕತೆಗೆ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಸಾಂಕ್ರಾಮಿಕ ರೋಗದಿಂದಾಗಿ ಅಸ್ಥಿರವಾಗಿರುವ ಭಾರತದ ಆರ್ಥಿಕತೆಯು ಇಂಥ ಉಪಕ್ರಮಗಳಿಗೆ ಪೂರಕವಾಗಿ ಸ್ಪಂದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲು ಆಗುವುದಿಲ್ಲ. ಭಾರತದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ 75ರಷ್ಟನ್ನು ಉಷ್ಣ ವಿದ್ಯುತ್ ಸ್ಥಾವರಗಳೇ ಪೂರೈಸುತ್ತಿವೆ ಎನ್ನುವುದು ಕಟು ವಾಸ್ತವ.
ಹಾಗಾದರೆ ವಿದ್ಯುತ್ ವಲಯದಲ್ಲಿ ಭಾರತವನ್ನು ಚೀನಾದ ಕಪಿಮುಷ್ಟಿಯಿಂದ ಪಾರು ಮಾಡಲು ಇರುವ ಮಾರ್ಗೋಪಾಯವೇನು? ಕಲ್ಲಿದ್ದಲಿನ ಮೇಲಿನ ಅವಲಂಬನೆಯನ್ನು ಭಾರತವು ತೀವ್ರವಾಗಿ ಕಡಿಮೆಗೊಳಿಸಬೇಕಾಗಿದೆ. ಪರಿಸರದ ಕಾರಣಗಳಿಗಾಗಿಯೂ ದೇಶವು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳನ್ನು ಕಡಿತಗೊಳಿಸಿ, ಅಸಾಂಪ್ರದಾಯಿಕ ಇಂಧನ ಉತ್ಪಾದನೆಯಲ್ಲಿ ಮುಂದಡಿ ಇರಿಸಬೇಕಾಗಿದೆ. ಆದರೆ, ಇತ್ತೀಚಿನ ದಶಕಗಳಲ್ಲಿ ಹೊರಹೊಮ್ಮಿದ ಈ ಹೊಸ ಆಯ್ಕೆಗಳಲ್ಲಿಯೂ, ಆಮದು ಮಾಡಿದ ಉಪಕರಣಗಳನ್ನು ಬಳಸಲಾಗುತ್ತದೆ. ಎಲ್ಲಿಯವರೆಗೆ ಭಾರತದ ಖಾಸಗಿ ಮತ್ತು ಸಾರ್ವಜನಿಕ ಉದ್ಯಮಗಳು ವಿದ್ಯುತ್ ವಲಯಕ್ಕೆ ಅಗತ್ಯವಾದ ಉಪಕರಣಗಳನ್ನು ತಯಾರಿಸುವುದಿಲ್ಲವೋ ಅಲ್ಲಿಯವರೆಗೆ ಚೀನಾ ಅಥವಾ ಇತರ ದೇಶಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಇದರ ಅರ್ಥ, ಭಾರತವು ಆಮದುಗಳಿಂದ ಮುಕ್ತವಾಗಲು ಅಸಮರ್ಥವಾಗಿದೆ ಎಂದಲ್ಲ. ಆದರೆ, ಈ ಗುರಿಯನ್ನು ಸಾಧಿಸಲು ಪಯಣಿಸಬೇಕಾದ ಹಾದಿ ಬಹಳ ದೂರವಿದೆ. ಕಡಿಮೆ ಅವಧಿಯಲ್ಲಿ, ಮಿತವ್ಯಯಕಾರಿ ಉಪಕರಣಗಳು ಮತ್ತು ಸೌರ ಬ್ಯಾಟರಿಗಳನ್ನು ತಯಾರಿಸಲು ಸಾಧ್ಯವಿಲ್ಲ. ಆಮದುಗಳನ್ನು ವಿವೇಕದಿಂದ ಅನುಮತಿಸುವ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವುದರ ನಡುವಿನ ಸಮತೋಲನವನ್ನು ಸಾಧಿಸುವುದು ಪ್ರಸ್ತುತ ಆಯ್ಕೆಯಾಗಿದೆ.
(ಲೇಖಕ ಗಿರೀಶ್ ಲಿಂಗಣ್ಣ ಅವರು ಎಡಿಡಿ ಎಂಜಿಯರಿಂಗ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು)ವಿದ್ಯುತ್ ಘಟಕ ಅಳವಡಿಕೆ ಕಾಮಗಾರಿ (ಒಳಚಿತ್ರದಲ್ಲಿ ಲೇಖಕ ಗಿರೀಶ್ ಲಿಂಗಣ್ಣ)
ಇದನ್ನೂ ಓದಿ: National Defence: ತೈವಾನ್ ಮೇಲೇಕೆ ಚೀನಾಕ್ಕೆ ಕೆಂಗಣ್ಣು? ಅಮೆರಿಕಕ್ಕೆ ಇರುವ ಆಯ್ಕೆಗಳೇನು? ಇದನ್ನೂ ಓದಿ: National Defence: ಕೈಲಿ ಮಿಠಾಯಿ, ಬಗಲಲ್ಲಿ ದೊಣ್ಣೆ: ಭಾರತವನ್ನು ಬಾಗಿಸುವ ಅಮೆರಿಕದ ಯತ್ನ ಎಸ್-400 ವಿಚಾರದಲ್ಲಿ ವಿಫಲವಾಗಿದ್ದು ಏಕೆ?