DIMHANS report: ಧಾರವಾಡ ಜಿಲ್ಲೆಯಲ್ಲಿ ಯಶಸ್ವೀ ಆನ್‌ಲೈನ್ ಶಿಕ್ಷಣ -ಖ್ಯಾತ ಮನಶಾಸ್ತ್ರಜ್ಞರ ತಂಡದಿಂದ ಅಧ್ಯಯನ ವರದಿ ಸಲ್ಲಿಕೆ
ಕೊವಿಡ್ ಸಮಯದಲ್ಲಿ ನಡೆದ ಆನ್‌ಲೈನ್ ಶಿಕ್ಷಣದಲ್ಲಿ ಶಿಕ್ಷಕರಿಗೆ ಉಂಟಾದ ಸವಾಲುಗಳ ಕುರಿತು ಡಿಮಾನ್ಸ್ ಸಂಸ್ಥೆ ವೈದ್ಯರ ತಂಡವು ಸಂಶೋಧನಾ ಪ್ರಬಂಧವನ್ನು ಇಲಾಖೆಗೆ ನೀಡಿದೆ. ಆನ್‌ಲೈನ್ ಶಿಕ್ಷಣ ಸಮಸ್ಯೆ, ಇಂಟರ್‌ನೆಟ್ ಸೌಲಭ್ಯ, ಶಿಕ್ಷಕರ ಅನುಭವ, ಲಿಂಗದ ಆಧಾರದ ಮೇಲೆ ಅಧ್ಯಯನ ಮಾಡಲಾಗಿದೆ.
ಧಾರವಾಡ: ಮುನ್ಸೂಚನೆ ಇಲ್ಲದೇ ಬಂದೆರಗಿದ ಕೊವಿಡ್-19 ಸೋಂಕಿನ ಸಮಯದಲ್ಲಿ ಯಾವ ತರಬೇತಿ ಇಲ್ಲದೇ, ಇಂಟರ್‌ನೆಟ್ ಅಂತಹ ತಂತ್ರಜ್ಞಾನದ ಕೊರತೆಯ ಮಧ್ಯೆಯೂ ಒತ್ತಡಕ್ಕೆ ಒಳಗಾಗದೇ ಜಿಲ್ಲೆಯ ಶೇ.75-80ರಷ್ಟು ಶಿಕ್ಷಕರು ಸಮರ್ಥವಾಗಿ ಆನ್‌ಲೈನ್ ಶಿಕ್ಷಣವನ್ನು ನಿಭಾಯಿಸಿರುವುದಾಗಿ ಖ್ಯಾತ ಮನಶಾಸಜ್ಞ ಡಾ. ಆನಂದ ಪಾಂಡುರಂಗಿ ಅವರ ಮಾರ್ಗದರ್ಶನದಲ್ಲಿ ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಕೇಂದ್ರದ (ಡಿಮ್ಹಾನ್ಸ್) ವೈದ್ಯರ ತಂಡವು ಅಧ್ಯಯನದ ಮೂಲಕ ಕಂಡುಕೊಂಡಿದೆ.
ಶೇ. 1ರಷ್ಟು ಶಿಕ್ಷಕರು ಮಾತ್ರ ಆನ್‌ಲೈನ್ ಶಿಕ್ಷಣದಿಂದ ಒತ್ತಡಕ್ಕೆ
ಡಿಮಾನ್ಸ್ ಸಹಾಯಕ ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ, ಡಾ. ಸಪ್ನಾ ಪಾಂಡುರಂಗಿ ಹಾಗೂ ಡಾ. ಮಹೇಶ ಅವರು ಜಂಟಿಯಾಗಿ ಈ ಅಧ್ಯಯನ ಮಾಡಿದ್ದು ಜಿಲ್ಲೆಯ ಆಯ್ದ ಖಾಸಗಿ ಮತ್ತು ಸರ್ಕಾರಿ ಶಾಲೆಗಳ 652 ಶಿಕ್ಷಕರಿಗೆ ಪ್ರಶ್ನೋತ್ತರ ಮಾದರಿಯಲ್ಲಿ ಈ ಅಧ್ಯಯನ ನಡೆಸಿ ಇದೀಗ ವರದಿಯನ್ನು ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಸಲ್ಲಿಸಿದರು. ಶೇ. 70ರಷ್ಟು ಶಿಕ್ಷಕರು ಆನ್‌ಲೈನ್ ಶಿಕ್ಷಣವನ್ನು ಒತ್ತಡಕ್ಕೆ ಒಳಗಾಗದೇ ನಿಭಾಯಿಸಿದರೆ, ಬರೀ ಶೇ. 1ರಷ್ಟು ಶಿಕ್ಷಕರು ಮಾತ್ರ ಒತ್ತಡ, ಖಿನ್ನತೆಯಿಂದ ಈ ಕಾರ್ಯದಲ್ಲಿ ತೊಡಗಿದ್ದು, ಉಳಿದವರು ಆನ್‌ಲೈನ್ ಶಿಕ್ಷಣವನ್ನು ಸಾಮಾನ್ಯವಾಗಿ ಪರಿಗಣಿಸಿದ್ದಾರೆ.
ಒತ್ತಡಕ್ಕೆ ಒಳಗಾಗದೇ ಆನ್ ಲೈನ್ ಶಿಕ್ಷಣ ನಿಭಾಯಿಸಿದ ಶಿಕ್ಷಕರು
ಮೊದಲ ಮತ್ತು ಎರಡನೆಯ ಅಲೆಯ ಸಮಯದಲ್ಲಿ ಅನಿವಾರ್ಯವಾಗಿ ಶಾಲೆ-ಕಾಲೇಜುಗಳು ಬಂದ್ ಆದವು. ಶಿಕ್ಷಕರಿಗೆ ಆನಲೈನ್ ಪಾಠ ಮಾಡುವ ಅನಿವಾರ್ಯತೆ ಉಂಟಾಯಿತು. ಆದರೆ, ಆನ್‌ಲೈನ್ ಪಾಠ ಮಾಡಿದ ಅನುಭವ ಶಿಕ್ಷಕರಿಗೆ ಹಾಗೂ ಈ ರೀತಿಯ ಪಾಠ ಕೇಳಿದ ಅನುಭವ ಮಕ್ಕಳಿಗೂ ಇರಲಿಲ್ಲ. ಆದರೂ ಶಿಕ್ಷಣವನ್ನು ನಿರಂತರವಾಗಿಟ್ಟುಕೊಳ್ಳುವ ಕಾರಣ ಆನ್‌ಲೈನ್ ಮೂಲಕ ಶಿಕ್ಷಣವನ್ನು ಒದಗಿಸಲಾಯಿತು. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಆನ್‌ಲೈನ್ ಶಿಕ್ಷಣದಿಂದಾದ ತೊಂದರೆಗಳು ಮತ್ತು ಅವುಗಳಿಗೆ ಪರಿಹಾರ ಕುರಿತಾಗಿ ಶಿಕ್ಷಣ ಇಲಾಖೆ ಸಹಾಯದಿಂದಲೇ ಈ ಅಧ್ಯಯನ ಮಾಡಲಾಗಿದೆ (Dharwad Institute of Mental Health and Neuro Sciences -DIMHANS).
ವೈದ್ಯರ ತಂಡ ನೀಡಿದ ವರದಿಯಲ್ಲೇನಿದೆ..?
223 ಪುರುಷ ಶಿಕ್ಷಕರು ಹಾಗೂ 429 ಮಹಿಳಾ ಶಿಕ್ಷಕರು ಸೇರಿದಂತೆ 652 ಶಿಕ್ಷಕರ ಅಭಿಪ್ರಾಯಗಳನ್ನು ಪ್ರಶ್ನೋತ್ತರ ರೂಪದಲ್ಲಿ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ವರದಿ ಸಿದ್ದಪಡಿಸಲಾಗಿದೆ. ಶೇ. 75-80ರಷ್ಟು ಶಿಕ್ಷಕರು ಒತ್ತಡ ನಿಭಾಯಿಸಿಕೊಂಡು ಆನಲೈನ್ ಪಾಠ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಮಾತ್ರವಲ್ಲದೇ, ಶಿಕ್ಷಕರು ಇಂತಹ ಅನಿರೀಕ್ಷಿತ ಸವಾಲುಗಳನ್ನು ಸ್ವೀಕರಿಸಲು ಬದ್ಧರಿದ್ದಾರೆ ಎಂಬುದು ತಿಳಿದಿದೆ.
ಬಹಳ ಕಡಿಮೆ ಶಿಕ್ಷಕರಿಗೆ ಆನ್‌ಲೈನ್ ಪಾಠದ ಸಮಯದಲ್ಲಿ ಆತಂಕ, ಒತ್ತಡ ಉಂಟಾಗಿದೆ
ಏತಕ್ಕಾಗಿ ಹೀಗಾಯಿತು ಎಂಬುದನ್ನು ಅಧ್ಯಯನ ಮಾಡಿದಾಗ, ಶಿಕ್ಷಕರಿಗೆ ಆನಲೈನ್ ಶಿಕ್ಷಣದ ತರಬೇತಿಯೇ ಇರಲಿಲ್ಲ. ಏಕಾಏಕಿ ಈ ಹೊಸ ಶಿಕ್ಷಣ ಪದ್ಧತಿ ಆತಂಕಕ್ಕೆ ಈಡು ಮಾಡಿದೆ. ಜೊತೆಗೆ ಇಂಟರ್‌ನೆಟ್ ಸಮಸ್ಯೆ ಮತ್ತು ಕೆಲವು ಪಾಲಕರ ಸಹಕಾರದ ಕೊರೆತೆಯೂ ಕಂಡು ಬಂದಿರುವುದಾಗಿ ಅಧ್ಯಯನದಲ್ಲಿ ಗೊತ್ತಾಗಿದೆ. ಆದ್ದರಿಂದ ಕೋವಿಡ್ ಅಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ನಿರಂತರ ಕಲಿಕೆ ಮಾಡಲು ಶಿಕ್ಷಣ ಇಲಾಖೆ ಕೆಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಡಿಮಾನ್ಸ್ ವೈದ್ಯರ ತಂಡ ಸಲಹೆ ನೀಡಿದೆ.
ಬರುವ ದಿನಗಳಲ್ಲಿ ಶಿಕ್ಷಣ ಇಲಾಖೆಯು ಶಿಕ್ಷಕರು ತರಬೇತಿ ಪಡೆಯುವಾಗಲೇ ತಂತ್ರಜ್ಞಾನ ಆಧಾರಿತ ಆನ್‌ಲೈನ್ ತರಬೇತಿ ಕಡ್ಡಾಯವಾಗಿ ನೀಡಬೇಕು. ಪ್ರಸ್ತುತ ಕೊವಿಡ್ ಹಾವಳಿ ಕಡಿಮೆಯಾಗಿದ್ದು ಸಂಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾದಾಗ ಶಿಕ್ಷಕರು ಹಾಗೂ ಮಕ್ಕಳು ಗೊಂದಲ, ಆತಂಕಕ್ಕೆ ಈಡಾಗುವ ಸಾಧ್ಯತೆಗಳೂ ಇವೆ. ಈ ಸ್ಥಿತಿಯಲ್ಲಿ ಎಲ್ಲ ಶಾಲೆಗಳಲ್ಲಿ ಅತಿಥಿ ಸಮಾಲೋಚಕರನ್ನು ನೇಮಿಸಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಶಿಕ್ಷಕರು, ಮಕ್ಕಳಿಗೆ ಸಮಾಲೋಚನೆ ಮಾಡಿದ್ದೇ ಆದರೆ ಮೊದಲಿನಂತೆ ಶಿಕ್ಷಣ ವ್ಯವಸ್ಥೆ ಸರಾಗವಾಗಿ ನಡೆದುಕೊಂಡು ಹೋಗಲಿದೆ ಎಂಬ ಸಲಹೆಗಳನ್ನು ಅಧ್ಯಯನದಲ್ಲಿ ನೀಡಲಾಗಿದೆ.
ಕೊವಿಡ್ ಸಮಯದಲ್ಲಿ ನಡೆದ ಆನ್‌ಲೈನ್ ಶಿಕ್ಷಣದಲ್ಲಿ ಶಿಕ್ಷಕರಿಗೆ ಉಂಟಾದ ಸವಾಲುಗಳ ಕುರಿತು ಡಿಮಾನ್ಸ್ ಸಂಸ್ಥೆ ವೈದ್ಯರ ತಂಡವು ಸಂಶೋಧನಾ ಪ್ರಬಂಧವನ್ನು ಇಲಾಖೆಗೆ ನೀಡಿದೆ. ಆನ್‌ಲೈನ್ ಶಿಕ್ಷಣ ಸಮಸ್ಯೆ, ಇಂಟರ್‌ನೆಟ್ ಸೌಲಭ್ಯ, ಶಿಕ್ಷಕರ ಅನುಭವ, ಲಿಂಗದ ಆಧಾರದ ಮೇಲೆ ಅಧ್ಯಯನ ಮಾಡಲಾಗಿದೆ.
ಇಲಾಖೆ ಏನು ಕ್ರಮ ಕೈಗೊಂಡರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಶಿಕ್ಷಕರ ಮನೋಬಲ ಹೆಚ್ಚಿಸಬಹುದು ಎಂಬ ಸಲಹೆ ನೀಡಿದ್ದಾರೆ. ಶಿಕ್ಷಕರಿಗೆ ಉತ್ತಮ ತರಬೇತಿ, ಇಂಟರ್‌ನೆಟ್ ಸೌಲಭ್ಯ, ಮೊಬೈಲ್, ಕ್ಯಾಮೆರಾ, ವಿದ್ಯುತ್ ಉಪಕರಣಗಳನ್ನು ಒದಗಿಸುವುದಾಗಿ ಸಲಹೆ ನೀಡಿದ್ದಾರೆ. ಜೊತೆಗೆ ಪಾಲಕರು ಸಹ ಶಿಕ್ಷಕರ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.
ವರದಿಯನ್ನು ಜಾರಿ ಮಾಡಲು ಇಲಾಖೆಯಿಂದ ಕ್ರಮ – ಮೇಜರ್ ಸಿದ್ಧಲಿಂಗಯ್ಯ ಹಿರೇಮಠ
ಈ ವರದಿ ನಿಜಕ್ಕೂ ಅದ್ಭುತವಾಗಿದೆ. ಖ್ಯಾತ ಮನಶಾಸ್ತ್ರಜ್ಞರ ತಂಡ ಈ ಅಧ್ಯಯನ ಕೈಗೊಂಡಿದ್ದು, ವರದಿಯಲ್ಲಿ ವಿವರವಾಗಿ ಎಲ್ಲವನ್ನು ನೀಡಲಾಗಿದೆ. ವರದಿಯನ್ನು ಜಾರಿ ಮಾಡಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಅಂತಾ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದ್ದಾರೆ.
– ನರಸಿಂಹಮೂರ್ತಿ ಪ್ಯಾಟಿ
Online ಹ್ಯಾಕರ್, ಹಾಗೂ ಪೈರಸಿಯಿಂದ ಪಾರಾಗಲು Quick Heal Technology ಕಂಪನಿ ಹೊಸ ಪ್ರಾಡಕ್ಟ್ launch ಮಾಡಿದೆ