Anti Conversion Law: ಮತಾಂತರ ವಿರೋಧಿ ಕಾನೂನು ತರುವ ರೀತಿ ಇದಲ್ಲ; ಕಾರಣ ಇಲ್ಲಿದೆ ನೋಡಿ

Anti Conversion Law Karnataka: ಕರ್ನಾಟಕದಲ್ಲಿ ಬಲವಂತದ ಮತಾಂತರ ವಿರೋಧಿ ಕಾನೂನು ತರುತ್ತೇವೆ ಎಂದು ಮುಖ್ಯಮಂತ್ರಿ ಹೇಳಿರುವ ಕಾರಣಕ್ಕೆ ಮತಾಂತರ ಮತ್ತೆ ಚರ್ಚೆಗೆ ಬಂದಿದೆ. ಮತಾಂತರದ ಬಗ್ಗೆ ಚರ್ಚೆ ಹೇಗೆ ಮಾಡಬಹುದು ಎಂಬ ವಿಶ್ಲೇಷಣೆ ಇಲ್ಲಿದೆ.

Anti Conversion Law: ಮತಾಂತರ ವಿರೋಧಿ ಕಾನೂನು ತರುವ ರೀತಿ ಇದಲ್ಲ; ಕಾರಣ ಇಲ್ಲಿದೆ ನೋಡಿ
ಪ್ರಾತಿನಿಧಿಕ ಚಿತ್ರ
Follow us
ಡಾ. ಭಾಸ್ಕರ ಹೆಗಡೆ
| Updated By: Digi Tech Desk

Updated on:Oct 01, 2021 | 4:44 PM

ಕರ್ನಾಟಕದಲ್ಲಿ ಮತ್ತೆ ಮತಾಂತರದ ಗುಮ್ಮ ಸದ್ದು ಮಾಡುತ್ತಿದೆ. ಈ ಬಾರಿ ಸುದ್ದಿ ಮಾಡುತ್ತಿರುವವರು, ಮತ್ಯಾರೂ ಅಲ್ಲ, ಬಿಜೆಪಿಯ ಶಾಸಕ, ಗೂಳಿಹಟ್ಟಿ ಶೇಖರ್. ತನ್ನ ತಾಯಿಯೇ ಮತಾಂತರ ಆಗಿದ್ದಾರೆ ಎಂಬ ಆರೋಪದ ಹೇಳಿಕೆಯನ್ನು ಜನ ಮರೆಯುವ ಮುನ್ನ ಮತ್ತೊಮ್ಮೆ ಅವರು ಸಾಮಾಜಿಕ ಜಾಲತಾಣದ ಮೂಲಕ ಮತಾಂತರದ ಆರೋಪ ಮಾಡಿ, ಗುಡ್ಡಗಾಡಿನಲ್ಲಿ ವಾಸಿಸುತ್ತಿರುವ ಸುಡಗಾಡು ಸಿದ್ದ ಸಮುದಾಯದ 40 ಕುಟುಂಬಗಳನ್ನು ಮತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ನಡುವೆ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಲವಂತದ ಮತಾಂತರ ನಿರ್ಬಂಧಿಸುವ ಕುರಿತಾಗಿ ಕಾನೂನು ತರುತ್ತೇವೆ ಎಂದು ಎದೆಯುಬ್ಬಿಸಿ ಹೇಳಿ, ಆರ್​ಎಸ್​ಎಸ್​ ನಾಯಕರನ್ನು ಖುಷಿಪಡಿಸಿದ್ದಾರೆ.

ಇಲ್ಲೀವರೆಗೆ ಕೋರ್ಟ್​ ಹೇಳಿದ್ದೇನು? ಕೇರಳದ ಹದಿಯಾ ಕೇಸ್​ನಿಂದ ಹಿಡಿದು ಅನೇಕ ಕೇಸ್​ಗಳಲ್ಲಿ ಕೋರ್ಟ್​ ಹೇಳಿದ್ದಿಷ್ಟು- ವಯಸ್ಸಿಗೆ ಬಂದ ಮಕ್ಕಳು ಬೇರೆ ಧರ್ಮಿಯರನ್ನು ಮದುವೆ ಆಗಬಹುದು. ನ್ಯಾಯಾಲಯದ ಮುಂದೆ ಬಂದ ತಂದೆ ತಾಯಿ, ತಮ್ಮ ಮಕ್ಕಳನ್ನು ಬಲವಂತದ ಮತಾಂತರ ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಿದರೂ ಅದನ್ನು ಎಲ್ಲಿಯೂ ಸಾಕ್ಷ್ಯಾಧಾರ ಸಮೇತ ಸಾಬೀತು ಮಾಡಲು ಆಗಿಲ್ಲ. ಹಾಗಾಗಿ ಎಲ್ಲ ಕೇಸ್​ಗಳಲ್ಲಿಯೂ ಮತಾಂತರದ ಆರೋಪ ಮಾಡಿದವರಿಗೆ ಸೋಲುಂಟಾಗಿದೆ ಎಂಬುದನ್ನು ಈ ಚರ್ಚೆ ಪ್ರಾರಂಭಿಸುವ ಮೊದಲೇ ನೆನಪಿಟ್ಟುಕೊಳ್ಳಬೇಕು. ಇಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು-ಈ ಮೇಲೆ ಹೇಳಿದ ವಿಚಾರಗಳೆಲ್ಲ ಮದುವೆ ಕುರಿತಾದದ್ದು. ಇಲ್ಲಿ ಚರ್ಚೆ ನಡೆಯುತ್ತಿರುವುದು ಕುಟುಂಬಗಳನ್ನು ಮತಾಂತರ ಮಾಡುತ್ತಿದ್ದಾರೆ ಎಂಬ ವಿಚಾರದ ಕುರಿತು. ಈ ನಿಟ್ಟಿನಲ್ಲಿ ಕೂಡ, ನ್ಯಾಯಾಲಯ ಹೇಳುತ್ತಿರುವುದು ಅದನ್ನೇ-ವಯಸ್ಸಿಗೆ ಬಂದವ/ಬಂದವಳು ತನಗೆ ಬೇಕಾದ ಪೂಜಾ ವಿಧಾನ, ತಾನು ನಂಬಿಕೊಳ್ಳುವ ದೇವರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಸಂವಿಧಾನವೇ ಕೊಟ್ಟಾಗ, ಯಾವ ರಾಜ್ಯದ ಯಾವ ಮುಖ್ಯಮಂತ್ರಿ ಎಂತದೇ ಕಾನೂನು ತಂದರೂ ಅದು ನ್ಯಾಯಾಲಯದಲ್ಲಿ ನಿಂತುಕೊಳ್ಳುವುದಿಲ್ಲ. ಅದನ್ನು ನ್ಯಾಯಾಲಯ ರದ್ದುಗೊಳಿಸಿರುವುದನ್ನು ನೋಡಿದ್ದೇವೆ.

ಮತಾಂತರ ನಡೆಯುತ್ತಿದೆಯೇ? ಹಾಗಾದರೆ ಮತಾಂತರ ನಡೆಯುತ್ತಿದೆಯೇ? ಹಾಗಿಲ್ಲವಾದಲ್ಲಿ ಓರ್ವ ಶಾಸಕನೂ ಸೇರಿದಂತೆ ಅನೇಕರು ಈ ರೀತಿ ಆರೋಪ ಮಾಡಲು ಸಾಧ್ಯವಾಗುತ್ತಿತ್ತೇ? ಅವರ ಆರೋಪ/ಅಭಿಪ್ರಾಯದಲ್ಲಿ ಸತ್ಯಾಂಶ ಇಲ್ಲವೇ? ಈ ರೀತಿಯ ಪ್ರಶ್ನೆಗಳು ಉದ್ಭವಿಸುವುದು ಸಹಜ. ಇದನ್ನು ಜನ ಗಣತಿ ಆಧಾರದ ಮೇಲೆ ಅಥವಾ ರಾಷ್ಟ್ರೀಯ ಮಾದರಿ ಸಮೀಕ್ಷೆಯ (National Sample Survey) ದತ್ತಾಂಶವನ್ನು ಆಧರಿಸಿ ಹೇಳಬಹುದೇ? ಇಲ್ಲ. ಇಲ್ಲೊಂದು ತೊಡಕಿದೆ. ಮತಾಂತರಗೊಂಡವರು ಯಾರೂ ಕೂಡ ಸರಕಾರೀ ದಾಖಲೆಗಳಲ್ಲಿ ತಮ್ಮ ಹೊಸ ಧರ್ಮವನ್ನು ದಾಖಲಿಸಿದಂತೆ ಕಾಣುತ್ತಿಲ್ಲ (ಇದರ ಕಾರಣ ಮತ್ತು ಇದರ ಪರಿಣಾಮವನ್ನು ಮುಂದೆ ಚರ್ಚಿಸೋಣ). ಚಿತ್ರದುರ್ಗದಿಂದ ಪ್ರಾರಂಭಿಸಿ ಬಳ್ಳಾರಿ ಜಿಲ್ಲೆ ದಾಟಿ ಮುಂದೆ ಹೋಗುತ್ತ ಜನರೊಂದಿಗೆ ಮಾತನಾಡುತ್ತ ಸಾಗಿದರೆ ಒಂದಂಶ ನಮಗೆ ತಿಳಿಯುವುದು ನಿಜ-ಗುಡ್ಡಗಾಡು ಮ್ಯಾಸನಾಯಕ (ಇವರು ಎಸ್ಟಿ ಸಮುದಾಯ) ಸಮುದಾಯದ ಜನರಲ್ಲಿ ಸಾವಿರಾರು ಜನ ಮತಾಂತರಗೊಂಡಿದ್ದಾರೆ ಮತ್ತು ಕಂಡ ಕಂಡಲ್ಲಿ ಚಿಕ್ಕ ಚಿಕ್ಕ ಪ್ರಾರ್ಥನಾ ಮಂದಿರಗಳು ಎದ್ದು ನಿಂತಿವೆ. ಇವೆಲ್ಲ ಒಮ್ಮಿಂದೊಮ್ಮೆಲೆ ರಾತ್ರಿ ಬೆಳಗಾಗುವುದರಲ್ಲಿ ಆಗಲು ಸಾಧ್ಯವಿಲ್ಲ. ಅಥವಾ ತಮ್ಮನ್ನು ಬಲವಂತದಿಂದ ಮತಾಂತರ ಮಾಡಿದರು ಯಾರೂ ಆರೋಪ ಮಾಡುತ್ತಿಲ್ಲ. ಅಂದರೆ, ಬೊಮ್ಮಾಯಿ ಸರಕಾರ ಒಂದೊಮ್ಮೆ ಬಲವಂತದ ಮತಾಂತರ ನಿಷೇಧ ಕಾನೂನು ತಂದರೂ ಅದರಿಂದ ಮತಾಂತರ ತಡೆಯಲು ಏನೇನು ಪ್ರಯೋಜನ ಆಗದು.

ಮತಾಂತರ ಹೇಗೆ ನಡೆಯುತ್ತದೆ? ಮತಾಂತರದ ಪ್ರಕ್ರಿಯೆಯನ್ನು ಮೊದಲು ಅಧ್ಯಯನ ಮಾಡಬೇಕು. ಅದನ್ನು ದಾಖಲಿಸಬೇಕು. ಅಮೆರಿಕ ಅಥವಾ ಪಾಶ್ಚಾತ್ಯ ದೇಶಗಳಲ್ಲಿ ಒಂದು ಸಾಮಾಜಿಕ ಬದಲಾವಣೆ ಆಗುತ್ತೆ ಎಂದಾದರೆ ಅಲ್ಲಿ ಮೊದಲು ಬರುವವರು ರಾಜಾಕಾರಣಿಗಳಲ್ಲ, ವಿಶ್ವವಿದ್ಯಾನಿಲಯಗಳ ಅಧ್ಯಾಪಕರು ಮತ್ತು ಸಂಶೋಧಕರು. ಇಂಥ ಸಂದರ್ಭಕ್ಕೆ ರಾಜಕಾರಣಿ ಬಂದರೆ ಅದು ದಾರಿ ತಪ್ಪುವುದು ನಿಶ್ಚಿತ. ವಿಶ್ವವಿದ್ಯಾಲಯಗಳ ಸಂಶೋಧಕರು ಮಾಡುವ ಕೆಲಸವೇ ಬೇರೆ -ಸಾಮಾಜಿಕ ಪ್ರಕ್ರಿಯೆಗಳನ್ನು ನಿರ್ಲಿಪ್ತವಾಗಿ, ಯಾವ ತಪ್ಪು ಒಪ್ಪಿನ ಹಂಗಿಲ್ಲದೇ ದಾಖಲಿಸುತ್ತ ಹೋಗುತ್ತಾರೆ. ಮಾನವಶಾಸ್ತ್ರಜ್ಞರು ಆ ಪ್ರಕ್ರಿಯೆ ನಡೆಯುವಲ್ಲಿ ಉಳಿದುಕೊಂಡು ಅದನ್ನು ಸಾಕ್ಷ್ಯಾಧಾರದ ಮೂಲಕ ದಾಖಲಿಸುತ್ತ ಹೋಗುತ್ತಾರೆ. ಒಂದು ವರ್ಷವೋ ಎರಡು ವರ್ಷವೋ ಅಧ್ಯಯನ ಮಾಡಿದ ನಂತರ ಆ ಕುರಿತು ಒಂದು ವ್ಯಾಖ್ಯಾನ ಅಥವಾ ಥಿಯರಿ ಸಿದ್ಧವಾಗುತ್ತದೆ. ನಮ್ಮಲ್ಲಿ ಮತಾಂತರದ ಕುರಿತು ಈ ರೀತಿಯ ಅಧ್ಯಯನ ಆಗಿಲ್ಲವಲ್ಲ. ಸಾಮಾಜಿಕ ಅಧ್ಯಯನದ ಆಧಾರದ ಮೇಲೆ ನೀತಿ ನಿರೂಪಣೆ ಆಗುವುದು ಸಹಜ. ನೀತಿ ಬಂದ ಮೇಲೆ ತಾನೆ ಕಾನೂನು ತರಲು ಸಾಧ್ಯ?

ಮಾನಸಿಕವಾಗಿ ಕುಗ್ಗಿರುವ ಜನರನ್ನು ಹುಡುಕಿ ಅವರ ದುಃಖಕ್ಕೆ ಮೊದಲು ಹೆಗಲು ಕೊಡುವುದು ಮತಾಂತರ ಮಾಡುವವರು ಮಾಡುವ ಮೊದಲ ಕೆಲಸ. ಆಮೇಲೆ, ದುಃಖ, ಶಾರೀರಿಕ ನೋವು, ಮಾನಸಿಕ ತೊಂದರೆಯಲ್ಲಿರುವವರಿಗಾಗಿ ತಾವು ದಿನಾಲು ಪ್ರಾರ್ಥಿಸುತ್ತಿದ್ದೇವೆ ಎಂದು ಅರಿಕೆ ಮಾಡಿಕೊಡುವುದು ಎರಡನೇ ಹಂತ. ಮೂರನೇ ಹಂತದಲ್ಲಿ, ಬಂದಿರುವ ಕಷ್ಟ ಅದು ಎಂಥದೇ ಇರಲಿ, ಅದಕ್ಕೆ ಮದ್ದು ಹುಡುಕುವುದು ದೇವರ ಸಾನ್ನಿಧ್ಯದಲ್ಲಿ, ಆದ್ದರಿಂದ ಪ್ರಾರ್ಥನಾ ಮಂದಿರಕ್ಕೆ ಬರಬೇಕು ಎಂದು ಹೇಳಿ ಅವರನ್ನು ಕರೆದುಕೊಂಡು ಹೋಗಿ ವಿವಿಧ ಪ್ರಾರ್ಥನೆಗಳನ್ನು ಮಾಡಿಸಿ, ಅವರ ಮಾನಸಿಕ ಕ್ಲೇಷ, ದೈಹಿಕ ತೊಂದರೆ ಹೋಯ್ತು ಎಂದು ಅವರ ಮನಸ್ಸಿಗೆ ಮೂಡುವಂತೆ ಬಿಂಬಿಸುವುದು. ಮತಾಂತರಕ್ಕೆ ಬರೀ ಆರ್ಥಿಕವಾಗಿ ಹಿಂದುಳಿದವರು ತುಳಿತಕ್ಕೊಳಗಾದವರು ಮಾತ್ರ ಆಗುತ್ತಿಲ್ಲ. ವ್ಯಾಪಾರಸ್ಥರು, ಪತ್ರಕರ್ತರು ಎಲ್ಲರು ಮತಾಂತರ ಆಗುತ್ತಿದ್ದಾರೆ.

ಈ ರೀತಿ ಮತಾಂತರ ಆಗುತ್ತೆ ಎನ್ನುವ ಆರೋಪದಲ್ಲಿ ಎಲ್ಲಿಯೂ ಸಿನೀಮಿಯ ರೀತಿಯಲ್ಲಿ ತಲೆಗೆ ಪಿಸ್ತೂಲು ಹಿಡಿದು ಮತಾಂತರ ಆಗು ಎಂದು ಹೇಳುವ ವಿಧಾನ ಕಾಣುತ್ತಿಲ್ಲ. ಹಾಗಾಗಿಯೇ ಬೊಮ್ಮಾಯಿ ತರಲು ಹೊರಟಿರುವ ಮತಾಂತರ ಕಾನೂನು, ಸಮಾಜದಲ್ಲಿ ನಡೆಯುತ್ತಿರುವ ಸದ್ದಿಲ್ಲದ ಮತಾಂತರಕ್ಕೆ ಮದ್ದಾಗಲು ಸಾಧ್ಯವಿಲ್ಲ.

ಮತಾಂತರಕ್ಕೆ ವಿರೋಧ ಏಕೆ? ಯಾವ ಒತ್ತಡವಿಲ್ಲದೇ ಜನರಿಗೆ ಮತಾಂತರ ಮಾಡಿದರೆ ಅದನ್ನು ತಪ್ಪು ಅಂತ ಹೇಗೆ ಒಪ್ಪಿಕೊಳ್ಳೋದು? ಯಾವುದೇ ಧಾರ್ಮಿಕ ರೀತಿ ರಿವಾಜು, ನಂಬುಗೆ ಆಧಾರದ ಮೇಲೆ ಇದನ್ನು ನೋಡಿದರೆ ಯಾವ ನ್ಯಾಯಾಲಯ ಕೂಡ ಒಪ್ಪಿಕೊಳ್ಳುವುದಿಲ್ಲ. ಎಡಪಂಥೀಯರು ಸಾಮಾನ್ಯವಾಗಿ ಭಾರತದ ಬಲಪಂಥೀಯರ ಅದರಲ್ಲೂ ಆರ್​ಎಸ್​ಎಸ್​ ಮೇಲೆ ಮಾಡುವ ಆರೋಪ ಒಂದಿದೆ. ಎಲ್ಲರನ್ನೂ ಆರ್​ಎಸ್​ಎಸ್​ ನಂಬುಗೆಗೆ ಕರೆತಂದು ಇಡೀ ಸಮಾಜದ ವೈವಿಧ್ಯತೆಯನ್ನು, ಅನನ್ಯತೆಯನ್ನು ನಾಶಗೊಳಿಸುತ್ತದೆ ಈ ಆರ್​ಎಸ್​ಎಸ್​ ಎಂದು. ಹಾಗಾದರೆ, ಸಮಾಜದ ವಿವಿಧ ವರ್ಗಗಳ ಜನ ಅವರ, ನಂಬುಗೆ, ಪೂಜಾ ವಿಧಾನ, ಉಡುಗೆ ತೊಡುಗೆ ಹಾಗೂ ವಿವಿಧ ರೀತಿಯ ಹೆಸರಿಡುವ ವಿಧಾನಗಳನ್ನು ಬಿಟ್ಟು, ಯಾವುದಾದರೂ ಒಂದೇ ಧರ್ಮದ ರೀತಿ ರಿವಾಜಿನ ಒಳಗೆ ಬಂದರೆ ಇಲ್ಲಿ ವೈವಿಧ್ಯತೆ ನಾಶವಾಗುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದನ್ನು ಚಿಂತಕರು ನೋಡದಿರುವುದು ವಿಷಾದನೀಯ. ಚಿತ್ರದುರ್ಗದಲ್ಲಿ ಆಗುತ್ತಿರುವುದು ಇದೇ. ಮ್ಯಾಸನಾಯಕರು ಪೂಜಿಸುವ ವಿಧಾನ ಬೇರೆ. ಅವರ ದೇವರು ಚಿಕ್ಕ ಕತ್ತಿಯಂತಹ ಆಯುಧ. ಅದನ್ನು ಕೃಷ್ಣ ಕೊಟ್ಟಿದ್ದಾನೆ ಎಂಬುದು ಅವರ ನಂಬುಗೆ. ಅದನ್ನು ಬಿಟ್ಟು ಎಲ್ಲರೂ, ಒಂದೇ ತರಹದ ಹೆಸರು, ಉಡುಗೆ ತೊಡುಗೆ, ಪೂಜಾ ವಿಧಾನ ಒಪ್ಪಿಕೊಂಡಿರುವುದರಿಂದ ಅಲ್ಲಿ ದೇಶದ ವೈವಿಧ್ಯತೆ ಸತ್ತಂತೆ ಅಲ್ಲವೇ?

ಸಾಂವಿಧಾನಿಕ ನೈತಿಕತೆಯ ಪ್ರಶ್ನೆ ಹಾಗಾದರೆ, ಮತಾಂತರಗೊಂಡವರು ಸರಕಾರೀ ಕಾಗದ ಪತ್ರದಲ್ಲಿ ಕೂಡ ತಮ್ಮ ನಂಬುಗೆಯನ್ನು ದಾಖಲಿಸಬಹುದಲ್ಲ? ಏನು ತಪ್ಪು? ಈ ಕುರಿತು ಹೆಚ್ಚಿನ ಅಂಕಿ ಅಂಶ ಸಿಕ್ಕಿಲ್ಲ. ಆದರೆ ಒಂದಂತು ನಿಜ. ಸಾಮಾಜಿಕವಾಗಿ ಕೆಳಸ್ತರದಿಂದ ಬಂದವರು ಮತಾಂತರಗೊಂಡಾಗ ಅವರು ಸರಕಾರದ ಅನುಕೂಲ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಅವರು ಸರಕಾರೀ ದಾಖಲೆಯಲ್ಲಿ ತಮ್ಮ ಹಿಂದಿನ ಧಾರ್ಮಿಕ ಗುರುತನ್ನೇ (religious identity) ನಮೂದಿಸುತ್ತಾರೆ. ಆದರೆ ಇದು ತಪ್ಪು, ಅಷ್ಟೇ ಅಲ್ಲ, ಸಾಂವಿಧಾನಿಕ ನೈತಿಕ ಮೌಲ್ಯಕ್ಕೆ (constitutional morality) ವಿರುದ್ಧವಾಗುವುದಲ್ಲಿವೇ. ಆದು ಹೇಗೆ? ಕೆಳವರ್ಗದವರಿಗೆ ಆಗಿರುವ ಸಾಮಾಜಿಕ ಅನ್ಯಾಯವನ್ನು ನೋಡಿ ಸಂವಿಧಾನದಲ್ಲಿ ಆ ವರ್ಗಕ್ಕೆ ಮೀಸಲಾತಿಯೂ ಸೇರಿ ಹಲವಾರು ಸಹಾಯ ನೀಡಬೇಕು ಎಂಬುದು ನಮೂದಿಸಲಾಗಿದೆ. ಆದರೆ, ಬೇರೆ ಮತಕ್ಕೆ ಸೇರಿದ ನಂತರ ಅವರು ಈ ವರ್ಗದಿಂದ ಹೊರಬಂದರು ಎಂಬ ಅರ್ಥ ಅಲ್ಲವೇ? ಆಗ ಅವರು ಆ ಸಹಾಯವನ್ನು ಬಿಟ್ಟುಕೊಡಬೇಕು. ತಮ್ಮ ಧಾರ್ಮಿಕ ಗುರುತನ್ನು ಮುಚ್ಚಿಟ್ಟು ಸರಕಾರದ ಸಹಾಯಕ್ಕೆ ಕೈ ಚಾಚಿದರೆ ಅದು ಸಾಂವಿಧಾನಿಕ ನೈತಿಕ ಮೌಲ್ಯಕ್ಕೆ ಅಪಚಾರ ಮಾಡಿದಂತೆ ಅಲ್ಲವೇ? ಇದು ಚರ್ಚೆ ಆಗಬೇಕು. ಈ ಚರ್ಚೆ ನಡೆದು ಅದರ ಜೊತೆ ಜೊತೆಗೆ ಸಾಮಾಜಿಕ ಅಧ್ಯಯನ ನಡೆದು ಈ ಮತಾಂತರದ ಆರೋಪಗಳಿಗೆ ಸಾಕ್ಷ್ಯಾಧಾರ ಸಿಕ್ಕರೆ ಆಮೇಲೆ ಕಾನೂನು ತರಬಹುದೇ ಹೊರತು ಈಗಲ್ಲ.

ಇದನ್ನೂ ಓದಿ: ಮತಾಂತರದಿಂದ ರಾಜ್ಯಾದ್ಯಂತ ಕೋಮು ಗಲಭೆ ನಡೆಯುತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಇದನ್ನೂ ಓದಿ: ಕೇವಲ ಮದುವೆಗಾಗಿ ಧಾರ್ಮಿಕ ಮತಾಂತರ ನ್ಯಾಯಸಮ್ಮತವಲ್ಲ: ಕೋರ್ಟ್

(Proposed religious conversion law will not stop conversion in Karnataka here are the reasons)

Published On - 2:53 pm, Fri, 1 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ