NavIC: ಪ್ರಾದೇಶಿಕ ಸಂಚರಣಾ ವ್ಯವಸ್ಥೆ ನಾವಿಕ್ ಭಾರತಕ್ಕೇಕೆ ಮಹತ್ವದ್ದು? ಇಲ್ಲಿದೆ ಮಾಹಿತಿ

ಭಾರತದ ಎರಡನೇ ತಲೆಮಾರಿನ ಸಂಚರಣಾ ಉಪಗ್ರಹವಾದ ಎನ್‌ವಿಎಸ್- 01 ಅನ್ನು ಉಡಾವಣೆಗೊಳಿಸಲಾಗಿದೆ. ಇದು ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟೆಲ್ಲೇಶನ್ - ನಾವಿಕ್ (NavIC) ಪುಂಜದ ಹೊಸ ಸೇರ್ಪಡೆಯಾಗಿದೆ.

NavIC: ಪ್ರಾದೇಶಿಕ ಸಂಚರಣಾ ವ್ಯವಸ್ಥೆ ನಾವಿಕ್ ಭಾರತಕ್ಕೇಕೆ ಮಹತ್ವದ್ದು? ಇಲ್ಲಿದೆ ಮಾಹಿತಿ
ಪ್ರಾದೇಶಿಕ ಸಂಚರಣಾ ವ್ಯವಸ್ಥೆ ನಾವಿಕ್
Follow us
Rakesh Nayak Manchi
|

Updated on: Jun 18, 2023 | 3:27 PM

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವರ್ಷದ ತನ್ನ ಮೂರನೇ ಉಡಾವಣೆಯಲ್ಲಿ (ಮೇ 29ರಂದು) ಭಾರತದ ಎರಡನೇ ತಲೆಮಾರಿನ ಸಂಚರಣಾ ಉಪಗ್ರಹವಾದ ಎನ್‌ವಿಎಸ್- 01 ಅನ್ನು ಉಡಾವಣೆಗೊಳಿಸಿದೆ. ಇದು ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟೆಲ್ಲೇಶನ್ – ನಾವಿಕ್ (NavIC) ಪುಂಜದ ಹೊಸ ಸೇರ್ಪಡೆಯಾಗಿದೆ. ಸಂಚರಣಾ ಉಪಗ್ರಹಗಳಿಗೆ ಈಗ ಎನ್‌ವಿಎಸ್ ಎಂಬ ಹೊಸ ಹೆಸರಿಡಲಾಗಿದ್ದು, ಇದು ಈ ಸರಣಿಯ ಮೊದಲ ಉಪಗ್ರಹವಾಗಿದೆ. ಇದರ ಜೊತೆಗೆ, ಈ ಉಡಾವಣೆಯಿಂದ ಇಸ್ರೋ ಕೋವಿಡ್ ಸಾಂಕ್ರಾಮಿಕದ ಮೂರು ವರ್ಷಗಳಲ್ಲಿ ನಡೆಸಿದ್ದಕ್ಕಿಂತ ಹೆಚ್ಚಿನ‌ ಉಡಾವಣೆ ನಡೆಸಿದಂತಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

2,232 ಕೆಜಿ ತೂಕದ ಸಂಚರಣಾ ಉಪಗ್ರಹ ಎನ್‌ವಿಎಸ್- 01 ಅನ್ನು 51.7 ಮೀಟರ್ ಎತ್ತರದ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್‌ವಿ) ರಾಕೆಟ್ ಮೂಲಕ ಉಡಾವಣೆಗೊಳಿಸಲಾಯಿತು. ಇದು ಕರಾರುವಾಕ್ಕಾದ ಸಮಯದ ಮಾಹಿತಿಗಾಗಿ ಭಾರತೀಯ ನಿರ್ಮಾಣದ, ಅತ್ಯಾಧುನಿಕ ರುಬಿಡಿಯಂ ಅಟಾಮಿಕ್ ಕ್ಲಾಕ್ ಹೊಂದಿದೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್‌ಗಳು ನಾವಿಕ್ ವ್ಯವಸ್ಥೆಗೆ ಪೂರಕವಾಗಿವೆ. ದೀರ್ಘಾವಧಿಯಲ್ಲಿ ನಾವಿಕ್ ಒಂದು ಜಾಗತಿಕ ಸ್ಥಾನ ಸೂಚಕ ವ್ಯವಸ್ಥೆಯಾಗಿ (ಜಿಪಿಎಸ್) ಅಭಿವೃದ್ಧಿ ಹೊಂದಲಿದೆ.

ಜಿಪಿಎಸ್ ಮತ್ತು ಕಾರ್ಗಿಲ್ ಯುದ್ಧ

ಭಾರತದಲ್ಲಿ ಬಳಕೆಯಲ್ಲಿರುವ ಬಹುತೇಕ ಫೋನ್‌ಗಳು ಮತ್ತು ಆ್ಯಪ್‌ಗಳು ಸಂಚರಣೆಗಾಗಿ ಅಮೆರಿಕಾ ಸರ್ಕಾರಿ ಸ್ವಾಮ್ಯದ, ಅಮೆರಿಕಾದ ವಾಯುಪಡೆ ನಿರ್ವಹಿಸುತ್ತಿರುವ ಜಿಪಿಎಸ್ ಮೇಲೆ ಅವಲಂಬಿತವಾಗಿವೆ. ಮೂಲಗಳ ಪ್ರಕಾರ, ಭಾರತ ತನ್ನ ತಂತ್ರಜ್ಞಾನಗಳನ್ನು ವಿದೇಶಗಳಿಂದ ತರುವುದನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ. ಏನಾದರೂ ಸಮಸ್ಯೆಗಳು ಎದುರಾದರೆ, ಜನರಿಗೆ ಜಿಪಿಎಸ್ ಉಪಯೋಗಿಸಲು ಆಗದಿರುವ ಸಾಧ್ಯತೆಗಳಿವೆ. 1999ರಲ್ಲಿ, ಭಾರತ – ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತ ಅಮೆರಿಕಾದ ಬಳಿ ಜಿಪಿಎಸ್ ಮಾಹಿತಿಗಳನ್ನು ಕೋರಿತ್ತು. ಆ ಮೂಲಕ ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ಸೈನಿಕರ ಓಡಾಟದ ಮಾಹಿತಿ ಪಡೆಯಬಹುದು ಎಂದುಕೊಂಡಿತ್ತು ಭಾರತ. ಆದರೆ ಅಮೆರಿಕಾ ಇದಕ್ಕೆ ಋಣಾತ್ಮಕವಾಗಿ ಸ್ಪಂದಿಸಿತ್ತು. ಅಂದಿನಿಂದ ಭಾರತ ನಾವಿಕ್ ವ್ಯವಸ್ಥೆಯ ನಿರ್ಮಾಣದಲ್ಲಿ ಕಾರ್ಯೋನ್ಮುಖವಾಯಿತು. ಚೀನಾ, ಐರೋಪ್ಯ ಒಕ್ಕೂಟ (ಇಯು), ಜಪಾನ್ ಹಾಗೂ ರಷ್ಯಾಗಳ ಬಳಿ ಈಗಾಗಲೇ ಸ್ವಂತ ಪಥದರ್ಶಕ ವ್ಯವಸ್ಥೆಗಳಿವೆ.

ಪ್ರಸ್ತುತ ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಐಆರ್‌ಎನ್ಎಸ್ಎಸ್) (ಕಾರ್ಯಾಚರಣಾ ವಿಧದಲ್ಲಿ ನಾವಿಕ್) ಏಳು ಉಪಗ್ರಹಗಳನ್ನು ಹೊಂದಿದ್ದು, ಅವುಗಳು ಉಡಾವಣೆಯ ಸಮಯದಲ್ಲಿ ಬಹುತೇಕ 1,425 ಕೆಜಿ ತೂಕ ಹೊಂದಿದ್ದ ಹಗುರ ಉಪಗ್ರಹಗಳಾಗಿದ್ದವು. ಅವುಗಳ ಉಡಾವಣೆಗೆ ಇಸ್ರೋದ ಪ್ರಾಥಮಿಕ ಉಡಾವಣಾ ವಾಹನವಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ) ಅನ್ನು ಬಳಸಲಾಗಿತ್ತು.

ಇದನ್ನೂ ಓದಿ: ಬೀದಿಬದಿ ನಿಂತು ತನ್ನದೇ ಕಾದಂಬರಿಯ 4,500 ಪ್ರತಿಗಳನ್ನು ಮಾರಾಟ ಮಾಡಿದ ಯುವ ಲೇಖಕ; ಮೊಯೀನ್ ವಿಎನ್ ಸ್ಫೂರ್ತಿ ಕಥೆ!

ಈ ಉಪಗ್ರಹ ಪುಂಜದ ಕೊನೆಯ ಉಪಗ್ರಹವಾದ ಐಆರ್‌ಎನ್ಎಸ್ಎಸ್ – 1ಐ ಅನ್ನು ಎಪ್ರಿಲ್ 2018ರಲ್ಲಿ ಉಡಾವಣೆಗೊಳಿಸಿ, ಕಾರ್ಯ ಸ್ಥಗಿತಗೊಂಡಿದ್ದ ಉಪಗ್ರಹದ ಬದಲಿಗೆ ಕಾರ್ಯಾಚರಿಸುವಂತೆ ಮಾಡಲಾಯಿತು. ನಾವಿಕ್ ಪುಂಜದಲ್ಲಿ ಇಸ್ರೋದ ಒಂಬತ್ತನೇ ಉಪಗ್ರಹವಾಗಿದೆ. ಆದರೆ, ನೈಜತೆಯಲ್ಲಿ ಐಆರ್‌ಎನ್ಎಸ್ಎಸ್ – 1ಐ ಎಂಟನೇ ಉಪಗ್ರಹವಾಗಿದ್ದು, ಇದರ ಉಡಾವಣೆಗೂ ಎಂಟು ತಿಂಗಳ ಮೊದಲು, ಆಗಸ್ಟ್ 2017ರಲ್ಲಿ ಐಆರ್‌ಎನ್ಎಸ್ಎಸ್ – 1ಎಚ್ ಉಪಗ್ರಹವನ್ನು ಉಡಾವಣೆಗೊಳಿಸಲಾಗಿತ್ತು. ಆದರೆ ಅದರ ಪೇಲೋಡಿನ ಥರ್ಮಲ್ ಶೀಲ್ಡ್ ಸಮಯಕ್ಕೆ ಸರಿಯಾಗಿ ತೆರೆದುಕೊಳ್ಳದ್ದರಿಂದ ಉಪಗ್ರಹ ವಿಫಲವಾಯಿತು.

ರುಬಿಡಿಯಂ ಅಟಾಮಿಕ್ ಕ್ಲಾಕ್

ಎರಡನೇ ತಲೆಮಾರಿನ ಸಂಚರಣಾ ಉಪಗ್ರಹವಾದ ಎನ್‌ವಿಎಸ್-01 ಹೆಚ್ಚಿನ ಪೇಲೋಡ್ ಅನ್ನು ಹೊಂದಿದೆ. ಅದಲ್ಲದೆ, ಈ ಉಪಗ್ರಹ ದೇಶೀಯವಾಗಿ ನಿರ್ಮಿಸಲಾಗಿರುವ ಪ್ರಮುಖ ತಂತ್ರಜ್ಞಾನವಾದ ರುಬಿಡಿಯಂ ಅಟಾಮಿಕ್ ಕ್ಲಾಕ್ ಅನ್ನು ಹೊಂದಿದೆ. “ಬಾಹ್ಯಾಕಾಶ ಉಪಯೋಗಕ್ಕೆ ಯೋಗ್ಯವಾದ ಅಟಾಮಿಕ್ ಕ್ಲಾಕನ್ನು ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಹ್ಮದಾಬಾದ್ ನಿರ್ಮಿಸಿದ್ದು, ಈ ತಂತ್ರಜ್ಞಾನ ಜಗತ್ತಿನ ಕೆಲವೇ ರಾಷ್ಟ್ರಗಳ ಬಳಿ ಇದೆ” ಎಂದು ಇಸ್ರೋ ಹೇಳಿದೆ.

ಎಲ್1 ಸಂಕೇತಗಳು ಧರಿಸುವ ಉಪಕರಣಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತವೆ. ಪ್ರಸ್ತುತ ಉಪಗ್ರಹಗಳು ಎಲ್5 ಹಾಗೂ ಎಸ್ ಫ್ರೀಕ್ವೆನ್ಸಿಗಳಲ್ಲಿ ಸಂಕೇತಗಳನ್ನು ಕಳುಹಿಸಿದರೆ, ಎರಡನೆಯ ತಲೆಮಾರಿನ ಉಪಗ್ರಹಗಳು ಈ ಎರಡು ಫ್ರೀಕ್ವೆನ್ಸಿಗಳ ಜೊತೆಗೆ ಎಲ್1 ಫ್ರೀಕ್ವೆನ್ಸಿಯಲ್ಲೂ ಸಂಕೇತಗಳನ್ನು ಕಳುಹಿಸಲಿದೆ. ಇದು ಇತರ ಉಪಗ್ರಹ ಆಧಾರಿತ ನಿರ್ದೇಶನ ಕಾರ್ಯಗಳು ಒಂದಕ್ಕೊಂದು ಪೂರಕವಾಗಿ ಕಾರ್ಯಾಚರಿಸಲು ನೆರವಾಗುತ್ತದೆ. ಎಲ್1 ತರಂಗಾಂತರ ಜಿಪಿಎಸ್ ನಲ್ಲಿ ಬಳಸುತ್ತಿರುವ ಅತ್ಯಂತ ಪ್ರಸಿದ್ಧ ತರಂಗಾಂತರವಾಗಿದೆ. ಇದು ಕಡಿಮೆ ಶಕ್ತಿಯ ಉಪಕರಣಗಳಾದ, ಒಂಟಿ ತರಂಗಾಂತರ ಚಿಪ್‌ಗಳನ್ನು ಹೊಂದಿರುವ ಧರಿಸುವ (ವೇರೆಬಲ್) ಹಾಗೂ ವೈಯಕ್ತಿಕ ಟ್ರ್ಯಾಕರ್‌ಗಳಲ್ಲಿ ಜಿಪಿಎಸ್ ಬಳಕೆಯನ್ನು ಹೆಚ್ಚಿಸುತ್ತದೆ.

ದೀರ್ಘಕಾಲ ಬಾಳ್ವಿಕೆಯ ಉಪಗ್ರಹಗಳು

ಎರಡನೇ ತಲೆಮಾರಿನ ಉಪಗ್ರಹಗಳು ಹನ್ನೆರಡು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಬಲ್ಲವು. ಪ್ರಸ್ತುತ ಬಳಕೆಯಲ್ಲಿರುವ ಉಪಗ್ರಹಗಳು ಕೇವಲ ಹತ್ತು ವರ್ಷಗಳ ಅವಧಿಗೆ ಕೆಲಸ ಮಾಡಬಲ್ಲವು. ಆದರೆ ಎನ್‌ವಿಎಸ್ – 01 ಹೊಂದಿರುವ ಅಟಾಮಿಕ್ ಕ್ಲಾಕ್ ಏನು ಕೆಲಸ ಮಾಡುತ್ತದೆ? ಪ್ರಸ್ತುತ ಬಳಕೆಯಲ್ಲಿರುವ ಹಲವು ಉಪಗ್ರಹಗಳು ಅವುಗಳ ಅಟಾಮಿಕ್ ಕ್ಲಾಕ್ ಹಾಳಾದ ನಂತರ ತಮ್ಮ ನಿಖರವಾದ ಸ್ಥಾನದ ಮಾಹಿತಿ ಒದಗಿಸುವುದನ್ನು ನಿಲ್ಲಿಸಿದವು. ಈ ಕಾರಣದಿಂದಲೇ 2018ರಲ್ಲಿ ಬದಲಿ ಉಪಗ್ರಹವನ್ನು ಉಡಾವಣೆಗೊಳಿಸುವ ನಿರ್ಧಾರಕ್ಕೆ ಬರಲಾಯಿತು.

ಇದನ್ನೂ ಓದಿ: MQ-9B Sea Guardian drone: ಭಾರತೀಯ ನೌಕಾಪಡೆಗೆ ಎಂಕ್ಯು-9ಬಿ ಸೀ ಗಾರ್ಡಿಯನ್ ಖರೀದಿ: ಆಗಸದಿಂದ ನಿಖರ ಕಣ್ಗಾವಲಿಗೆ ಭಾರತಕ್ಕೆ ಬೇಕಿದೆ ಡ್ರೋನ್-ಆಚಾರ್ಯ!

ಉಪಗ್ರಹ ಆಧಾರಿತ ಪೊಸಿಷನಿಂಗ್ ವ್ಯವಸ್ಥೆ ಸಾಮಾನ್ಯವಾಗಿ ಒಂದು ವಸ್ತುವಿನಿಂದ ಹೊರಟ ಸಂಕೇತ ಮರಳಿ ತಲುಪಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದರ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ಅಟಾಮಿಕ್ ಕ್ಲಾಕ್ ಕೆಲಸ ಮಾಡುವುದು ನಿಲ್ಲಿಸಿದರೆ, ಉಪಗ್ರಹಗಳಿಗೆ ಸರಿಯಾದ ಸ್ಥಾನದ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ.

ಇಸ್ರೋ ಅಧಿಕಾರಿಗಳ ಪ್ರಕಾರ, ಪ್ರಸ್ತುತ ಕೇವಲ ನಾಲ್ಕು ಐಆರ್‌ಎನ್ಎಸ್ಎಸ್ ಉಪಗ್ರಹಗಳು ಮಾತ್ರವೇ ಲೊಕೇಶನ್ ಸೇವೆಗಳನ್ನು ಒದಗಿಸುತ್ತಿವೆ. ಇತರ ಉಪಗ್ರಹಗಳನ್ನು ಕೇವಲ ಪ್ರಕೃತಿ ವಿಕೋಪದಂತಹ ಮಾಹಿತಿಗಳನ್ನು ನೀಡಲು, ಮೀನುಗಾರರು ಯಾವ ಸಮಯದಲ್ಲಿ ಕಡಲಿಗೆ ಇಳಿಯಬಹುದು, ಇಳಿಯಬಾರದು ಎಂದು ತಿಳಿಸಲು ಮಾತ್ರವೇ ಬಳಸಬಹುದು.

ಈ ಉಪಗ್ರಹಗಳು ಎಷ್ಟು ಹಳೆಯವು?

ಇದು ಅಟಾಮಿಕ್ ಕ್ಲಾಕ್ ನಂತರದ ಅತ್ಯಂತ ಪ್ರಮುಖ ಕಾಳಜಿಯ ವಿಚಾರವಾಗಿದೆ. ಐಆರ್‌ಎನ್ಎಸ್ಎಸ್ – 1ಎ ಉಪಗ್ರಹವನ್ನು ಜುಲೈ 1, 2013ರಂದು ಬಾಹ್ಯಾಕಾಶಕ್ಕೆ ಕಳುಹಿಸಿದರೆ, 1ಬಿ ಹಾಗೂ 1ಸಿಗಳನ್ನು ಮುಂದಿನ ವರ್ಷ ಕಳುಹಿಸಲಾಯಿತು. 2018ರಲ್ಲಿ ವೈಫಲ್ಯ ಕಂಡ 1ಎಚ್ ಉಪಗ್ರಹ ವಾಸ್ತವವಾಗಿ ಈ ಪುಂಜದಲ್ಲಿ ಅತ್ಯಂತ ಹಳೆಯದಾಗಿದ್ದ ಮತ್ತು ತಮ್ಮ ಹತ್ತು ವರ್ಷಗಳ ಸೇವಾ ಅವಧಿಯ ಕೊನೆಗೆ ತಲುಪಿದ್ದ 1ಎ ಹಾಗೂ ಇತರ ಮೂರು ಉಪಗ್ರಹಗಳ ಬದಲಿಗೆ ಕಾರ್ಯ ನಿರ್ವಹಿಸಬೇಕಿತ್ತು. ಇಸ್ರೋ ಅಧಿಕಾರಿಗಳು, ಏಳು ಉಪಗ್ರಹಗಳ ವ್ಯವಸ್ಥೆ ಸೂಕ್ತವಾಗಿ ಕಾರ್ಯ ನಿರ್ವಹಿಸುವುದು ಮುಂದುವರಿಯಬೇಕಾದರೆ ಕನಿಷ್ಠ ಮೂರು ಹೊಸ ಉಪಗ್ರಹಗಳನ್ನು ಕಕ್ಷೆಗೆ ಸೇರ್ಪಡೆಗೊಳಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ನೈಜ ಜಗತ್ತಿನ ಬಳಕೆದಾರರ ಸೇವೆಗೆ ನಾವಿಕ್

ಈಗಾಗಲೇ ಈ ಉಪಗ್ರಹ ಪುಂಜದ ಹಲವು ಉಪಗ್ರಹಗಳು ತಮ್ಮ ಸೇವಾ ಅವಧಿಯ ಕೊನೆಯ ಹಂತಕ್ಕೆ ತಲುಪಿದ್ದರೂ, ಇಸ್ರೋ ಇದನ್ನು ಬಳಕೆದಾರರ ಉಪಯೋಗಕ್ಕೆ ಬರುವಂತೆ ಗಮನ ಹರಿಸಿ ಅಭಿವೃದ್ಧಿ ಪಡಿಸಿಲ್ಲ ಎಂದು ತಜ್ಞರು ಟೀಕಿಸಿದ್ದಾರೆ.

ಮನೋಹರ್ ಪರಿಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ ಸಂಸ್ಥೆಯ ಹಿರಿಯ ತಜ್ಞರು ಯಾರಿಗೂ ನಾವಿಕ್ ವ್ಯವಸ್ಥೆಯಲ್ಲಿ ಆಸಕ್ತಿ ಇಲ್ಲದ ಕಾರಣದಿಂದ, ಉಪಗ್ರಹಗಳು ಸಂಕೇತಗಳನ್ನು ಕಳುಹಿಸುತ್ತಿದ್ದರೂ, ಯಾರೂ ಅದನ್ನು ಸ್ವೀಕರಿಸುವ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ.

2018ರ ಮಹಾಲೇಖಪಾಲರ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ – ಸಿಎಜಿ) ವರದಿಯ ಪ್ರಕಾರ, 2006ರಲ್ಲಿ ಬಳಕೆದಾರರ ಟ್ರಾನ್ಸ್‌ಮಿಟರ್‌ಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸಚಿವ ಸಂಪುಟ 200 ಕೋಟಿ ರೂಪಾಯಿಗಳನ್ನು ಪೂರೈಸಲು ಅನುಮತಿ ನೀಡಿದ್ದರೂ, ಈ ಯೋಜನೆ ಮಾರ್ಚ್ 2017ರ ತನಕ ಆರಂಭಗೊಂಡಿರಲಿಲ್ಲ. ಆದರೆ ಆ ವೇಳೆಗಾಗಲೇ ಏಳು ಉಡಾವಣೆಗಳು ನಡೆದಿದ್ದವು.

ಈಗ ರಿಸೀವರ್‌ಗಳನ್ನು ಅಭಿವೃದ್ಧಿ ಪಡಿಸಿರುವುದರಿಂದ, ನಾವಿಕ್ ವ್ಯವಸ್ಥೆಯನ್ನು ಸಾರ್ವಜನಿಕ ಕಾರ್ ಸುರಕ್ಷತೆ, ಪವರ್ ಗ್ರಿಡ್ ಸಿಂಕ್ರೊನೈಸೇಶನ್, ನೈಜ ಸಮಯದ ರೈಲುಗಳ ಮಾಹಿತಿ ನೀಡಲು ಮತ್ತು ಮೀನುಗಾರರನ್ನು ರಕ್ಷಿಸಲು ಬಳಸಲಾಗುತ್ತಿದೆ. ಕಳೆದ ವರ್ಷ, ಕೇಂದ್ರ ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಸಂಸತ್ತಿಗೆ ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ಸ್ (ಯುಎವಿ), ಕಾಮನ್ ಅಲರ್ಟ್ ಪ್ರೊಟೋಕಾಲ್ ಆಧಾರಿತ ತುರ್ತು ಸ್ಥಿತಿ ಸೂಚನೆಗಳು, ಟೈಮ್ ಡಿಸ್ಸೆಮಿನೇಶನ್ ಹಾಗೂ ಜಿಯೋಡೆಟಿಕ್ ನೆಟ್‌ವರ್ಕ್ ಗಳು ವೇಗವಾಗಿ ನಾವಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿವೆ ಎಂದಿದ್ದರು.

2019ರಲ್ಲಿ, ನಾವಿಕ್ ರಿಸೀವರ್‌ಗಳನ್ನು ಕ್ವಾಲ್ಕಮ್ ಹಾಗೂ ಮೀಡಿಯಾಟೆಕ್ ಅಭಿವೃದ್ಧಿ ಪಡಿಸಿದ ಕೆಲವು ಸೆಲ್ ಫೋನ್ ಚಿಪ್ ಸೆಟ್‌ಗಳಲ್ಲಿ ಅಳವಡಿಸಲಾಯಿತು. ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಸ್ಮಾರ್ಟ್ ಫೋನ್‌ಗಳು ನಾವಿಕ್ ವ್ಯವಸ್ಥೆಯೊಡನೆ ಕಾರ್ಯ ನಿರ್ವಹಿಸುವಂತೆ ಮಾಡಲು ಸೆಲ್ ಫೋನ್ ಸಂಸ್ಥೆಗಳೊಡನೆ ಮಾತುಕತೆ ನಡೆಸುತ್ತಿದೆ.

ನಮ‌್ಮ ಪ್ರದೇಶದ ನ್ಯಾವಿಗೇಶನ್ ಉಪಕರಣದ ಪ್ರಯೋಜನಗಳು

ಪ್ರಾದೇಶಿಕ ಪಥದರ್ಶನ ವ್ಯವಸ್ಥೆಗಾಗಿ ಉಪಗ್ರಹಗಳನ್ನು ಬಳಸುವ ಏಕೈಕ ರಾಷ್ಟ್ರ ಭಾರತವಾಗಿದೆ. ಪ್ರಸ್ತುತ ನಾಲ್ಕು ಉಪಗ್ರಹ ಆಧಾರಿತ ಜಾಗತಿಕ ಸಂಚರಣಾ ವ್ಯವಸ್ಥೆಗಳಿವೆ. ಅವೆಂದರೆ, ಅಮೆರಿಕಾದ ಜಿಪಿಎಸ್, ರಷ್ಯಾದ ಗ್ಲೋಬಲ್‌ನಾಯಾ ನಾವಿಗೇಶನ್ನಾಯ ಸ್ಪುಟ್ನಿಕೋವಾಯ ಸಿಸ್ಟೆಮಾ (ಗ್ಲೋನಾಸ್), ಯುರೋಪಿಯನ್ ಒಕ್ಕೂಟದ ಗೆಲಿಲಿಯೋ ಮತ್ತು ಚೀನಾದ ಬೀದೌ. ಭಾರತದ ಜಿಪಿಎಸ್ ಏಯ್ಡೆಡ್ ಜಿಇಒ ಆಗ್ಮೆಂಟೆಡ್ ನ್ಯಾವಿಗೇಶನ್ (ಗಗನ್) ರೀತಿಯಲ್ಲೇ ಜಪಾನ್ ಬಳಿಯೂ ನಾಲ್ಕು ಉಪಗ್ರಹಗಳನ್ನು ಹೊಂದಿರುವ, ದೇಶಾದ್ಯಂತ ಜಿಪಿಎಸ್ ಸಂಕೇತಗಳನ್ನು ಬಲವರ್ಧಿಸುವ ವ್ಯವಸ್ಥೆಯನ್ನು ಹೊಂದಿದೆ.

ಒಂದು ಬಾರಿ ಇದು ಸಂಪೂರ್ಣವಾಗಿ ಕಾರ್ಯಾಚರಣೆ ನಡೆಸಲು ಸಮರ್ಥವಾದರೆ, ಉತ್ತಮ ತ್ರಿಕೋನ ಸಂಕೇತ ವ್ಯವಸ್ಥೆ ಹೊಂದಲು ಭಾರತದ ಹೊರಗೆ ಗ್ರೌಂಡ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತದೆ. ಅದರಿಂದ ನಾವಿಕ್ ವ್ಯವಸ್ಥೆಯ ಸಂಕೇತಗಳು ಐದು ಮೀಟರ್‌ಗೂ ಕಡಿಮೆ ವ್ಯಾಪ್ತಿಯ ನಿಖರತೆ ಹೊಂದಿರಲಿವೆ. ಇನ್ನು ನಿರ್ಬಂಧಿಸಲಾದ ಸಂಕೇತಗಳಂತೂ ಇನ್ನೂ ನಿಖರವಾಗಿರುತ್ತವೆ. ಇನ್ನು ಜಿಪಿಎಸ್ ಮಾಹಿತಿ ಇಪ್ಪತ್ತು ಮೀಟರ್ ಆಸುಪಾಸಿನ ನಿಖರತೆ ಹೊಂದಿದೆ. ಇಸ್ರೋ ಅಧಿಕಾರಿಗಳು ಈಗಾಗಲೇ ಜಪಾನ್, ಫ್ರಾನ್ಸ್ ಹಾಗು ರಷ್ಯಾಗಳಲ್ಲಿ ಗ್ರೌಂಡ್ ಸ್ಟೇಷನ್‌ಗಳ ಸ್ಥಾಪನೆಗೆ ಕೆಲಸ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ನಾವಿಕ್ ವ್ಯವಸ್ಥೆ ಭಾರತ ಮತ್ತು ಅದರ ಸುತ್ತಲಿನ 1,500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಈ ಪ್ರದೇಶದಲ್ಲಿರುವ, ದುರ್ಗಮ ಸ್ಥಳಗಳಲ್ಲೂ ನಾವಿಕ್ ಸಂಕೇತ ಲಭ್ಯವಾಗಲಿದೆ. ಜಿಪಿಎಸ್ ರೀತಿ ಅಲ್ಲದೆ, ನಾವಿಕ್ ವ್ಯವಸ್ಥೆ ಹೈ ಜಿಯೋಸ್ಟೇಷನರಿ ಆರ್ಬಿಟ್‌ನಲ್ಲಿರುವ ಉಪಗ್ರಹಗಳ ಮೇಲೆ ಆಧಾರಿತವಾಗಿದೆ. ಈ ಉಪಗ್ರಹಗಳು ಭೂಮಿಯ ವೇಗದಲ್ಲೇ ಚಲಿಸುವುದರಿಂದ, ಅವುಗಳು ಸದಾ ಅದೇ ಪ್ರದೇಶವನ್ನು ಗಮನಿಸುತ್ತಿರುತ್ತವೆ.

ನಾವಿಕ್ ಸಂಕೇತಗಳು ಭಾರತಕ್ಕೆ 90 ಡಿಗ್ರಿ ಕೋನದಲ್ಲಿ ಆಗಮಿಸುತ್ತವೆ. ಆದ್ದರಿಂದ ಅಪಾರ ಜನಸಂದಣಿ ಹೊಂದಿರುವ ಪ್ರದೇಶಗಳಲ್ಲಿ, ದಟ್ಟ ಕಾಡುಗಳಲ್ಲಿ, ಅಥವಾ ಪರ್ವತ ಪ್ರದೇಶಗಳಲ್ಲಿಯೂ ಈ ಸಂಕೇತಗಳು ಸುಲಭವಾಗಿ ಉಪಕರಣಗಳನ್ನು ತಲುಪಬಲ್ಲವು.

Girish Linganna

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ