ಇಂದಿರಾ ಗಾಂಧಿ ಜೈಪುರದ ಜೈಗಢ ಕೋಟೆಯಲ್ಲಿ ‘ಎಮರ್ಜೆನ್ಸಿ’ ನಿಧಿ ಶೋಧ ನಡೆಸಿದಾಗ ಸಿಕ್ಕಿದ್ದೆಷ್ಟು? ಪಾಕಿಸ್ತಾನದ ಕ್ಯಾತೆ ಏನಿತ್ತು? ಮೂಲ ಎಲ್ಲಿತ್ತು?

Indira Gandhi Jaigarh Fort treasure hunt: ಅಂದು ಪ್ರಧಾನಿ ಇಂದಿರಾ ಗಾಂಧಿ ಜೈಗಢ ಕೋಟೆಯಲ್ಲಿ ಬೃಹತ್ ನಿಧಿ ಶೋಧನೆ ನಡೆಸಿದ್ದರು. ಆದರೆ ಪಾಕಿಸ್ತಾನ ಆ ಕೋಟೆಯ ಸಂಪತ್ತಿನಲ್ಲಿ ತನಗೂ ಪಾಲು ಸೇರಬೇಕು ಎಂಬ ವಾದ /ಹಕ್ಕು ಮಂಡಿಸಿತು. ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಭುಟ್ಟೊ ಇಂದಿರಾಗೆ ಪತ್ರ ಬರೆದು ಜೈಪುರ ಸಂಪತ್ತಿನಲ್ಲಿ ಪಾಲು ಕೊಡಿ ಎಂದಿದ್ದರು! ಏನದು ವ್ಯವಹಾರ? ಎಷ್ಟರ ವ್ಯವಹಾರ... ಸಂಪೂರ್ಣ ಲೆಕ್ಕ ಇಲ್ಲಿದೆ

ಇಂದಿರಾ ಗಾಂಧಿ ಜೈಪುರದ ಜೈಗಢ ಕೋಟೆಯಲ್ಲಿ 'ಎಮರ್ಜೆನ್ಸಿ' ನಿಧಿ ಶೋಧ ನಡೆಸಿದಾಗ ಸಿಕ್ಕಿದ್ದೆಷ್ಟು? ಪಾಕಿಸ್ತಾನದ ಕ್ಯಾತೆ ಏನಿತ್ತು? ಮೂಲ ಎಲ್ಲಿತ್ತು?
ಜೈಗಢ ಕೋಟೆಯಲ್ಲಿ 'ಎಮರ್ಜೆನ್ಸಿ' ನಿಧಿ ಶೋಧ ನಡೆಸಿದಾಗ ಇಂದಿರಾಗಾಂಧಿಗೆ ಸಿಕ್ಕಿದ್ದೇನು?
Follow us
|

Updated on:Jul 09, 2024 | 5:20 AM

1975 ರಲ್ಲಿ ಏನಾಯಿತೆಂದರೆ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಭಾರತದಲ್ಲಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಜೈಪುರದ ಗಾಯತ್ರಿ ದೇವಿ ತೀವ್ರವಾಗಿ ವಿರೋಧಿಸಿದರು. ಹಾಗಾಗಿ ಗಾಯತ್ರಿ ದೇವಿ ಅವರನ್ನು ಜೈಲಿನಲ್ಲಿರಿಸಲಾಯಿತು ಮತ್ತು ಜೈಪುರದ ಅಂತಃಪುರದಲ್ಲಿ ಆದಾಯ ತೆರಿಗೆ ದಾಳಿ ನಡೆಸಲಾಯಿತು. ಕುತೂಹಲಕಾರಿಯಾಗಿ, ಜೈಪುರದ ಎಲ್ಲಾ ಕೋಟೆಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉಸ್ತುವಾರಿಯಲ್ಲಿದ್ದವು. ಆದರೆ ಜೈಗಢ ಕೋಟೆ ಜೈಪುರ ರಾಜಮನೆತನದ ಗಾಯತ್ರಿ ದೇವಿ ವಶದಲ್ಲಿತ್ತು.

ಈ ಹಿನ್ನೆಲೆಯಲ್ಲಿ 1976 ರಲ್ಲಿ ಇಂದಿರಾ ಗಾಂಧಿ ಅವರ ಆಳ್ವಿಕೆಯಲ್ಲಿ ನಡೆದ ನಿಧಿ ಹುಡುಕಾಟವನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಆದರೆ ಇಂದಿರಾ ಗಾಂಧಿಯವರು (Indira Gandhi) 1976 ರಲ್ಲಿ ಜೈಪುರದ ಜೈಗಢ್ ಕೋಟೆಯಲ್ಲಿ (Jaipur Jaigarh Fort) ಐದು ತಿಂಗಳ ಕಾಲ ನಡೆದ ಬೃಹತ್ ನಿಧಿ ಶೋಧಕ್ಕೆ (treasure hunt) ಆದೇಶ ನೀಡಿದ್ದರು. ಆಗ ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಭುಟ್ಟೊ (Pakistan Prime Minister Zulfikar Bhutto) ಇಂದಿರಾಗೆ ಪತ್ರ ಬರೆದು ಜೈಪುರ ಕೋಟೆ ಸಂಪತ್ತಿನಲ್ಲಿ ಪಾಲು ಕೇಳಿದ್ದರು.

ಅದು ಆಗಸ್ಟ್ 1976, ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿ ಜುಲ್ಫಿಕರ್ ಅಲಿ ಭುಟ್ಟೋ ಅವರು ಸಹಿ ಮಾಡಿದ ಪತ್ರವು ನವದೆಹಲಿಯನ್ನು ತಲುಪಿತು. ಈ ಪತ್ರವನ್ನು ಅಂದಿನ ಭಾರತದ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಬರೆಯಲಾಗಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಹಕಾರದ ಕುರಿತು ಕೆಲವು ವಿಷಯಗಳ ಬಗ್ಗೆ ಮಾತನಾಡಿದ ನಂತರ, ರಾವಲ್ಪಿಂಡಿಯಿಂದ ಪತ್ರವು ತಕ್ಷಣವೇ ಒಂದು ನಿರ್ದಿಷ್ಟ ಬೇಡಿಕೆಯನ್ನು ಮುಂದಿಟ್ಟಿತ್ತು.

“ನಿಮ್ಮ ಸರ್ಕಾರದ ಆದೇಶದ ಮೇರೆಗೆ ಜೈಪುರದಲ್ಲಿ ಅಗೆಯುತ್ತಿರುವ ನಿಧಿಯ ಬಗ್ಗೆ ನಾನು ನಿಮಗೆ ಬರೆಯುತ್ತಿದ್ದೇನೆ… ಈ ಸಂಪತ್ತಿನ ಪಾಲು ಪಾಕಿಸ್ತಾನದ ಹಕ್ಕಿನ ಬಗ್ಗೆ ಅರಿತುಕೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ” ಎಂದು ಭಾರತದ ಪ್ರಧಾನಿ ಇಂದಿರಾ ಗಾಂಧಿಗೆ ಪಾಕ್ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಪತ್ರ ಬರೆದಿದ್ದರು. ಇಂದಿರಾ ಆದೇಶದ ಮೇರೆಗೆ ಜೈಪುರದ ಜೈಗಢ ಕೋಟೆಯಲ್ಲಿ ಶೋಧಿಸಲಾಗುತ್ತಿದ್ದ ನಿಧಿಯಲ್ಲಿ ಪಾಕಿಸ್ತಾನಕ್ಕೆ ಪಾಲು ನೀಡುವಂತೆ ಪ್ರಧಾನಿ ಭುಟ್ಟೊ ಹಕ್ಕೊತ್ತಾಯ ಮಂಡಿಸಿದ್ದರು.

ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆಯಲ್ಲಿ ಚಿನ್ನ ಮತ್ತು ಮಂಗಳ ಸೂತ್ರದ ಚರ್ಚೆಯಿಂದಾಗಿ 1976 ರಲ್ಲಿ ಇಂದಿರಾ ಗಾಂಧಿ ಅವರ ಆಳ್ವಿಕೆಯಲ್ಲಿ ನಡೆದ ನಿಧಿ ಹುಡುಕಾಟ ದುಸ್ಸಾಹಸವನ್ನೂ ನಾವು ನೆನಪಿಸಿಕೊಳ್ಳಬೇಕಾಗಿದೆ.

Also Read: Political Crime Thriller – ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಆದರೆ, 1976ರಲ್ಲಿ ರಾಜಮಾತಾ ಗಾಯತ್ರಿ ದೇವಿ ಅವರನ್ನು ಬಂಧಿಸಿ, ಜೈಪುರದ ಜೈಗಢ ಕೋಟೆಯಲ್ಲಿ ಅಪಾರ ಪ್ರಮಾಣದ ನಿಧಿ ಶೋಧಕ್ಕೆ ವಿಪಕ್ಷ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಆದೇಶ ನೀಡಿದ್ದರು ಎಂಬುದು ಇತಿಹಾಸ. ಆ ನಿಧಿ ಶೋಧನೆಯು ಪಾಕಿಸ್ತಾನದ ಪ್ರಧಾನಿ ಭುಟ್ಟೋ ಕಿವಿಗೆ ತಲುಪುವಷ್ಟು ಜೋರಾಗಿತ್ತು. ಮತ್ತು ಆ ನಿಧಿಯ ಅಸ್ತಿತ್ವದ ಬಗ್ಗೆ ತನಗೆ ಮಾಹಿತಿಯೇ ಇಲ್ಲದಿದ್ದರೂ ಇಸ್ಲಾಮಿಕ್ ಗಣರಾಜ್ಯ ತನ್ನ ಹಕ್ಕು ಪ್ರತಿಪಾದಿಸಿತು ಎಂಬುದೇ ರೋಚಕ ಸಂಗತಿ. ಇಂದಿರಾ ಗಾಂಧಿಯವರು ಜೈಗಢ ಕೋಟೆಯಲ್ಲಿ ಚಿನ್ನದ ಮೇಲೆ ದೃಷ್ಟಿ ನೆಟ್ಟಂತೆ, ಜುಲ್ಫಿಕರ್ ಭುಟ್ಟೋ ಕೂಡ ಹೂತಿಟ್ಟ ನಿಧಿಯ ಮೇಲೆ ಕಾಕದೃಷ್ಟಿ ನೆಟ್ಟಿದ್ದರು.

ನಿಧಿ ಶೋಧ ಎಷ್ಟು ಬೃಹದಾಕಾರವಾಗಿತ್ತೆಂದರೆ ಜೈಗಢ ಕೋಟೆಯಲ್ಲಿ ಐದು ತಿಂಗಳ ಕಾಲ ಹಗಲು ರಾತ್ರಿ ನಡೆಯಿತು. ಸೇನೆ, ಆದಾಯ ತೆರಿಗೆ ಇಲಾಖೆ, ಭಾರತೀಯ ಪುರಾತತ್ವ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಜೈಗಢ ಕೋಟೆಯಲ್ಲಿ ನಿಧಿ ಶೋಧಕ್ಕೆ ಚಾಲನೆ ಸಿಕ್ಕಿದ್ದು ಅಫ್ಘಾನಿಸ್ತಾನದಲ್ಲಿ!

1976 ರಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ತೆರೆದುಕೊಂಡ ನಿಧಿ ಬೇಟೆಯ ನೆಂಟಸ್ತನವು ವಾಸ್ತವವಾಗಿ ನೂರಾರು ವರ್ಷಗಳ ಹಿಂದೆ ಮೊಘಲ್ ಚಕ್ರವರ್ತಿ ಅಕ್ಬರ್ ಆಳ್ವಿಕೆಗೆ ಹೊಂದಿತ್ತು. 1581 ರಲ್ಲಿ, ಅಕ್ಬರ್ ತನ್ನ ವಿರೋಧಿ ಬಂಡಾಯ ರಾಜ್ಯಗಳು ಮತ್ತು ಮುಖ್ಯಸ್ಥರನ್ನು ಹತ್ತಿಕ್ಕಲು ಜೈಪುರದ ತನ್ನ ಸೇನಾಧಿಪತಿಯಾದ ರಾಜಾ ಮಾನ್ ಸಿಂಗ್ 1 ನನ್ನು ವಾಯವ್ಯ ಗಡಿಭಾಗಕ್ಕೆ ಕಳುಹಿಸಿದ್ದನು. ಈಗಿರುವ ಅಫ್ಘಾನಿಸ್ತಾನದ ಭಾಗಗಳನ್ನು ಅಂದಿಗೇ ತನ್ನ ಮೊಘಲ್ ಆಳ್ವಿಕೆಗೆ ತರುವ ಹೊರೆಯನ್ನು ಅವನ ಹೆಗಲಿಗೇರಿಸಿದನು.

ಈ ಕಾರ್ಯಾಚರಣೆಯ ಸಮಯದಲ್ಲಿ, ರಾಜಾ ಮಾನ್ ಸಿಂಗ್ 1 ಅಫ್ಘಾನಿಸ್ತಾನದ ಆ ಭಾಗಗಳಲ್ಲಿ ಸಂಗ್ರಹಿಸಿದ ಅಪಾರ ಚಿನ್ನದ ನಿಧಿಯನ್ನು ತನ್ನ ಹಿಡಿದಲ್ಲಿಟ್ಟುಕೊಂಡ. ಅದನ್ನು ಭಾರತಕ್ಕೆ ಮರಳಿ ತಂದು 16 ನೇ ಶತಮಾನದ ಅಂಬರ್ ಕೋಟೆಯಲ್ಲಿ ಬಚ್ಚಿಟ್ಟನು.

“ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಶ್ರೇಷ್ಠ ಜನರಲ್‌ಗಳಲ್ಲಿ ಒಬ್ಬನಾದ ರಾಜಾ ಮಾನ್ ಸಿಂಗ್ 1 ತನ್ನ ಕಾಬೂಲ್ ದಂಡಯಾತ್ರೆಯಿಂದ (1581-1587) ಅಪಾರ ಪ್ರಮಾಣದ ಸಂಪತ್ತನ್ನು ಮರಳಿ ಭಾರತಕ್ಕೆ ತಂದರು ಎಂದು ಹೇಳಲಾಗುತ್ತದೆ” ಎಂದು ಆರ್​ ಎಸ್​​​ ಖಂಗರೋಟ್ ಮತ್ತು ಪಿ ಎಸ್​​​ ನಥಾವತ್ ಅವರುಗಳು 1990 ರಲ್ಲಿ ಬರೆದ ಜೈಘಡ್​​ – ದಿ ಇನ್ವಿನ್ಸಿಬಲ್ ಫೋರ್ಟ್ ಆಫ್ ಅಂಬರ್ ಪುಸ್ತಕದಲ್ಲಿ ಬರೆದಿದ್ದಾರೆ.

ಗಮನಾರ್ಹವೆಂದರೆ, 1726 ರಲ್ಲಿ ಸ್ಥಾಪನೆಯಾದ ಜೈಗಡ ಕೋಟೆ ಹೊರತುಪಡಿಸಿ ಬೇರೆ ಎಲ್ಲಿಯೂ ಸಂಪತ್ತು ಸಂಗ್ರಹಿಸಲಾಗಿಲ್ಲ. ಅಕ್ಬರ್‌ ಬಗ್ಗೆ ಆತನಿಗೆ ಅಪಾರ ನಿಷ್ಠೆ ಇತ್ತಾದರೂ ಕಾಬೂಲ್ ದಂಡಯಾತ್ರೆಯಿಂದ ಭಾರತಕ್ಕೆ ಮರಳಿ ತಂದ ಚಿನ್ನವನ್ನು ಮಾನ್ ಸಿಂಗ್ ಮೊಘಲ್ ಚಕ್ರವರ್ತಿಗೆ ತಿಳಿಸಲಿಲ್ಲ ಎಂದೂ ಹೇಳಲಾಗುತ್ತದೆ.

ವರ್ಷಗಳೇ ಕಳೆದರೂ ಅಫ್ಘಾನಿಸ್ತಾನದಿಂದ ತಂದ ನಿಧಿಯು ಅಂಬರ್ ಕೋಟೆಯ ರಹಸ್ಯ ಕೋಣೆಗಳಲ್ಲಿ ಸಂಗ್ರಹಿಸಿಟ್ಟಿರುವುದು ಬಾಹ್ಯ ಪ್ರಪಂಚಕ್ಕೆ ತಿಳಿದುಬರಲೇ ಇಲ್ಲ. ಆದರೆ ಕಾಲಾಂತರದಲ್ಲಿ ಅರೇಬಿಯನ್ ಪುಸ್ತಕವೊಂದರಲ್ಲಿ ಈ ಅಂಶ ದಾಖಲಿಸಲ್ಪಟ್ಟಿತು.

ನಿಧಿಯ ಮೊದಲ ಉಲ್ಲೇಖವು ‘ಹಾಫ್ಟ್ ಟಿಲಿಸ್ಮಾತ್-ಎ-ಅಂಬೇರಿ’ ( ‘Haft Tilismat-e-Amberi’ ಅಂಬರ್‌ನ ಏಳು ಮಾಂತ್ರಿಕ ಖಜಾನೆಗಳು) ಎಂಬ ಪುಸ್ತಕದಲ್ಲಿ ಕಾಣಿಸಿಕೊಂಡಿತು. ಅಂಬರ್ ಕೋಟೆಯ ಹಿಂದೆ ಸಾಗರ್ (ನೀರಿನ ತೊಟ್ಟಿಗಳು) ಎಂಬ ಸ್ಥಳದಲ್ಲಿರುವ ಖಜಾನೆಗಳಲ್ಲಿ ಸಂಪತ್ತು ಸಂಗ್ರಹಿಸಿಡಲಾಗಿದೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ವರ್ಷಗಳ ನಂತರ, ಬ್ರಿಟಿಷ್ ಆಳ್ವಿಕೆಯಲ್ಲಿ ವಸಾಹತುಶಾಹಿ ಪರಿಶೋಧಕರು ಪುಸ್ತಕವನ್ನು ಕೈಗೆತ್ತಿಕೊಂಡು ಓದಿದಾಗ ನಿಧಿಯ ಬಗ್ಗೆ ಕುತೂಹಲವನ್ನು ಬೆಳೆಸಿಕೊಂಡರು. ನಿಧಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ವ್ಯರ್ಥ ಪ್ರಯತ್ನ ನಡೆಸಿದರು.

ತುರ್ತು ಪರಿಸ್ಥಿತಿ ವಿಧಿಸಿ, ನಿಧಿ ಹುಡುಕಾಟದಲ್ಲಿ ತೊಡಗಿದ ಪ್ರಧಾನಿ ಇಂದಿರಾ!

ಬ್ರಿಟಿಷರು ತಡಕಾಡಿದಾಗ ಸಿಗದಿದ್ದ, ರಾಜಾ ಮಾನ್ ಸಿಂಗ್ ಮರೆಮಾಡಿದ್ದ ನಿಧಿಯನ್ನು ಇಂದಿರಾ ಗಾಂಧಿ ಶೋಧಿಸತೊಡಗಿದರು. 25 ಜೂನ್ 1975 ರಂದು ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿ ಉತ್ತುಂಗದಲ್ಲಿದ್ದಾಗ ಇತ್ತ ನಿಧಿ ಬೇಟೆ ಪ್ರಾರಂಭವಾಯಿತು.

ನಾಗರಿಕ ಸ್ವಾತಂತ್ರ್ಯವನ್ನು ಅದುಮಿಡಲಾಯಿತು, ಪತ್ರಿಕಾ ವರದಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಸೆನ್ಸಾರ್ ಮಾಡಲಾಯಿತು ಮತ್ತು ರಾಜಕೀಯ ವಿರೋಧಿಗಳಾದ ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮೊರಾರ್ಜಿ ದೇಸಾಯಿ ಅವರನ್ನು ಕಂಬಿ ಹಿಂದೆ ಹಾಕಲಾಯಿತು. ಇನ್ನೂ ಅಸಂಖ್ಯಾತ ತುರ್ತು ಪರಿಸ್ಥಿತಿ ವಿರೋಧಿಗಳನ್ನು ಭಾರತದಾದ್ಯಂತ ಜೈಲುಗಳಲ್ಲಿ ಕೊಳೆಯುವಂತೆ ಮಾಡಲಾಗಿತ್ತು.

ಅವರಲ್ಲಿ ಒಬ್ಬರು ಗಾಯತ್ರಿ ದೇವಿ. ತಮ್ಮ ರಾಜಕೀಯ ಎದುರಾಳಿ ಗಾಯತ್ರಿ ಅವರನ್ನು ಇಂದಿರಾ ಗಾಂಧಿ ಅಸಹ್ಯವಾಗಿ ನಡೆಸಿಕೊಂಡರು. ಹಿಂದಿನ ರಾಜವಂಶದ ಜೈಪುರ ಸಾಮ್ರಾಜ್ಯದ ಮಾಜಿ ಮಹಾರಾಣಿ ಕಾಂಗ್ರೆಸ್ ಯುಗದಲ್ಲಿ ಆ ಪಕ್ಷವನ್ನೇ ಮೂರು ಬಾರಿ ಸೋಲಿಸಿ ಲೋಕಸಭೆಯನ್ನು ಪ್ರವೇಶಿಸಿದ್ದರು.

ಮೊದಲು, ಗಾಯತ್ರಿ ದೇವಿಯನ್ನು (Gayatri Devi) ವಿದೇಶಿ ಕರೆನ್ಸಿ ಪ್ರಕರಣದಲ್ಲಿ ಕಾಫಿಪೋಸಾ ಕಾಯ್ದೆಯಡಿ (COFEPOSA Act) ಬಂಧಿಸಿ, ಆ ನಂತರ ಜೈಗಢ್ ಕೋಟೆಯಲ್ಲಿ ನಿಧಿ ಹುಡುಕಾಟ ಪ್ರಾರಂಭಿಸಲಾಯಿತು. ಈ ಕಾಯಿದೆಯು ವಿದೇಶಿ ವಿನಿಮಯದ ಸಂರಕ್ಷಣೆ ಮತ್ತು ಕಳ್ಳಸಾಗಾಣಿಕೆ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶ ಹೊಂದಿತ್ತು.

ಇಂದಿರಾ ಗಾಂಧಿ ನಡೆಸಿದ ಚಿನ್ನದ ಬೇಟೆಯ ಒಳನೋಟಗಳು ಹೀಗಿದ್ದವು:

ಇಲ್ಲೂ ಇಂದಿರಾ ಗಾಂಧಿ ತಮ್ಮ ಪ್ರೀತಿಯ ಪುತ್ರ ಸಂಜಯ್ ಗಾಂಧಿಯ ಸಲಹೆಯಂತೆ ನಡೆದುಕೊಂಡರು. ಸಂಜಯ್​​ ಉವಾಚದಂತೆ ಐದು ತಿಂಗಳ ಕಾಲ ನಿಧಿ ಹುಡುಕಾಟವನ್ನು ನಡೆಸಿದರು.

ಆದಾಯ ತೆರಿಗೆ ಇಲಾಖೆ, ಸೇನೆ ಮತ್ತು ಸ್ಥಳೀಯ ಪೊಲೀಸರ ಸಂಯೋಜಿತ ತಂಡ ಜೈಗಢ ಕೋಟೆಯತ್ತ ರಣೋತ್ಸಾಹದಲ್ಲಿ ಮುನ್ನುಗ್ಗಿತು. ನಿಧಿ ಶೋಧಕ್ಕಾಗಿ ಪಡೆಗಳು ಬಂದಿವೆ ಎಂಬ ಸುದ್ದಿ ಸ್ಥಳೀಯರಲ್ಲಿ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಅಂಬರ್​​ನ ಏಳು ಮಾಂತ್ರಿಕ ಖಜಾನೆಗಳನ್ನು ರಕ್ಷಿಸಿಕೊಳ್ಳಲು ಮುಂದಾದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಸಹ ಈ ಕಾರ್ಯಕ್ಕೆ ನಿಯೋಜಿಸಲಾಯಿತು. ಜೈಗಢ್ – ದಿ ಇನ್ವಿನ್ಸಿಬಲ್ ಫೋರ್ಟ್ ಆಫ್ ಅಂಬರ್ ಪುಸ್ತಕದ ಪ್ರಕಾರ, 1976 ರಲ್ಲಿ ನಡೆದ ಭಾರೀ ಪ್ರಮಾಣದ ಸಂಪತ್ತು ಅಗೆಯುವಿಕೆಯು ಜೈಗಢದಲ್ಲಿ ದಿನನಿತ್ಯ ನಡೆಯುತ್ತಿದ್ದ ಘಟನೆಗಳ ಮೇಲೆ ಪ್ರಪಂಚದ ಕಣ್ಣುಗಳು ಕೇಂದ್ರೀಕೃತವಾಗಿದ್ದವು. ಈ ಮಧ್ಯೆ, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಸಹ ಇದನ್ನು ಗಮನಿಸಿದೆಯೇ ಎಂಬುದನ್ನು ನೋಡಬೇಕು ಎಂದು ಆರ್ ಎಸ್ ಖಂಗರೋಟ್ ಮತ್ತು ಪಿ ಎಸ್ ನಥಾವತ್ ಅವರು ಜೈಗಡ ಕೋಟೆ ಕುರಿತಾದ 1990 ರ ಪುಸ್ತಕದಲ್ಲಿ ಬರೆದಿದ್ದಾರೆ.

“ಸೇನಾ ಹೆಲಿಕಾಪ್ಟರ್‌ಗಳು ಕೋಟೆಯ ಒಳಗೆ ಮತ್ತು ಹೊರಗೆ ಹಾರಾಡತೊಡಗಿದವು. ನಿಧಿ ಪತ್ತೆಯಾಗುವ ಬಗ್ಗೆ ಊಹಾಪೋಹಗಳು ತೀವ್ರಗೊಂಡವು, ಈ ಮಧ್ಯೆ, ಇಂದಿರಾ ಉತ್ತರಾಧಿಕಾರಿ ಸಂಜಯ್ ಗಾಂಧಿ ಹೆಲಿಕಾಪ್ಟರ್‌ನಲ್ಲಿ ಕೋಟೆಗೆ ಭೇಟಿ ನೀಡಿದರು. ಇದರಿಂದ ಸ್ಥಳೀಯವಾಗಿ ಹಲ್​ಚಲ್​​ ಹೆಚ್ಚಾಯಿತು. ಜೈಗಢ ಕೋಟೆಯನ್ನು ಅಗೆದು ಅಗೆದು ಧ್ವಂಸಗೊಳಿಸಲಾಯಿತು” ಎಂದು ಕ್ರೈಮ್ ಟಾಕ್ ಕಥೆಯಲ್ಲಿ ಹಿರಿಯ ಕ್ರೈಂ ಪತ್ರಕರ್ತ ಶಮ್ಸ್ ತಾಹಿರ್ ಖಾನ್ ಹೇಳುತ್ತಾರೆ.

ಕೋಟೆಯ ಸುತ್ತಮುತ್ತಲಿನ ಪ್ರದೇಶವನ್ನು ಸೇನಾಪಡೆಗಳು ಸುತ್ತುವರಿದಿದ್ದವು, ಇದು ನಿಧಿ ಹುಡುಕಾಟದ ಸುದ್ದಿಯನ್ನು ಮತ್ತಷ್ಟು ವ್ಯಾಪಕವಾಗಿ ಹರಡಿತು. ಅಂತಿಮವಾಗಿ ಅದು ಪಾಕಿಸ್ತಾನವನ್ನೂ ತಲುಪಿತು. ಆಗಲೇ ಅಲ್ಲಿನ ಪ್ರಧಾನಿ ಇಲ್ಲಿನ ಪ್ರಧಾನಿಗೆ ಪತ್ರ ಬರೆದು ನಿಧಿಯಲ್ಲಿ ಪಾಲು ಪಡೆಯಲು ಪ್ರೇರೇಪಿಸಿತು. ಏಕೆಂದರೆ ಆ ವೇಳೆಗಾಗಲೇ, ವಿಭಜನೆ ಸಮಯದಲ್ಲಿ ಇಂತಹ ಒಪ್ಪಂದವೊಂದು ಉಭಯ ದೇಗಳ ನಡುವೆ ಜಾರಿಯಾಗಿತ್ತು. ಅದನ್ನು ಅನುಸರಿಸಿ ಪ್ರಧಾನಿ ಭುಟ್ಟೋ ಚಿಟ್ಟಿ ಬರೆದಿದ್ದರು.

ನವೆಂಬರ್ 1976 ರಲ್ಲಿ ನಿಧಿ ಬೇಟೆಗೆ ಮಂಗಳ ಹಾಡಲಾಗಿತ್ತು. ಅದು ಮುಗಿದ ನಂತರವೇ ಇಂದಿರಾ ಗಾಂಧಿ ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಪತ್ರಕ್ಕೆ ಉತ್ತರಿಸಿದರು. “ಪಾಕಿಸ್ತಾನದ ಪರವಾಗಿ ನೀವು ಮಂಡಿಸಿದ್ದ ಹಕ್ಕನ್ನು ಎಚ್ಚರಿಕೆಯಿಂದ ಪರಿಗಣಿಸಲು ನಾನು ನಮ್ಮ ಕಾನೂನು ತಜ್ಞರನ್ನು ಕೇಳಿದೆ. ಅವರು ಹೇಳುವಂತೆ ನೀವು ಸಲ್ಲಿಸಿರುವ ಹಕ್ಕು ಪಸ್ತಾಪಕ್ಕೆ ಯಾವುದೇ ಕಾನೂನು ಆಧಾರವಿಲ್ಲ ಎಂದು ಅವರು ಸ್ಪಷ್ಟ ಅಭಿಪ್ರಾಯ ಹೊಂದಿದ್ದಾರೆ” ಎಂದು ಇಂದಿರಾ ಬರೋಬ್ಬರಿ ತಿಂಗಳ ನಂತರ ಬರೆದು, ಪಾಕ್ ಬೇಡಿಕೆಗೆ ತಣ್ಣೀರು ಎರಚಿದರು.

ಪಾಕಿಸ್ತಾನದ ಬೇಡಿಕೆಯನ್ನು ತಳ್ಳಿಹಾಕುವುದು ಜೊತೆಜೊತೆಗೆ ಪ್ರಧಾನಿ ಇಂದಿರಾ ಪ್ರಾಸಂಗಿಕವಾಗಿ ಮತ್ತೊಂದು ವಿಷಯವನ್ನೂ ಸ್ಪಷ್ಟಪಡಿಸಿದರು. ಜೈಗಢ ಕೋಟೆಯಲ್ಲಿ ಯಾವುದೇ ನಿಧಿ ಅಸ್ತಿತ್ವದಲ್ಲಿ ಇಲ್ಲವೆಂದು ತಿಳಿದುಬಂದಿರುವುದಾಗಿ ಜುಲ್ಫಿಕರ್ ಅಲಿ ಭುಟ್ಟೋಗೆ ಪ್ರತ್ಯುತ್ತರ ಕೊಟ್ಟರು.

ಆ ವೇಳೆಗೆ, ಮಹಾರಾಣಿ ಗಾಯತ್ರಿ ದೇವಿ ಅವರು ದೆಹಲಿಯ ತಿಹಾರ್ ಜೈಲಿನಲ್ಲಿ ಐದು ತಿಂಗಳಿಗಿಂತ ಹೆಚ್ಚು ಕಾಲ ಕಳೆದರು. ಮತ್ತು ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ:  ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?

ಜೈಗಢ್ ಕೋಟೆಯಲ್ಲಿ ಯಾವುದೇ ನಿಧಿ ಪತ್ತೆಯಾಗಿಲ್ಲ ಎಂದು ಇಂದಿರಾ ಗಾಂಧಿ ಅಧಿಕೃತವಾಗಿ ಮಾಹಿತಿ ನೀಡಿದರು. ಆದರೆ ಕೇವಲ 230 ಕೆಜಿ ಬೆಳ್ಳಿ ಪತ್ತೆಯಾಗಿದೆ ಎಂದು ಶಮ್ಸ್ ತಾಹಿರ್ ಖಾನ್ ಹೇಳುತ್ತಾರೆ.

ಜೈಗಢದಲ್ಲಿ ನಿಧಿ ಬೇಟೆಯೇನೋ ಮುಗಿಯಿತು ಆದ್ರೆ ನಿಗೂಢತೆ ಇಂದಿಗೂ ಉಳಿದಿದೆ! ಪ್ರಶ್ನೆಗಳು ಇಂದಿಗೂ ಕಾಡುತ್ತಿವೆ.

ಬಹುಶಃ 16 ನೇ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಮಾನ್ ಸಿಂಗ್ ಅಂಬರ್ ಕೋಟೆಯಲ್ಲಿ ಆಫ್ಘನ್ ಸಂಪತ್ತನ್ನು ಬಚ್ಚಿಟ್ಟಿದ್ದರೆ, 1726 ನಿರ್ಮಿತ ಜೈಗಢ ಕೋಟೆಯಲ್ಲಿ ನಿಧಿ ಶೋಧ ಕೈಗೊಂಡಿದ್ದಾದರೂ ಏಕೆ?

ನಿಧಿ ಶೋಧನೆ ವೇಳೆ ಹೈ ಪ್ರೊಫೈಲ್ ಸಂಜಯ್ ಗಾಂಧಿ ಹೆಲಿಕಾಪ್ಟರಿನಲ್ಲಿ ಅಲ್ಲಿಗೆ ಹೋಗಿ-ಬಂದಿದ್ದು ನಾನಾ ಊಹೆಗಳಿಗೆ ಅವಕಾಶ ಕಲ್ಪಿಸಿದೆ.

“ಜೈಪುರದಿಂದ ದೆಹಲಿಗೆ 50-60 ಟ್ರಕ್‌ಗಳು ಚಲಿಸುತ್ತಿರುವುದನ್ನು ಕಂಡ ದೆಹಲಿ-ಜೈಪುರ ಹೆದ್ದಾರಿಯನ್ನು ಒಂದು ದಿನದ ಮಟ್ಟಿಗೆ ಏಕೆ ಮುಚ್ಚಲಾಯಿತು ಎಂಬುದರ ಕುರಿತು ಸರ್ಕಾರದ ಮೌನವಾಗಿದೆ” ಎಂದು ಕ್ರೈಮ್ ಟಾಕ್ ಕಥೆಯು ಉತ್ತರವಿಲ್ಲದ ಪ್ರಶ್ನೆಯನ್ನು ಎತ್ತಿತ್ತು.

ಶಮ್ಸ್ ತಾಹಿರ್ ಖಾನ್ ವರದಿಯ ಪ್ರಕಾರ ಮಾನ್ ಸಿಂಗ್ ನಿಧಿಯನ್ನು ಬಚ್ಚಿಟ್ಟಿದ್ದ ಅಂಬರ್ ಕೋಟೆಯ ಮೇಲೆ ಜೈಗಢ್ ಕೋಟೆಯ ಆಯ್ಕೆಗೆ ಉತ್ತರ, ಅಂಬರ್ ಕೋಟೆಯ ಮೇಲಿರುವ ಜೈಗಢ್ ಕೋಟೆಯನ್ನು ಅರಾವಳಿಗಳ ಮೇಲಿರುವ ಸುರಂಗ ಮಾರ್ಗವಾಗಿದೆ.

ಆಫ್ಘನ್ ದಂಡಯಾತ್ರೆ ವೇಳೆ ಮಾನ್ ಸಿಂಗ್ ಭಾರತಕ್ಕೆ ತಂದಿದ್ದ ನಿಧಿ ಎಲ್ಲಿ ಹೋಯಿತು ಎಂಬುದು ಇನ್ನೂ ನಿಗೂಢವಾಗಿದೆ. ಮಹಾರಾಜರಿಂದ ಜೈಪುರ ನಗರವನ್ನು ನಿರ್ಮಿಸಲು ಈ ನಿಧಿಯನ್ನು ಬಳಸಲಾಗಿದೆ ಎಂದು ಕೆಲವರು ಹೇಳುತ್ತಾರೆ.

ಪ್ರಶ್ನೆಗಳನ್ನು ಬದಿಗಿಟ್ಟು, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಗಢ ಕೋಟೆಯಲ್ಲಿ ಇಂದಿರಾ ಗಾಂಧಿ ಮಾಜಿ ಮಹಾರಾಣಿ ಗಾಯತ್ರಿಯನ್ನು ಗುರಿಯಾಗಿಸಿಕೊಂಡು ಚಿನ್ನದ ಬೇಟೆ ನಡೆಸಿದ್ದು, ಇದು ನಿಜವಾಗಿಯೂ ನಿಧಿ ಬೇಟೆಯೋ ಅಥವಾ ಮಾಟಗಾತಿಯ ಬೇಟೆಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿತು!

ನಿಧಿ ಹುಡುಕಾಟದ ನಿರಾಶಾದಾಯಕ ಮತ್ತು ಅಪೇಕ್ಷಿತ ಫಸಲು ಸಿಗದಿದ್ದನ್ನು ಗಮನದಲ್ಲಿಟ್ಟುಕೊಂಡು, ಲೇಖಕರಾದ ಆರ್‌ಎಸ್ ಖಂಗರೋಟ್ ಮತ್ತು ಪಿ ಎಸ್ ನಥಾವತ್ ಅವರು ತಮ್ಮ ಪುಸ್ತಕದ ‘ಜೈಗಢ್, ದಿ ಇನ್ವಿನ್ಸಿಬಲ್ ಫೋರ್ಟ್ ಆಫ್ ಅಂಬರ್’ ಎಂಬ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಇಡೀ ಪ್ರಹಸನವನ್ನು “ಕತ್ತಲೆಯಲ್ಲಿ ನಡೆಸಿದ ಬೇಟೆ” ಎಂದು ಜರಿದಿದ್ದಾರೆ.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

Published On - 11:27 am, Mon, 8 July 24

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್