ಗಲಭೆ ನಡೆಸಿದವರ ಹೆಡೆಮುರಿಕಟ್ಟಿ ಜೈಲಿಗಟ್ಟುತ್ತೇವೆ, ಇದು ರಾಜಾಹುಲಿ ಸರಕಾರ: ಅಶೋಕ

ಕೆ ಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಹಿಂದೆ ರಾಜಕಾರಣಿಗಳ ಕುಮ್ಮಕ್ಕಿದೆ ಎಂಬ ದಟ್ಟ ವದಂತಿಗಳ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ವಿಧಾನ ಸೌಧದಲ್ಲಿ ಮಾತಾಡಿದ ಕಂದಾಯ ಸಚಿವ ಆರ್ ಅಶೋಕ, ಅಂಥ ಸಾಧ್ಯತೆಯನ್ನು ತಳ್ಳಿ ಹಾಕಿದರು.

ಗಲಭೆಯಲ್ಲಿ ಪಾಲ್ಗೊಂಡವರು ಹಾಗೂ ಗಲಭೆಗೊಳಗಾದ ಶಾಸಕರು ಒಂದೇ ಪಕ್ಷದವರು. ಅಲ್ಲಿ ಗಲಾಟೆ ಮಾಡಿರುವವರು ಚುನಾವಣೆ ಸಂದರ್ಭದಲ್ಲಿ ಈ ಶಾಸಕರ ಪರ ಕೆಲಸ ಮಾಡಿದ್ದಾರೆ. ಆದರೆ

ಇಲ್ಲಿ ಎದ್ದಿರುವ ಪ್ರಮುಖ ಅಂಶವೆಂದರೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ಯಾರು ಅನ್ನೋದು. ಅದು ಯಾರೇ ಆಗಿರಲಿ, ನಮ್ಮ ಸರಕಾರ ಅವರನ್ನು ಬಿಡುವುದಿಲ್ಲ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಹಲವು ಕಾರ್ಪೊರೇಟರ್​ಗಳು ಸಹ ಗಲಭೆಯಲ್ಲಿ ಪಾಲ್ಗೊಂಡಿದ್ದಾರೆ,” ಎಂದು ಆಶೋಕ ಹೇಳಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೌಮ್ಯ ಸ್ವಭಾವದವರು ನಿನ್ನೆಯ ಘಟನೆಯಿಂದ ಅವರ ಅಣ್ಣತಮ್ಮಂದಿರು ಬೀದಿಪಾಲಾಗುವಂಥ ಸ್ಥಿತಿ ಉದ್ಭವಿಸಿದೆ. ಅವರ ಮನೆಗಳನ್ನು ಲೂಟಿ ಮಾಡಿದ್ದಾರೆ. ಮನೆಗಳಲ್ಲಿ ಇದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆಕೋರರ ಉದ್ದೇಶ ಪ್ರಾಯಶಃ ಮೂರ್ತಿಯವರನ್ನು ಮುಗಿಸುವುದಾಗಿತ್ತು ಅನಿಸುತ್ತಿದೆ. ಕೇರಳ ಸೇರಿದಂತೆ ಹೊರಗಿನಿಂದ ಬಂದವರ ಕೃತ್ಯ ಇದಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ,” ಎಂದು ಸಚಿವರು ಹೇಳಿದರು.

ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಶಾಸಕರ ಮನೆಯ ನಂತರ ಶಿವಾಜಿನಗರದಲ್ಲಿ ದುಷ್ಕೃತ್ಯ ನಡೆಸಲು ದುಷ್ಕರ್ಮಿಗಳು ಹುನ್ನಾರ ನಡೆಸಿದ್ದರು. ತಪ್ಪಿತಸ್ಥರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲು ಸಿಎಂ ಸೂಚಿಸಿದ್ದಾರೆ, ಎಂದು ಕಂದಾಯ ಸಚಿವ ಹೇಳಿದರು.

ಗಲಭೆ ಬಗ್ಗೆ ಸಮಗ್ರ ಮಾಹಿತಿಯನ್ನು ಸರಕಾರ ಪಡೆಯುತ್ತಿದೆ, ಕುಮ್ಮಕ್ಕು, ಕುತಂತ್ರದ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ತನಿಖೆಯಿಂದ ಎಲ್ಲವೂ ಬಯಲಾಗುತ್ತದೆ ಎಂದು ಅಶೋಕ ಹೇಳಿದರು.

ಶಾಂತಿಪ್ರಿಯ ಬೆಂಗಳೂರು ನಗರದಲ್ಲಿ ಗಲಭೆ ನಡೆದಿರುವುದು ದುರದೃಷ್ಟಕರ. ಗೂಂಡಾಗಿರಿಗೆ ನಮ್ಮ ರಾಜ್ಯದಲ್ಲಿ ಜಾಗವಿಲ್ಲ. ಇಲ್ಲಿರೋದು, ಯಡಿಯೂರಪ್ಪನವರ ರಾಜಾಹುಲಿ ಸರಕಾರ, ಇಲಿ ಸರಕಾರವಲ್ಲ ಅಥವಾ ರಾಜಿಗೊಳಗಾಗುವ ಸರಕಾರವೂ ಅಲ್ಲ. ಶಾಸಕರು ಮತ್ತು ಅವರ ಕುಟುಂಬವನ್ನು ರಕ್ಷಿಸುವ ಬಾಧ್ಯತೆ ಸರಕಾರದ ಮೇಲಿದೆ. ಅವರ ಕುಟುಂಬ ಹೆದರುವ ಅವಶ್ಯಕತೆಯಿಲ್ಲವೆಂದು ಮಾಧ್ಯಮದ ಮೂಲಕ ಭರವಸೆ ನೀಡುತ್ತೇನೆ. ಅವರೊಂದಿಗೆ ನಾವಿದ್ದೇವೆ,” ಎಂದು ಅಶೋಕ ಹೇಳಿದರು.

ಮಾಧ್ಯಮದವರ ಮೇಲೆ ನಡೆದ ಹಲ್ಲೆಯನ್ನು ಸಚಿವ ಅಶೋಕ ಈ ಸಂದರ್ಭದಲ್ಲಿ ಖಂಡಿಸಿದರು.

Related Tags:

Related Posts :

Category: