IPSನಲ್ಲಿ ಭುಗಿಲೆದ್ದ ಅಸಮಾಧಾನ: ರಾತ್ರೋರಾತ್ರಿ ADGP ರಾಜೀನಾಮೆ, ಯಾಕೆಂಬುದು DGPಗೂ ಗೊತ್ತಿಲ್ಲ!

  • Ayesh Banu
  • Published On - 10:48 AM, 29 Oct 2020

ಬೆಂಗಳೂರು: ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ IPS ಅಧಿಕಾರಿ ಡಾ.ಪಿ. ರವೀಂದ್ರನಾಥ್ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ 10.30ಕ್ಕೆ ಕಂಟ್ರೋಲ್ ರೂಂಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ರವೀಂದ್ರನಾಥ್ ರಾಜಿನಾಮೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಗೋಚರವಾಗುತ್ತಿದೆ. ಸೀನಿಯಾರಿಟಿ ಇಲ್ಲದಿದ್ದರೂ ಸುನಿಲ್ ಕುಮಾರ್‌ಗೆ ಎಡಿಜಿಪಿ ಶ್ರೇಣಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿರುವುದಕ್ಕೆ ರವೀಂದ್ರನಾಥ್ ಅಸಮಧಾನಗೊಂಡು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇಂದು ನಿವೃತ್ತರಾಗುತ್ತಿದ್ದ ಸುನಿಲ್ ಕುಮಾರ್‌ಗೆ ನಿನ್ನೆ ಬಡ್ತಿ ನೀಡಲಾಗಿತ್ತು. ರವೀಂದ್ರನಾಥ್ ಮತ್ತು ಸುನಿಲ್ ಕುಮಾರ್‌ರದ್ದು ಒಂದೇ ಬ್ಯಾಚ್. ಆದರೆ ಱಂಕಿಂಗ್‌ನಲ್ಲಿ ರವೀಂದ್ರನಾಥ್ ಮೊದಲಿದ್ದಾರೆ. ಆದರೂ ಇವರಿಗೆ ಬಡ್ತಿ ನೀಡಿಲ್ಲ. ಹೀಗಾಗಿ ಅಸಮಾಧಾನಗೊಂಡು ರಾಜೀನಾಮೆ ಸಲ್ಲಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಡಿಜಿ & ಐಜಿಪಿ ಪ್ರವೀಣ್ ಸೂದ್, ರವೀಂದ್ರನಾಥ್ ನಿನ್ನೆ ಸಂಜೆ 6 ಗಂಟೆವರೆಗೆ ನನ್ನ ಜತೆ ಇದ್ದರು. 6 ಗಂಟೆಯ ಬಳಿಕ ನಾನು ಕಚೇರಿಯಿಂದ ಹೊರಗೆ ಹೋದೆ. ಈಗ ಬೀಳ್ಕೊಡುಗೆ ಕಾರ್ಯಕ್ರಮ ಹಿನ್ನೆಲೆ ಇಲ್ಲಿಗೆ ಬಂದಿದ್ದೇನೆ. ಕಚೇರಿಗೆ ಹೋದರೆ ವಿಷಯ ಏನೆಂಬುದು ತಿಳಿಯುತ್ತದೆ. ಎಡಿಜಿಪಿ ಪಿ.ರವೀಂದ್ರನಾಥ್ ನನ್ನ ಜೊತೆ ಚೆನ್ನಾಗಿ ಇದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.