ಸ್ಪರ್ಧಾತ್ಮಕ ಕ್ರಿಕೆಟ್​ಗೆ ವಿದಾಯ ಹೇಳಿದ ಯಾರ್ಕರ್ ಸ್ಪೆಷಲಿಸ್ಟ್ ಉಮರ್ ಗುಲ್

ಇಮ್ರಾನ್ ಖಾನ್, ವಸೀಮ್ ಅಕ್ರಮ್, ವಖಾರ್ ಯೂನಿಸ್ ಮೊದಲಾದ ಶ್ರೇಷ್ಠ ಬೌಲರ್​ಗಳಷ್ಟು ಖ್ಯಾತನಲ್ಲದಿದ್ದರೂ, ಪಾಕಿಸ್ತಾನ ಕ್ರಿಕೆಟ್​ಗೆ ಅವರಷ್ಟೇ ಬದ್ಧತೆಯಿಂದ ಸೇವೆ ಸಲ್ಲಿಸಿದ ವೇಗದ ಬೌಲರ್ ಉಮರ್ ಗುಲ್ ಎಲ್ಲ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಗುಲ್ ಪ್ರತಿನಿಧಿಸುತ್ತಿದ್ದ ಸದರ್ನ್ ಪಂಜಾಬ್ ತಂಡ ಶುಕ್ರವಾರದಂದು ಸೋತು ಪಂದ್ಯಾವಳಿಯಿಂದ ಹೊರಬಿದ್ದ ನಂತರ ಅವರು ಅತ್ಯಂತ ಭಾವುಕತೆಯಿಂದ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

‘‘ಸುದೀರ್ಘವಾದ ಯೋಚನೆಯ ನಂತರ ಬಹಳ ಭಾರವಾದ ಹೃದಯದೊಂದಿಗೆ ಕ್ರಿಕೆಟ್​ನಿಂದ ಸನ್ಯಾಸ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇನೆ,’’ ಎಂದು ಹೇಳುವಾಗ ಗುಲ್​ಗೆ ಒತ್ತರಿಸಿ ಬರುತ್ತಿದ್ದ ಕಣ್ಣಿರನ್ನು ತಡೆಯಲಾಗಲಿಲ್ಲ.

2003ರಲ್ಲಿ ಟೆಸ್ಟ್ ಮತ್ತು ಒಂದು ದಿನದ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ 36 ವರ್ಷ ವಯಸ್ಸಿನ ಗುಲ್, ವೃತ್ತಿ ಬದುಕಿನಲ್ಲಿ 47 ಟೆಸ್ಟ್​ಗಳನ್ನಾಡಿ 34.06 ಸರಾಸರಿಯಲ್ಲಿ 163 ವಿಕೆಟ್ ಪಡೆದಿದ್ದಾರೆ. ಇನ್ನಿಂಗ್ಸೊಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆಯನ್ನು 4 ಸಲ ಮಾಡಿದ್ದಾರೆ. ಹಾಗೆಯೇ, 130 ಒಡಿಐಗಳಲ್ಲಿ ಅವರು 29.34 ಸರಾಸರಿಯಲ್ಲಿ 179 ವಿಕೆಟ್ ಕಬಳಿಸಿದ್ದಾರೆ. ತಮ್ಮ ನಿಖರವಾದ ಯಾರ್ಕರ್​ಗಳಿಂದ ಟಿ20 ಕ್ರಿಕೆಟ್ ಫಾರ್ಮಾಟ್​ನಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್ ಎನಿಸಿದ್ದ ಗುಲ್ ಪಾಕಿಸ್ತಾನದ ಪರ ಅತಿ ಹೆಚ್ಚು (85) ವಿಕೆಟ್ ಪಡೆದಿದ್ದಾರೆ. ಅಂತರರಾಷ್ಡ್ರೀಯ ಟಿ20 ಕ್ರಿಕೆಟ್​ನಲ್ಲಿ ಕೇವಲ ಶ್ರೀಲಂಕಾದ ಲಸಿತ್ ಮಲಿಂಗ (107), ಪಾಕಿಸ್ತಾನದವರೇ ಅದ ಶಾಹಿದ್ ಅಫ್ರಿದಿ (98), ಬಾಂಗ್ಲಾದೇಶದ ಶಕೀಬ್ಉಲ್ಹಸನ್ (92) ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ (89) ಗುಲ್​ಕ್ಕಿಂತ ಹೆಚ್ಚು ವಿಕೆಟ್​ ಪಡೆದಿದ್ದಾರೆ.

ಗುಲ್, 2007 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಫೈನಲ್ ಹಂತ ತಲುಪುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಲ್ಲದೆ 2009 ರಲ್ಲಿ ಪಾಕಿಸ್ತಾನ ಅದನ್ನು ಗೆಲ್ಲಲು ಮಹತ್ತರ ಕಾಣಿಕೆ ನೀಡಿದ್ದರು.

ಇಂಡಿಯನ್ ಪ್ರಿಮೀಯರ್ ಲೀಗ್​ನ ಮೊದಲ ಆವೃತಿಯಲ್ಲಿ ಗುಲ್, ಕೊಲ್ಕತಾ ನೈಟ್​ರೈಡರ್ಸ್ ಪರ ಆಡಿದ್ದರು ಮತ್ತು ಆರು ಪಂದ್ಯಗಳಲ್ಲಿ 12 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿಕೊಂಡಿದ್ದರು.

‘‘ಅತೀವ ವ್ಯಾಮೋಹ, ಪರಿಶ್ರಮ ಮತ್ತು ಬದ್ಧತೆಯಿಂದ ಪಾಕಿಸ್ತಾನದ ಪರ ನಾನು ಕ್ರಿಕೆಟ್ ಆಡಿದ್ದೇನೆ. ಆದರೆ ಎಲ್ಲ ಒಳ್ಳೆ ಕಾರ್ಯಗಳು ಒಂದು ದಿನ ಕೊನೆಗೊಳ್ಳಲೇಬೇಕು. ನನ್ನಿಡೀ ಕರೀಯರ್​ನಲ್ಲಿ ನನ್ನ ಬೆಂಗಾವಲಾಗಿ ನಿಂತ ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರಿಗೆ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಕುಟುಂಬದವರ ತ್ಯಾಗ ಮತ್ತು ನೆರವಿಲ್ಲದೆ ನಾನು ಈ ಮಟ್ಟಕ್ಕೇರುವುದು ಸಾಧ್ಯವಿರಲಿಲ್ಲ. ಇನ್ನು ಮುಂದೆ ಅವರೊಂದಿಗೆ ಕ್ವಾಲಿಟಿ ಸಮಯ ಕಳೆಯುವ ಅವಕಾಶ ನನಗೆ ಸಿಗಲಿದೆ,’’ ಎಂದು ಗುಲ್ ಹೇಳಿದರು.

Related Tags:

Related Posts :

Category:

error: Content is protected !!