ಸೋಂಕಿತರಿಗೆ ಬೇಡಿ ತೊಡಿಸಿ ಚಿಕಿತ್ಸೆ ನೀಡಲಾಗುತ್ತಿದೆ!: ಪಾಟೀಲ್

ರಾಜ್ಯದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರನ್ನ ಬಂಧಿಗಳಂತೆ ಪರಿಗಣಿಸಲಾಗುತ್ತಿದೆ, ಅವರ ಕೈಕಾಲುಗಳಿಗೆ ಬೇಡಿ ತೊಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ಶುರುವಾದಾಗ ಸದರಿ ಅಮಾನವೀಯ ವಿಷಯವನ್ನು ಪ್ರಸ್ತಾಪಿಸಿದ ಪಾಟೀಲ್, ಒಬ್ಬ ಶಾಸಕರ ತಂದೆಗೂ ಹೀಗೆ ಬರ್ಬರವಾಗಿ ನೋಡಿಕೊಳ್ಳಲಾಗಿದೆ ಎಂದು ಆಪಾದಿಸಿದರು.

ಸೋಂಕಿತರು ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಬಾರದೆಂದು ಹಾಗೆ ಮಾಡಲಾಗಿದೆ ಎಂದು ವೈದ್ಯರು ಹೇಳುತ್ತಾರೆ. ಅವರಿಗೆ ಮನುಷ್ಯತ್ವ ಅನ್ನೋದು ಇದೆಯಾ? ಸೋಂಕಿತರೇನು ಪಶುಗಳೇ?” ಎಂದು ಪಾಟೀಲ್ ಗುಡುಗಿದರೆನ್ನಲಾಗಿದೆ.

ರೋಗಿಗಳ ಸಂಬಂಧಿಕರನ್ನು ದೂರದಿಂದ ನೋಡಲು ಸಹ ಬಿಡುತ್ತಿಲ್ಲ, ಅವರು ಹೇಳುವ ಪ್ರಕಾರ ಕೆಲ ವೈದ್ಯರು ರೋಗಿಗಳನ್ನು ಮುಟ್ಟಲು ಸಹ ಹಿಂಜರಿಯುತ್ತಿದ್ದಾರೆ,” ಎಂದು ಪಾಟೀಲ್ ಹೇಳಿದಾಗ, ಕೆಲ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಸಹ ದನಿಗೂಡಿಸಿ ಬೇಸರ ವ್ಯಕ್ತಪಡಿಸಿದರು.

ಅಂಥ ಆಸ್ಪತ್ರೆಗಳ ಮೇಲೆ ನಿಗಾ ಇಡಲು ತಂಡವೊಂದನ್ನು ರಚಿಸುವಂತೆ ಪಾಟೀಲ್, ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.

Related Tags:

Related Posts :

Category: