ಆಮ್ಲಜನಕ ಸಪ್ಲೆ: ಸೋಂಕಿತರಿಗೆ ಜೀವದಾನ, ಆದ್ರೆ ಪೀಣ್ಯ ಕಾರ್ಖಾನೆಗಳಿಗೆ ಪ್ರಾಣಹರಣ

ಬೆಂಗಳೂರು: ಅದು ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ. ರಾಜ್ಯದ ಹಳ್ಳಿಗಾಡುಗಳಿಂದ ಬದುಕು ಕಟ್ಟಿಕೊಳ್ಳಲು ಲಕ್ಷಾಂತರ ಜನರಿಗೆ ನೆರವಾದ ಪ್ರದೇಶ. ಆದ್ರೆ, ಇಂದು ಆ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಗಳನ್ನ ನಿರ್ವಹಿಸುವುದೇ ಕ್ಲಿಷ್ಟಕರವಾಗಿದೆ.
ಹೌದು, ಒಂದು ಕಾಲದಲ್ಲಿ ಹಳ್ಳಿಗಾಡುಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಜನ ಮೊದಲು ಕೆಲಸಕ್ಕೆ ಹುಡುಕಾಟ ನಡೆಸುತ್ತಿದಿದ್ದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ. ಲಕ್ಷಾಂತರ ಜನ ಇದೇ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ರು. ಆದ್ರೆ ಈ ಕೊರೊನಾ ಎಲ್ಲರ ಬದುಕನ್ನ ಬೀದಿಗೆ ತಳ್ಳಿಬಿಟ್ಟಿದೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅದೆಷ್ಟೋ ಕಾರ್ಖಾನೆಗಳು ನಷ್ಟಕ್ಕೆ ಸಿಲುಕಿ, ಕಾರ್ಮಿಕರು ಮಾಲೀಕರೆನ್ನದೆ ಎಲ್ಲರೂ ಬೀದಿಗೆ ಬಂದಿದ್ದಾರೆ. ಈ ನಡುವೆ, ಕೊಂಚ ಲಾಭದಲ್ಲಿದ್ದ ಹಾಗೂ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದ ಸಣ್ಣ ಕೈಗಾರಿಕೆ ಹಾಗೂ ಬೃಹತ್ ಕಾರ್ಖಾನೆಗಳಿಗೆ ಸದ್ಯ ಸಂಕಷ್ಟ ಎದುರಾಗಿದೆ. ಕೊರೊನಾದಿಂದ ಕಾರ್ಖಾನೆಗಳಿಗೆ ಪೂರೈಕೆಯಾಗಬೇಕಿದ್ದ ಆಕ್ಸಿಜನ್​ನಲ್ಲಿ ಅಭಾವ ಉಂಟಾಗಿದೆ.

ಬೆಲೆಯೂ ಗಗನಕ್ಕೇರಿದ್ದು ಅದನ್ನೇ ನಂಬಿಕೊಂಡಿದ್ದ ಕೆಲ ಕೈಗಾರಿಕೆಗಳನ್ನ ನಡೆಸೋದು ಹೇಗೆ ಎಂಬ ಯೋಚನೆ ಅವುಗಳ ಮಾಲೀಕರಿಗೆ ಕಾಡುತ್ತಿದೆ.

ಕೆ.ಜಿ.ಗೆ 14 ರೂ. ಇದ್ದ ಆಕ್ಸಿಜನ್ ಬೆಲೆ 20 ರೂ.ಗೆ ಏರಿಕೆ
ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡುವುದ್ದಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಅಷ್ಟೆ ಅಲ್ಲದೆ, ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುವ ಕಂಪನಿಗಳು ಸಹ ಆರೋಗ್ಯಕ್ಕೆ ಮನ್ನಣೆ ಕೊಟ್ಟು ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್​ ಪೂರೈಕೆ ಮಾಡುತ್ತಿವೆ.

ಹೀಗಾಗಿ, ಪೀಣ್ಯದ ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಕೆ ಕಡಿಮೆಯಾಗಿದ್ದು ಆಕ್ಸಿಜನ್ ಅಭಾವ ಎದುರಾಗಿದೆ. ಈ ಹಿಂದೆ ಒಂದು ಕೆ.ಜಿಗೆ 12 ರಿಂದ 14 ರೂಪಾಯಿ ಇದ್ದ ಆಕ್ಸಿಜನ್ ಬೆಲೆ ಸದ್ಯ 18 ರಿಂದ 20 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ, ಬಹುಪಾಲು ಕಾರ್ಖಾನೆಗಳಿಗೆ ಅಧಿಕ ಆರ್ಥಿಕ ಹೊರೆ ಉಂಟಾಗಿದ್ದು ಮತ್ತಷ್ಟು ನಷ್ಟಕ್ಕೆ ಸಿಲುಕಲಿವೆ.

ಕೈಗಾರಿಕೋತ್ಪನ್ನಗಳ ಉತ್ಪಾದನ ವೆಚ್ಚ ದುಪ್ಪಟ್ಟು ಆಗಲಿದ್ದು, ಅವುಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುವರು. ಇದಲ್ಲದೆ, ಈ ಹಿಂದದೆ ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಆಕ್ಸಿಜನ್ ಸಿಲಿಂಡರ್​ ತಲುಪುತ್ತಿತ್ತು. ಆದ್ರೆ ಸದ್ಯ ದಿನಗಟ್ಟಲೆ ಕಾಯಬೇಕು ಎಂದು ಕೆಲ ಕೈಗಾರಿಕೋದ್ಯಮಿಯೊಬ್ಬರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಅಕ್ಸಿಜನ್ ಬೇಕೇ ಬೇಕು, ಅದಿಲ್ಲದೆ ಕೈಗಾರಿಕೆ ನಡೆಯೋದಿಲ್ಲ
ಕಟಿಂಗ್, ಟೂಲಿಂಗ್, ಲೇಥ್​, ಲೇಜರ್ ಕಟಿಂಗ್​ಗೆ ಅಕ್ಸಿಜನ್ ಬೇಕೇ ಬೇಕು. ಅದಿಲ್ಲದೆ ಕೈಗಾರಿಕೆ ನಡೆಯೋದಿಲ್ಲ. ಇಲ್ಲ, ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಆಕ್ಸಿಜನ್​ಗೆ ಬೇರೆನೇ ವ್ಯವಸ್ಥೆ ಮಾಡಬೇಕು. ಕೈಗಾರಿಕಾ ವಲಯಕ್ಕೆ ಮೀಸಲಿರುವ ಅಕ್ಸಿಜನ್ ಬಳಸಿದ್ರೆ ಕೈಗಾರಿಕೆಗಳಿಗೆ ತೊಂದರೆ ಆಗುತ್ತೆ.

ಹೀಗಾಗಿ, ಸರ್ಕಾರ ಆಕ್ಸಿಜನ್ ಉತ್ಪಾದನೆಗೆ ಹೆಚ್ಚು ಮಹತ್ವ ನೀಡುವುದರೊಂದಿಗೆ ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಅನುವು ಮಾಡಬೇಕು ಎಂದು ಕೈಗಾರಿಕೋದ್ಯಮಿಗಳು ಮನವಿ ಮಾಡಿಕೊಂದ್ದಾರೆ.

ಒಟ್ಟಾರೆ, ಕೊರೊನಾ ಸೋಂಕು ಜನಸಾಮಾನ್ಯರಲ್ಲದೆ, ನಗರದ ಕೈಗಾರಿಕೆಗಳ ಮೇಲೂ ದುಷ್ಪರಿಣಾಮ ಬೀರಿದೆ. ಈಗಲಾದರೂ ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಪೀಣ್ಯ ಕಾರ್ಖಾನೆಗಳಿಗೂ ಜೀವದಾನ ನೀಡಬೇಕಿದೆ. ಬಿ.ಮೂರ್ತಿ

Related Tags:

Related Posts :

Category:

error: Content is protected !!