ಚ್ರೈತ್ರ ಪೂರ್ಣಿಮೆ ಬೆಳದಿಂಗಳ ಬೆಳಕಲ್ಲಿ ವಿಶ್ವವಿಖ್ಯಾತ ಬೆಂಗಳೂರು ಕರಗ ಸಂಪನ್ನವಾಗಿದೆ. ತಿಗಳರ ಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ 10 ದಿನದಿಂದ ನಡೆಯುತ್ತಿದ್ದ ದ್ರೌಪದಿ ದೇವಿ ಕರಗಕ್ಕೆ ಕಳೆದ ರಾತ್ರಿ ವಿಶೇಷ ದಿನವಾಗಿದೆ. ಚೈತ್ರ ಪೂರ್ಣಿಮೆಯ ಈ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಅರ್ಚಕ ಜ್ಞಾನೇಂದ್ರ 13ನೇ ಬಾರಿ ಕರಗವನ್ನು ಹೊತ್ತು ಹೊರಬರುತ್ತಿದ್ದಂತೆ ಅಲ್ಲಿ ಸೇರಿದ್ದ ಸಹಸ್ರಾರು ಜನರ ಗೋವಿಂದ ಗೋವಿಂದ ಉದ್ಘೋಷ ಮುಗಿಲು ಮುಟ್ಟಿತು.
ಸರಿಯಾಗಿ 2 ಗಂಟೆಗೆ ಆರಂಭವಾದ ಕರಗ ಉತ್ಸವ ಪೇಟೆ ಬೀದಿಗಳಲ್ಲಿ ಸಂಚರಿಸಿ, ಅನೇಕ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ಹಾಗೆ ಮಸ್ತಾನ್ ದರ್ಗಾದಲ್ಲೂ ಪೂಜೆ ಸ್ವೀಕರಿಸಿ ಭಾವೈಕ್ಯತೆ ಸಂದೇಶ ಸಾರಿತು.
ದರ್ಗಾದಲ್ಲಿ ಪೂಜೆ ಸ್ವೀಕರಿಸಿ ಅಣ್ಣಮ್ಮ ದೇವಸ್ಥಾನ ತಲುಪಿದ ಕರಗೆರವಣಿಗೆ ಅಲ್ಲೂ ಪೂಜೆ ಸ್ವೀಕರಿಸಿತು. ಹೀಗೆ ಪೇಟೆ ಬೀದಿಗಳ ದೇಗುಲಗಳಿಗೆ ತೆರಳಿ ಸಂಪ್ರದಾಯದಂತೆ ಪೂಜೆ ಸ್ವೀಕರಿಸಿತು.
ಕರಗ ಕುಂಬಾರಪೇಟೆ ರಸ್ತೆ ಮೂಲಕ ಸಾಗಿ, ರಾಜ ಮಾರುಕಟ್ಟೆ ವೃತ್ತ, ಕೆ.ಆರ್.ಮಾರುಕಟ್ಟೆ ವೃತ್ತದ ಮೂಲಕ ಸಾಗಿ ನಂತರ, ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸ್ವೀಕರಿಸಿ, ನಂತರ ಕೆ.ಆರ್. ಮಾರುಕಟ್ಟೆ ವೃತ್ತಕ್ಕೆ ವಾಪಾಸಾಗಿ ಕಾಟನ್‌ಪೇಟೆ ಪೊಲೀಸ್ ಠಾಣೆ ರಸ್ತೆಯಲ್ಲಿ ತೆರಳಿ, ಅಲ್ಲಿನ ಮಸ್ತಾನ್‌ಸಾಬ್ ದರ್ಗಾಕ್ಕೆ ತೆರಳಿ ಪೂಜೆ ಸ್ವೀಕರಿಸಿತು. ದರ್ಗದ ನಂತರ ಬಳೇಪೇಟೆ ವೃತ್ತದ ಮೂಲಕ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಧರ್ಮರಾಯನ ಸ್ವಾಮಿ ದೇವಸ್ಥಾನಕ್ಕೆ ಮರಳಿದೆ.
ಬೆಂಗಳೂರು ಕರಗವು 8 ಶತಮಾನಗಳ ಇತಿಹಾಸವನ್ನ ಹೊಂದಿದೆ. ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ. ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುತ್ತದೆ.
ಕರಗ ಎಂಬ ಮಾತಿಗೆ 'ಕುಂಭ' ಎನ್ನುವ ಅರ್ಥವೂ ಇದೆ. ಕರಗದ ಒಂದೊಂದು ಅಕ್ಷರ ಒಂದೊಂದು ಸಂಕೇತ ಹೊಂದಿವೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು. ಕರಗ ಪೂಜೆ ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ಇದೆ. ಬೆಂಗಳೂರು ಮಾತ್ರವಲ್ಲದೆ ಅನೇಕ ಕಡೆ ಕರಗ ಆಚರಣೆ ರೂಢಿಯಲ್ಲಿದೆ.
ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುತ್ತಾರೆ. ಸ್ವರ್ಗಾರೋಹಣ ಸಂದರ್ಭದಲ್ಲಿ ದ್ರೌಪದಿ ಮೂರ್ಛೆ ತಪ್ಪಿ ಬಿದ್ದಳಂತೆ. ದ್ರೌಪದಿ ಮೂರ್ಛೆ ತಪ್ಪಿ ಬಿದ್ದದ್ದು ಅರಿಯದೆ ಪಾಂಡವರು ಮುಂದೆ ನಡೆಯುತ್ತಾರೆ. ಆಕೆ ಎಚ್ಚರವಾಗಿ ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದನು. ಆಗ ತಿಮಿರಾಸುರ ನೋಡಿದ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾಳೆ.
ರಾಕ್ಷಸ ತಿಮರಾಸುರನನ್ನು ಸದೆ ಬಡಿಯಲು ರಕ್ಷಕರನ್ನು ಆಕೆ ಸೃಷ್ಟಿಸುತ್ತಾಳೆ. ತಲೆಯಿಂದ ಯಜಮಾನ, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಯಿಂದ ಗಂಟೆ ಪೂಜಾರಿ, ಹೆಗಲಿನಿಂದ ವೀರಕುಮಾರರ ಸೃಷ್ಟಿಸುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದುರು ಹೋರಾಡಿ ಗೆಲ್ಲುತ್ತಾರೆ.
ಜನ್ಮ ನೀಡಿದ ತಾಯಿ ದ್ರೌಪದಿ ಕೈಲಾಸಕ್ಕೆ ಹೋಗುವುದನ್ನು ಕಂಡು ಮಕ್ಕಳಲ್ಲಿ ದುಗುಡ ಉಂಟು ಮಾಡುತ್ತೆ. ಕೈಲಾಸಕ್ಕೆ ತೆರಳದಂತೆ ದ್ರೌಪದಿ ಬಳಿ ಬೇಡಿಕೊಳ್ಳುವಂತೆ ಕೃಷ್ಣನು ಸಲಹೆ ನೀಡುತ್ತಾನೆ. ಆಗ ವೀರಕುಮಾರರು ಕತ್ತಿಯಿಂದ ಎದೆಗೆ ತಿವಿದುಕೊಳ್ಳುತ್ತಾ ಬೇಡಿ ಕೊಳ್ಳುತ್ತಾರೆ. ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು ಎಂದು ಅಲವತ್ತುಕೊಳ್ಳುತ್ತಾರೆ.
ದ್ರೌಪದಿ ಮರುಕವಾಗಿ ಪ್ರತಿ ವರ್ಷವೂ ಮೂರು ದಿನ ಭೂಮಿಗೆ ಬರುವುದಾಗಿ ಮಾತು ನೀಡುತ್ತಾರೆ. ಈ ಮೂರು ದಿನ ದ್ರೌಪದಿ ಮಕ್ಕಳೊಂದಿಗೆ ಇರುತ್ತಾಳೆ. ಈ ಮೂರು ದಿನಗಳೇ ಕರಗ ಹಬ್ಬದ ದಿನಗಳು.
2024ರ ಬೆಂಗಳೂರು ಕರಗ ಭಕ್ತ ಸಾಗರವೇ ಸೇರಿತ್ತು. ಕರಗದ ದರ್ಶನ ಪಡೆದು ಪುನೀತರಾದರು.
Published On - 7:49 am, Wed, 24 April 24