ಅಲೆಕ್ಸ್ ಅಬ್ಬರಕ್ಕೆ ಕ್ರಿಸ್ ಗೇಲ್ ವಿಶ್ವ ದಾಖಲೆಯೇ ಶೇಕಿಂಗ್
T20 Records: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮತ್ತು ವಿವಿಧ ಫ್ರಾಂಚೈಸಿ ಲೀಗ್ಗಳ ಮೂಲಕ ಕೇವಲ ಮೂವರು ಆಟಗಾರರು ಮಾತ್ರ ಟಿ20 ಕ್ರಿಕೆಟ್ನಲ್ಲಿ 14 ಸಾವಿರ ರನ್ ಕಲೆಹಾಕಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಇಂಗ್ಲೆಂಡ್ನ ಬ್ಯಾಟರ್ ಅಲೆಕ್ಸ್ ಹೇಲ್ಸ್. ಇದಕ್ಕೂ ಮುನ್ನ ಕ್ರಿಸ್ ಗೇಲ್ ಹಾಗೂ ಕೀರನ್ ಪೊಲಾರ್ಡ್ ಮಾತ್ರ ಈ ಸಾಧನೆ ಮಾಡಿದ್ದರು.
Updated on: Aug 31, 2025 | 11:55 AM

ಟಿ20 ಕ್ರಿಕೆಟ್ನಲ್ಲಿ ಇಂಗ್ಲೆಂಡ್ ದಾಂಡಿಗ ಅಲೆಕ್ಸ್ ಹೇಲ್ಸ್ ಅಬ್ಬರ ಮುಂದುವರೆದಿದೆ. ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (CPL 2025) ಟ್ರಿನ್ಬಾಗೊ ನೈಟ್ ರೈಡರ್ಸ್ ಪರ ಪರ ಕಣಕ್ಕಿಳಿಯುತ್ತಿರುವ ಹೇಲ್ಸ್, ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 43 ಎಸೆತಗಳಲ್ಲಿ 74 ರನ್ ಸಿಡಿಸಿದ್ದಾರೆ.

ಈ ಅರ್ಧಶತಕದೊಂದಿಗೆ ಅಲೆಕ್ಸ್ ಹೇಲ್ಸ್ ಟಿ20 ಕ್ರಿಕೆಟ್ನಲ್ಲಿ 14 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಟಿ20 ಇತಿಹಾಸದಲ್ಲಿ 14000 ರನ್ ಕಲೆಹಾಕಿದ ಇಂಗ್ಲೆಂಡ್ನ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 3ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2005 ರಿಂದ 2022 ರವರೆಗೆ ವೆಸ್ಟ್ ಇಂಡೀಸ್ ಸೇರಿದಂತೆ ವಿವಿಧ ತಂಡಗಳ ಪರ ಕಣಕ್ಕಿಳಿದಿರುವ ಕ್ರಿಸ್ ಗೇಲ್ 455 ಇನಿಂಗ್ಸ್ಗಳಿಂದ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕ್ರಿಸ್ ಗೇಲ್ ಬಳಿಕ ಕೀರನ್ ಪೊಲಾರ್ಡ್ 14 ಸಾವಿರ ರನ್ಗಳ ಸಾಧನೆ ಮಾಡಿದ್ದರು. ಪೊಲಾರ್ಡ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ 634 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 9287 ಎಸೆತಗಳನ್ನು ಎದುರಿಸಿರುವ ಅವರು ಬರೋಬ್ಬರಿ 14012 ರನ್ ಕಲೆಹಾಕಿದ್ದಾರೆ. ಇದೀಗ ಪೊಲಾರ್ಡ್ ಅವರನ್ನು ಹಿಂದಿಕ್ಕುವಲ್ಲಿ ಅಲೆಕ್ಸ್ ಹೇಲ್ಸ್ ಯಶಸ್ವಿಯಾಗಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಈವರೆಗೆ 505 ಇನಿಂಗ್ಸ್ ಆಡಿರುವ ಅಲೆಕ್ಸ್ ಹೇಲ್ಸ್ 9642 ಎಸೆತಗಳನ್ನು ಎದುರಿಸಿ 14024 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ವಿಶ್ದದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಅಲೆಕ್ಸ್ ಬ್ಯಾಟ್ನಿಂದ ಇನ್ನು 539 ರನ್ಗಳು ಮೂಡಿಬಂದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಅಂದರೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆ ಮುರಿಯಲು ಅಲೆಕ್ಸ್ ಹೇಲ್ಸ್ಗೆ ಬೇಕಿರುವುದು ಕೇವಲ 539 ರನ್ಗಳು ಮಾತ್ರ. ಹೀಗಾಗಿ ಮುಂಬರುವ ಟಿ20 ಲೀಗ್ಗಳ ಮೂಲಕ ಇಂಗ್ಲೆಂಡ್ ದಾಂಡಿಗ ಹೊಸ ವಿಶ್ವ ದಾಖಲೆ ಬರೆಯುವುದನ್ನು ಎದುರು ನೋಡಬಹುದು.
