- Kannada News Photo gallery Cricket photos Rishabh Pant Shatters Records: Most Sixes in England by an Away Player in Test Cricket
IND vs ENG: ಸಿಕ್ಸರ್‌ಗಳ ಸರಮಾಲೆ; ಇಂಗ್ಲೆಂಡ್‌ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ರಿಷಭ್ ಪಂತ್
Rishabh Pant Shatters Records: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿದೆ. ಈ ಮೂಲಕ ಅವರು ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಶತಕಗಳನ್ನು ಗಳಿಸಿದ ಪಂತ್, ತಮ್ಮ ಆಕ್ರಮಣಕಾರಿ ಆಟದ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಬೆನ್ ಸ್ಟೋಕ್ಸ್ ಅವರ ದಾಖಲೆಯನ್ನು ಮೀರಿಸಿ ಪಂತ್ ಹೊಸ ದಾಖಲೆ ನಿರ್ಮಿಸಿದ್ದಾರೆ.
Updated on: Jul 06, 2025 | 4:08 PM

ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಇಲ್ಲಿಯವರೆಗೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದ ಪಂತ್, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಈ ಮೂಲಕ ಪಂತ್, ಇಂಗ್ಲೆಂಡ್‌ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಬಿರುಗಾಳಿಯ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ 65 ರನ್‌ಗಳ ಕೊಡುಗೆ ನೀಡಿದರು. ಈ ಇನ್ನಿಂಗ್ಸ್‌ನಲ್ಲಿ, ಅವರು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಬೆನ್ ಸ್ಟೋಕ್ಸ್ ಅವರ ದಾಖಲೆಯನ್ನು ಸಹ ಮುರಿದರು.

ಮೇಲೆ ಹೇಳಿದಂತೆ ಲೀಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ರಿಷಭ್ ಪಂತ್ ಶತಕ ಬಾರಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 134 ರನ್ ಬಾರಿಸಿದ್ದ ಪಂತ್, ಈ ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಹಾಗೆಯೇ ಎರಡನೇ ಇನ್ನಿಂಗ್ಸ್‌ನಲ್ಲಿಯೂ ತಮ್ಮ ಫಾರ್ಮ್ ಮುಂದುವರೆಸಿದ್ದ ಪಂತ್ 118 ರನ್ ಕಲೆಹಾಕಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು.

ಈಗ ಎರಡನೇ ಟೆಸ್ಟ್‌ನಲ್ಲೂ ತಮ್ಮ ಲಯವನ್ನು ಕಾಯ್ದುಕೊಂಡಿರುವ ಪಂತ್ 65 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಪಂತ್ ತವರಿನ ಹೊರಗೆ ಅಂದರೆ ಬೇರೆ ದೇಶದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರನೆಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ರಿಷಭ್ ಪಂತ್ ಈಗ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 24 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ, ಒಂದು ದೇಶದಲ್ಲಿ (ತವರಿನ ಹೊರಗೆ) ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾದಲ್ಲಿ 21 ಸಿಕ್ಸರ್‌ಗಳನ್ನು ಬಾರಿಸಿದ್ದ ಬೆನ್ ಸ್ಟೋಕ್ಸ್ ಅವರನ್ನು ಹಿಂದಿಕ್ಕಿದ್ದಾರೆ.

ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ಓಪನರ್ ಮ್ಯಾಥ್ಯೂ ಹೇಡನ್ ಭಾರತದಲ್ಲಿ 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ವಿವಿಯನ್ ರಿಚರ್ಡ್ಸ್ ಇಂಗ್ಲೆಂಡ್‌ನಲ್ಲಿ 16 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ನ್ಯೂಜಿಲೆಂಡ್‌ನಲ್ಲಿ 16 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ರಿಷಭ್ ಪಂತ್ ಇದುವರೆಗೆ ಟೀಮ್ ಇಂಡಿಯಾ ಪರ 45 ಟೆಸ್ಟ್ ಪಂದ್ಯಗಳಲ್ಲಿ 44.45 ಸರಾಸರಿಯಲ್ಲಿ 3290 ರನ್ ಗಳಿಸಿದ್ದಾರೆ. ಈ ಸ್ವರೂಪದಲ್ಲಿ ಅವರು ಇಲ್ಲಿಯವರೆಗೆ 86 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿರುವ ಪಂತ್ ತವರಿನಲ್ಲಿ 34 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದೀಗ ಉಳಿದ ಮೂರು ಟೆಸ್ಟ್‌ಗಳಲ್ಲಿಯೂ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ.
