- Kannada News Photo gallery Due to heavy rains, the people of Bidar district are distressed, Those who lost their homes have not yet received compensation, Kannada News
ಭಾರೀ ಮಳೆಗೆ ಬೀದರ್ ಜಿಲ್ಲೆಯ ಜನ ಕಂಗಾಲು; ಮನೆ ಕಳೆದುಕೊಂಡವರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ
ಬೀದರ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೂರಾರು ಹೇಕ್ಟರ್ನಷ್ಟು ಬೆಳೆ ಹಾನಿಯಾಗಿದ್ದು, 360 ಮನೆಗಳು ಸಹ ಕುಸಿದಿವೆ. ಬೆಳೆ ಹಾನಿ ಹಾಗೂ ಮನೆ ಕುಸಿದ ಫಲಾನುಭವಿಗಳಿಗೆ ಪರಿಹಾರ ಹಾರ ಕೊಡುತ್ತೇವೆಂದು ಸರಕಾರ ಕಾಲಹರಣ ಮಾಡುತ್ತಿದೆ. ಇದು ಸಹಜವಾಗಿಯೇ ಬೆಳೆ ಹಾಗೂ ಮನೆಕಳೆದುಕೊಂಡವರ ಆಕ್ರೋಶ ಹೆಚ್ಚಿಸುವಂತೆ ಮಾಡಿದ್ದು, ಬೇಗ ಪರಿಹಾರ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
Updated on: Sep 12, 2024 | 3:23 PM

ಬೀದರ್ ಜಿಲ್ಲೆಯಲ್ಲಿ ವಾರದ ಹಿಂದೆ ಸುರಿದ ಮಳೆಯಿಂದಾಗಿ 500 ಹೆಕ್ಟರ್ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಿದ ಹುಲುಸಾಗಿ ಬೆಳೆದ ಉದ್ದು, ಸೋಯಾ, ಹೆಸರು ಬೆಳೆ ಹಾನಿಯಾಗಿದೆ. ಜೊತೆಗೆ ಜಿಲ್ಲೆಯ ವಿವಿಧ ಗ್ರಾಮದಲ್ಲಿ ಸುಮಾರು 360 ಮನೆಗಳು ಬಾಗಶಃ ಕುಸಿದಿದ್ದು, ಮನೆ ಕಳೆದುಕೊಂಡವರನ್ನ ಕಂಗಾಲು ಮಾಡಿದೆ.

ಆವತ್ತಿನ ದುಡಿಮೆಯಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಏಕಾಏಕಿ ಮನೆ ಕುಸಿದಿರುವ ಪರಿಣಾಮವಾಗಿ ಬಿದ್ದಿರುವ ಮನೆಯನ್ನ ಕಟ್ಟಿಕೊಳ್ಳಲೇ ಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿದೆ. ಆದರೆ, ಮೊದಲೆ ಮನೆ ಕಟ್ಟುವ ಮುನ್ನ ಸಾಲಮಾಡಿ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಆ ಸಾಲವೇ ಇನ್ನೂ ತೀರಿಲ್ಲ. ಇದರ ನಡುವೆ ಮತ್ತೆ ಬಿದ್ದಿರುವ ಮನೆಯನ್ನ ಕಟ್ಟಿಕೊಳ್ಳಬೇಕಾದರೆ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ.

ಇನ್ನು ಮನೆ ಕಳೆದುಕೊಂಡ ಕೆಲವರಿಗೆ ಪರಿಹಾರ ಕೊಟ್ಟರೆ, ಇನ್ನೂ ಕೆಲವರಿಗೆ ಪರಿಹಾರ ಕೊಡಬೇಕಾಗಿದೆ. ಆದರೆ, ಸರಕಾರ ನಮಗೆ ಹಣ ಕೊಡುವ ಬದಲು ಬಿದ್ದಿರುವ ಮನೆಯನ್ನ ಕಟ್ಟಿಸಿಕೊಡಿ ಎಂದು ಇಲ್ಲಿನ ಮಹಿಳೆಯವರು ಸರಕಾರ, ಜಿಲ್ಲಾಢಳಿತ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಮಾಡುತ್ತಿದ್ದಾರೆ.

ಈ ವಿಚಾರದ ಬಗ್ಗೆ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನ ಕೇಳಿದರೆ ‘ಸರಕಾರ ಶೇಕಡಾ 20 ರಷ್ಟಕ್ಕಿಂತ ಕೆಳಗಡೆ ಮನೆ ಕುಸಿದಿದ್ದರೆ, ಅಂತಹ ಮನೆಗಳಿಗೆ 6 ಸಾವಿರದಾ 5 ನೂರು ರೂಪಾಯಿ ಕೊಡುತ್ತಿದ್ದಾರೆ. ಇನ್ನೂ ಶೇಕಡಾ 20ಕ್ಕಿಂತಲೂ ಜಾಸ್ತಿ ಮನೆ ಕುಸಿತವಾಗಿದ್ದರೆ ಅದಕ್ಕೆ 30 ಸಾವಿರ ರೂಪಾಯಿ ಪರಿಹಾರ ಕೊಡುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಿಗೆ ಮನೆ ಕುಸಿತವಾಗಿದ್ದರೆ ಅವರಿಗೆ 50 ಸಾವಿರ ರೂ. ಕೊಡುತ್ತಿದ್ದೇವೆ. ಇನ್ನು ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡಿದ್ದರೆ, ಅಂತಹ ಫಲಾನುಭವಿಗೆ ಮನೆಯನ್ನ ಕಟ್ಟಿಸಿಕೊಡಬೇಕೆಂದು ಸರಕಾರದ ಮಟ್ಟದಲ್ಲಿ ತಿರ್ಮಾನ ಮಾಡಲಾಗಿದೆ ಎಂದಿದ್ದಾರೆ.

ಇನ್ನು ವಾರದ ಹಿಂದೆ ಸುರಿದ ಮಹಾ ಮಳೆಯಿಂದಾಗಿ ಜಿಲ್ಲೆಯ 5 ನೂರಕ್ಕೂ ಹೆಚ್ಚು ಹೆಕ್ಟರ್ನಷ್ಟು ಬೆಳೆ ಹಾನಿಯಾಗಿದೆ. ಅಲ್ಲಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತುಕೊಂಡಿದ್ದು, ಅಲ್ಪಾವಧಿಯ ಪ್ರಮುಖ ಬೆಳೆಗಳಾದ ಉದ್ದು, ಸೋಯಾ, ಹೆಸರು ಬೆಳೆಗೆ ಕುತ್ತು ತಂದಿದೆ. ಇತ್ತ ಸಾಲಾಸೋಲಾ ಮಾಡಿ ಬಿತ್ತಿದ ಬೆಳೆ ಕೈಗೆ ಬರುತ್ತೊ ಇಲಲವೋ ಎಂದು ರೈತರನ್ನ ಚಿಂತೆಗೀಡು ಮಾಡಿದೆ.

ಈ ಬಾರಿ ಬೀದರ್ ಜಿಲ್ಲೆಯ ರೈತರ ಸ್ಥಿತಿ ಶೋಚನೀಯವಾಗಿದೆ. ಸೋಯಾ, ಅವರೆ, ಉದ್ದು ಜೋಳ, ಬೆಳೆಗಾರರ ಪರಿಸ್ಥಿತಿ ಸಂಪೂರ್ಣವಾಗಿ ಹದೆಗಿಟ್ಟಿದ್ದು, ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸೋಯಾ, ಉದ್ದು ಬೆಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ಬರಸಿಡಿಲಿನಂತೆ ಬಂದ ಮಳೆ, ರೈತರ ಬದುಕನ್ನ ಬರ್ಬಾದ್ ಮಾಡಿದೆ.



