
ದೇವಿಯ ದೇಗುಲದ ಅಂಗಳದಲ್ಲಿ ರಾಶಿ ರಾಶಿ ಹೋಳಿಗೆ ನೈವೇದ್ಯ. ಆರಾಧ್ಯ ದೇವಿಯ ದರ್ಶನ ಪಡೆದ ಭಕ್ತರಲ್ಲಿ ಕೃತಾರ್ಥ ಭಾವ. ಇದು ದುರ್ಗದಲ್ಲಿ ಹೋಳಿಗೆ ಹಬ್ಬ ಆಚರಿಸುವ ವಿಶೇಷ ಝಲಕ್.

ಕೋಟೆನಾಡು ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದ ಬಳಿಯ ಶ್ರೀ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇಗುಲ ಬಳಿಯ ದೃಶ್ಯವಿದು. ಪ್ರತಿ ವರ್ಷ ಆಷಾಢ ಮಾಸದ ಕೊನೆಯಲ್ಲಿ ಹೋಳಿಗೆ ಹಬ್ಬ ಆಚರಣೆ ಆಚರಿಸಲಾಗುತ್ತದೆ.

ಭಕ್ತರು ಪ್ರತಿ ಮನೆಗಳಲ್ಲಿ ಹೋಳಿಗೆ ಮಾಡಿ ದೇವಿಗೆ ನೈವೇದ್ಯ ತರುತ್ತಾರೆ. ದೇಗುಲದ ಅಂಗಳದಲ್ಲಿ ರಾಶಿ ರಾಶಿ ಹೋಳಿಗಗಳನ್ನಿಟ್ಟು ಪೂಜಿಸಿ ದೇವಿಗೆ ಅರ್ಪಿಸಲಾಗುತ್ತದೆ. ಆ ಮೂಲಕ ಮಕ್ಕಳಿಗೆ ರೋಗ ರುಜನಿಗಳು ಕಾಡದಿರಲಿ ಎಂದು ಪ್ರಾರ್ಥಿಸಲಾಗುತ್ತದೆ.

ಹೋಳಿಗೆ ಜತೆಗೆ ಕುಡಿಕೆ, ಮೊಸರನ್ನ, ಬೇವು, ತೆಂಗಿನ ಕಾಯಿ, ಬಾಳೇಹಣ್ಣು ಮತ್ತಿತರೆ ವಸ್ತುಗಳನ್ನು ನೈವೇದ್ಯವನ್ನಾಗಿ ದೇವಿಗೆ ಅರ್ಪಿಸಲಾಗುತ್ತದೆ. ಸಂಜೆ ವೇಳೆಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯುತ್ತದೆ. ಬಳಿಕ ಮದ್ಯರಾತ್ರಿ ವೇಳೆಗೆ ದೇವಿಗೆ ಅರ್ಪಿಸಿದ ನೈವೇದ್ಯವನ್ನು ಟ್ರ್ಯಾಕ್ಟರ್ನಲ್ಲಿ ತುಂಬಿ ಊರಸೀಮೆಗೆ ಕೊಂಡೊಯ್ದು ಹಾಕಲಾಗುತ್ತದೆ.

ಈ ಆಚರಣೆಯಿಂದ ನಾಡಿನ ಜನರಿಗೆ ರೋಗ ರುಜನಿಗಳು ಬಾಧಿಸಲ್ಲ. ಮಳೆ ಬೆಳೆ ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಒಂದು ಕಡೆ ರೋಗ ರುಜಿನ ದೂರವಾಗಿ ಮಳೆ ಬೆಳೆ ಸಮೃದ್ಧಿ ಆಗಿರುತ್ತದೆಂಬ ನಂಬಿಕೆ ಜನರಲ್ಲಿದೆ. ಮತ್ತೊಂದು ಕಡೆ ಆಷಾಢ ಮಾಸದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರದ ಕೊರತೆ ಆಗಿರುತ್ತದೆ. ಹೀಗಾಗಿ, ಊರ ಸೀಮೆಯಲ್ಲಿ ಆಹಾರ ಹಾಕಿದರೆ ಪ್ರಾಣಿ ಪಕ್ಷಿಗಳಿಗೆ ಆಹಾರ ದಕ್ಕುತ್ತದೆಂಬ ವೈಚಾರಿಕ ಚಿಂತನೆಯೂ ಈ ಆಚರಣೆಯ ಹಿಂದಿದೆ ಎನ್ನಲಾಗುತ್ತದೆ.