Updated on:Aug 18, 2021 | 5:08 PM
ಅಫ್ಘಾನಿಸ್ತಾನದ ಆಡಳಿತವು ತಾಲಿಬಾನ್ ಕೈಗೆ ಸಿಕ್ಕಿರುವುದು ಈಗಾಗಲೇ ಭಯೋತ್ಪಾದನೆಯಿಂದ ನಲುಗುತ್ತಿರುವ ರಾಷ್ಟ್ರಗಳಿಗೆ ಇನ್ನಷ್ಟು ಆತಂಕ ಹೆಚ್ಚಾಗುವುದಕ್ಕೆ ಕಾರಣ ಆಗಿದೆ. ಬೋಕೋ ಹರಾಮ್, ಅಲ್ ಕೈದಾ, ಲಷ್ಕರ್-ಇ-ತೈಬಾ, ಇಂಡಿಯನ್ ಮುಜಾಹಿದೀನ್, ಐಎಸ್ಐಎಸ್ ಸೇರಿದಂತೆ ಈಗಾಗಲೇ ಫ್ಯಾಕ್ಟರಿ ರೀತಿಯಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಉಗ್ರ ಸಂಘಟನೆಗಳಿಗೆ ಸುವಿಶಾಲವಾದ, ಸುರಕ್ಷಿತವಾದ ಟ್ರೇನಿಂಗ್ ಸೆಂಟರ್ನಂತಾಗುತ್ತದೆ ಅಫ್ಘಾನಿಸ್ತಾನ. ನಿಮಗೆ ನೆನಪಿದೆ ಅನ್ನೋದಾದರೆ, ಮುಂಬೈ ದಾಳಿ ಆರೋಪಿಗಳು ಎಂದು ಭಾರತವು ಯಾವ ಉಗ್ರರ ಮೇಲೆ ಆರೋಪ ಮಾಡಿತೋ ಅಂಥವರ ವಿರುದ್ಧ ಪಾಕಿಸ್ತಾನದಲ್ಲಿ ಪ್ರಕರಣ ನಡೆಯುವಂತಾಗಿದೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ಗೆ ಮುಜುಗುರ ಆಗುವಂತಾಗಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಹೀಗಾಗುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ, ಆಡಳಿತ ನಡೆಸುವಂಥವರು ಕಟ್ಟರ್ ಇಸ್ಲಾಂ ಮೂಲಭೂತವಾದಿಗಳು. ಅದೊಮ್ಮೆ ಅಮೆರಿಕದಿಂದ ಹೊರದಬ್ಬಿಸಿಕೊಂಡ ಕಹಿ ಅನುಭವವೂ ಜತೆಗಿದೆ. ಒಂದೊಮ್ಮೆ ಮತ್ತೆ ಹಾಗೇ ಆದಲ್ಲಿ ಸಮಾನ ಮನಸ್ಕ, ಸಮಾನ ಬಲರ ಸ್ನೇಹ ಅದಕ್ಕೆ ಬೇಕು. ಆ ಕಾರಣಕ್ಕೆ ಈ ಮೇಲೆ ತಿಳಿಸಿದ ಸಂಘಟನೆಗಳು ತಾಲಿಬಾನ್ ಪಾಲಿಗೆ ಬೇಕೇಬೇಕಾಗುತ್ತದೆ.
ಇನ್ನು ಉಗ್ರ ಸಂಘಟನೆಗಳು ಅಂದ ಮೇಲೆ ಯಾವುದಾದರೂ ದೇಶದಲ್ಲಿ ದಾಳಿ ಮಾಡುವುದು, ಅಮಾಯಕರ ಪ್ರಾಣ ತೆಗೆಯುವುದು, ಆಸ್ತಿಗಳು ಹಾನಿ ಆಗುವುದು ಇಂಥವೆಲ್ಲ ಆಗಾಗ ನಡೆಸುತ್ತಲೇ ಇರುತ್ತಾರೆ. ಒಂದು ದೇಶಕ್ಕೆ ಬೇಕಾದ ಉಗ್ರರು ಬಂದು ಅಫ್ಘಾನಿಸ್ತಾನವನ್ನು ಹೊಕ್ಕಿ ಕುಳಿತು ಬಿಟ್ಟರೆ ಅಲ್ಲಿಂದ ಅವರನ್ನು ಹೆಕ್ಕಿ ತೆಗೆಯುವುದು ಅಸಾಧ್ಯ. ಒಂದು ಸರ್ಕಾರವೇ ಬೆಂಬಲವಾಗಿ ಇರುವಾಗ ಹಾಗೂ ಆ ದೇಶದ ಜತೆಗೆ ರಾಜತಾಂತ್ರಿಕ ಸಂಬಂಧವೇ ಇಲ್ಲದಿರುವಾಗ ಏನು ಮಾಡುವುದಕ್ಕೆ ಸಾಧ್ಯ? ಉದಾಹರಣೆಗೆ ನೋಡಿ, ದಾವೂದ್ ಇಬ್ರಾಹಿಂ ಭಾರತದ ಮೋಸ್ಟ್ ವಾಂಟೆಡ್. ಆತ ಪಾಕಿಸ್ತಾನದ ಇಂಥ ವಿಳಾಸದಲ್ಲಿಯೇ ಇದ್ದಾನೆ. ಆತನಿಗೆ ಐಎಸ್ಐ ಬೆಂಬಲ ಹಾಗೂ ಕಾವಲು ಒದಗಿಸಲಾಗಿದೆ ಎಂದು ಭಾರತ ಹೇಳುತ್ತಾ ಬಂದಿದ್ದರೂ ಈ ತನಕ ಏನೂ ಮಾಡಲು ಸಾಧ್ಯವಾಗಿಲ್ಲ. ಏಕೆಂದರೆ, ಭಾರತ ಮತ್ತು ಪಾಕಿಸ್ತಾನದ ಮಧ್ಯದ ಸಂಬಂಧ ಅಂಥದ್ದು.
ಭಾರತವೂ ಒಳಗೊಂಡಂತೆ ಜಗತ್ತಿನ ಯಾವುದೋ ಭಾಗದಲ್ಲಿ ಭಯೋತ್ಪಾದನೆ ಕೃತ್ಯ ಎಸಗಿ, ಅಫ್ಘಾನಿಸ್ತಾನದ ಒಳಗೆ ಹೊಕ್ಕರೆ ಅಲ್ಲಿಗೆ ಮುಗಿಯಿತು. ಈ ಹಿಂದೆ ಕಂದಹಾರ್ಗೆ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಣ ಆದಾಗ ಅಫ್ಘಾನಿಸ್ತಾನದಲ್ಲಿ ಇದ್ದದ್ದು ತಾಲಿಬಾನ್ ಆಡಳಿತವೇ. ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯನ್ನೂ ನಡೆಸಲಾಗದೆ ಬಿಟ್ಟು ಕಳಿಸುವ ಅನಿವಾರ್ಯ ಸನ್ನಿವೇಶ ಎದುರಾಯಿತು. ಉಗ್ರ ಮಸೂದ್ ಅಜರ್ ಸೇರಿದಂತೆ ಇತರರನ್ನು ಬಿಡುಗಡೆ ಮಾಡಿದ ಭಾರತವು ಆ ನಂತರ ಅದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಯಿತು. ಇನ್ನು 2019ರ ಅಂದಾಜಿನಂತೆ ಅಫ್ಘಾನಿಸ್ತಾನದ ಜನಸಂಖ್ಯೆ ಅಂದಾಜು 3.8 ಕೋಟಿ. ಆ ದೇಶಕ್ಕೆ ಹೂಡಿಕೆ ಮಾಡುವುದಕ್ಕೆ ಯಾರಾದರೂ ಮುಂದೆ ಬರುತ್ತಾರಾ? ರಫ್ತು- ಆಮದು ವ್ಯವಹಾರ ಹೇಗೆ ಆಗುತ್ತದೆ. ಇಸ್ಲಾಂ ಶಿಕ್ಷಣಕ್ಕೆ ಒತ್ತು ನೀಡುತ್ತಾ ಸಾಗುವ ತಾಲಿಬಾನ್ನಿಂದಾಗಿ ಇನ್ನು ಮುಂದೆ ಅಲ್ಲಿ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಂಗೀತ, ಕಲೆ ಇತ್ಯಾದಿಗಳೆಲ್ಲ ಕ್ಷೀಣಿಸಿಹೋಗುತ್ತದೆ.
Afghanistan News Update Threat of Suicide Bomb in Kabul Airport
ಯಾವಾಗ ಒಂದು ದೇಶದಲ್ಲಿ ಉದ್ಯೋಗಾವಕಾಶ, ಸ್ವಾತಂತ್ರ್ಯ, ನೆಮ್ಮದಿಯ ಜೀವನ ಇಲ್ಲವೋ ಆಗ ಅಲ್ಲಿಂದ ಬೇರೆ ದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗೆ ಹೋಗುವುದಕ್ಕೆ ಜನರು ಆರಿಸಿಕೊಳ್ಳುವುದು ಉತ್ತಮ ಅವಕಾಶಗಳು ಇರುವ ದೇಶಗಳನ್ನು. ಸಹಜವಾಗಿಯೇ ಅಕ್ಕಪಕ್ಕದ ದೇಶಗಳಲ್ಲಿ ವಲಸಿಗರ ಪ್ರಮಾಣ ಹೆಚ್ಚಾಗಿ, ಹೊರೆಯಾಗಿ ಪರಿಣಮಿಸುತ್ತದೆ. ಈಗ ಒಂದೊಂದನ್ನೇ ಚುಕ್ಕಿಗಳನ್ನು ಸೇರಿಸುತ್ತಾ ಹೋದಂತೆ ಊಹಿಸಿಕೊಳ್ಳಿ. ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನ್ ಆಡಳಿತ ವಹಿಸಿಕೊಂಡಿರುವುದರಿಂದ ಇಡೀ ವಿಶ್ವದ ಮೇಲೆ ಹೇಗೆ ಮತ್ತು ಯಾಕೆ ಪರಿಣಾಮ ಬೀರುತ್ತದೆ ಎಂಬುದು ಕಣ್ಣೆದುರು ಬರುತ್ತದೆ.
ನಿರ್ದಿಷ್ಟವಾಗಿ ಭಾರತದ ವಿಚಾರವನ್ನೇ ತೆಗೆದುಕೊಳ್ಳುವುದಾದರೆ, ಆಂತರಿಕ ಭದ್ರತೆಗಾಗಿ ಹೆಚ್ಚಿನ ವೆಚ್ಚ ಮಾಡುವ ಅಗತ್ಯ ಬರುತ್ತದೆ. ತಾಲಿಬಾನ್ಗಳು ಇದಾರಲ್ಲಾ, ಇವರಿಗೆ ಗುಡ್ಡಗಾಡು ಪ್ರದೇಶದಲ್ಲಿ, ಎಂಥ ಪ್ರತಿಕೂಲ ಹವಾಮಾನದಲ್ಲೂ ಹೋರಾಟ ಮಾಡಿ ರೂಢಿ ಇದೆ. ಆದ್ದರಿಂದ ಅಫ್ಘಾನಿಸ್ತಾನದಿಂದ ಹೆಚ್ಚೇನೂ ದೂರ ಅಲ್ಲದ ಕಾಶ್ಮೀರದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಇದರ ಜತೆಗೆ ಕಾಶ್ಮೀರದಲ್ಲಿ ಕೃತ್ಯ ಎಸಗಿ ಮತ್ತೆ ಅಫ್ಘಾನಿಸ್ತಾನಕ್ಕೆ ಹಿಂತಿರುಗುವುದು ಕಷ್ಟದ ಸಂಗತಿ ಏನಲ್ಲ. ಆ ಕಡೆಯಿಂದ ತಾಲಿಬಾನ್ಗಳು ಬಾರದಿರುವಂತೆ ತಡೆಯುವುದು ಸವಾಲಾಗಿ ಪರಿಣಮಿಸಲಿದೆ. ಪಾಕ್-ಚೀನಾ-ಆಪ್ಘನ್ ಈ ಮೂರೂ ಒಂದಾಗಿರುವ ಸನ್ನಿವೇಶ ಇದು. ಈ ಹಿಂದೆ ಆಫ್ಘನ್ ಸರ್ಕಾರ ಭಾರತದ ಪರವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಆದ್ದರಿಂದ ಈ ಬದಲಾದ ಸನ್ನಿವೇಶಕ್ಕೆ ಬೇಕಾದ ಮುಂಜಾಗ್ರತೆಗಳು ತೆಗೆದುಕೊಳ್ಳಲೇಬೇಕು.
Published On - 5:00 pm, Wed, 18 August 21