ತುಹಿನ್ ಕಾಂತ ಪಾಂಡೆ, ಹಣಕಾಸು ಮತ್ತು ಕಂದಾಯ ಕಾರ್ಯದರ್ಶಿ: ಇವರು 1987ರ ಒಡಿಶಾ ಕೇಡರ್ನ ಐಎಎಸ್ ಅಧಿಕಾರಿ. ಬಜೆಟ್ಗೆ ಕೆಲ ದಿನಗಳ ಮುಂಚೆಯಷ್ಟೇ ಇವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದಾಯ ತೆರಿಗೆ ಕಾನೂನಿನಲ್ಲಿ ಏನಾದರೂ ಬದಲಾವಣೆ ಆಗುತ್ತದೆ ಎಂದಾದರೆ, ಅದಕ್ಕೆ ಮುಖ್ಯ ಕಾರಣ ಇದೇ ವ್ಯಕ್ತಿಯಾಗಿರಬಹುದು. ತೆರಿಗೆ ಇಳಿಕೆ ಮಾಡಬೇಕು ಎನ್ನುವ ನಿರೀಕ್ಷೆಗಳನ್ನು ನೆರವೇರಿಸುವ ಸವಾಲಿನ ಕೆಲಸವನ್ನು ಇವರಿಗೆ ನೀಡಲಾಗಿದೆ.
ಅಜಯ್ ಸೇಠ್, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ: ಇವರೂ ಕೂಡ 1987ರ ಬ್ಯಾಚ್ನ ಐಎಎಸ್ ಅಧಿಕಾರಿ. ಆದರೆ, ಕರ್ನಾಟಕ ಕೇಡರ್ನವರು. ಅಂತಿಮ ಬಜೆಟ್ ದಾಖಲೆಗಳನ್ನು ಸಿದ್ಧಪಡಿಸುವುದು ಇವರ ನೇತೃತ್ವದಲ್ಲೇ. ವೆಚ್ಚಕ್ಕೆ ನಿಯಂತ್ರಣ ತರುವುದರ ಜೊತೆಗೆ ಬೆಳವಣಿಗೆಗೆ ಅಗತ್ಯವಾದ ವೆಚ್ಚಕ್ಕೂ ಅವಕಾಶ ಕೊಡುವ ಸೂಕ್ಷ್ಮ ಪರಿಸ್ಥಿತಿಯನ್ನು ಸರಿದೂಗಿಸುವ ಜವಾಬ್ದಾರಿ ಇವರದ್ದಾಗಿದೆ.
ವಿ ಅನಂತನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರರು: ಐಐಟಿಯಲ್ಲಿ ಓದಿ, ಅಮೆರಿಕದಲ್ಲಿ ಡಾಕ್ಟರೇಟ್ ಪಡೆದಿರುವ ಇವರು ತಮ್ಮ ನೇತೃತ್ವದಲ್ಲಿ ಆರ್ಥಿಕ ಸಮೀಕ್ಷೆ ನಡೆಸಿ ವರದಿ ನೀಡಲಿದ್ದಾರೆ. ಇವರ ಸಮೀಕ್ಷೆಯ ಅಂಶಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಸರ್ಕಾರವು ತನ್ನ ನೀತಿಗಳನ್ನು ರೂಪಿಸಬಹುದು.
ಮನೋಜ್ ಗೋವಿಲ್, ವೆಚ್ಚ ಇಲಾಖೆಯ ಕಾರ್ಯದರ್ಶಿ: ಮಧ್ಯಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾದ ಇವರು ಹಿಂದೆ ಕಾರ್ಪೊರೇಟ್ ಅಫೇರ್ಸ್ ಮಿನಿಸ್ಟ್ರಿಯಲ್ಲಿ ಕಾರ್ಯದರ್ಶಿಯಾಗಿದ್ದರು. ಈ ಬಜೆಟ್ನಲ್ಲಿ ಅವರು ಸಬ್ಸಿಡಿಗಳು ಹಾಗೂ ಕೇಂದ್ರ ಪ್ರಾಯೋಜಿತ ಸ್ಕೀಮ್ಗಳ ವೆಚ್ಚದ ಮೇಲೆ ನಿಗಾ ಇಡಲಿದ್ದಾರೆ. ಸರ್ಕಾರ ಮಾಡುವ ವೆಚ್ಚ ವ್ಯರ್ಥವಾಗದ ರೀತಿಯಲ್ಲಿ ಯೋಜನೆಗಳನ್ನು ನಿಭಾಯಿಸುವುದು ಇವರಿಗಿರುವ ಹೊಣೆಗಾರಿಕೆ.
ಎಂ ನಾಗರಾಜು, ಹಣಕಾಸು ಸೇವೆ ಇಲಾಖೆಯ ಕಾರ್ಯದರ್ಶಿ: ತ್ರಿಪುರ ಕೇಡರ್ನ ಐಎಎಸ್ ಅಧಿಕಾರಿಯಾದ ಇವರು ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಸಾಲ, ಠೇವಣಿ ಸಂಗ್ರಹ ಹರಿದುಬರುವಂತೆ ನೋಡಿಕೊಳ್ಳುತ್ತಾರೆ. ಫಿನ್ಟೆಕ್ ಕಂಪನಿಗಳ ಮೇಲೆ ನಿಯಂತ್ರಣ, ಇನ್ಷೂರೆನ್ಸ್ ಕವರೇಜ್ ಹೆಚ್ಚಿಸುವುದು, ಡಿಜಿಟಲ್ ಇಂಟರ್ಫೇಸ್ಗಳನ್ನು ಪ್ರಬಲಗೊಳಿಸುವುದು ಇವೇ ಮುಂತಾದ ಕಾರ್ಯಗಳಿಗೆ ಇವರು ಯೋಜಿಸಿದ್ದಾರೆ.
ಅರುಣೀಶ್ ಚಾವ್ಲಾ, ಡಿಐಪಿಎಎಂ ಕಾರ್ಯದರ್ಶಿ: ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯಾದ ಡಿಐಪಿಎಎಂ, ಹಾಗೂ ಸರ್ಕಾರಿ ಉದ್ದಿಮೆಗಳ ಇಲಾಖೆ (ಡಿಪಿಇ) ಮುಖ್ಯಸ್ಥರಾದ ಇವರು ಸರ್ಕಾರಿ ಸಂಸ್ಥೆಗಳಿಂದ ಬಂಡವಾಳ ಹಿಂತೆಗೆತ ಕ್ರಮಗಳನ್ನು ಚುರುಕುಗೊಳಿಸುವುದು, ಸರ್ಕಾರಿ ಆಸ್ತಿಗಳ ನಗದೀಕರಣಗೊಳಿಸುವುದು ಮುಂತಾದ ಕಾರ್ಯಗಳಿಗೆ ಯೋಜಿಸುತ್ತಿದ್ದಾರೆ. ಐಡಿಬಿಐ ಬ್ಯಾಂಕ್ ಅನ್ನು ಮಾರುವ ಪ್ಲಾನ್ ಕೂಡ ಇದೆ.