- Kannada News Photo gallery Yadgir Farmer Success in High Profit Custard Apple Farming, Karnataka news in kannada
ಸೀತಾಫಲ ಕೃಷಿಯಲ್ಲಿ ಭರ್ಜರಿ ಲಾಭ ಗಳಿಸಿದ ರೈತ: ಇಂಜಿನಿಯರ್ ಕೆಲಸ ಬಿಟ್ಟು ರೈತನಾದ ಯಶೋಗಾಥೆ
ಯಾದಗಿರಿಯ ಮಹಾಂತೇಶಯ್ಯ ಹಿರೇಮಠ ಎಂಬ ಯುವ ರೈತ, ಇಂಜಿನಿಯರಿಂಗ್ ಪದವೀಧರರಾಗಿದ್ದರೂ, ಸೀತಾಫಲ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಒಂದೂವರೆ ಎಕರೆ ಜಮೀನಿನಲ್ಲಿ 300 ಅರ್ಕಾಸನಾ ತಳಿಯ ಸೀತಾಫಲ ಗಿಡಗಳನ್ನು ಬೆಳೆದು, ವಾರ್ಷಿಕ 4 ಲಕ್ಷ ರೂಪಾಯಿಗಳಿಗೂ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಇದು ಇತರೆ ಯುವಕರಿಗೆ ಮಾದರಿಯಾಗಿದೆ.
Updated on:Oct 27, 2024 | 5:07 PM

‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎನ್ನುವ ಮಾತು ಈ ರೈತನನ್ನು ನೋಡಿಯೇ ಹೇಳಿದಂತಿದೆ. ಏಕೆಂದರೆ ಮತ್ತೊಬ್ಬರ ಬಳಿ ಆಳಾಗಿ ದುಡಿಯುವ ಬದಲು, ಸ್ವಂತ ಜಮೀನಿನಲ್ಲಿ ಕೃಷಿ ಮಾಡಿ ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಆ ಮೂಲಕ ಯಾದಗಿರಿ ಜಿಲ್ಲೆಯಲ್ಲಿ ಮೊದಲು ಎನ್ನುವ ಹಾಗೆ ಸೀತಾಫಲ ಹಣ್ಣಿನ ಕೃಷಿಗೆ ಕೈ ಹಾಕಿ ಯಶಸ್ವಿ ಆಗಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸೈದಾಪುರ ಗ್ರಾಮದ ಮಹಾಂತೇಶಯ್ಯ ಹಿರೇಮಠ ಎಂಬ ಯುವ ರೈತ ಸದ್ಯ ಇತರೆ ಯುವಕರಿಗೆ ಮಾದರಿಯಾಗಿದ್ದಾರೆ. ಈಗಿನ ಕಾಲದಲ್ಲಿ ಎಷ್ಟೇ ಓದಿದರು ಕೆಲಸ ಸಿಗುತ್ತಿಲ್ಲ ಎನ್ನುವ ಯುವಕರ ಮಧ್ಯೆ ಮಹಾಂತೇಶಯ್ಯ ಹಿರೇಮಠ ಸೀತಾಫಲ ಹಣ್ಣಿನ ಕೃಷಿ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ.

ಮಹಾಂತೇಶಯ್ಯ ಓದಿದ್ದು ಇಂಜಿನೀಯರಿಂಗ್. ಆದರೆ ಸದ್ಯ ಕೃಷಿಯಲ್ಲಿ ಜೀವನ ಕಂಡುಕೊಂಡಿದ್ದಾರೆ. ಇಂಜಿನೀಯರಿಂಗ್ ಮುಗಿಸಿದ್ದ ಮಹಾಂತೇಶಯ್ಯ ಖಾಸಗಿ ಕಂಪನಿಯಲ್ಲಿ ನಾಲ್ಕೈದು ವರ್ಷ ಕೆಲಸ ಮಾಡಿದ್ದಾರೆ. ಆದರೆ ಕೆಲಸ ಯಾಕೋ ಬೇಡ ಅಂತ ನಿರ್ಧರಿಸಿದಾಗ ಮೊದಲು ಒಲವು ಬಂದಿದ್ದೆ ಕೃಷಿ ಕಡೆ. ಹೀಗಾಗಿ ಬೇರೆಯವರ ಕೈಕೆಳಗೆ ಯಾಕೆ ಕೆಲಸ ಮಾಡಬೇಕು ಅಂತ ತಮ್ಮ ಸ್ವಂತ ಜಮೀನಿನಲ್ಲಿ ಆಧುನಿಕ ಕೃಷಿ ಕಾರ್ಯ ಆರಂಭಿಸಿದ್ದಾರೆ.

ತಮ್ಮ ಒಂದುವರೆ ಎಕರೆ ಜಮೀನಿನಲ್ಲಿ ಜಿಲ್ಲೆಯಲ್ಲಿ ಯಾರು ಬೆಳೆಯದಂತ ಸೀತಾಫಲ ಹಣ್ಣು ಬೆಳೆಯುತ್ತಿದ್ದಾರೆ. ಒಂದುವರೆ ಎಕರೆ ಜಮೀನಿನಲ್ಲಿ ಸುಮಾರು 300 ಸೀತಾಫಲ ಹಣ್ಣಿನ ಗಿಡಗಳನ್ನ ಹಚ್ಚಿದ್ದಾರೆ. ಸಾಮಾನ್ಯ ಗುಡ್ಡಗಾಡು ಪ್ರದೇಶದಲ್ಲಿ ಸಿಕ್ಕ ಸಿಕ್ಕ ಕಡೆ ಬೆಳೆಯುವ ಸೀತಾಫಲ ಹಣ್ಣು ಸಿಗುತ್ತದೆ. ಆದರೆ ಇವರು ಬೆಳೆಯುವ ಈ ಸೀತಾಫಲ ಹಣ್ಣುಗಳು ಸ್ವಲ್ಪ ಬೇರೆ ಆಗಿವೆ.

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿ ಸಂಶೋಧನಾ ಕೇಂದ್ರದಿಂದ ಐದು ವರ್ಷಗಳ ಹಿಂದೆ 110 ರೂ. ಒಂದರಂತೆ ಸುಮಾರು 300 ಅರ್ಕಾಸನಾ ತಳಿ ಗಿಡಗಳನ್ನ ತಂದು ಹಚ್ಚಿದ್ದಾರೆ. ಈಗ ಗಿಡಗಳು ಐದು ವರ್ಷದಾಗಿದ್ದರಿಂದ ಕಳೆದ ಎರಡು ವರ್ಷಗಳಿಂದ ಫಲ ಕೊಡಲು ಆರಂಭಿಸಿವೆ. ಪ್ರತಿ ಗಿಡದಿಂದ ಸುಮಾರು 35 ಕೆಜಿಯಷ್ಟು ಹಣ್ಣು ಬರುತ್ತಿವೆ. ಇಲ್ಲಿವರೆಗೆ ಕೇವಲ 35 ಸಾವಿರ ಹಣ ಖರ್ಚು ಮಾಡಿರುವ ಮಹಾಂತೇಶ್ ಇದರಿಂದ ಈ ಬಾರಿ ಬರೋಬ್ಬರಿ 4 ಲಕ್ಷ ರೂ. ಲಾಭ ಗಳಿಸಿದ್ದಾರೆ. ಈ ವರ್ಷ ಕಟಾವ್ ಮಾಡುವುದು ಬಾಕಿ ಇರುವ ಕಾರಣ ಈ ವರ್ಷವೂ 2.5 ಲಕ್ಷ ರೂ. ಲಾಭ ಬರುವ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಸೀತಾಫಲ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಮಹಾಂತೇಶ್ ಅವರು ಜಮೀನಿನಲ್ಲಿ ಬೆಳೆದ ಅರ್ಕಾಸನ ತಳಿಯ ಹಣ್ಣುಗಳಿಗೆ ರಾಜ್ಯದ ಮಹಾನಗರಗಳಲ್ಲಿ ಬಾರಿ ಬೇಡಿಕೆ ಜೊತೆಗೆ ವಿದೇಶದಲ್ಲೂ ಹೆಚ್ಚು ಬೇಡಿಕೆ ಕೂಡ ಇದೆಯಂತೆ. ಸುಮಾರು 300 ಗಿಡ ಹಚ್ಚಿರುವ ಮಹಾಂತೇಶ್ ಕಳೆದ ಮೂರು ವರ್ಷಗಳಿಂದ ಫಲ ಕೊಡ್ತಾಯಿದ್ದ ಕಾರಣಕ್ಕೆ ವರ್ಷಕ್ಕೆ 2 ಲಕ್ಷ ರೂ. ಲಾಭ ಪಡೆಯುತ್ತಿದ್ದಾರೆ.

ಸದ್ಯ ಮಹಾಂತೇಶ್ ಬೆಳೆದ ಸೀತಾಫಲ ಹಣ್ಣಿಗೆ ಮಾರುಕಟ್ಟೆಯಲ್ಲಿ ಕೆಜಿ ಗೆ 160 ರಿಂದ 180 ರೂ. ಬೆಲೆಯಿದೆ. ಹೀಗಾಗಿ ಈ ಬಾರಿ ಹೆಚ್ಚು ಲಾಭ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಡಿಗ್ರಿ ಮುಗಿಸಿದ ಯುವಕರು ಕೆಲಸ ಸಿಗ್ತಾಯಿಲ್ಲ ಅಂತ ಸುಮ್ಮನೆ ಓಡಾಡುತ್ತಾರೆ. ಆದರೆ ಮಾದರಿ ಯುವ ರೈತನನ್ನ ನೋಡಿ ಯುವಕರು ಕೃಷಿ ಕಾಯಕದಲ್ಲಿ ತೊಡಗಿಸಿ ಜೀವನ ಕಟ್ಟಿಕೊಳ್ಳಬೇಕು ಎಂದು ರೈತ ಮುಖಂಡ ಲಕ್ಷ್ಮಿಕಾಂತ ಹೇಳಿದ್ದಾರೆ.
Published On - 5:07 pm, Sun, 27 October 24



