ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿಗೆ ಕಿಂಚಿತ್ತೂ ಯೋಚನೆಯಿಲ್ಲ: ಸಿದ್ದರಾಮಯ್ಯ

ರಾಜ್ಯ ಎದುರಿಸುತ್ತಿರುವ ನೆರೆ ಹಾವಳಿಗೆ ತೊಂದರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಸಡ್ಡೆ ಮತ್ತು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮೋದಿ ಕರ್ನಾಟಕದ ನೆರವಿಗೆ ಯಾವತ್ತೂ ಬರಲಾರರು ಎಂದು ಹೇಳಿದರು.

ತಮ್ಮ ಬಾದಾಮಿ ಕ್ಷೇತ್ರದ ಗೋವನಕೊಪ್ಪ ಹೆಸರಿನ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ‘‘ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿ, ರೈತರು ಎದುರಿಸುತ್ತಿರುವ ಬೆಳೆಹಾನಿ, ಸಂತ್ರಸ್ತರ ಪುನರ್ವಸತಿ ಸಮಸ್ಯೆಗಳನ್ನು ಕಣ್ಣಾರೆ ನೋಡಲು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಾರರು. ಅಸಲಿಗೆ ಅವರು ಎಲ್ಲಿಗೂ ಹೋಗುವುದಿಲ್ಲ, ಆರಾಮವಾಗಿ ಮನೆಯಲ್ಲಿಯೇ ಕೂತಿರುತ್ತಾರೆ ಇಲ್ಲದಿದ್ದರೆ ಫಾರಿನ್ ಟೂರ್ ಮಾಡುತ್ತಿರುತ್ತಾರೆ,’’ ಅಂತ ಗೇಲಿ ಮಾಡಿದರು.

ರಾಜ್ಯದಲ್ಲಿ ಎದ್ದಿರುವ ಡ್ರಗ್ಸ್ ವಿವಾದದ ಬಗ್ಗೆ ಮಾತಾಡಿದ ಸಿದ್ದರಾಮಯ್ಯನದರು, ಡ್ರಗ್ಸ್ ಸೇವನೆ ಮಾಡುವುದು, ಮಾರುವುದು ಅಪರಾಧ, ಇದಕ್ಕೆ 10ರಿಂದ 20 ವರ್ಷಗಳ ಜೈಲು ಶಿಕ್ಷೆ ಇದೆ. ಡ್ರಗ್ಸ್ ಸಮಸ್ಯೆ ಕೇವಲ ರಾಜ್ಯದಲ್ಲಿ ಮಾತ್ರ ಇಲ್ಲ, ವಿಶ್ವದೆಲ್ಲೆಡೆ ವ್ಯಾಪಿಸಿದೆ. ಇದನ್ನು ಮಟ್ಟ ಹಾಕುವುದು ಜಾಗತಿಕ ಮಟ್ಟದಲ್ಲೂ ಸಾಧ್ಯವಾಗುತ್ತಿಲ್ಲ. ನಮ್ಮ ರಾಜ್ಯದ ಸ್ಥಿತಿಯನ್ನೇ ಗಮನಿಸಿ, ಇದುವರೆಗೆ ಎಷ್ಟು ಜನರಿಗೆ ನಮ್ಮಲ್ಲಿ ಶಿಕ್ಷೆಯಾಗಿದೆ? ಎಂದು ಪ್ರಶ್ನಿಸಿದರು.

ಮುಂದುವರಿದು ಹೇಳಿದ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರ ಡ್ರಗ್ಸ್ ವಿಚಾರ ಹೈಲೈಟ್ ಮಾಡಿ ಪ್ರವಾಹ, ಕೊರೊನಾದಂಥ ಸಮಸ್ಯೆಗಳಿಂದ ಜನರ ಗಮನವನ್ನು ಡೈವರ್ಟ್ ಮಾಡುತ್ತಿದೆ ಎಂದು ಆರೋಪಿಸಿದರು.

ಹಿಂದಿ ಭಾಷೆ ಹೇರಿಕೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದ ಸಿದ್ದರಾಮಯ್ಯ, ‘‘ಕನ್ನಡ ನಮ್ಮ ಮಾತೃಭಾಷೆ, ನಮ್ಮ ರಾಜ್ಯದ ಅಧಿಕೃತ ಭಾಷೆ. 5ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಸುಪ್ರೀಂಕೋರ್ಟ್ ಹೇಳಿದೆ. ಹಿಂದಿ ಕಲಿಯಬೇಕೆನ್ನುವವರು ಕಲಿಯಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಆ ಭಾಷೆಯನ್ನು ನಮ್ಮ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿದರೆ, ನಾವು ಸುಮ್ಮನಿರಲ್ಲ,’’ ಎಂದರು

ರಾಜ್ಯ ಸರ್ಕಾರ ದಿವಾಳಿಯೆದ್ದಿದೆ ಅಂತಲೂ ಹೇಳಿದ ಸಿದ್ದರಾಮಯ್ಯನವರು, ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ, ಅಭಿವೃದ್ಧಿ ಕೆಲಸ ಮಾಡುವುದಕ್ಕೂ ಬೊಕ್ಕಸದಲ್ಲಿ ದುಡ್ಡಿಲ್ಲ, ಕೇಂದ್ರ ಸರ್ಕಾರ ನೀಡಬೇಕಿದ್ದ ಜಿಎಸ್‌ಟಿ ಹಣ ನೀಡಿಲ್ಲ, ಸಾಲ ಮಾಡಿ ಅಂತ ಅದು ರಾಜ್ಯಗಳಿಗೆ ಹೇಳುತ್ತಿದೆ ಎಂದರು.

Related Tags:

Related Posts :

Category: