BMTC, KSRTC ಬಸ್ ನಿಲ್ದಾಣದಲ್ಲಿ ಕೈಚಳಕ ತೋರಿಸುತ್ತಿದ್ದ ಕಳ್ಳರ ಗ್ಯಾಂಗ್‌ ಅಂದರ್

  • pruthvi Shankar
  • Published On - 11:37 AM, 22 Nov 2020

ಬೆಂಗಳೂರು: BMTC ಹಾಗೂ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ವಂಚಿಸಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಅಫ್ರೋಜ್, ಲೋಹಿತ್, ರವಿ ಹಾಗೂ ಅಕ್ಷಯ್ ಬಂಧಿತ ಆರೋಪಿಗಳಾಗಿದ್ದು, ಮೆಜೆಸ್ಟಿಕ್​ನ BMTC ಹಾಗೂ KSRTC ನಿಲ್ದಾಣದಲ್ಲಿ ಸಾಕಷ್ಟು ಕಳ್ಳತನ ಮಾಡಿದ್ದರು. ಕಳೆದ ಒಂದು ವರ್ಷದಿಂದ ಕಳ್ಳತನ ಮಾಡ್ತಿದ್ದ ಇವರು ಪ್ರಯಾಣಿಕರ ಬ್ಯಾಗ್ ಹಾಗೂ ಪರ್ಸ್​ಗಳನ್ನೆ ಮೈನ್ ಟಾರ್ಗೆಟ್ ಮಾಡುತ್ತಿದ್ದರು.

ಉಪ್ಪಾರಪೇಟೆ, ಕಾಟನ್ ಪೇಟೆ, ವಿಜಯನಗರ, ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಕಳೆದ ವಾರ ಹಾಸನದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಬ್ಯಾಗ್ ಕಳ್ಳತನ ಮಾಡಿದ್ದರು. ಬ್ಯಾಗ್​ನಲ್ಲಿದ್ದ 50 ಗ್ರಾಂ ಚಿನ್ನ ಹಾಗೂ 50 ಸಾವಿರ ನಗದು ಕಳ್ಳತನವಾಗಿದೆ ಎಂದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿ ಬಂಧಿತರಿಂದ 16 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.