ಅನ್ನಕ್ಕೆ ಕನ್ನ: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದವರು ಅಂದರ್‌

ಹಾವೇರಿ: ಈಗ ಎಲ್ಲಿ ನೋಡಿದ್ರು ಕೊರೊನಾ ಆರ್ಭಟ. ಕೊರೊನಾ ಹೊಡೆತಕ್ಕೆ ಬಡವರಂತೂ ಅಕ್ಷರಶಃ ನಲುಗಿ ಹೋಗಿದ್ದಾರೆ. ಆದ್ರೆ ಇಂಥ ಬಡವರಿಗಾಗಿ ಕೊಟ್ಟಿದ್ದ ಅನ್ನಭಾಗ್ಯದ ಅಕ್ಕಿಯನ್ನ ಕೆಲ ಖದೀಮರು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಹಾಕ್ಕೊಂಡು ಜೈಲು ಪಾಲಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ.

ಹೌದು ಬಡವರಿಗಾಗಿಯೇ ಸರ್ಕಾರ ಉಚಿತವಾಗಿ ಅನ್ನಭಾಗ್ಯ ಅಕ್ಕಿ ವಿತರಣೆ ಮಾಡುತ್ತಿದೆ. ಆದರೆ ಬಡವರ ಹೊಟ್ಟೆ ತುಂಬಿಸಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಕೆಲ ರಾಕ್ಷಸರು ಬಡವರಿಗೆ ವಿತರಣೆ ಮಾಡದೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ಅನ್ನಭಾಗ್ಯದ ಅಕ್ಕಿ ಸಾಗಿಸುತ್ತಿದ್ದ ಟ್ರಕ್‌ ಮೇಲೆ ದಾಳಿ
ಹೀಗೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಕೆಲವರು ಅಕ್ರಮವಾಗಿ ಅನ್ನಭಾಗ್ಯ ಯೋಜನೆ ಅಕ್ಕಿ ಸಾಗಿಸುತ್ತಿದ್ದಾಗ, ಸಿಪಿಐ ಮಂಜುನಾಥ ಪಂಡಿತ್‌ ನೇತೃತ್ವದಲ್ಲಿ ಪೊಲೀಸರು ರೈಡ್‌ ಮಾಡಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಹಾಗೇನೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ದಾವಣಗೆರೆ ಜಿಲ್ಲೆಯ ಹಿರೇಕಲ್ಮಠದ ರುದ್ರೇಶ, ಗೊಲ್ಲರಹಳ್ಳಿಯ ನಾಗರಾಜ ಎಂಬುವರನ್ನು ಬಂಧಿಸಿದ್ದಾರೆ.

50 ಕೆಜಿಯ 70 ಅಕ್ಕಿ ಮೂಟೆಗಳು ವಶಕ್ಕೆ
ಇದಾದ ನಂತರ ಬಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಈ ಸಂಬಂಧ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಿದ್ದಾರೆ. ಜೊತೆಗೆ ಅಕ್ಕಿ ಸಾಗಿಸುತ್ತಿದ್ದ ಗೂಡ್ಸ್ ವಾಹನ, ಐವತ್ತು ಕೆ.ಜಿ ತೂಕದ 70 ಪ್ಯಾಕೆಟ್ ಅಕ್ಕಿ ಮೂಟೆಗಳನ್ನು ಜಪ್ತಿ ಮಾಡಿದ್ದಾರೆ.
-ಪ್ರಭುಗೌಡ ಪಾಟೀಲ

Related Tags:

Related Posts :

Category:

error: Content is protected !!