ಈ ವಾರ ನಡೆಯುವ ವಿಧಾನ ಪರಿಷತ್ತಿನ ಉಪಸಭಾಪತಿ ಚುನಾವಣೆ ರಾಜ್ಯ ರಾಜಕೀಯದಲ್ಲಿ ನಡೆಯಬಹುದಾದ ಧ್ರುವೀಕರಣಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಜನತಾ ದಳದ ಎಸ್ನ ಸದಸ್ಯ ಮತ್ತು ಉಪಸಭಾಪತಿಯಾಗಿದ್ದ ಧರ್ಮೇಗೌಡರ ನಿಧನದಿಂದ ಖಾಲಿಯಾಗಿರುವ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೇ ದಿನ. ಎಪ್ಪತ್ತೈದು ಸದಸ್ಯರ ಮೇಲ್ಮನೆಯಲ್ಲಿ ಆಡಳಿತಾರೂಢ ಬಿಜೆಪಿ 31, ಕಾಂಗ್ರೆಸ್ 29 ಮತ್ತು ಜೆಡಿಎಸ್ 13 ಸ್ಥಾನ ಹೊಂದಿವೆ. ಓರ್ವ ಸ್ವತಂತ್ರ ಸದಸ್ಯರಿದ್ದರೆ ಇನ್ನೊಂದು ಸ್ಥಾನ ಖಾಲಿ ಇದೆ. ಯಾವ ಪಕ್ಷಕ್ಕೂ ಬಹುಮತವಿಲ್ಲದ ಕಾರಣ, ಒಂದೊಮ್ಮೆ ಚುನಾವಣೆ ನಡೆದರೆ, ಯಾವುದಾದರೂ ಎರಡು ಪಕ್ಷಗಳು ಕೈ ಜೋಡಿಸಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಳಿನ ಬೆಳವಣಿಗೆ ಮಹತ್ವ ಪಡೆಯುತ್ತದೆ. ಅಷ್ಟೇ ಅಲ್ಲ ಮುಂದಿನ ಚುನಾವಣೆವರೆಗೆ ಯಾರು ದೋಸ್ತಿಯಲ್ಲಿರುತ್ತಾರೆ ಎಂಬ ಅಂಶ ಕೂಡ ಹೊರಬೀಳಲಿದೆ.
ಧ್ರುವೀಕರಣದ ಮನ್ಸೂಚನೆ ಹೇಗೆ?
ಉಪಸಭಾಪತಿ ಚುನಾವಣೆಗೂ ರಾಜ್ಯ ರಾಜಕೀಯದ ಧ್ರುವೀಕರಣಕ್ಕೂ ಎಂಥ ಸಂಬಂಧ? ಹೌದು.. ಮೊದಲು ನಡೆಯುವ ಉಪಸಭಾಪತಿ ಚುನಾವಣೆ ಅಲ್ಲಿಗೇ ಮುಗಿಯದು. ಮೂರನೇ ಸ್ಥಾನದಲ್ಲಿರುವ ಜೆಡಿಎಸ್ ಕಾಂಗ್ರೆಸ್ ಕಡೆ ಮುಖ ಮಾಡುತ್ತಿಲ್ಲ ಮತ್ತು ಯಾವುದೇ ದೋಸ್ತಿಗೆ ತಯಾರಿಲ್ಲ. ಅದಕ್ಕೊಂದು ಕಾರಣವಿದೆ. ಆಡಳಿತದಲ್ಲಿಲ್ಲದ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಏನು ಪ್ರಯೋಜನ? ತಮ್ಮ ಊರಿನ ಅಭಿವೃದ್ಧಿಗೆ ಹಣ ಬೇಕು ಎಂದರೆ ಆಡಳಿತಾರೂಢ ಪಕ್ಷದ ಜೊತೆ ಕೈ ಜೋಡಿಸುವುದೇ ಒಳ್ಳೇದು ಎಂಬ ಜೆಡಿಎಸ್ ನಾಯಕರ ವಾದ. ಜೆಡಿಎಸ್ ಸುತಾರಾಂ ಕಾಂಗ್ರೆಸ್ ಕಡೆ ಹೋಗುವ ಲಕ್ಷಣವಿಲ್ಲ. ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ಕೈ ಜೋಡಿಸಬೇಕು ಅಂದರೆ ಅವರೀರ್ವರ ನಡುವೆ ಒಂದು ಹೊಂದಾಣಿಕೆ ಆಗಬೇಕು: ಯಾರು ಉಪಸಭಾಪತಿ ಸ್ಥಾನ ತೆಗೆದುಕೊಳ್ಳಬೇಕು ಮತ್ತು ಯಾರಿಗೆ ಸಭಾಪತಿ ಸ್ಥಾನವಿರಬೇಕು ಎಂಬ ನಿರ್ಣಯವಾಗಬೇಕು. ಇಂದು ರಾತ್ರಿ ಬಿಜೆಪಿ ಮೇಲ್ಮನೆ ಶಾಸಕರ ಸಭೆ ನಡೆಸುತ್ತಿದೆ. ಅದರಲ್ಲಿ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೋ ಅದರ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಸಂಬಂಧ ನಿಂತಿದೆ.
ಬಿಜೆಪಿ ಉಪಸಭಾಪತಿ ಸ್ಥಾನ ತೆಗೆದುಕೊಳ್ಳಲು ಮುಂದಾದರೆ ಆಗ ಜೆಡಿಎಸ್ ಸಭಾಪತಿ ಸ್ಥಾನ ತೆಗೆದುಕೊಳ್ಳುವುದು ಗ್ಯಾರೆಂಟಿ. ಎಲ್ಲವೂ ಅವರು ಅಂದುಕೊಂಡಂತೆ ಆದರೆ, ಬಸವರಾಜ ಹೊರಟ್ಟಿ ಅವರು ಸಭಾಪತಿ ಆಗುವುದು ಖಂಡಿತ. ಹೊರಟ್ಟಿ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿಂದೆ ಇರುವ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ತಂದೆ ಎಚ್.ಡಿ. ದೇವೇಗೌಡ, ಯಡಿಯೂರಪ್ಪ ಜೊತೆ ಇನ್ನೂ ಈ ವಿಚಾರದಲ್ಲಿ ಮಾತುಕತೆ ನಡೆಸಿಲ್ಲ. ಇದು ಕುತೂಹಲಕಾರಿ ಅಂಶ.
ಬಿಜೆಪಿ ಮತ್ತು ಜೆಡಿಎಸ್ ಇಬ್ಬರಿಗೂ ಸಭಾಪತಿ ಹುದ್ದೆ ಮೇಲೆ ಕಣ್ಣು. ಬಿಜೆಪಿಯ ಹಲವಾರು ನಾಯಕರ ವಾದ ಏನೆಂದರೆ, ಉಪಸಭಾಪತಿ ಸ್ಥಾನ ಜೆಡಿಎಸ್ ಕೈನಲ್ಲಿ ಇತ್ತು. ಹಾಗಾಗಿ ಆ ಸ್ಥಾನವನ್ನು ಅವರೇ ತೆಗೆದುಕೊಳ್ಳಲಿ ಮತ್ತು ಸಭಾಪತಿ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಲಿ. ಆದರೆ ಜೆಡಿಎಸ್ಗೆ ಅದು ಇಷ್ಟವಿಲ್ಲ. ಅವರ ಕಣ್ಣು ಸಭಾಪತಿ ಸ್ಥಾನದ ಮೇಲಿದೆ. ಯಾವ ಕಾರಣಕ್ಕೂ ಕಾಂಗ್ರೆಸ್ ಜೊತೆ ಹೋಗಲು ಇಷ್ಟವಿಲ್ಲದ ಜೆಡಿಎಸ್ ಹೇಗೆ ದೊಡ್ಡ ಪಕ್ಷ ಬಿಜೆಪಿಯನ್ನು ಒಲಿಸಿ ಆ ಸ್ಥಾನವನ್ನು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲಕಾರಿ ಅಂಶ. ಸದ್ಯಕ್ಕೆ ಜೆಡಿಎಸ್ ಬಳಿ ಇರುವ ಅಸ್ತ್ರವೆಂದರೆ ತಮ್ಮ ಪಕ್ಷದ ಜೊತೆ ಬಂದರೆ, ಬಿಜೆಪಿಗೆ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕರಿಸಲು ಬಿಜೆಪಿಗೆ ಸಹಾಯ ಮಾಡುತ್ತೇವೆ ಎಂಬುದೊಂದಿದೆ. ಅದೊಂದು ಬಿಟ್ಟರೆ ಜೆಡಿಎಸ್ ಬಳಿ ಬೇರೆ ಅಸ್ತ್ರವಿಲ್ಲ. ಆದರೆ, ಗೋ ಹತ್ಯೆ ನಿಷೇಧ ಮಸೂದೆಯನ್ನು ಬಿಜೆಪಿ ಪ್ರತಿಷ್ಠೆಯ ಕಣವನ್ನಾಗಿ ಮಾಡಿಕೊಂಡಿದೆ. ಆ ಮಸೂದೆಗೆ ಜೆಡಿಎಸ್ ಬೆಂಬಲ ಸಿಗಬೇಕು ಅಥವಾ ಜೆಡಿಎಸ್ ಅದನ್ನು ಬಹಿಷ್ಕರಿಸಿ ಸದನದ ಹೊರಗೆ ಹೋಗಬೇಕು, ಆಗ ಆ ಮಸೂದೆ ಪಾಸು ಮಾಡಲು ಸಾಧ್ಯ. ಆ ಮಸೂದೆ ಪಾಸು ಮಾಡಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ರಾಜಿ ಮಾಡಿಕೊಳ್ಳಲು ತಯಾರಾಗಿರುವ ಹಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ಆಶ್ಚರ್ಯವಿಲ್ಲ. ಹಾಗೂ ಮುಂದಿನ ಚುನಾವಣೆ ತನಕ ಇವರಿಬ್ಬರ ರಾಜಕೀಯ ಜುಗಲ್ಬಂದಿ ಆದರೂ ಆಶ್ಚರ್ಯವಿಲ್ಲ.
ನಿಮಗೆ ಯಾರು ವಾರಂಟ್ ನೀಡ್ತಾರೆ: ಸಿಎಂ ಬಿಎಸ್ವೈ, ಸಚಿವ ನಿರಾಣಿ ಬಂಧಿಸದಂತೆ ಸುಪ್ರೀಂಕೋರ್ಟ್ ಸೂಚನೆ