ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ ಕುಗ್ಗಿಸಲು ಬಿಹಾರ ವಿಧಾನಸಭಾ (Bihar Assembly Election 2020) ಚುನಾವಣೆಯಲ್ಲಿ ಆರ್ಜೆಡಿ, ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಫಂಡಿಂಗ್ ಮಾಡಿದ್ದಾರೆ’ ಎಂದು ವಿಧಾನಸೌಧದಲ್ಲಿ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ ವಿಜಯೇಂದ್ರ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಕೋಟ್ಯಂತರ ಹಣ ವಿನಿಯೋಗಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ನಾನು ಮಾಡಿದ ಆರೋಪಗಳು ತನಿಖೆ ಆಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿ.ವೈ ವಿಜಯೇಂದ್ರ ತಮ್ಮ ಆಪ್ತರ ಮೂಲಕ ಬಿಹಾರ ವಿಧಾನಸಭಾ ಚುನಾವಣೆಗೆ ಹಣ ಕಳುಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ ಕುಗ್ಗಿಸಲು ಅವರು ಹಣ ಕಳುಹಿಸಿದ್ದು, ಆರ್ಜೆಡಿ, ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಎಷ್ಟು ಹಣ ಕಳಿಸಿದ್ದಾರೆ ಎಂದು ತನಿಖೆ ನಡೆಸುವಂತೆ ಕೋರಿ ಭ್ರಷ್ಟಾಚಾರ, ಹಸ್ತಕ್ಷೇಪ ಮತ್ತು ವರ್ಗಾವಣೆ ದಂಧೆ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾಗಿ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬ ಬಿಜೆಪಿ ಶಾಸಕರನ್ನ ಗೌರವಿಸುತ್ತಿಲ್ಲ. ಬಿಜೆಪಿ ಆಶಯಗಳಿಗೆ ತಕ್ಕಂತೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿಲ್ಲ. ಪತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಬಗ್ಗೆಯೂ ಉಲ್ಲೇಖಿಸಿದ್ದು, ಬಿಎಸ್ವೈ ಕುಟುಂಬದ ಬಗ್ಗೆ ತನಿಖೆ ಆಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯಿಂದ ಷೋಕಾಸ್ ನೋಟಿಸ್ ಬಂದಿದ್ದು, ಷೋಕಾಸ್ ನೋಟಿಸ್ಗೆ 45 ಅಂಶಗಳನ್ನು ಉಲ್ಲೇಖಿಸಿ ಉತ್ತರ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಉತ್ತರಿಸಿ ಬರೆದ 11 ಪುಟಗಳ ಪತ್ರದಲ್ಲಿ ಪಕ್ಷದ ವಿರೋಧಿ ಚಟುವಟಿಕೆ ಮಾಡದ ಕಾರಣ ಎಲ್ಲೂ ವಿಷಾದ ಅಥವಾ ಕ್ಷಮೆ ಕೇಳಿಲ್ಲ. ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ಬಗ್ಗೆ ಕೆಲವು ಆರೋಪ ಮಾಡಿದ್ದೇನೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಬಿ.ವೈ ವಿಜಯೇಂದ್ರ ಅವರ ಮಾರಿಷಸ್ ಪ್ರವಾಸವನ್ನೂ ಸಹ ಪತ್ರದಲ್ಲಿ ಉಲ್ಲೇಖಿಸಿದ್ದು, ಅವರು ಮಾರಿಷಸ್ಗೆ ಹೋದ ಕಾರಣ ಮತ್ತು ವಿಮಾನದ ಸಂಖ್ಯೆಯನ್ನು ಸಹ ಬರೆದಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ, ಎಷ್ಟು ಜನ ಮಾರಿಷಸ್ಗೆ ಹೋಗಿದ್ದರು, ಮಾಜಿ ಗೃಹ ಸಚಿವರೊಬ್ಬರ ಪಿಎ ಮೂಲಕ ಮಾರಿಷಸ್ಗೆ ಏನೇನು ತೆಗೆದುಕೊಂಡು ಹೋಗಿದ್ದರು ಎಂಬುದನ್ನು ಸಹ ಬರೆದಿದ್ದಾಗಿ ಅವರು ಹೇಳಿದ್ದಾರೆ.
ಸಿಎಂ BSYಗೆ ಆಯಾಸ, ದಣಿವು ಆಗಿದೆ.. ಅವರು ರಾಜಕೀಯ ನಿವೃತ್ತಿ ಪಡೆಯೋದು ಒಳ್ಳೇದು -ಯತ್ನಾಳ್ ಟಾಂಗ್