ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆ ಹಿನ್ನೆಲೆ; ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ

ರಾಜ್ಯ ಭಾರತೀಯ ಜನತಾ ಪಾರ್ಟಿಯಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮುಂದಿನ ವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆ ಹಿನ್ನೆಲೆ; ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ
ಅರುಣ್​ ಸಿಂಗ್​

ಬೆಂಗಳೂರು: ರಾಜ್ಯ ಭಾರತೀಯ ಜನತಾ ಪಾರ್ಟಿಯಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮುಂದಿನ ವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆದಿದ್ದವು. ಸಿ.ಪಿ. ಯೋಗೇಶ್ವರ್ ಮುಂತಾದ ಸಚಿವರು ದೆಹಲಿಗೂ ಭೇಟಿ ಕೊಟ್ಟು ಬಂದಿದ್ದರು. ವಿಜಯೇಂದ್ರ ಕೂಡ ದೆಹಲಿಗೆ ಹೋಗಿ ಬಂದಿದ್ದರು. ಸಿ.ಟಿ. ರವಿ, ರೇಣುಕಾಚಾರ್ಯ, ಎಚ್. ವಿಶ್ವನಾಥ್, ಆರ್. ಅಶೋಕ್ ಸಹಿತ ಹಲವು ಮುಖಂಡರು ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದರು.

ಈ ಎಲ್ಲಾ ಅನುಮಾನಗಳ ಬೆನ್ನಲ್ಲೇ ಅರುಣ್ ಸಿಂಗ್ ರಾಜ್ಯ ಪ್ರವಾಸ ನಿಗಧಿಯಾಗಿದೆ. ಅವರು ಮುಂದಿನ ವಾರ ರಾಜ್ಯಕ್ಕೆ ಬರಲಿದ್ದಾರೆ. 3 ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಬಿ.ವೈ. ವಿಜಯೇಂದ್ರ ಸಿದ್ಧಗಂಗಾ ಮಠಕ್ಕೆ ಗೌಪ್ಯ ಭೇಟಿ ನೀಡಿದ್ದಾರೆ
ಈ ಮಧ್ಯೆ, ಇಂದು (ಜೂನ್ 9) ಸಿದ್ಧಗಂಗಾ ಶ್ರೀಗಳ ಜೊತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಗೌಪ್ಯ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸ್ವಾಮೀಜಿ ಜೊತೆ ವಿಜಯೇಂದ್ರ ಗೌಪ್ಯ ಚರ್ಚೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ವಿಜಯೇಂದ್ರ ಮಾತುಕತೆ ನಡೆಸಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನದ ಬಳಿಕ ಚರ್ಚೆ ನಡೆಸಿದ್ದಾರೆ. ಬಿಜೆಪಿ ನಾಯಕರು, ಶಾಸಕರಿಗೂ ಮಾಹಿತಿ ನೀಡದೆ ಭೇಟಿ ನೀಡಿದ್ದಾರೆ. ಚಿತ್ರದುರ್ಗದ ವಿವಿಧ ಮಠಗಳಿಗೆ ಭೇಟಿ ನೀಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ವಿಜಯೇಂದ್ರ, ಸ್ಥಳಿಯ ನಾಯಕರಿಗೂ ಹಾಗೂ ಮಾಧ್ಯಮದವರಿಗೂ ಮಾಹಿತಿ ನೀಡದೇ ಭೇಟಿ ನೀಡಿ ಗೌಪ್ಯ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಸರ್ಕಾರ ಪತನವಾಗಲಿದೆ
ಶಿವಮೊಗ್ಗದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​ ರಾಜ್ಯದಲ್ಲಿ ಇನ್ನಾರು ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾಗಲಿದೆ ಎಂಬ ಹೇಳಿಕೆ ನೀಡಿದ್ದಾರೆ. 2022ಕ್ಕೆ ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ರಾಜ್ಯ ಬಿಜೆಪಿ ಘಟಕದಲ್ಲಿ ಒಳಜಗಳ ಬಹಳ ಜಾಸ್ತಿಯಾಗಿದೆ. ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರಗೆ ಉಪಮುಖ್ಯಮಂತ್ರಿ ಆಗುವ ಆಸೆಯಿದೆ. ವಿಜಯೇಂದ್ರ ಡಿಸಿಎಂ ಆಗಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​ ಹೇಳಿದ್ದಾರೆ.

ಇದನ್ನೂ ಓದಿ: ನನ್ನನ್ನು ಬಿಜೆಪಿಗೆ ಕರೆದುಕೊಂಡು ಹೋದವರೇ ಸಿ.ಎಂ.ಉದಾಸಿ: ಬಸವರಾಜ ಬೊಮ್ಮಾಯಿ ನುಡಿನಮನ

ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ; 5 ದಿನಗಳ ಕಾಲ ‘100 ನಾಟೌಟ್’ ಕ್ಯಾಂಪೇನ್: ಡಿ ಕೆ ಶಿವಕುಮಾರ್ ಘೋಷಣೆ