Political Analysis: ನೂಪುರ್ ಶರ್ಮಾ ಅಮಾನತು: ಬಿಜೆಪಿಯಲ್ಲಿ ಪರ-ವಿರೋಧ ಹೊಯ್ದಾಟ, ಆರ್​ಎಸ್​ಎಸ್​ ಮೌನಕ್ಕೆ ಹಲವು ಅರ್ಥ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 08, 2022 | 3:09 PM

ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂಬ ಹೇಳಿಕೆಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ವಲಯದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

Political Analysis: ನೂಪುರ್ ಶರ್ಮಾ ಅಮಾನತು: ಬಿಜೆಪಿಯಲ್ಲಿ ಪರ-ವಿರೋಧ ಹೊಯ್ದಾಟ, ಆರ್​ಎಸ್​ಎಸ್​ ಮೌನಕ್ಕೆ ಹಲವು ಅರ್ಥ
ನೂಪುರ್ ಶರ್ಮ
Image Credit source: Newsroom Post
Follow us on

ಪ್ರವಾದಿ ಮೊಹಮದ್​ರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾರನ್ನು (Nupur Sharma) ಕಳೆದ ಭಾನುವಾರ (ಜೂನ್ 5) ಪಕ್ಷದಿಂದ ಅಮಾನತು ಮಾಡಿದೆ. ಪಾಶ್ಚಿಮಾತ್ಯ ದೇಶಗಳು ವಿರೋಧ ವ್ಯಕ್ತಪಡಿಸಿದ ಬಳಿಕ ನೂಪುರ್ ಶರ್ಮಾರನ್ನು ಪಕ್ಷದಿಂದ ಹೊರಹಾಕುವ ತೀರ್ಮಾನವನ್ನು ಬಿಜೆಪಿ ಕೈಗೊಂಡಿದೆ. ಈ ಮೂಲಕ ಒಂದಿಷ್ಟು ದೇಶಗಳ ಕೋಪವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಬಿಜೆಪಿ (BJP) ಮಾಡಿದೆ. ಆದರೆ ಈ ಬೆಳವಣಿಗೆಯು ಬಿಜೆಪಿಯೊಳಗಿನ ಆಂತರಿಕ ಚಿಂತನ-ಮಂಥನಕ್ಕೂ ಕಾರಣವಾಗಿದೆ. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂಬ ಹೇಳಿಕೆಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ವಲಯದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾರನ್ನು ಸಸ್ಪೆಂಡ್ ಮಾಡಿರುವುದು ಬಿಜೆಪಿ ಪಕ್ಷದೊಳಗೆ ಚಿಂತನ-ಮಂಥನಕ್ಕೆ ಕಾರಣವಾಗಿದೆ. ಮಾತೃಪಕ್ಷವೇ ಕಾರ್ಯಕರ್ತೆಯನ್ನು ಪಕ್ಷದಿಂದ ಹೊರ ಹಾಕಿದ್ದರ ಬಗ್ಗೆ ಬಿಜೆಪಿಯೊಳಗೆ ಚರ್ಚೆಗಳು ನಡೆಯುತ್ತಿವೆ. ಪ್ರವಾದಿ ಮೊಹಮ್ಮದ್ದರ ಬಗ್ಗೆ ನೂಪುರ್ ಶರ್ಮಾ ಮಾತನಾಡಿದ ಬಳಿಕ ಅರಬ್ ರಾಷ್ಟ್ರಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಭಾರತ ಹಾಗೂ ಗಲ್ಪ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಗಲ್ಪ್ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಎಂದೂ ಕೂಡ ಸಮನ್ಸ್ ನೀಡಿ ಕರೆಸಿಕೊಳ್ಳುವ ಧೈರ್ಯ ಮಾಡಿರಲಿಲ್ಲ. ಆದರೆ, ನೂಪುರ್ ಶರ್ಮಾ ಹೇಳಿಕೆಯಿಂದ ಕತಾರ್, ಕುವೈತ್​ನಂಥ ದೇಶಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ನೀಡಿ ಕರೆಸಿಕೊಂಡು, ನೂಪುರ್ ಶರ್ಮಾ ಹೇಳಿಕೆ ಖಂಡಿಸಿದ್ದವು. ಇದಾದ ಬಳಿಕ ಬಿಜೆಪಿ ಗಲ್ಪ್ ರಾಷ್ಟ್ರಗಳ ಸಮಾಧಾನಕ್ಕಾಗಿ ನೂಪುರ್ ಶರ್ಮಾರನ್ನು ಪಕ್ಷದಿಂದಲೇ ಸಸ್ಪೆಂಡ್ ಮಾಡುವ ತೀರ್ಮಾನ ಪ್ರಕಟಿಸಿದೆ.

ನೂಪುರ್ ಶರ್ಮಾರನ್ನ ಪಕ್ಷದಿಂದ ಸಸ್ಪೆಂಡ್ ಮಾಡಿದ್ದು, ಪಕ್ಷದೊಳಗೆ ಚರ್ಚೆ, ಚಿಂತನ-ಮಂಥನಕ್ಕೂ ಕಾರಣವಾಗಿದೆ. ಬಿಜೆಪಿ ಪಕ್ಷವು ತನ್ನ ಕಾರ್ಯಕರ್ತೆ, ವಕ್ತಾರೆಯ ಬೆಂಬಲಕ್ಕೆ ನಿಲ್ಲದೆ, ಹೊರ ಹಾಕಿದ್ದು ಸರಿಯಲ್ಲ ಎಂದು ಬಿಜೆಪಿ ಪಕ್ಷದೊಳಗೆ ಒಂದು ವರ್ಗ ಹೇಳುತ್ತಿದೆ. ಮತ್ತೊಂದೆಡೆ ಬಿಜೆಪಿ ಪಕ್ಷದ ಬದಲಾಗುತ್ತಿರುವ ಸಿದ್ದಾಂತ, ಹೋರಾಟ, ಬಹುಮಾನ, ಕಾರ್ಯಕರ್ತರಿಗೆ ನೀಡಿದ ಅವಕಾಶಗಳ ಬಗ್ಗೆಯೂ ಅಂತರಿಕವಾಗಿ ಚರ್ಚೆಯಾಗುತ್ತಿವೆ.

ಸೋಷಿಯಲ್ ಮೀಡಿಯಾಗಳಲ್ಲೂ ಶೇಮ್ ಆನ್ ಬಿಜೆಪಿ ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಟ್ವೀಟ್​ಗಳನ್ನು ಮಾಡಲಾಗಿದೆ. ಬಿಜೆಪಿ ಪಕ್ಷವು ತನ್ನ ವಕ್ತಾರೆಯನ್ನು ಕಿಡಿಗೇಡಿ ಎಂದು ಕರೆದಿರುವುದು ಚರ್ಚೆಗೆ ಕಾರಣವಾಗಿದೆ. ನೂಪುರ್ ಶರ್ಮಾ ಹೇಳಿಕೆ ಕೊಟ್ಟ 9 ದಿನಗಳ ಅಂತರದ ಬಳಿಕ, ಗಲ್ಪ್ ರಾಷ್ಟ್ರಗಳಲ್ಲಿ ಹೇಳಿಕೆಗೆ ವಿರೋಧ ವ್ಯಕ್ತವಾದ ನಂತರ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ನೂಪುರ್ ಅವರ ಹೇಳಿಕೆಯು ಅಂತಾರಾಷ್ಟ್ರೀಯ ವಿವಾದವಾಗುವವರೆಗೂ ನಾವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಂತಾರಾಷ್ಟ್ರೀಯ ವಿವಾದದ ಕಾರಣಕ್ಕಾಗಿ ಕ್ರಮ ಕೈಗೊಳ್ಳಬೇಕಾಯಿತು ಎಂದು ಬಿಜೆಪಿ ರಾಷ್ಟ್ರೀಯ ನಾಯಕರೊಬ್ಬರು ಹೇಳಿದ್ದಾರೆ.

ಸಂಘ ಪರಿವಾರದ ಮೌನ

ಸಂಘ ಪರಿವಾರವು ಇತ್ತೀಚೆಗೆ ಪ್ರತಿಭಟನೆಗಳನ್ನು ಕಡಿಮೆ ಮಾಡಿದ್ದು, ಶಾಂತಿಯುತ ಹೋರಾಟಗಳಿಗೆ ಮುಂದಾಗಿದೆ. ಬಿಜೆಪಿಯು ಕೇಂದ್ರದಲ್ಲಿ ಕಳೆದ 8 ವರ್ಷಗಳಿಂದ ಅಧಿಕಾರದಲ್ಲಿರುವುದರಿಂದ ಆರ್​ಎಸ್​ಎಸ್​ ಹಾಗೂ ಬಿಜೆಪಿಯು ಸಂಘರ್ಷದ ನಡೆ, ಧ್ವನಿಯನ್ನು ತಗ್ಗಿಸುವ ಬಗ್ಗೆ ಕಳೆದ ಏಪ್ರಿಲ್​ನಲ್ಲಿ ಹರಿದ್ವಾರದಲ್ಲಿ ನಡೆದಿದ್ದ ಆರ್​ಎಸ್​ಎಸ್​ನ ಉನ್ನತ ನಾಯಕರ ಸಭೆಯಲ್ಲಿ ಚರ್ಚೆಯಾಗಿತ್ತು. ರಾಜಕೀಯ ಹೋರಾಟ ನಡೆಸದೆ ಇರುವುದಾದರೂ ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಸಭೆಯಲ್ಲಿ ಉದ್ಭವವಾಗಿದೆ. ಇದಕ್ಕೂ ಸಭೆಯಲ್ಲಿ ಆರ್​ಎಸ್ಎಸ್. ನಾಯಕರು ಉತ್ತರ ನೀಡಿದ್ದರು. ನಿಮ್ಮ ಸಿದ್ದಾಂತವನ್ನು ಪ್ರತಿಪಾದಿಸುವವರೇ ಸರ್ಕಾರದಲ್ಲಿ ಇರುವಾಗ, ಸಮಸ್ಯೆಯನ್ನು ಪ್ರತಿಭಟನೆ ಇಲ್ಲದೇ ತಳಮಟ್ಟದಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ ಅಲ್ಲವೇ ಎಂದು ಆರ್​ಎಸ್​ಎಸ್ ನಾಯಕರು ಹೇಳಿದ್ದರು.

ಆರ್​ಎಸ್​ಎಸ್​ ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಯನ್ನೂ ಇದೇ ಹಿನ್ನೆಲೆಯಲ್ಲಿ ನಾವು ಗ್ರಹಿಸಬೇಕಿದೆ. ವಾರಾಣಾಸಿಯ ಜ್ಞಾನವಾಪಿ ಮಸೀದಿಯ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇಲ್ಲವೇ ಕೋರ್ಟ್ ತೀರ್ಪುನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದ ಭಾಗವತ್, ಆರ್​ಎಸ್ಎಸ್ ಅಂದೋಲನ ನಡೆಸುವುದಿಲ್ಲ ಎಂದೂ ಸಹ ತಿಳಿಸಿದ್ದರು.

ಕಾರ್ಯತಂತ್ರದಲ್ಲಿ ಬದಲಾವಣೆ

ಇತ್ತೀಚೆಗೆ ಧರ್ಮಶಾಲಾದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಪ್ರಶಿಕ್ಷಣ ವರ್ಗ ಅಥವಾ ತರಬೇತಿ ಕಾರ್ಯಾಗಾರದಲ್ಲಿ ಪಕ್ಷದ ಸಂಪನ್ಮೂಲ ವ್ಯಕ್ತಿಗಳು ಕೇವಲ ತಳಮಟ್ಟದಲ್ಲಿ ಜನರನ್ನು ಸಂಘಟಿಸುವುದರ ಮೇಲೆ ಗಮನ ಕೇಂದ್ರೀಕರಿಸುವ ಬದಲು, ಶಿಕ್ಷಣ ಪಡೆದುಕೊಳ್ಳುವತ್ತ, ವಿದ್ಯಾವಂತರನ್ನು ಆಕರ್ಷಿಸುವತ್ತ ಗಮನ ಹರಿಸಬೇಕು. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದು ರೂಢಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಸಲಹೆ ಮಾಡಲಾಗಿತ್ತು.

‘ನಾವು ಈ ಹಿಂದೆ ಭಾಗವಹಿಸಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ನಮಗೆ ಹೇಳಿದ್ದಕ್ಕೆ ಇದು ವಿರುದ್ಧವಾಗಿದೆ’ ಎಂದು ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತೆಯೊಬ್ಬರು ಹೇಳಿದರು. ಈ ಸಂದರ್ಭದಲ್ಲಿ ಸದಸ್ಯರೊಬ್ಬರು ತೀಕ್ಷ್ಣ ಪ್ರಶ್ನೆ ಕೇಳಿದರು. ‘ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾದ ದೆಹಲಿ ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ ಮತ್ತು ತೇಜೀಂದರ್ ಬಗ್ಗಾ ಅವರಂತಹವರಿಗೆ ಪಕ್ಷವು ಚುನಾವಣೆಯ ಸಮಯದಲ್ಲಿ ಟಿಕೆಟ್‌ಗಳನ್ನು ಏಕೆ ನೀಡಿತು? ಪಕ್ಷದ ಧ್ವಜವಿರುವ ಬೈಕ್​ಗಳನ್ನು ಓಡಿಸುವುದರಿಂದ ನಮಗೆ ಟಿಕೆಟ್ ಸಿಗುತ್ತದೆಯೇ ಅಥವಾ ಪತ್ರಿಕೆಗಳಲ್ಲಿ ಲೇಖನ ಬರೆಯುವುದರಿಂದ ಟಿಕೆಟ್ ಸಿಗುತ್ತದೆಯೇ’ ಎಂದು ಅವರು ಕೇಳಿದ್ದರು. ಅವರಂಥ ಎಷ್ಟೋ ಜನರಿಗೆ ಈಗ ಬಿಜೆಪಿ ನಿಲುವಿನ ಬಗ್ಗೆ ಇಂಥ ಪ್ರಶ್ನೆಗಳು ಮೂಡಿರುವುದು ಸುಳ್ಳಲ್ಲ.

ಹಿಂದುತ್ವದ ವೋಟ್ ಬ್ಯಾಂಕ್ ಹೇಗೆ ಪ್ರತಿಕ್ರಿಯಿಸಬಹುದು

ಬಿಜೆಪಿ ಪಕ್ಷದ ಹೈಕಮಾಂಡ್ ಮತ್ತು ಕೇಂದ್ರ ಸರ್ಕಾರದ ಸಚಿವರು ಈವರೆಗೆ ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾತ್ರ ನೂಪುರ್ ಶರ್ಮಾ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಈಗ ವಿರೋಧ ಪಕ್ಷಗಳು ಕೂಡ ಬಿಜೆಪಿಯ ಕ್ರಮಕ್ಕೆ ಸಂಘ ಪರಿವಾರದ ಪ್ರಬಲ ಬೆಂಬಲಿಗರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡುತ್ತಿವೆ. ಸಂಘ ಪರಿವಾರ, ಬಿಜೆಪಿಯ ಪ್ರಬಲ ಬೆಂಬಲಿಗರು ನೂಪುರ್ ಶರ್ಮಾ, ನವೀನ್ ಕುಮಾರ್ ಜಿಂದಾಲ್​ರನ್ನು ಪಕ್ಷದಿಂದ ಹೊರ ಹಾಕಿದ್ದನ್ನು ಅರಗಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುಸ್ಲಿಂ ತುಷ್ಟೀಕರಣದ ಪಕ್ಷ ಎಂದು ಟೀಕಿಸುತ್ತಿದ್ದ, ಬಿಜೆಪಿ ಬೆಂಬಲಿಗರು ಈಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾಂಗ್ರೆಸ್ ಪಕ್ಷ ಕಾದು ನೋಡುತ್ತಿದೆ. ಪರಿಸ್ಥಿತಿಯ ಅನಿವಾರ್ಯತೆಯಿಂದ ನೂಪುರ ಶರ್ಮಾರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿದೆಯೇ ಹೊರತು, ಬೇರೆ ಕಾರಣಗಳು ಇಲ್ಲ. ಅಂತಾರಾಷ್ಟ್ರೀಯ ಒತ್ತಡ ಹಾಗೂ ದೇಶದ ಆರ್ಥಿಕತೆ, ವ್ಯಾಪಾರದ ಮೇಲೆ ಹೊಡೆತ ಬೀಳುವ ಅಪಾಯದ ಕಾರಣದಿಂದ ನೂಪುರ್ ಶರ್ಮಾ ಮೇಲೆ ಕ್ರಮ ಕೈಗೊಳ್ಳಲಾಗಿದೆ.

Published On - 3:06 pm, Wed, 8 June 22