ಯೋಗೇಶ್ವರ್‌ಗೆ ಸಚಿವ ಸ್ಥಾನ ಕೊಡದಂತೆ ಹೇಳಿದ್ದೆವು; ದೆಹಲಿಯಲ್ಲಿ ರೇಣುಕಾಚಾರ್ಯ ಬಹಿರಂಗ ಹೇಳಿಕೆ

ಯೋಗೇಶ್ವರ್‌ರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತೆಂದು ಒಪ್ಪಲ್ಲ. ಹೀಗಾಗಿ, ಈ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸಿದ್ದೇನೆ.

  • TV9 Web Team
  • Published On - 11:55 AM, 19 Jan 2021
ಎಂ.ಪಿ. ರೇಣುಕಾಚಾರ್ಯ

ನವದೆಹಲಿ: ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ಕೊಡದಂತೆ ಹೇಳಿದ್ದೆವು. ಹಲವು ಶಾಸಕರು ಮತ್ತು ಸಚಿವರು ಕೂಡ ಈ ಮಾತನ್ನು ಹೇಳಿದ್ದರು. ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಹಾಗೂ ವರಿಷ್ಠರಿಗೂ ಈ ಮಾತನ್ನು ಹೇಳಿದ್ದೆವು. ಯೋಗೇಶ್ವರ್‌ರನ್ನು ಸಚಿವ ಸ್ಥಾನದಿಂದ ತೆಗೆಯಿರಿ ಎಂದು ಬಹಿರಂಗವಾಗಿ ಹೇಳಲ್ಲ. ಪಕ್ಷದ ಚೌಕಟ್ಟಿನಲ್ಲಿ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಟಿವಿ9ಗೆ ತಿಳಿಸಿದ್ದಾರೆ.

ಯೋಗೇಶ್ವರ್‌ರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತೆಂದು ಒಪ್ಪಲ್ಲ. ನಾವು ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದೇ ಇಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಮಾತನಾಡಿದ್ದಾರೆ.

ನನ್ನ ಸ್ನೇಹಿತರು 9 ಕೋಟಿ ಸಾಲ ಮಾಡಿದ್ದಾರೆ ಅಂತಾ ಅವರು (ಸಿ.ಪಿ. ಯೋಗೇಶ್ವರ್‌) ಹೇಳಿದರು. ಹೀಗಾಗಿ ಅವರು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರು. ಆದರೆ ಅವರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ಹೇಳಿದರು. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದ ರೇಣುಕಾಚಾರ್ಯ, ಸಂಘಟನೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಈ ರೀತಿಯಾಗಿ ಹೇಳಿರುವುದಕ್ಕೆ ಬೇಸರವಾಗಿದೆ. ರಾಜ್ಯದಲ್ಲಿ 105 ಬಿಜೆಪಿ ಶಾಸಕರು ಗೆದ್ದಿದ್ದಾರೆ. ಯೋಗೇಶ್ವರ್ ಹೇಳಿಕೆಯಿಂದ, ಮೈತ್ರಿ ಸರ್ಕಾರದಲ್ಲಿ ಕೆಲ ಶಾಸಕರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ.

ಒಬ್ಬರಿಂದ ಬಿಜೆಪಿ ಸರ್ಕಾರ ಬಂತೆಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯಿಂದ ಅಧಿಕಾರಕ್ಕೆ ಬಂದೆವು ಅಂದರೆ ತಪ್ಪಾಗುತ್ತೆ. ರಾಜ್ಯದ ಜನರಿಗೆ ತಪ್ಪು ಸಂದೇಶ ಹೋಗುತ್ತೆ. ಹೀಗಾಗಿ ಈ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸಿದ್ದೇನೆ ಎಂದು ಟಿವಿ9ಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.