ಪರಿವಾರವಾದದ ವಿಕೇಂದ್ರೀಕರಣ-ರಾಜಕಾರಣದ ಗೆಲುವು, ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರ ಸೋಲು: ಒಂದು ವಿಶ್ಲೇಷಣೆ

ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ (Loksabha Elections 2024) ಸ್ಪರ್ಧಿಸುವ ಕಾಂಗ್ರೆಸ್ (Congress)​ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಎಐಸಿಸಿ, ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ. ಆದ್ರೆ, ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದ್ದು, ಸಚಿವರ ಮಕ್ಕಳು, ಶಾಸಕರರ ಸಹೋದರ, ಸಂಬಂಧಿಗಳಿಗೆ ಮಣೆ ಹಾಕಿದೆ. ಇನ್ನು ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಪರಿವಾರವಾದದ ವಿಕೇಂದ್ರೀಕರಣ-ರಾಜಕಾರಣದ ಒಂದು ವಿಶ್ಲೇಷಣೆ ಇಲ್ಲಿದೆ.

ಪರಿವಾರವಾದದ ವಿಕೇಂದ್ರೀಕರಣ-ರಾಜಕಾರಣದ ಗೆಲುವು, ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರ ಸೋಲು: ಒಂದು ವಿಶ್ಲೇಷಣೆ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Mar 25, 2024 | 6:53 PM

ಭಾಸ್ಕರ ಹೆಗಡೆ

ರಾಜ್ಯದ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆ ಆಗಿದೆ. ಆ ಕುರಿತು ಯಾರೂ ಚರ್ಚೆ ಮಾಡುತ್ತಿಲ್ಲ. ಆ ಬೆಳವಣಿಗೆಯಲ್ಲಿ ಕಾನೂನಿನ ಉಲ್ಲಂಘನೆ ಆಗಿಲ್ಲ. ರಾಜಕೀಯದ ಔಚಿತ್ಯದ, ಘನತೆ, ಗಾಂಭಿರ್ಯಕ್ಕೂ ಚ್ಯುತಿ ಬಂದಿಲ್ಲ.ಹಾಗಾಗಿ ಅದು ವಿಷಯವೇ ಅಲ್ಲ. ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ನಿರೀಕ್ಷೆಯಂತೆ ರಾಜ್ಯ ಸರಕಾರದಲ್ಲಿರುವ ಮಂತ್ರಿಗಳ ಮಕ್ಕಳು, ಹೆಂಡತಿ ಮತ್ತು ಕುಟುಂಬದ ಇತರೇ ಸದಸ್ಯರಿಗೆ (Family Politics ) ಹೆಚ್ಚಿನ ಟಿಕೆಟ್ ನೀಡಿದಂತಾಗಿದೆ. ಒಟ್ಟಿನಲ್ಲಿ 11 ಜನ ಈ ರೀತಿ ಟಿಕೆಟ್ ಪಡೆದಂತಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡಿರುವುದನ್ನು ನೋಡಿದರೆ, ಕಾಂಗ್ರೆಸ್ ಇಡೀ ಕಲ್ಯಾಣ ಕರ್ನಾಟಕದ ರಾಜಕೀಯಕ್ಕೆ ಹೊಸ ದಿಕ್ಸೂಚಿ ನೀಡಲು ಹೊರಟಂತಿದೆ.

ದೇವೇಗೌಡರ ಅಳಿಯ ಬಿಜೆಪಿಯಿಂದ ನಿಲ್ಲುತ್ತಿಲ್ಲವೇ? ಎಂಬುದು ಅವರ ವಾದ ಇರಬಹುದು. ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ಯಡಿಯೂರಪ್ಪ ಕುಟುಂಬ ಮತ್ತು ಜೆಡಿಎಸ್​ನ ದೇವೇಗೌಡರ ಕುಟುಂಬ ರಾಜಕಾರಣದ ನಂತರ, ಕಾಂಗ್ರೆಸ್​ನ ಈ ಹೊಸ ಪ್ರಯೋಗವನ್ನು ಕುಟುಂಬ ರಾಜಕಾರಣದ ವಿಕೇಂದ್ರೀಕರಣ ಎಂದು ಹೇಳಿದರೆ ತಪ್ಪಾಗಲಾರದು. ಈಗ ವಿರೋಧ ಪಕ್ಷದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್​​ನ ಮಹಾನ್ ನಾಯಕರುಗಳ ಕುಟುಂಬ ರಾಜಕಾರಣಕ್ಕೆ ಆಯಾ ಪಕ್ಷದಲ್ಲೇ ತೀವ್ರ ವಿರೋಧ ಇದೆ. ಈ ಪಕ್ಷಗಳು ತಮ್ಮ ಕುಟುಂಬ ಬಿಟ್ಟು ಬೇರೆಯವರ ವಿಚಾರ ಬಂದಾಗ ಪ್ರಜಾಪ್ರಭುತ್ವದ ನೆಲೆಗಟ್ಟಲ್ಲಿ ಪಕ್ಷ ನಡೆಸಲು ಬಯಸುತ್ತಾರೆ. ಬಿಜೆಪಿ ಮತ್ತು ಜೆಡಿಎಸ್​ನ ದೋಸೆ ತೂತಾಗಿರುವಾಗ ನಮ್ಮ ಬಗ್ಗೆ ಅವರು ಮಾತನಾಡಲಾರರು. ಅಥವಾ ಮಾತನಾಡಲು ಅವರಿಗೆ ನೈತಿಕ ಹಕ್ಕು ಇಲ್ಲ ಎಂಬುದು ಕಾಂಗ್ರೆಸ್ ನಾಯಕರ ವಾದ ಇರಬಹುದು. 11 ಜನ ತಮ್ಮ ಮಕ್ಕಳು, ಅಳಿಯಂದಿರು, ಸೋದರಿ ಹೀಗೆ ಕುಟುಂಬದ ಜನರಿಗೆ ಟಿಕೆಟ್ ಕೊಡಿಸಿ ಕುಟುಂಬ ರಾಜಕಾರಣವನ್ನು ಹಿಂದೆಂದೂ ಕಾಣದ ವಿಕೇಂದ್ರೀಕರಣವರಣವನ್ನು ಜಾರಿಗೆ ತಂದರು.

ಇದನ್ನೂ ಓದಿ: ಲೋಕಸಭಾ ಟಿಕೆಟ್ ಹಂಚಿಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದ ಕಾಂಗ್ರೆಸ್, ಕರ್ನಾಟಕದ ಐವರು ಸಚಿವರ ಮಕ್ಕಳಿಗೆ ಟಿಕೆಟ್!

ಗೆಲುವು ಮುಖ್ಯ

ನೈತಿಕತೆ ಪ್ರಶ್ನೆಯನ್ನಿಟ್ಟುಕೊಂಡು ಯಾವ ಪಕ್ಷಗಳು, ಚುನಾವಣೆಯಲ್ಲಿ ಗೆಲ್ಲಲು ಆಗದು. ಇಲ್ಲಿ ಗೆದ್ದರೆ ತಾನೆ, ದೇಶ ಸೇವೆ ಮಾಡಲು ಸಾಧ್ಯವಾಗೋದು? ನೈತಿಕತೆಗೆ ಅಂಜಿ ಯಾರನ್ನೋ ನಿಲ್ಲಿಸಿ ಚುನಾವಣೆಯಲ್ಲಿ ಸೋತರೆ, ದೇಶದಲ್ಲಿ ಬದಲಾವಣೆ ತರಲು ಅವಕಾಶ ಸಿಗುವುದಾದರೂ ಹೇಗೆ? ಇದು ಪ್ರತಿ ರಾಜಕಾರಣಿಯ ಮನಸ್ಸಿನಲ್ಲೂ ಇರುವ ವಿಚಾರ. ಕೆಲವರು ಮನ ಬಿಚ್ಚಿ ಇದನ್ನು ಹೇಳುತ್ತಾರೆ. ಕೆಲವರು ಸುಮ್ಮನಿರುತ್ತಾರೆ. ರಾಜಕಾರಣದ ಬದಲಾವಣೆ ತಣ್ಣಗೇ ಆಗುತ್ತಿರುತ್ತದೆ. ಅದನ್ನು ದಾಖಲಿಸದಿದ್ದರೆ ಅಥವಾ ಅದನ್ನು ಪರಾಮರ್ಶಿಸದೇ ಹೋದರೆ ಅದರಿಂದ ಆಗುವ ಅನೇಕ ಅನಾಹುತಗಳಿಗೆ ಜನ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ. ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ, ಸಂಡೂರು ರಾಜ ಕುಟುಂಬದ ಎಮ್ ವೈ ಘೋರ್ಪಡೆ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗುತ್ತಿದ್ದರು. ಅವರ ಕುಟುಂಬದ ಕಂಪೆನಿಯೊಂದು ಅಂದಿನ ಕರ್ನಾಟಕ ವಿದ್ಯುತ್ ಮಂಡಳಿಗೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದನ್ನು ಆಗ ಅಂದಿನ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಿದ್ದ ಬಿಜೆಪಿ ಸದಸ್ಯರು ಸದನದ ಒಳಗೆ ಮತ್ತು ಹೊರಗೆ ಎತ್ತುತ್ತಿದ್ದುದು ಈಗ ಇತಿಹಾಸ. ಆ ವಾದದಲ್ಲಿ ಹುರುಳಿತ್ತು. ಖಾಸಗಿ ಹಿತಾಸಕ್ತಿ (conflict of interest) ಇಟ್ಟುಕೊಂಡು ರಾಜಕಾರಣ ಮಾಡಬಾರದು, ಮಂತ್ರಿಮಂಡಲ ಸೇರಬಾರದು ಎಂಬುದು ಎಲ್ಲರೂ ಒಪ್ಪಿಕೊಂಡಿದ್ದ ನೈತಿಕ ವಿಚಾರ ಅದಾಗಿತ್ತು. ಈ ತತ್ವದ ಆಧಾರದ ಮೇಲೆ ಬಿಜೆಪಿ ದಾಳಿ ಮಾಡಿದಾಗೆಲ್ಲ ಆಗ ಕಾಂಗ್ರೆಸ್ಗೆ ಇರುಸು ಮುರುಸು ಆಗುತ್ತಿತ್ತು. “ಅದು ಅವರ ವೈಯಕ್ತಿಕ ವಿಚಾರ. ನಮಗೆ ಸಂಬಂಧ ಇಲ್ಲ” ಎಂದು ಹೇಳಿ ಟೀಕೆಯನ್ನು ಸಾಗ ಹಾಕುತ್ತಿತ್ತು.

ಈಗ ಆ ತತ್ವದ ಆಧಾರದ ಮೇಲೆ ಮಂತ್ರಿಗಳನ್ನು ಆಯ್ಕೆ ಮಾಡಬೇಕೆಂದರೆ ಬಹಳ ಕಷ್ಟ ಪಡಬೇಕಾದೀತು. ಆ ಪಕ್ಷ ಈ ಪಕ್ಷ ಅಂತಿಲ್ಲ. ಎಲ್ಲ ಪಕ್ಷಗಳಲ್ಲೂ ಇದು ಸಾಮಾನ್ಯವಾಗಿದೆ ಅಂದರೆ, ವೈಯಕ್ತಿಕ ಹಿತಾಸಕ್ತಿ ಇಲ್ಲದ ರಾಜಕಾರಣಿಗಳು ಇಲ್ಲವೇ ಇಲ್ಲ ಎಂಬುದನ್ನು ನಂಬಲು ಕೂಡ ಕಷ್ಟವಾದ ಪರಿಸ್ಥಿತಿಗೆ ನಾವು ಬಂದು ಕುಳಿತಿದ್ದೇವೆ. ಹಲವಾರು ರಾಜಕಾರಣಿಗಳ ‘ವೈಯಕ್ತಿಕ ಹಿತಾಸಕ್ತಿ’ ಅವರು ನಿರ್ವಹಿಸುವ ಖಾತೆಗೆ ಮಾತ್ರ ಸೀಮಿತ ಆಗಿರುವುದಿಲ್ಲ. ಹಾಗಾಗಿ ಓರ್ವ ರಾಜಕಾರಣಿ ವಿರುದ್ಧ ‘ವೈಯಕ್ತಿಕ ಹಿತಾಸಕ್ತಿ’ ಆರೋಪವನ್ನು ಹೊರಿಸುವುದು ಅಷ್ಟು ಸುಲಭ ಅಲ್ಲ.

ವೈಯಕ್ತಿಕ ಆಸಕ್ತಿಯ ಪರಿಭಾಷೆ ಬದಲು

ವೈಯಕ್ತಿಕ ಹಿತಾಸಕ್ತಿ ಪರಿಕಲ್ಪನೆ ಕುಟುಂಬ ರಾಜಕಾರಣಕ್ಕೆ ಮೀಸಲಾಗಿರುತ್ತದೆ ಎಂದು ನಂಬಿ ಕುಳಿತರೆ ತಪ್ಪಾಗುತ್ತದೆ. ಅದು ಅಧಿಕಾರಶಾಹಿ, ಬಂಡವಾಳಶಾಹಿಯಲ್ಲೂ ಪ್ರವಹಿಸಿ, ಸಾರ್ವಜನಿಕರಿಗೆ ಅನಾನುಕೂಲ ಆಗುವ ಅನೇಕ ನಿರ್ಧಾರಗಳಿಗೆ ಕಾರಣ ಆಗುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದೇವೆ. ಬಹಳ ಹಿಂದಿನ ಮಾತೇಕೆ? ಈ ಶತಮಾನದ ಪ್ರಾರಂಭದಲ್ಲಿ ಕೂಡ, ಗಂಡ ಹಿರಿಯ ಅಧಿಕಾರಿಯಾಗಿದ್ದಾಗಲೇ, ಹೆಂಡತಿ ಒಂದು ಪಕ್ಷದ ಎಂಪಿ ಅಥವಾ ಎಮ್ಎಲ್ಎ ಆಗಬಹುದು ಎಂಬ ವಿಚಾರವನ್ನು ಕಲ್ಪನೆ ಕೂಡ ಮಾಡಲು ಆಗುತ್ತಿರಲಿಲ್ಲ. ಈಗ ಎಲ್ಲವೂ ಸಾಧ್ಯವಾಗಿದೆ.

ಈಗ ಒಮ್ಮಿಂದೊಮ್ಮೆಲೆ ಬಂದಿರುವ ಕೌಟುಂಬಿಕ ರಾಜಕಾರಣದ ವಿಕೇಂದ್ರಿಕರಣದ ಗಾಳಿ ಇಡೀ ರಾಜ್ಯದಲ್ಲೇ ಬೀಸುತ್ತಿದೆ. ಕಾಂಗ್ರೆಸ್ನ ಮಂತ್ರಿಗಳು ತಮ್ಮ ವಿಧಾನಸಭಾ ಕ್ಷೇತ್ರಗಳ ಜೊತೆಗೆ ಲೋಕಸಭೆ ಮತ್ತ ಕ್ಷೇತ್ರ ಇರುವ ಇಡೀ ಜಿಲ್ಲೆಯನ್ನು ತಮ್ಮ ತೆಕ್ಕಗೆ ತೆಗೆದುಕೊಳ್ಳುವ ಹವಣಿಕೆಯಲ್ಲಿದ್ದರೆ, ದೇವೇಗೌಡರ ಅಳಿಯ ಡಾ ಸಿ ಎನ್ ಮಂಜುನಾಥ್, ಜೆಡಿಎಸ್ ನಿಂದ ನಿಲ್ಲದೇ, ಬಿಜೆಪಿಯಿಂದ ಲೋಕಸಭೆ ಚುನಾವಣೆಯ ಕಣಕ್ಕೆ ಇಳಿದಿರುವುದನ್ನು ನೋಡಿದರೆ, ಈ ಬಾರಿಯ ಚುನಾವಣೆ ಈ ಕುಟುಂಬ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದಂತಿದೆ. ‘ನಾವೆಷ್ಟು ಪ್ರಬಲರು ಎಂದರೆ, ನಮ್ಮ ಕುಟುಂಬದ ಅಭ್ಯರ್ಥಿಯನ್ನು ಒಂದು ಕಾಲದ ವಿರೋಧ ಪಕ್ಷ ಮತ್ತು ಈ ಚುನಾವಣೆಯ ಮಿತ್ರ ಪಕ್ಷದಲ್ಲಿ ನಿಲ್ಲಿಸುತ್ತೇವೆ ನೋಡಿ’ ಎಂದಂತಿದೆ ಈ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇದು ಸರ್ವೇ ಸಾಮಾನ್ಯ ರಾಜಕೀಯ ನಡೆ ಆದರೆ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಜಾರಕಿಹೊಳಿ ಕುಟುಂಬವು ತನ್ನ ಪರಿವಾರದ ಒಬ್ಬೊಬ್ಬ ಸದಸ್ಯರನ್ನು ಒಂದೊಂದು ಪಕ್ಷದಲ್ಲಿ ಇಟ್ಟು ಆ ಮೂಲಕ ರಾಜಕೀಯ ಮಾಡುವುದನ್ನು ನೋಡದ್ದೇವೆ. ಅದರ ಪರಿಣಾಮ ಏನು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಈಗ್ಯಾಕೆ ಈ ತಗಾದೆ?

ಇಷ್ಟಕ್ಕೂ ಈ ಹಿಂದೆ ಬರದಿದ್ದ ಈ ವಿಚಾರ ಈಗ ಯಾಕೆ? ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. 1996 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅಂದು ಮುಖ್ಯಮಂತ್ರಿ ಆಗಿದ್ದ ದೇವೇಗೌಡರು ಅನೇಕ ಮಂತ್ರಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು. ಬಸವರಾಜ ರಾಯರೆಡ್ಡಿ, ಆರ್ ಎಲ್ ಜಾಲಪ್ಪ ಹೀಗೆ ಕೆಲವರು ಗೆದ್ದು ಬಂದಿದ್ದರು. ಅಷ್ಟೇ ಅಲ್ಲ, ಮುಂದೆ ದೇವೇಗೌಡರು ಪ್ರಧಾನಿಯಾದಾಗ, ಜಾಲಪ್ಪನವರು ಜವಳಿ ಖಾತೆ ಮಂತ್ರಿ ಕೂಡ ಆಗಿದ್ದರು. 1996 ರಲ್ಲಿ ಮಾಡಿದ ಪ್ರಯೋಗ ಈಗ ಯಾಕೆ ಸಾಧ್ಯ ಆಗುತ್ತಿಲ್ಲ. ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದರೂ ಮಂತ್ರಿಗಳು ಚುನಾವಣೆಗೆ ನಿಲ್ಲದಿರಲು ಕಾರಣ ಏನು? ಅಥವಾ 1996 ರಂತಹ ಪ್ರಯೋಗ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾದರೂ ಮಂತ್ರಿಗಳು ಹಿಂದೇಟು ಹಾಕಿ ಅವರ ಪ್ರಯೋಗಶೀಲತೆಗೆ ಧಕ್ಕೆ ತರಲು ಹೊರಟಿದ್ದಾದರೂ ಏಕೆ? ಇದಕ್ಕೆ ಉತ್ತರ ಖಂಡಿತ ಇದೆ. ಅದನ್ನು ಯಾರೂ ಕೂಡ ಅಧಿಕೃತವಾಗಿ ಹೊರಗೆ ಹೇಳುತ್ತಿಲ್ಲ. ಕಾರಣ ಇಷ್ಟೆ. ಅದು ಹೊರಗೆ ಹೇಳುವಂತಹದ್ದಲ್ಲ. ಇಲ್ಲಿ ಅಧಿಕಾರ ಹಣ ಎರಡೂ ಇದೆ. ಅಲ್ಲಿಗೆ ಹೋಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾದರೆ ಏನು ಪ್ರಯೋಜನ? ಅದರ ಬದಲು, ಮಕ್ಕಳನ್ನ, ಕುಟುಂಬದವರನ್ನ ಇಳಿಸೋಣ. ಗೆದ್ದರೆ ಮಕ್ಕಳು ಅಲ್ಲಿ. ಇಲ್ಲಿ ಜಿಲ್ಲೆ ಉಸ್ತುವಾರಿ, ವೈಯಕ್ತಿಕ ಖಾತೆ ಹೀಗೆ ಎಲ್ಲ ಇಟ್ಟುಕೊಂಡು, ಇಡೀ ಜಿಲ್ಲೆ ರಾಜಕಾರಣ ತಮ್ಮ ಕೈಗೆ ತೆಗೆದುಕೊಂಡರಾಯ್ತು ಎನ್ನುವುದು ಈ ಮಂತ್ರಿಗಳ ಲೆಕ್ಕಾಚಾರ. ಇನ್ನು ಕಲ್ಯಾಣ ಕರ್ನಾಟಕಕ್ಕೆ ಬಂದರೆ, ಖರ್ಗೆಯವರು ಈಗಾಗಲೇ ತಮ್ಮ ಮಗನನ್ನು ರಾಜಕಾರಣದ ಮುಂಚೂಣಿಗೆ ತಂದು ಸಂಭ್ರಮಿಸಿದ್ದಾರೆ. ಅಳಿಯನ ಗೆಲುವನ್ನು ಪಡೆದರೆ, ಆ ಭಾಗದ ಮೇಲೆ ಇನ್ನಷ್ಟು ಹಿಡಿತ ಸಾಧಿಸುವುದರಲ್ಲಿ ಸಂಶಯ ಇಲ್ಲ.

ಕೊನೆಯ ಮಾತು

ದೇವೇಗೌಡರ ಕುಟುಂಬದ್ದು ನಾಲ್ಕು ದಶಕದ ಕುಟುಂಬ ರಾಜಕಾರಣ ಇರಬಹುದು, ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಎರಡು ದಶಕ ದಾಟಿರಬಹುದು. ಅದೇ ರೀತಿ ಖರ್ಗೆ ಸಾಹೇಬರದ್ದು ಕೂಡ. ಈಗ ಮಕ್ಕಳನ್ನು ಕಣಕ್ಕೆ ಇಳಿಸಿ, ಇಡೀ ಜಿಲ್ಲೆ ಆಳುವ ಕನಸು ಹೊತ್ತಿರುವ ಮತ್ತೊಂದು ತಲೆಮಾರಿನ ರಾಜಕಾರಣಿಗಳ ಲೆಕ್ಕಾಚಾರ ಒಂದಿರಬಹುದು. ಜನ ಬೇರೆ ತರ ಲೆಕ್ಕ ಹಾಕುತ್ತಾರೆ. ವಿರೇಂದ್ರ ಪಾಟೀಲರ ಮಗ, ಅಳಿಯ ಹೀಗೆ ಎಲ್ಲ ರಾಜಕೀಯದಲ್ಲಿ ಬಂದರೂ ಬೆಳೆಯಲಾಗಲಿಲ್ಲ. ಅದೇ ರೀತಿ, ಜೆಎಚ್ ಪಟೇಲರ ಮಗ ಮಹಿಮಾ ಪಟೇಲ್ ಕೂಡ ರಾಜಕೀಯಕ್ಕೆ ಬಂದು ಬದಲಾವಣೆ ತರಬಯಸಿದ್ದರು. ಆಗಲಿಲ್ಲ. ಒಂದು ಪ್ರಬಲ ಕೋಮು ಲಿಂಗಾಯತ ಸಮಾಜದಲ್ಲಿ ಬೆಳೆದುಬಂದ, ಅತ್ಯಂತ ಸುಸಂಕೃತರಾಗಿದ್ದ ರಾಜಶೇಖರ ಪಾಟೀಲ್, ಮಹಿಮಾ ಪಟೇಲ್ರನ್ನೇ ಜನ ತಿರಸ್ಕರಿಸಿದ್ದು ನೋಡಿದರೆ ಗೊತ್ತಾಗುತ್ತದೆ ಜನ ಬುದ್ದಿವಂತರು ಎಂಬುದು. , ಜನ ಇನ್ನೂ ಆಶಾ ಭಾವನೆ ಕಳೆದುಕೊಳ್ಳಬೇಕಾಗಿಲ್ಲ ಎಂದುಕೊಂಡರೂ ಈಗಿನ ವಾತಾವರಣ ಬದಲಾಗಿದೆ. ಹಣಕ್ಕೆ ಮಾರುಹೋಗಿ ಮತ ಹಾಕುವ ಹೊಸ ಸಂಸ್ಕೃತಿ ಬಂದಿದ್ದರಿಂದ ಈ ಬಾರಿಯ ಚುನಾವಣೆ ಈ ಪರಿವಾರವಾದದ ವಿಕೇಂದ್ರೀಕರಣಕ್ಕೆ ಸಾಂಸ್ಥಿಕ ರೂಪವೊಂದನ್ನು ನೀಡುತ್ತದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

ಅದಕ್ಕಿಂತ ಹೆಚ್ಚಾಗಿ, ಪ್ರಾಮಾಣಿಕವಾಗಿ ದುಡಿಯುವ ವಿವಿಧ ರಾಜಕೀಯ ಪಕ್ಷಗಳ ನಿಷ್ಠಾವಂತ ಮತ್ತು ಜನಪ್ರಿಯ ಕಾರ್ಯಕರ್ತರನ್ನು ಅಧೀರರನ್ನಾಗಿಸುವ ಈ ಕಾರ್ಯಸೂಚಿ ದೇಶದ ಒಟ್ಟೂ ರಾಜಕೀಯ ವ್ಯವಸ್ಥೆಗೆ ಪರಾವಲಂಬಿ ಬಂದಳಿಕೆ ಬಳ್ಳಿ ಇದ್ದಂತೆ. ಮೂಲ ಗಿಡ, ಮರವನ್ನೇ ನುಂಗಿ ಹಾಕುವಷ್ಟು ಬಲ ಇರುವ ಈ ಬಂದಳಿಕೆ ಬಳ್ಳಿಯಂತೆ ನಮ್ಮ ಕುಟುಂಬ ರಾಜಕಾರಣ ಎಂಬುದನ್ನು ನಾವು ಎಂದೂ ಮರೆಯಬಾರದು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:54 pm, Mon, 25 March 24

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್