ಕೋಲಾರ ಜಿಲ್ಲಾ ಕಾಂಗ್ರೆಸ್ನಲ್ಲಿ ನಿಲ್ಲದ ಬಣ ರಾಜಕೀಯ: ಶಾಸಕರ ನಡುವೆ ಮುಸುಕಿನ ಗುದ್ದಾಟ
ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಗಳು ಜಿಲ್ಲಾ ಅಭಿವೃದ್ಧಿಗೆ ತೀವ್ರ ಅಡ್ಡಿಯಾಗುತ್ತಿದೆ. ಶಾಸಕರ ನಡುವಿನ ಆಂತರಿಕ ಕಲಹ, ಅಕ್ರಮ ಆರೋಪಗಳು ಮತ್ತು ಅಧಿಕಾರ ಹೋರಾಟಗಳು ಜಿಲ್ಲೆಯ ಪ್ರಗತಿಯನ್ನು ಹಾಳುಮಾಡುತ್ತಿವೆ. ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್‌ನಲ್ಲಿನ ಅಕ್ರಮಗಳ ಆರೋಪಗಳು ಮತ್ತಷ್ಟು ಗೊಂದಲ ಸೃಷ್ಟಿಸಿವೆ. ಗುಂಪುಗಾರಿಗೆಯಿಂದ ಅಭಿವೃದ್ಧಿ ಕುಂಠಿತವಾಗಿ ತೀವ್ರ ತೊಂದರೆಯಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ, ಫೆಬ್ರವರಿ 25: ಕೋಲಾರ (Kolar) ಜಿಲ್ಲಾ ಕಾಂಗ್ರೆಸ್‌ನಲ್ಲಿನ (Congress) ಗುಂಪುಗಾರಿಕೆಗಳು ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈವರೆಗೆ ಜಿಲ್ಲೆಯಲ್ಲಿ ಕೆ.ಹೆಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ನಡುವಿನ ಎರಡು ಗುಂಪುಗಳು ಜಿಲ್ಲೆಯಲ್ಲಿ ಸದ್ದು ಮಾಡುತ್ತಿದ್ದವು. ಆದರೆ ಈಗ ಜಿಲ್ಲೆಯಲ್ಲಿರುವ ಹಾಲಿ ಶಾಸಕರುಗಳ ನಡುವೆಯೇ ಉಪ ಗುಂಪುಗಳು ಸೃಷ್ಟಿಯಾಗಿದ್ದು, ಕೆ.ಹೆಚ್.ಮುನಿಯಪ್ಪ (KH Muniyappa) ಹಾಗೂ ರಮೇಶ್ ಕುಮಾರ್ (Ramesh Kumar) ಬಣ ತಣ್ಣಗಾಗಿದ್ದರೂ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಶಾಸಕರುಗಳ ಎರಡು ಬಣಗಳಾಗಿವೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ಬಣ ರಾಜಕೀಯ ಕೇವಲ ಕೋಲಾರ, ಕರ್ನಾಟಕಕ್ಕಷ್ಟೇ ಸೀಮಿತವಾಗಿರದೆ ದೆಹಲಿ ಮಟ್ಟಕ್ಕೂ ತಲುಪಿ ಹೈಕಮಾಂಡ್ಗೂ ತಲೆ ಬಿಸಿ ಉಂಟುಮಾಡಿದ್ದ ಉದಾಹರಣೆ ಇದೆ. ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆಂದು ಬಂದ ಸಿದ್ದರಾಮಯ್ಯನವರಿಗೆ ಭಯ ಹುಟ್ಟಿಸಿ ವಾಪಸ್ ಕಳಿಸಿದ ಕೀರ್ತಿಯೂ ಕೋಲಾರ ಕಾಂಗ್ರೆಸ್ ಗುಂಪುಗಾರಿಕೆಗಿದೆ. ಗುಂಪುಗಾರಿಕೆಯಲ್ಲಿ ತಮ್ಮ ಕೈ ಮೇಲಾಗಲಿ ಎಂದು ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ಹೈಕಮಾಂಡ್ಗೆ ಬೆದರಿಕೆ ಹಾಕಿದ್ದು ಲೋಕಸಭಾ ಚುನಾವಣೆ ವೇಳೆ ಜಗತ್ ಜಾಹಿರಾಗಿದ್ದು ಎಲ್ಲರಿಗೂ ಗೊತ್ತೇ ಇದೆ.
ಆದರೆ, ಸದ್ಯ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ನಂತರದಲ್ಲಿ ವರಸೆ ಬದಲಾಗಿದೆ. ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು ಜಿಲ್ಲೆಯಲ್ಲಿದ್ದ ಬಣಗಳನ್ನು ಸ್ವಲ್ಪ ವಿಸ್ತಾರ ಮಾಡಿಕೊಂಡಿದ್ದಾರೆ. ಕೋಲಾರದಲ್ಲಿದ್ದ ಕೆ.ಹೆಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದರ ಜೊತೆಗೆ ರಮೇಶ್ ಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡು ಹಿನ್ನೆಲೆ ಅವರು ರಾಜಕೀಯವಾಗಿ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ಕೆ.ಹೆಚ್.ಮುನಿಯಪ್ಪ ಅವರು ಕೂಡಾ ದೇವನಹಳ್ಳಿ ಕ್ಷೇತ್ರದ ಶಾಸಕರಾಗಿ, ಆಹಾರ ಸಚಿವರಾಗಿರುವ ಹಿನ್ನೆಲೆ ಕೋಲಾರ ಜಿಲ್ಲೆಯ ರಾಜಕಾರಣದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಿರುವಾಗ ಕೋಲಾರ ಜಿಲ್ಲೆಯಲ್ಲಿರುವ ನಾಲ್ವರು ಶಾಸಕರು ಹಾಗೂ ಇಬ್ಬರ ವಿಧಾನಪರಿಷತ್ ಸದಸ್ಯರುಗಳ ನಡುವೆ ಹಲವು ಕಾರಣಗಳಿಗೆ ಎರಡು ಬಣಗಾಳಾಗಿವೆ.
ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಕಲಾ ಅವರಿಬ್ಬರು ಒಂದು ಗುಂಪಾಗಿದ್ದರೇ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಒಂದು ಗುಂಪಾಗಿದ್ದಾರೆ. ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಅವರು ಎರಡೂ ಗುಂಪಿನಲ್ಲಿ ಇದ್ದೂ ಇಲ್ಲದಂತೆ ಕಾಣಿಸಿ ಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ಜಿಲ್ಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ, ಕೆಡಿಪಿ ಸಭೆಗಳಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹಾಗೂ ರೂಪಕಲಾ ಕಾಣಿಸಿಕೊಳ್ಳುತ್ತಿಲ್ಲ.
ಬದಲಾಗಿ ತಮ್ಮದೇ ಪಕ್ಷದ ಶಾಸಕರ ಮೇಲೆಯೇ ಅಕ್ರಮ ಹಗರಣದ ಆರೋಪ ಮಾಡುತ್ತಿದ್ದಾರೆ. ನಮ್ಮ ಅಣ್ಣ ನಮ್ಮ ಪಕ್ಷದ ಶಾಸಕರು ಎನ್ನುತ್ತಲೇ ಮಾಲೂರು ಶಾಸಕ ನಂಜೇಗೌಡ, ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದ ಅವಧಿಯಲ್ಲಿನ ಡೀಸೆಲ್ ಹಗರಣ, ಗೋಲ್ಡನ್ ಡೈರಿಯಲ್ಲಿ ಅಕ್ರಮ, ಸೋಲಾರ್ ಪ್ಲಾಂಟ್ನಲ್ಲಿನ ಕೆಲವು ನ್ಯೂನತೆಗಳನ್ನು ಬಿಚ್ಚಿಟ್ಟು ಇದು ರೈತರ ಮಹಿಳೆಯರ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಈ ಅಕ್ರಮಗಳ ತನಿಖೆಗೆ ಆಗ್ರಹಿಸುತ್ತಿರುವುದಾಗಿ ಬಹಿರಂಗ ಹೇಳಿಕೆ ನೀಡಿ ಸಿಎಂ ಸಿದ್ದರಾಮಯ್ಯ ಅವರಿಗೂ ಪತ್ರ ಬರೆದಿದ್ದಾರೆ.
ಇತ್ತ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ರೂಪಕಲಾ ಶಶಿಧರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಗೌಡ ಅವರು ಒಂದು ಟೀಂ ಮಾಡಿಕೊಂಡು ಕೋಲಾರ ಹಾಲು ಒಕ್ಕೂಟದ ಅಕ್ರಮಗಳ ಕುರಿತು ಆರೋಪ ಮಾಡಿದರೆ, ಅತ್ತ ಡಿಸಿಸಿ ಬ್ಯಾಂಕ್ನಲ್ಲಿ ನಡೆದಿರುವ ಅಕ್ರಮಗಳ ತನಿಖೆ ಆಗಬೇಕು ಎಂದು ಕಾಂಗ್ರೆಸ್ನ ಮತ್ತೊಂದು ಗುಂಪಿನ ಶಾಸಕರಾದ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಹಾಗೂ ನಂಜೇಗೌಡ ಆಗ್ರಹಿಸುವ ಮೂಲಕ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಅಡ್ಡಿಯಾಗುತ್ತಿದ್ದಾರೆ.
ಈ ವಿಷಯವಾಗಿ ಕೋಲಾರ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಕೂಡಾ ಈ ಗುಂಪಿನ ಪರವಾಗಿಯೇ ಸೇರಿಕೊಂಡಿದ್ದು, ಅವರು ಕೂಡಾ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಡಿಸಿಸಿ ಬ್ಯಾಂಕ್ನಲ್ಲಿ ನಡೆದಿರುವ ಅಕ್ರಮಗಳ ತನಿಖೆಯಾಗಬೇಕು ಎಂದು ಆಗ್ರಹ ಮಾಡುತ್ತಿದ್ದರು. ಆ ಕಾರಣದಿಂದಲೇ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಉಸ್ತುವಾರಿ ಸಚಿವ ಬೈರತಿ ಸುರೇಶ್ ವಿರುದ್ಧವೂ ಆರೋಪ ಮಾಡುವ ಮೂಲಕ ಅವರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲ ಎಂದಿದ್ದರು.
ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿರುವಾಗ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿ ಜಿಲ್ಲೆಯ ಅಭಿವೃದ್ದಿಗಾಗಿ ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕಿತ್ತು ಆದರೆ ಅದನ್ನು ಬಿಟ್ಟು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಕಾಂಗ್ರೆಸ್ ಶಾಸಕರುಗಳು ಗುಂಪುಗಾರಿಕೆ ಮಾಡಿಕೊಂಡು ಹಗೆ ಸಾಧಿಸುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಕಂಠಕವಾಗುತ್ತಿದ್ದಾರೆ. ಇವರ ಪ್ರತಿಷ್ಠೆಗಾಗಿ ಜಿಲ್ಲೆಯ ರೈತರ ಜೀವನಾಡಿ ಸಂಸ್ಥೆಗಳಾದ ಕೋಲಾರ ಹಾಲು ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ನ್ನು ನಿಷ್ಕ್ರಿಯಗೊಳಿಸುವ ಯತ್ನಿಸುತ್ತಿದ್ದಾರೆ. ಈ ಸಲುವಾಗಿಯೇ ಶಾಸಕ ನಾರಾಯಣಸ್ವಾಮಿ ಆರೋಪಕ್ಕೆ ಶಾಸಕ ನಂಜೇಗೌಡ ಕೂಡಾ ಖಾರವಾಗಿಯೇ ಉತ್ತರ ನೀಡುತ್ತಾ ನಾನು ನನ್ನ ಮನೆಗಾಗಿ ಈ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಎಂದು ಬಹಿರಂಗವಾಗಿಯೇ ಪ್ರತ್ಯುತ್ತರ ಕೊಡುತ್ತಿದ್ದಾರೆ.
ಸದ್ಯ ಜಿಲ್ಲೆಯ ಪರಿಸ್ಥಿತಿ ನೋಡಿದರೆ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳಿಗೆ ಜಿಲ್ಲೆಯ ಅಭಿವೃದ್ಧಿ ಮೇಲಿರುವ ಕಾಳಜಿ ಎಷ್ಟು ತಮ್ಮ ರಾಜಕೀಯ ತಂತ್ರ-ಕುತಂತ್ರಗಳ ಮೇಲಿರುವ ಕಾಳಜಿ ಎಷ್ಟು. ಜಿಲ್ಲೆಯ ಅಭಿವೃದ್ದಿಗಾಗಿ, ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಂದಾದರೂ ಸದನದಲ್ಲಿ ಒಗ್ಗಟ್ಟಾಗಿ ಧ್ವನಿ ಎತ್ತಿದ್ದಾರಾ? ಇಲ್ಲಾ ಜಿಲ್ಲೆಗಾಗಿ ಯಾವುದಾದರೂ ಕೆಲಸವನ್ನು ಪಟ್ಟು ಹಿಡಿದು ತಂದಿದ್ದಾರಾ? ಅನ್ನೋ ಹಲವು ಪ್ರಶ್ನೆಗಳನ್ನು ಜಿಲ್ಲೆಯ ಜನರು ಕೇಳುತ್ತಿದ್ದಾರೆ. ಸ್ವತಂತ್ರ್ಯಾ ನಂತರ ಜಿಲ್ಲೆಯ ಪಕ್ಷಾತೀತವಾಗಿ ರಾಜಕಾರಣಿಗಳು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಂಡಷ್ಟು ಜಿಲ್ಲೆಯ ಅಭಿವೃದ್ದಿ ಮಾಡಿಲ್ಲ ಅನ್ನೋದು ಜಿಲ್ಲೆಯ ಪರಿಸ್ಥಿತಿ ನೋಡಿದರೆ ತಿಳಿಯುತ್ತದೆ.
ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ವಾಟರ್ ವಾರ್, ಕಾವೇರಿ ಆರನೇ ಹಂತದ ಯೋಜನೆಗೆ ದಳ ವಿರೋಧ: ಕಾರಣವೇನು?
ಜಿಲ್ಲೆಯ ಪರಿಸ್ಥಿತಿ ಹೀಗಿರುವಾಗ ಕೋಲಾರ ಕಾಂಗ್ರೆಸ್ನಲ್ಲಿ ವಿಸ್ತರಣೆಯಾಗುತ್ತಿರುವ ಗುಂಪುಗಾರಿಕೆ ಯಾವ ಸಾಧನೆಗಾಗಿ ಅನ್ನೋದು ತಿಳಿಯುತ್ತಿಲ್ಲ. ಅದು ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಿಲ್ಲೆಯಲ್ಲಿದ್ದ ಬಣಗಳ ನಡುವೆ ಇದ್ದ ಬಿರುಕು ಮುಚ್ಚಬೇಕಿದ್ದ ರಾಜ್ಯ ಹಾಗೂ ರಾಷ್ಟ್ರ ನಾಯಕರು ಏನು ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಕಾಡುತ್ತಿದೆ. ಜಿಲ್ಲೆಯ ಕಾಂಗ್ರೆಸ್‌ನಲ್ಲಿನ ಈ ಬಣ ರಾಜಕೀಯ ನೇರವಾಗಿ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುತ್ತಿರುವುದಂತು ಸುಳ್ಳಲ್ಲ.