ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ (Maharashtra Assembly) ಬಹುನಿರೀಕ್ಷಿತ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಭಾನುವಾರ ನಡೆಯಿತು. ಮುಖ್ಯಮಂತ್ರಿಯಾಗಿ ಏಕನಾಥ್ ಶಿಂದೆ (Eknath Shinde) ಮತ್ತು ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ (Devendra Fadnavis) ಪ್ರಮಾಣ ವಚನ ಸ್ವೀಕರಿಸಿದ ನಂತರ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಿತು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ರಾಹುಲ್ ನರ್ವೇಕರ್ ಅವರ ಉಮೇದುವಾರಿಕೆಗೆ ಹೆಚ್ಚಿನವರ ಬೆಂಬಲ ಸಿಕ್ಕಿದೆ. ಮತಎಣಿಕೆ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. ಅವರ ಪರವಾಗಿ 164 ಮತ್ತು ವಿರುದ್ಧವಾಗಿ 107 ಮತಗಳು ಚಲಾವಣೆಯಾಗಿದ್ದವು.
ಎರಡು ದಿನಗಳ ವಿಶೇಷ ಅಧಿವೇಶನವು ಆರಂಭವಾದ ತಕ್ಷಣ ಸ್ಪೀಕರ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಕೊಲಾಬಾ ಕ್ಷೇತ್ರದ ಬಿಜೆಪಿ ಶಾಸಕ ರಾಹುಲ್ ನರ್ವೇಕರ್ ಅವರನ್ನು ಆಡಳಿತಾರೂಢ ಮೈತ್ರಿಕೂಟವು ತನ್ನ ಅಭ್ಯರ್ಥಿಯಾಗಿ ಘೋಷಿಸಿತು. ನರ್ವೇಕರ್ ಅವರ ಹೆಸರು ಸೂಚನೆಯಾದ ಬಗ್ಗೆ ಹಲವರಲ್ಲಿ ಅಚ್ಚರಿ ಮೂಡಿತ್ತು.
ನರ್ವೆಕರ್ ಅವರ ಎದುರಾಳಿಯಾಗಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಉದ್ಧವ್ ಠಾಕ್ರೆ ಅವರ ಕಟ್ಟರ್ ಬೆಂಬಲಿಗ ರಾಜನ್ ಸಾಲ್ವಿ ಅವರನ್ನು ಹೆಸರಿಸಿತ್ತು. ಈ ಮೊದಲು 2019ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಮೈತ್ರಿ ಸರ್ಕಾರವು ಸ್ಥಾನ ಹಂಚಿಕೆ ಒಪ್ಪಂದ್ಕೆ ಅನುಗುಣವಾಗಿ ಕಾಂಗ್ರೆಸ್ನ ಶಾಸಕರಿಗೆ ಸ್ಪೀಕರ್ ಸ್ಥಾನ ಬಿಟ್ಟುಕೊಟ್ಟಿತ್ತು. ಆದರೆ ಉದ್ಧವ್ ಠಾಕ್ರೆ ಅವರ ತಿರುಗಿಬಿದ್ದ ಶಿವಸೇನೆ ಶಾಸಕರು ಮೈತ್ರಿ ಸರ್ಕಾರ ಕೆಡವಿದರು.
BJP candidate Rahul Narwekar elected as the Speaker of Maharashtra Legislative Assembly: he received a total of 164 votes in support and 107 against him.
(Source: Maharashtra Assembly) pic.twitter.com/viHOHiVhkn
— ANI (@ANI) July 3, 2022
ನಿಲುವಳಿ ಮಂಡನೆಯ ನಂತರ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಮತಗಳನ್ನು ಎಣಿಸುವಂತೆ ಸೂಚನೆ ನೀಡಿದರು. ಬಿಜೆಪಿಯ ಇಬ್ಬರು ಶಾಸಕರಾದ ಗೋವರ್ದನ್ ಶರ್ಮಾ ಮತ್ತು ಪ್ರಕಾಶ್ ಪಾಟೀಲ್ ಭರ್ಸಖಾಲೆ ಅವರ ಮತಗಳ ಬಗ್ಗೆ ಗೊಂದಲ ಮೂಡಿದ್ದರಿಂದ ಕೆಲ ಸಮಯ ಮತಎಣಿಕೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನಂತರ ಮತ್ತೆ ಆರಂಭವಾಯಿತು.
ಮಹಾ ವಿಕಾಸ್ ಅಘಾಡಿ ಸರ್ಕಾರವು ಪತನಗೊಂಡ ನಂತರ ನಂತರ ಇದೇ ಮೊದಲ ಬಾರಿಗೆ ಎಲ್ಲ ಪಕ್ಷಗಳ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಸೇರಿದ್ದಾರೆ. ತಮ್ಮ ಪಕ್ಷದ ಉಮೇದುವಾರರಿಗೆ 170 ಮತಗಳು ಸಿಗಬಹುದು ಎಂದು ಮಹಾರಾಷ್ಟ್ರದ ಬಿಜೆಪಿ ನಾಯಕ ಸುಧೀರ್ ಮುನ್ಗಂಟಿವಾರ್ ಎಎನ್ಐ ಸುದ್ದಿಸಂಸ್ಥೆಗೆ ಇಂದು ಮುಂಜಾನೆ ಪ್ರತಿಕ್ರಿಯಿಸಿದ್ದರು.
ಬಂಡಾಯ ಶಾಸಕರು ತಮ್ಮದೇ ನಿಜವಾದ ಶಿವಸೇನೆ, ಬಹುತೇಕ ಶಾಸಕರ ತಮಗೇ ಇದೆ ಎಂದು ಪ್ರತಿಪಾದಿಸಿದ್ದಾರೆ. ಮಹಾವಿಕಾಸ್ ಅಘಾಡಿ ಸರ್ಕಾರದ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರು 16 ಬಂಡಾಯ ಶಾಸಕರ ವಿರುದ್ಧ ಅನರ್ಹತೆಯ ವಿಧಿವಿಧಾನಗಳನ್ನು ಆರಂಭಿಸಿದ್ದಾರೆ. ಈ ಪ್ರಕರಣದ ವಿಚಾರಣೆಯು ಇನ್ನೂ ಸುಪ್ರೀಂಕೋರ್ಟ್ನಲ್ಲಿ ಬಾಕಿಯಿದೆ. ಬಂಡಾಯ ಶಾಸಕರಿಗೆ ಪ್ರತಿಕ್ರಿಯಿಸಿಸಲು ಡೆಪ್ಯುಟಿ ಸ್ಪೀಕರ್ ನೀಡಿದ್ದ 48 ಗಂಟೆಗಳ ಕಾಲಮಿತಿಯನ್ನು ಸುಪ್ರೀಂಕೋರ್ಟ್ ಜುಲೈ 12ರವರೆಗೆ ವಿಸ್ತರಿಸಿತ್ತು.
Published On - 12:52 pm, Sun, 3 July 22