ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಜಾಮೀನು ಕೋರಿದ ಅನಿಲ್ ದೇಶ್ಮುಖ್, ನವಾಬ್ ಮಲಿಕ್; ಮನವಿ ತಿರಸ್ಕರಿಸಿದ ನ್ಯಾಯಾಲಯ
ಇಬ್ಬರು ಎನ್‌ಸಿಪಿ ನಾಯಕರ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ ವಿರೋಧಿಸಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಕೈದಿಗಳಿಗೆ ಮತದಾನದ ಹಕ್ಕು ಇಲ್ಲ, ಯಾವುದೇ ಚುನಾವಣೆಯಲ್ಲಿ ಅವರು ಮತ ಚಲಾಯಿಸುವಂತಿಲ್ಲ...
ದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ (Rajya Sabha elections) ಮತ ಚಲಾಯಿಸುವುದಕ್ಕಾಗಿ ಶುಕ್ರವಾರ ವಿಧಾನಸೌಧಕ್ಕೆ ಭೇಟಿ ನೀಡಲು ಅನುಮತಿ ಕೋರಿ ಎನ್‌ಸಿಪಿ ನಾಯಕರಾದ ನವಾಬ್ ಮಲಿಕ್ (Nawab Malik) ಮತ್ತು ಅನಿಲ್ ದೇಶ್ಮುಖ್ (Anil Deshmukh) ಸಲ್ಲಿಸಿದ್ದ ಅರ್ಜಿಗಳನ್ನು ಮುಂಬೈ ವಿಶೇಷ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಭ್ರಷ್ಟಾಚಾರ ಆರೋಪದಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ದೇಶ್ಮುಖ್ ಅವರನ್ನು ಬಂಧಿಸಲಾಗಿತ್ತು. ಅದೇ ವೇಳೆ ಪರಾರಿಯಾಗಿರುವ ಗ್ಯಾಂಗ್ ಸ್ಟರ್ ದಾವೂದ್ ಇಬ್ರಾಹಿಂ ಕಸ್ಕರ್ ಮತ್ತು ಆತನ ಸಹಚರರ ಜತೆಗೆ ಅಕ್ರಮ ಹಣ ವ್ಯವಹಾರ ಆರೋಪದಲ್ಲಿ ಮಲಿಕ್ ಅವರನ್ನು ಬಂಧಿಸಲಾಗಿತ್ತು. ಇಬ್ಬರು ಎನ್‌ಸಿಪಿ ನಾಯಕರ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ ವಿರೋಧಿಸಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಕೈದಿಗಳಿಗೆ ಮತದಾನದ ಹಕ್ಕು ಇಲ್ಲ, ಯಾವುದೇ ಚುನಾವಣೆಯಲ್ಲಿ ಅವರು ಮತ ಚಲಾಯಿಸುವಂತಿಲ್ಲ. ಜೈಲಿನಲ್ಲಿರುವ ವ್ಯಕ್ತಿ ಶಿಕ್ಷೆಗೆ ಗುರಿಯಾಗಿದ್ದರೆ ಅಥವಾ ವಿಚಾರಣಾಧೀನ ಕೈದಿ ಆಗಿದ್ದರೂ ಅದು ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಎಂದಿದೆ. ಅನಿಲ್ ದೇಶ್ಮುಖ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ತಿಳಿಸಿತ್ತು. ಇಡಿ ಪ್ರಕಾರ, ದೇಶಮುಖ್ ಅವರು ಗೃಹ ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ಮುಂಬೈನ ವಿವಿಧ ಬಾರ್‌ಗಳಿಂದ ₹ 4.70 ಕೋಟಿ ಸಂಗ್ರಹಿಸಿದ್ದಾರೆ.
ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವಾಬ್ ಮಲಿಕ್ ನ್ನು ಈ ವರ್ಷ ಫೆಬ್ರವರಿ 23 ರಂದು ಇಡಿ ಬಂಧಿಸಿತ್ತು.
ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟಕ್ಕೆ ರಾಜ್ಯಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ಎರಡು ದಶಕಗಳ ನಂತರ, ಮಹಾರಾಷ್ಟ್ರದಿಂದ ರಾಜ್ಯಸಭಾ ಚುನಾವಣೆಯಲ್ಲಿ ಆರು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಆಡಳಿತಾರೂಢ ಶಿವಸೇನೆ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮಹಾ ವಿಕಾಸ್ ಅಘಾಡಿ ಮಿತ್ರಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್ ತಲಾ ಒಬ್ಬ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಿದೆ. ಪ್ರತಿಪಕ್ಷ ಬಿಜೆಪಿ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿಯ ಧನಂಜಯ್ ಮಹಾದಿಕ್ ಮತ್ತು ಶಿವಸೇನೆಯ ಸಂಜಯ್ ಪವಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಲ್ಲಾ ಪಕ್ಷಗಳ ವ್ಯಾಪಕ ವಾದಗಳನ್ನು ಆಲಿಸಿದ ನ್ಯಾಯಾಲಯವು ಮಲಿಕ್ ಮತ್ತು ಅನಿಲ್ ದೇಶ್ಮುಖ್ ಅವರಿಗೆ ತಾತ್ಕಾಲಿಕ ಜಾಮೀನನ್ನು ನಿರಾಕರಿಸಿತು.
ಮಂಗಳವಾರ, ಕೇಂದ್ರ ಸಂಸ್ಥೆಯು ಕೈದಿಗಳಿಗೆ ಮತದಾನದ ಹಕ್ಕುಗಳನ್ನು ಹೊಂದಿಲ್ಲ ಎಂದು ಮನವಿಗಳನ್ನು ವಿರೋಧಿಸಿತ್ತು. “ಜನತಾ ಪ್ರಾತಿನಿಧ್ಯ ಕಾಯಿದೆ, 1951 ರ ಅಡಿಯಲ್ಲಿ ಕೈದಿಗಳು ಮತದಾನದ ಹಕ್ಕುಗಳನ್ನು ಹೊಂದಿಲ್ಲ ಎಂದು ನಮೂದಿಸುವುದು ಸೂಕ್ತವಾಗಿದೆ. . ಮತದಾನದ ಹಕ್ಕು ಕಾಯಿದೆಯ ಸೆಕ್ಷನ್ 62 ರ ಅಡಿಯಲ್ಲಿ ರಚಿಸಲಾದ ಶಾಸನಬದ್ಧ ಹಕ್ಕಾಗಿದೆ. ‘ಮತದಾನದ ಹಕ್ಕು ಶಾಸನಬದ್ಧ ಹಕ್ಕು ಎಂದು ಕಾಯಿದೆಯಲ್ಲಿ ಸೂಚಿಸಲಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ’ ಎಂದು ಇಡಿ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:56 pm, Thu, 9 June 22