Narendra Modi Next PM? ಒಂದು ಸವಿಸ್ತಾರ ವರದಿ: 2024ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ? ತಾನು ವಿಶ್ರಾಂತಿಯನ್ನೇ ಪಡೆಯಲ್ಲ ಎಂದು 71ರ ಮೋದಿ ಈಗ ಹೇಳಿದ್ದೇಕೆ?

| Updated By: ಸಾಧು ಶ್ರೀನಾಥ್​

Updated on: May 31, 2022 | 9:52 PM

ಪ್ರಧಾನಿ ನರೇಂದ್ರ ಮೋದಿ, 2024ರಲ್ಲಿ ಮತ್ತೊಮ್ಮೆ ದೇಶದ ಪ್ರಧಾನಿಯಾಗ್ತಾರಾ? ಪ್ರಧಾನಿ ಮೋದಿ ರಾಜಕೀಯದಿಂದ ನಿವೃತ್ತಿ, ವಿಶ್ರಾಂತಿಯನ್ನೇ ಪಡೆಯಲ್ಲವೇ? ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು? ವಿಪಕ್ಷಗಳ ಮೈತ್ರಿಕೂಟಕ್ಕೆ ಬಿಜೆಪಿ ಮಣಿಸಲಾಗಲ್ಲವೇ?

Narendra Modi Next PM? ಒಂದು ಸವಿಸ್ತಾರ ವರದಿ: 2024ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ? ತಾನು ವಿಶ್ರಾಂತಿಯನ್ನೇ ಪಡೆಯಲ್ಲ ಎಂದು 71ರ ಮೋದಿ ಈಗ ಹೇಳಿದ್ದೇಕೆ?
ನರೇಂದ್ರ ಮೋದಿ
Image Credit source: google
Follow us on

ನರೇಂದ್ರ ಮೋದಿ ಕಳೆದೆರೆಡು ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಬೇರೆ ಮಿತ್ರಪಕ್ಷಗಳ ಬೆಂಬಲದ ಜರೂರುತ್ತು ಇಲ್ಲದೇ ಕೇಂದ್ರದಲ್ಲಿ ಸರ್ಕಾರ ರಚಿಸುವಷ್ಟು ಸ್ಪಷ್ಟ ಬಹುಮತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಿಕ್ಕಿದೆ. ಹೀಗೆ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲು ನರೇಂದ್ರ ಮೋದಿ ನಾಯಕತ್ವ, ವರ್ಚಸ್ಸು ಕಾರಣ. ಈಗಲೂ ದೇಶದಲ್ಲಿ ಬಿಜೆಪಿ ಪಕ್ಷವು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಪ್ರಧಾನಿ ನರೇಂದ್ರ ಮೋದಿ ನಾಮಜಪ ಮಾಡುತ್ತೆ. ಮೋದಿ ನಾಮಬಲ, ವರ್ಚಸ್ಸು, ನಾಯಕತ್ವ ಇಲ್ಲದೇ ಬಿಜೆಪಿಗೆ ಚುನಾವಣೆಗಳನ್ನು ಗೆಲ್ಲಲಾಗಲ್ಲ. ಮೋದಿಯ ಜನಪ್ರಿಯತೆ, ವರ್ಚಸ್ಸು ಮೀರಿಸುವ ಮತ್ತೊಬ್ಬ ನಾಯಕ ಬಿಜೆಪಿಯೊಳಗೆ ಇಲ್ಲ. ಹೀಗಾಗಿ 2024ರ ಲೋಕಸಭಾ ಚುನಾವಣೆಗೂ ಮತ್ತೊಮ್ಮೆ ಬಿಜೆಪಿಯಿಂದ ನರೇಂದ್ರ ಮೋದಿಯೇ ಪ್ರಧಾನಿ ಹುದ್ದೆಯ ಅಭ್ಯರ್ಥಿ.

ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿಯಾದರೇ, 2024ರ ಲೋಕಸಭಾ ಚುನಾವಣೆ ಗೆಲುವ ಸುಲಭ ಎಂಬ ಲೆಕ್ಕಾಚಾರ ಬಿಜೆಪಿ ಪಕ್ಷದೊಳಗೆ ಇದೆ. ಮೋದಿ ನಾಯಕತ್ವದಲ್ಲಿ 2024ರ ಲೋಕಸಭಾ ಚುನಾವಣೆ ಎದುರಿಸಿದರೇ, ಮತ್ತೊಮ್ಮೆ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿ ಪಕ್ಷದಲ್ಲಿದೆ.

ನರೇಂದ್ರ ಮೋದಿಗೆ ಈಗ 71 ವರ್ಷ – 2024ರ ವೇಳೆಗೆ 73 ವರ್ಷ ವಯಸ್ಸು:

ನರೇಂದ್ರ ಮೋದಿಗೆ ಈಗ 71 ವರ್ಷ ವಯಸ್ಸು. 2024ರ ಮುಂದಿನ ಲೋಕಸಭಾ ಚುನಾವಣೆಗೆ 73 ವರ್ಷ ವಯಸ್ಸಾಗಲಿದೆ. ಬಿಜೆಪಿ ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಲೋಕಸಭಾ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯ ಟಿಕೆಟ್ ನೀಡಲ್ಲ ಎಂಬ ಅಲಿಖಿತ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈ ನಿಯಮದಡಿಯೇ ಘಟಾನುಘಟಿ ರಾಜಕೀಯ ನಾಯಕರಿಗೂ ಬಿಜೆಪಿ ಪಕ್ಷ ಬಲವಂತದ ರಾಜಕೀಯ ನಿವೃತ್ತಿಯನ್ನು ನೀಡಿದೆ. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅಂಥ ನಾಯಕರಿಗೂ ಲೋಕಸಭಾ ಚುನಾವಣೆಗೆ ಸ್ಪರ್ಧೆಗೆ ಅವಕಾಶ ನೀಡದೇ ರಾಜಕೀಯ ನಿವೃತ್ತಿ ನೀಡಿದೆ.

ಅದೇ ನಿಯಮ ಪಕ್ಷದ ಶಿಸ್ತಿನ ಸಿಪಾಯಿ ನರೇಂದ್ರ ಮೋದಿ ಅವರಿಗೂ ಅನ್ವಯವಾಗುತ್ತೆ. ಆದರೇ, 2024ರ ಲೋಕಸಭಾ ಚುನಾವಣೆ ವೇಳೆಗೆ ಮೋದಿ ಅವರಿಗೆ 73 ವರ್ಷ ವಯಸ್ಸು ಆಗಿರುತ್ತೆ. ಹೀಗಾಗಿ ನರೇಂದ್ರ ಮೋದಿ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷದ ಅಲಿಖಿತ ನಿಯಮ ಅಡ್ಡಿಯಾಗಲ್ಲ. ಹೀಗಾಗಿ 2024ರ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ಮತ್ತೆ ಸ್ಪರ್ಧೆ ಮಾಡುವುದು ಖಚಿತ.

2024ರ ಚುನಾವಣೆ ಸ್ಪರ್ಧೆಯ ಸುಳಿವು ನೀಡಿದ ಮೋದಿ – ತಾವು ವಿಶ್ರಾಂತಿಯನ್ನೇ ಪಡೆಯಲ್ಲ ಎಂದು ಮೋದಿ ಹೇಳಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಗುಜರಾತ್‌ನ ಕಾರ್ಯಕ್ರಮವೊಂದನ್ನು ವರ್ಚ್ಯುಯಲ್ ಆಗಿ ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಮೋದಿ, ತಮ್ಮನ್ನು ಭೇಟಿಯಾದ ವಿರೋಧ ಪಕ್ಷದ ನಾಯಕರೊಬ್ಬರು ಆಡಿದ ಮಾತುಗಳನ್ನು ಉಲ್ಲೇಖಿಸಿದ್ದರು. ದೇಶದ ಜನರು ತಮ್ಮನ್ನು 2 ಬಾರಿ ಪ್ರಧಾನಿ ಮಾಡಿದ್ದಾರೆ. ತಮಗೆ ಇನ್ನೇನ್ನೂ ಬೇಕು. 2 ಬಾರಿ ಪ್ರಧಾನಿಯಾಗುವುದೇ ದೊಡ್ಡದು, ಅದೃಷ್ಟ. 2 ಬಾರಿ ಪ್ರಧಾನಿಯಾದರೇ ಎಲ್ಲವೂ ಸಿಕ್ಕಂತೆ ಎಂಬರ್ಥದಲ್ಲಿ ವಿರೋಧ ಪಕ್ಷದ ನಾಯಕರು ಮೋದಿಗೆ ಹೇಳಿದ್ದರಂತೆ.

ಇದಕ್ಕೆ ಪ್ರತಿಕ್ರಿಯಿಸಿದ ನರೇಂದ್ರ ಮೋದಿ ರಾಜಕೀಯದಲ್ಲಿ ತಮಗೆ ವಿಶ್ರಾಂತಿ ಎಂಬುದೇ ಇಲ್ಲ. ತಾವು ವಿಶ್ರಾಂತಿ ಪಡೆಯಲ್ಲ. ನಿರಂತರವಾಗಿ ಕೆಲಸ ಮಾಡುತ್ತಿರುತ್ತೇನೆ. ಇದು ಗುಜರಾತ್ ನ ಮಣ್ಣಿನಿಂದ ಬಂದ ಗುಣ ಎಂದು ಗುಜರಾತ್ ಬಗ್ಗೆ ಹೊಗಳಿದ್ದರು. ಅದೇ ವೇಳೆ ರಾಜಕೀಯದಲ್ಲಿ ತಾವು ವಿಶ್ರಾಂತಿ ಪಡೆಯಲ್ಲ ಎಂಬುದನ್ನು ನೇರವಾಗಿ ಹೇಳಿದ್ದರು. ಈ ಮೂಲಕ 2024ರ ಲೋಕಸಭಾ ಚುನಾವಣೆಗೆ ತಾವು ವಿಶ್ರಾಂತಿ ಪಡೆಯಲ್ಲ, ಮತ್ತೆ ಸ್ಪರ್ಧಿಸುತ್ತೇನೆ ಎಂಬುದನ್ನು ಮೋದಿ ಹೇಳಿದಂತಾಗಿದೆ.

ಮೋದಿ ಅವರ ಈ ಹೇಳಿಕೆಯಿಂದ ರಾಜಕೀಯದಿಂದ ಸದ್ಯಕ್ಕಂತೂ ವಿಶ್ರಾಂತಿ ಪಡೆಯಲ್ಲ ಎಂಬುದು ಸ್ಪಷ್ಟವಾಗಿದೆ. ಮೋದಿಗೆ ಸದ್ಯಕ್ಕೆ ರಾಜಕೀಯ ನಿವೃತ್ತಿ ಪಡೆಯಲ್ಲ. ಹೀಗಾಗಿ 2024ರ ಲೋಕಸಭಾ ಚುನಾವಣೆಗೂ ಮತ್ತೆ ನರೇಂದ್ರ ಮೋದಿಯೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ. ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಉಳಿದ ನಾಯಕರು 2026ರ ನಂತರ ಪ್ರಧಾನಿ ಹುದ್ದೆಗೇರುವ ಅವಕಾಶ ಒದಗಿ ಬರುತ್ತೋ ಇಲ್ಲವೋ ಎಂದು ಕಾಯಬೇಕು. ಮೋದಿ ನಂತರವೂ ಬಿಜೆಪಿಯಲ್ಲಿ ಯಾರಾದರೂ ಪ್ರಧಾನಿ ಹುದ್ದೆಗೇರುವುದಾದರೇ, ಅದಕ್ಕೂ ಮೋದಿಯ ಬೆಂಬಲ, ಆಶೀರ್ವಾದ ಬೇಕೇ ಬೇಕು.

2024ರಲ್ಲಿ ಮೋದಿ ವಿರುದ್ಧ ವಿಪಕ್ಷಗಳ ಅಭ್ಯರ್ಥಿ ಯಾರು? ವಿಪಕ್ಷಗಳಲ್ಲಿ ಮೂಡದ ಒಮ್ಮತ

2024ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. ಆದರೇ, 2024ರಲ್ಲಿ ಮೋದಿ ಎದುರಾಳಿ ಯಾರು ಎಂಬುದನ್ನು ವಿಪಕ್ಷಗಳು ನಿರ್ಧರಿಸಬೇಕು. ಕಾಂಗ್ರೆಸ್ ಪಕ್ಷವು ಪ್ರಶಾಂತ್ ಕಿಶೋರ್ ಸಲಹೆಯಂತೆ 375 ರಿಂದ 400 ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೋ, ಯಾವ ಯಾವ ರಾಜ್ಯಗಳಲ್ಲಿ ಯಾವ ಯಾವ ಪ್ರಾದೇಶಿಕ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದನ್ನು ಕಾಂಗ್ರೆಸ್ ಪಕ್ಷವೇ ನಿರ್ಧರಿಸಿಕೊಳ್ಳಬೇಕು.

ವಿಪಕ್ಷಗಳು ಮೋದಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವುದಾದರೇ, ಚುನಾವಣೆಗೂ ಮುನ್ನ ಮೈತ್ರಿಕೂಟ ರಚಿಸಿಕೊಳ್ಳಬೇಕು. ಆ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಯಾರನ್ನಾದರೂ ಆಯ್ಕೆ ಮಾಡಿಕೊಂಡು ಘೋಷಿಸಬೇಕು. ಆದರೇ, ವಿಪಕ್ಷಗಳ ಪಾಳಯದಲ್ಲಿ ಅನೇಕ ನಾಯಕರಿರುವುದರಿಂದ ಪ್ರಧಾನಿ ಅಭ್ಯರ್ಥಿ ಘೋಷಣೆ ಕಷ್ಟ ಸಾಧ್ಯ. ಈಗಿನ ಸ್ಥಿತಿಯಲ್ಲಿ ವಿಪಕ್ಷಗಳು ಒಮ್ಮತದ ಪ್ರಧಾನಿ ಅಭ್ಯರ್ಥಿ ಘೋಷಿಸುವುದು ಸಾಧ್ಯವೇ ಇಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಮೈತ್ರಿಕೂಟ ರಚನೆಗೆ ವಿಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ತಯಾರಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಇದ್ದಂತೆ ಎಂದು ಪ್ರಾದೇಶಿಕ ಪಕ್ಷಗಳು ಹೇಳುತ್ತಾವೆ. ಕಾಂಗ್ರೆಸ್ ಪಕ್ಷವನ್ನು ಈಗ ಪ್ರಾದೇಶಿಕ ಪಕ್ಷಗಳೇ ದೂರು ಇಡುವ ಕಾಲ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲೇ ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಪಕ್ಷಗಳೇ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಬಿಎಸ್ಪಿ ಹತ್ತು ಕ್ಷೇತ್ರಗಳಲ್ಲಿ, ಎಸ್ಪಿ ಪಕ್ಷ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.

ಕಾಂಗ್ರೆಸ್ ಜೊತೆ ಮೈತ್ರಿಗೆ ಪ್ರಾದೇಶಿಕ ಪಕ್ಷಗಳು ಸಿದ್ದವಿಲ್ಲ- ಒಡೆದ ಮನೆಯಂತಾಗಿರುವ ವಿಪಕ್ಷಗಳು

ಕಾಂಗ್ರೆಸ್ ಜೊತೆ ಮೈತ್ರಿಗೆ ಇದೇ ರೀತಿ ಇನ್ನೂ ಕೆಲ ಪ್ರಾದೇಶಿಕ ಪಕ್ಷಗಳು ಸಿದ್ದರಿಲ್ಲ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ, ತೆಲಂಗಾಣದಲ್ಲಿ ಟಿ.ಆರ್.ಎಸ್, ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ, ಒರಿಸ್ಸಾದಲ್ಲಿ ಬಿಜೆಡಿ, ಆಂಧ್ರದಲ್ಲಿ ವೈಎಸ್ಆರ್‌ ಕಾಂಗ್ರೆಸ್ ಪಕ್ಷಗಳು ಕಾಂಗ್ರೆಸ್ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಸಿದ್ದರಿಲ್ಲ. ಮಮತಾ ಬ್ಯಾನರ್ಜಿ, ಶರದ್ ಪವಾರ್, ಕೆಸಿಆರ್ ಹಾಗೂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಲ್ಲರಿಗೂ ಪ್ರಧಾನಿ ಹುದ್ದೆಯ ಆಕಾಂಕ್ಷೆ ಇದೆ. ಎಲ್ಲರೂ ಮಹತ್ವಾಕಾಂಕ್ಷಿ ನಾಯಕರು. ಆದರೇ, ತಮ್ಮ ರಾಜ್ಯದ ಹೊರಗೆ ಈ ನಾಯಕರ ಪಕ್ಷಗಳಿಗೆ ನೆಲೆ ಇಲ್ಲ. ಹೀಗಾಗಿ ಮೋದಿ ವಿರುದ್ಧ ಸಮರ್ಥ ಎದುರಾಳಿಯೂ 2024ರ ಲೋಕಸಭಾ ಚುನಾವಣೆಗೆ ಇಲ್ಲ.

2014ರಲ್ಲಿ ಯುಪಿಎ ಭ್ರಷ್ಟಾಚಾರದ ವಿರುದ್ಧ ಅಸ್ತ್ರ – 2019ರಲ್ಲಿ ಬಾಲಾಕೋಟ್ ಏರ್ ಸ್ಟ್ರೈಕ್ ಅಸ್ತ್ರ, 2024ಕ್ಕೆ ಯಾವುದು?

2014ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರವನ್ನು ಮೋದಿ ಬಳಸಿದ್ದರು. ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾ ಖೋವುಂಗಾ, ನಾ ಖೋನೆ ದುಂಗಾ ಎಂದು ಹೇಳುವ ಮೂಲಕ ಭ್ರಷ್ಟಾಚಾರವನ್ನು ತಾವು ಸಹಿಸಲ್ಲ ಎಂದು ದೇಶದ ಜನರಿಗೆ ಭರವಸೆ ನೀಡಿದ್ದರು. ಯುಪಿಎ ಸರ್ಕಾರದ ಭ್ರಷ್ಟಾಚಾರವೇ ಮೋದಿ ಅಸ್ತ್ರವಾಗಿತ್ತು. ಇದೇ ಮೋದಿಗೆ 2014ರಲ್ಲಿ ಭರ್ಜರಿ ಗೆಲುವು ತಂದುಕೊಟ್ಟಿತ್ತು. 2019ರಲ್ಲಿ ಪುಲ್ವಾಮಾ ದಾಳಿಯ ಬಳಿಕ ನಡೆದ ಬಾಲಕೋಟ್ ಏರ್ ಸ್ಟ್ರೈಕ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಮೋದಿ ಗೆಲುವಿಗೆ ಕಾರಣವಾಯಿತು.

2019ರಲ್ಲಿ ಬಿಜೆಪಿಯು ರಾಷ್ಟ್ರೀಯ ಭದ್ರತೆಯನ್ನೇ ಪ್ರಮುಖ ಚುನಾವಣಾ ವಿಷಯವಾಗಿಸಿತ್ತು. ಅದೇ ಬಿಜೆಪಿಗೆ ಲಾಭ ತಂದುಕೊಟ್ಟಿತ್ತು. ಈಗ 2024ರ ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿ ಗೆಲುವಿಗಾಗಿ ಯಾವ ಅಸ್ತ್ರ ಬಳಸುತ್ತಾರೆ ಎಂಬ ಬಗ್ಗೆ ಕುತೂಹಲ ಇದೆ. ಅಯೋಧ್ಯೆಯ ರಾಮಮಂದಿರ-ಮಸೀದಿ ವಿವಾದ ಸುಪ್ರೀಂಕೋರ್ಟ್ ತೀರ್ಪಿನಿಂದ ಬಗೆಹರಿದಿದೆ. ಈಗ ಕಾಶೀ, ಮಥುರಾದ ಮಂದಿರ-ಮಸೀದಿ ವಿವಾದ ನಡೆಯುತ್ತಿದೆ. 2024ರೊಳಗೆ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ನಿರ್ಮಾಣವಾಗುತ್ತೆ. ಇದನ್ನೇ ದೇಶದ ಜನರಿಗೆ ತೋರಿಸಿ ಮೋದಿ ಮತ ಕೇಳುತ್ತಾರಾ? ಬೇರೆ ಯಾವ ವಿಷಯವನ್ನು ದೇಶದ ಜನರ ಮುಂದಿಟ್ಟು ಮತ ಕೇಳುತ್ತಾರೆ ಎಂಬ ಬಗ್ಗೆ ಕುತೂಹಲ ಇದೆ.

ಪಾಕ್ ಮೇಲೆ ಯುದ್ಧ ಮಾಡ್ತಾರಾ? ಪಿಓಕೆ ಮರುವಶಪಡಿಸಿಕೊಳ್ತಾರಾ?

2024ರ ಲೋಕಸಭಾ ಚುನಾವಣೆ ಗೆಲುವಿಗೆ ಮೋದಿ ಯಾವ ಅಸ್ತ್ರ ಬಳಸಬಹುದು ಎಂಬ ಬಗ್ಗೆ ಕುತೂಹಲ ಸಹಜವಾಗಿಯೇ ಇದೆ. ಪ್ರತಿಯೊಂದು ಲೋಕಸಭಾ ಚುನಾವಣೆಗೂ ದೇಶದ ಜನರ ಮನ ಗೆಲ್ಲಲು ಮೋದಿ ಬೇರೆ ಬೇರೆ ಅಸ್ತ್ರಗಳನ್ನು ಬಳಸಿದ್ದಾರೆ. ಭಾರತದಲ್ಲಿ ಅಭಿವೃದ್ದಿಯೊಂದೇ ಚುನಾವಣೆಯಲ್ಲಿ ಗೆಲುವಿಗೆ ಬೇಕಾದ ಮತಗಳನ್ನು ತಂದುಕೊಡಲ್ಲ. ಹೀಗಾಗಿ ಭಾವನಾತ್ಮಕ ವಿಷಯಗಳನ್ನು ಚುನಾವಣಾ ವಿಷಯವಾಗಿಸಿ ಜನರ ಮನ ಗೆಲ್ಲುವ ಕಲೆ ಭಾರತದ ರಾಜಕೀಯ ಪಕ್ಷಗಳಿಗೆ ಕರಗತವಾಗಿದೆ. ಹೀಗಾಗಿ 2024ರ ಲೋಕಸಭಾ ಚುನಾವಣೆಗೂ ಮೋದಿ ಯಾವುದಾದರೊಂದು ಮಹತ್ವದ ವಿಷಯವನ್ನೇ ಜನರ ಮುಂದಿಟ್ಟು ಚುನಾವಣೆಯಲ್ಲಿ ಮತದ ಫಸಲು ಕಟಾವು ಮಾಡಬಹುದು ಎಂಬ ಲೆಕ್ಕಾಚಾರ ಇದೆ.

ಇದರ ಭಾಗವಾಗಿಯೇ ಮೋದಿ, ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಬಹುದು, ಇಲ್ಲವೇ, ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಳ್ಳಲು ಯತ್ನಿಸಬಹುದು. ಪಾಕ್ ವಿರುದ್ಧದ ಯುದ್ಧದಲ್ಲಿ ಗೆಲುವು ಭಾರತಕ್ಕೆ ಸಹಜವಾಗಿಯೇ ಸಿಗುತ್ತೆ. ಯುದ್ಧದ ಗೆಲುವಿನ ಬಳಿಕ ಜನರ ಮತ ಫಸಲಿನ ಕಟಾವಿಗೆ ಒಳ್ಳೆಯ ಅಸ್ತ್ರವಾಗಬಹುದು. ಕಾರ್ಗಿಲ್ ಯುದ್ಧದ ಬಳಿಕ 1999 ರಲ್ಲಿ ವಾಜಪೇಯಿ ಮತ್ತೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದರು. ಇಂದಿರಾಗಾಂಧಿ ಕೂಡ ಪಾಕಿಸ್ತಾನದ ವಿರುದ್ಧದ 1971ರ ಗೆಲುವಿನ ಬಳಿಕ ಕೇಂದ್ರದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದ್ದರು. ಹೀಗಾಗಿ ಪಾಕ್ ವಿರುದ್ಧ ಯುದ್ಧ ಘೋಷಿಸಿದ್ರೆ, ಲೋಕಸಭಾ ಚುನಾವಣೆಯಲ್ಲಿ ಗೆಲುವು ಸುಲಭ ಎಂಬುದಕ್ಕೆ ಈಗ ಇತಿಹಾಸದ ಬಲವೂ ಇದೆ.

ಅಖಂಡ ಭಾರತದ ಕನಸು ಸಾಕಾರವಾಗುತ್ತಾ? ಮೋಹನ್ ಭಾಗವತ್ ಹೇಳಿಕೆ ನಿಜವಾಗುತ್ತಾ?

ಭಾರತವು ಅಖಂಡ ಭಾರತವಾಗಬೇಕು ಎಂಬ ಕನಸು, ಆಸೆ ರಾಷ್ಟ್ರೀಯವಾದಿಗಳಿಗೆ ಇದೆ. ಬಿಜೆಪಿಯ ಮಾತೃಸಂಘಟನೆಯ ಆರ್.ಎಸ್.ಎಸ್‌. ಮುಖ್ಯಸ್ಥ ಮೋಹನ್ ಭಾಗವತ್ ಕೂಡ 15 ದಿನದ ಹಿಂದೆ ಮುಂದಿನ 10ರಿಂದ 15 ವರ್ಷಗಳಲ್ಲಿ ಅಖಂಡ ಭಾರತ್ ನಿರ್ಮಾಣವಾಗುತ್ತೆ ಎಂದು ಹೇಳಿದ್ದಾರೆ.

ಮೋಹನ್ ಭಾಗವತ್ ಅವರ ಆ ಹೇಳಿಕೆ ಈಗ ಕುತೂಹಲಕ್ಕೆ ಕಾರಣವಾಗಿದೆ. ಆರ್.ಎಸ್‌.ಎಸ್. ಹೇಳಿದ್ದನ್ನು ಬಿಜೆಪಿ ಪಕ್ಷ ಪಾಲಿಸಿಕೊಂಡು ಬಂದಿದೆ. ಹೀಗಾಗಿ ಆರ್.ಎಸ್‌.ಎಸ್. ಕಾರ್ಯಸೂಚಿಯನ್ನು ಪ್ರಧಾನಿ ಮೋದಿ ಜಾರಿಗೊಳಿಸುತ್ತಾರಾ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಅಖಂಡ ಭಾರತ ಅಂದರೇ, ಈಗಿನ ಪಾಕಿಸ್ತಾನ, ಅಪ್ಘನಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್, ಟಿಬೆಟ್, ಭೂತಾನ್, ಆಕ್ಸಾಯ್ ಚೀನ್‌ ಸೇರಿದ ಎಲ್ಲ ಭೂ ಪ್ರದೇಶಗಳು ಸೇರಿ ಅಖಂಡ ಭಾರತ ನಿರ್ಮಾಣವಾಗುತ್ತೆ. ಅಖಂಡ ಭಾರತವನ್ನು ಮತ್ತೆ ನಿರ್ಮಿಸಲು ಈ ಎಲ್ಲ ದೇಶಗಳ ವಿರುದ್ಧ ಭಾರತ ಯುದ್ಧ ಘೋಷಿಸಬೇಕು. ಯುದ್ಧದಲ್ಲಿ ಗೆದ್ದು ಈ ದೇಶಗಳನ್ನು ವಶಪಡಿಸಿಕೊಳ್ಳಬೇಕು. ಆಗ ಅಖಂಡ ಭಾರತ ನಿರ್ಮಾಣವಾಗುತ್ತೆ.

ಈ ಎಲ್ಲ ದೇಶಗಳ ಮೇಲೆ ಯುದ್ಧ ಮಾಡುವುದು ಈಗ ಸುಲಭವಲ್ಲ. ಭಾರತದ ವಿದೇಶಾಂಗ ನೀತಿಯು ಬೇರೆ ದೇಶವನ್ನು ಅತಿಕ್ರಮಿಸುವ ಉದ್ದೇಶದ ಯುದ್ದಗಳಿಗೆ ವಿರುದ್ಧವಾಗಿದೆ. ಅಖಂಡ ಭಾರತ ನಿರ್ಮಾಣ ಕಷ್ಟವಾದರೂ, ಕನಿಷ್ಠ ಆರ್ಥಿಕವಾಗಿ ದುರ್ಬಲವಾಗಿರುವ, ಮಿಲಿಟರಿಯಲ್ಲೂ ಭಾರತದ ಸೇನೆಗಿಂತ ದುರ್ಬಲವಾಗಿರುವ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಘೋಷಿಸಬಹುದು.

ಗಡಿಯಾಚೆಗಿನ ಭಯೋತ್ಪಾದನೆ ಮಟ್ಟ ಹಾಕಲು, ಪಿಓಕೆ ಮರುವಶಪಡಿಸಿಕೊಳ್ಳಲು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸಿ ಕಡಿಮೆ ಅವಧಿಯಲ್ಲೇ ಭಾರತ ಯುದ್ಧಗಲ್ಲಿ ಗೆಲುವು ಸಾಧಿಸಬಹುದು. ಇದು ಚುನಾವಣೆಯಲ್ಲಿ ಗೆಲುವು ತಂದುಕೊಡುವುದ್ರಲ್ಲಿ ಅನುಮಾನವೇ ಇಲ್ಲ. ಆದರೇ, ಇವೆಲ್ಲವನ್ನೂ ಈಗಿನ ದೇಶದ ಆರ್ಥಿಕ ಸ್ಥಿತಿಗತಿ ಹಾಗೂ ಜಾಗತಿಕ ಸ್ಥಿತಿಗತಿಗಳ ಮಧ್ಯೆ ಸಾಧ್ಯವಾಗಿಸುವುದು ಸುಲಭವಲ್ಲ.

ಲಘು ಯುದ್ಧ ಮಾಡಬಹುದು

ಚುನಾವಣೆ ಗೆಲ್ಲಲು ವೈರಿ ರಾಷ್ಟ್ರಗಳ ವಿರುದ್ಧ ಯುದ್ದ ಮಾಡಬೇಕು ಎಂದೇನೂ ಇಲ್ಲ. ಏರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ಮಾಡಿಯೂ ಮೋದಿ ಚುನಾವಣೆ ಗೆದ್ದಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಗೂ ಮುನ್ನ ಪಾಕಿಸ್ತಾನದ ವಿರುದ್ಧ ಮತ್ತೊಂದು ಲಘು ಯುದ್ಧವನ್ನು ನಡೆಸಬಹುದು.

ಸಮಾನ ನಾಗರಿಕ ಸಂಹಿತೆ ಜಾರಿ ಮಾಡ್ತಾರಾ?

1990ರಿಂದಲೂ ಬಿಜೆಪಿಯ ಪ್ರನಾಳಿಕೆಯಲ್ಲಿದ್ದ ಮೂರು ಪ್ರಮುಖ ಅಂಶಗಳೆಂದರೇ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಹಾಗೂ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವುದು. ಈ ಮೂರರಲ್ಲಿ ಮೊದಲಿನ ಎರಡು ಭರವಸೆಗಳು ಈಗಾಗಲೇ ಈಡೇರಿವೆ. ಇನ್ನೂಳಿದ ಮೂರನೇ ಭರವಸೆಯಾದ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವತ್ತ ಮೋದಿ ಸರ್ಕಾರ ಚಿತ್ತ ಹರಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಇದರ ಮೊದಲ ಹೆಜ್ಜೆಯಾಗಿ ಪ್ರಯೋಗಿಕವಾಗಿ ಬಿಜೆಪಿ ಆಳ್ವಿಕೆ ಇರುವ ಉತ್ತರಾಖಂಡ್ ರಾಜ್ಯ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಸಮಾನ ನಾಗರಿಕ ಸಂಹಿತೆಯನ್ನ ಜಾರಿಗೊಳಿಸಬಹುದು. ಈ ಎರಡೂ ರಾಜ್ಯಗಳಲ್ಲಿ ಜನರ ಪ್ರತಿಕ್ರಿಯೆ ನೋಡಿಕೊಂಡು ಬಳಿಕ ದೇಶಾದ್ಯಂತ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಬಹುದು ಎಂಬ ಲೆಕ್ಕಾಚಾರ ಈಗ ನಡೆಯುತ್ತಿದೆ.

ಸಮಾನ ನಾಗರಿಕ ಸಂಹಿತೆಯಿಂದ ಧರ್ಮದ ಆಧಾರದ ಮೇಲೆ ವಿವಾಹ, ಆಸ್ತಿ ಹಂಚಿಕೆ, ಡೈವೋರ್ಸ್ ಗೆ ಪ್ರತೇಕ ಕಾನೂನುಗಳಿರಲ್ಲ. ಸದ್ಯ ದೇಶದಲ್ಲಿ ಧರ್ಮದ ಆಧಾರದ ಮೇಲೆ ಹಿಂದೂ ವಿವಾಹ ಕಾಯಿದೆ, ಮುಸ್ಲಿಂ ವಿವಾಹ ಕಾಯಿದೆ, ಷರಿಯಾ ಕಾಯಿದೆಗಳು, ಆಸ್ತಿ ಹಂಚಿಕೆಗೆ ಪ್ರತೇಕವಾದ ಹಿಂದೂ ಉತ್ತರಾಧಿಕಾರ ಕಾಯಿದೆ ಸೇರಿದಂತೆ ಬೇರೆ ಬೇರೆ ಕಾಯಿದೆಗಳಿವೆ. ಇವುಗಳನ್ನೆಲ್ಲಾ ರದ್ದುಪಡಿಸಿ ಎಲ್ಲ ಧರ್ಮದವರಿಗೂ ಏಕರೂಪವಾದ ಕಾಯಿದೆ ಜಾರಿಗೆ ತರುವ ಕೆಲಸಕ್ಕೂ ಪ್ರಧಾನಿ ಮೋದಿ ಮುಂದಾಗಬಹುದು ಎಂಬ ಚರ್ಚೆಗಳು ದೇಶದ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.

Published On - 9:12 pm, Tue, 31 May 22