ಬೆದರಿಕೆ ಕರೆಗಳು ಬರುತ್ತಲೇ ಇವೆ, ಆದರೂ ದೇಶವನ್ನು viRuSS ಗಳಿಂದ ಶುದ್ದೀಕರಿಸುವ ಸಮಯವಿದು: ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಇದೀಗ ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದು, ನಾನು ಈ ಯಾವ ಬೆದರಿಕೆಗೂ ವಿಚಲಿತನಾಗುವುದಿಲ್ಲ. ಮಹಾತ್ಮ ಗಾಂಧಿ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನೇ ಆರ್‌ಎಸ್‌ಎಸ್ ಬಿಟ್ಟಿಲ್ಲ, ಇನ್ನು ಅವರು ನನ್ನನ್ನು ಹೇಗೆ ಬಿಡುತ್ತಾರೆ? ಎಂದು ಫೇಸ್ ಬುಕ್ನಲ್ಲಿ ಪೋಸ್ಟ್ವೊಂದನ್ನು ಹಾಕಿಕೊಂಡಿದ್ದಾರೆ.

ಬೆಂಗಳೂರು, ಅ.14: ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ( RSS) ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು, ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಪತ್ರದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದರು. ಈ ಬಗ್ಗೆ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ಕೂಡ ನಡೆದವು, ಬಿಜೆಪಿಯಂತು ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡಾಮಂಡಲಗೊಂಡಿದ್ದರು. ಇದೀಗ ಇದರ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕರೆಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಫೇಸ್ ಬುಕ್ನಲ್ಲಿ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ.
ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ತಡೆಯಬೇಕು ಎಂದು ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದ್ದಿದೆ, ಇದನ್ನು ತಡೆಯಲು ಮುಂದಾಗಿರುವ ನನ್ನ ಮೇಲೆ ನಿರಂತರ ನಿಂದನೆ ಹಾಗೂ ಬೆದರಿಕೆ ಕರೆಗಳು ಬರುತ್ತಿದೆ. ಇದರಿಂದ ನನಗೆ ಏನು ಆಗುವುದಿಲ್ಲ ಅಥವಾ ನಾನು ವಿಚಲಿತನಾಗುವುದಿಲ್ಲ, ಮಹಾತ್ಮ ಗಾಂಧಿ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನೇ ಆರ್‌ಎಸ್‌ಎಸ್ ಬಿಟ್ಟಿಲ್ಲ, ಇನ್ನು ಅವರು ನನ್ನನ್ನು ಹೇಗೆ ಬಿಡುತ್ತಾರೆ? ಎಂದು ಸೋಶಿಯಲ್ ಮೀಡಿಯಾದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೊಂಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ನಲ್ಲಿ ಏನಿದೆ?
“ಕಳೆದ ಎರಡು ದಿನಗಳಿಂದ ನನ್ನ ಫೋನ್ ರಿಂಗಣಿಸುವುದನ್ನು ನಿಲ್ಲಿಸಿಲ್ಲ. ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಪ್ರಶ್ನಿಸುವ ಹಾಗೂ ತಡೆಯುವ ಧೈರ್ಯ ಮಾಡಿದ್ದರಿಂದ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಬೆದರಿಕೆಗಳು, ಅತ್ಯಂತ ಕೀಳು ಪದಗಳ ನಿಂದನೆಗಳಿಂದ ತುಂಬಿದ ಕರೆಗಳು ಬರುತ್ತಲೇ ಇವೆ. ಆದರೆ ನಾನು ಇದರಿಂದ ವಿಚಲಿತನಾಗುವುದಿಲ್ಲ ಅಥವಾ ನನಗೆ ಅಚ್ಚರಿಯೂ ಆಗಿಲ್ಲ. ಮಹಾತ್ಮ ಗಾಂಧಿ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನೇ ಆರ್‌ಎಸ್‌ಎಸ್ ಬಿಟ್ಟಿಲ್ಲ, ಇನ್ನು ಅವರು ನನ್ನನ್ನು ಹೇಗೆ ಬಿಡುತ್ತಾರೆ? ಬೆದರಿಕೆಗಳು ಮತ್ತು ವೈಯಕ್ತಿಕ ನಿಂದನೆಗಳಿಂದ ನನ್ನ ಬಾಯಿ ಮುಚ್ಚಿಸಬಹುದು ಎಂದು ಅವರು ಭಾವಿಸಿದ್ದರೆ, ಅದು ಅವರ ಕಲ್ಪನೆ ಮಾತ್ರ. ಇದಿನ್ನೂ ಆರಂಭವಷ್ಟೇ. ಇದು ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ್ ಅವರ ತತ್ವಗಳ ಮೇಲೆ ಸಮಾಜವನ್ನು ನಿರ್ಮಿಸುವ ಕಾಲ. ಸಮಾನತೆ, ವಿವೇಚನೆ ಮತ್ತು ಕರುಣೆಯಲ್ಲಿ ಬೇರೂರಿರುವ ಸಮಾಜ ಹಾಗೂ ಈ ರಾಷ್ಟ್ರವನ್ನು ಅತ್ಯಂತ ಅಪಾಯಕಾರಿ “viRuSS” ಗಳಿಂದ ಶುದ್ಧೀಕರಿಸುವ ಸಮಯ ಇದಾಗಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಪೋಸ್ಟ್ ಇಲ್ಲಿದೆ ನೋಡಿ:
ಪ್ರಿಯಾಂಕ ಖರ್ಗೆ ಪತ್ರ:
ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸ್ಸಿನಲ್ಲಿ ಭಾರತ ಐಕ್ಯತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ. ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: RSS ಚಟುವಟಿಕೆ ನಿಷೇಧಕ್ಕೆ ಮನವಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಬರೆದ ಪತ್ರದಲ್ಲೇನಿದೆ?
ಸಿಎಂ ಸಿದ್ದರಾಮಯ್ಯ ಕೂಡ ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ಕುರಿತಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದರೆ ಅದೇ ರೀತಿ ಕ್ರಮ ಕೈಗೊಳ್ಳಿ ಅಂತಾ ಸಿಎಸ್ ಗೆ ಸೂಚಿಸಿದ್ದೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲೇ ಕಾಂಗ್ರೆಸ್ ಶಾಸಕ ಎಂವೈ ಪಾಟೀಲ್ ಒಡೆತನದ ಶಾಲೆಯಲ್ಲೇ ಆರ್‌ಎಸ್‌ಎಸ್ ಬೈಠಕ್ ಹಾಗೂ ಪಥಸಂಚಲನ ನಡೆಸಿರುವುದು ಕೂಡ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




