ವಿಶ್ಲೇಷಣೆ | ರಾಮಭಕ್ತರ ಮೇಲೆ ಕುಮಾರಸ್ವಾಮಿಗೆ ಯಾಕೆ ಈ ರೀತಿ ಕೋಪ?

HD Kumaraswamy: ಅಯೋಧ್ಯೆಯಲ್ಲಿ ಕಟ್ಟುತ್ತಿರುವ ಶ್ರೀರಾಮ ದೇವಸ್ಥಾನಕ್ಕಾಗಿ ಎತ್ತುತ್ತಿರುವ ದೇಣಿಗೆ ಹಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸಿಟ್ಟಿಗೆದ್ದಿದ್ದಾರೆ. ದೇಣಿಗೆ ಎತ್ತಲು ಹೋದವರು ತಮ್ಮ ಪಕ್ಷದ ವಿರುದ್ಧ ಸ್ಕೆಚ್​ ಹಾಕಿದ್ದಾರೆ ಎಂಬ ಸಂಶಯ ಬಂದು ಅವರು ಈ ರೀತಿ ಗುಟುರು ಹಾಕಿದ್ದಾರೆ.

  • ಭಾಸ್ಕರ ಹೆಗಡೆ
  • Published On - 20:38 PM, 18 Feb 2021
ವಿಶ್ಲೇಷಣೆ | ರಾಮಭಕ್ತರ ಮೇಲೆ ಕುಮಾರಸ್ವಾಮಿಗೆ ಯಾಕೆ ಈ ರೀತಿ ಕೋಪ?
ಉದ್ದೇಶಿತ ರಾಮಮಂದಿರ ಮತ್ತು ಎಚ್​.ಡಿ.ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಎಚ್​.ಡಿ. ಕುಮಾರಸ್ವಾಮಿ ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ಕಟ್ಟಲು ಚಂದಾ ಎತ್ತುತ್ತಿದ್ದಾರೆ ಮತ್ತು ಅದನ್ನು ಕೊಡದಿರುವ ಮನೆಗಳ ಬಾಗಿಲ ಮೇಲೆ ಗುರುತು ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿ ಇಡೀ ದೇಶದ ವಿಚಾರವಂತರ ಗಮನ ಸೆಳೆದಿದ್ದಾರೆ. ಅವರು ಅಷ್ಟಕ್ಕೆ ನಿಲ್ಲಲಿಲ್ಲ. ಭಾರತ ನಾಜಿ ಜರ್ಮನಿ ಥರ ಆಗಿದೆ. ದೇಣಿಗೆ ಕೊಡದ ಮನೆಗಳನ್ನು ಗುರಿಯಾಗಿಟ್ಟುಕೊಂಡು ಮುಂದೆ ಇವರೇನು ಮಾಡುತ್ತಾರೋ ಎಂಬ ವಿವಾದಿತ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ದೇವಸ್ಥಾನಕ್ಕಾಗಿ ಎತ್ತಿದ ಚಂದಾ ಹಣದ ಲೆಕ್ಕ ಕೊಡಿ; ನಿಮಗೆ ಚಂದಾ ಎತ್ತಲು ಯಾರು ಒಪ್ಪಿಗೆ ಕೊಟ್ಟರು ಎಂದು ಪ್ರಶ್ನೆ ಎತ್ತಿ ಕೆಲವರ ಸಿಟ್ಟಿಗೂ ಗುರಿಯಾಗಿದ್ದಾರೆ.

ಹಿಂದೂ ದೇವರ ವಿಚಾರದಲ್ಲಿ ಅಥವಾ ದೇವಸ್ಥಾನಗಳ ವಿಚಾರದಲ್ಲಿ ಯಾವತ್ತೂ ಸೊಲ್ಲೆತ್ತದೇ ಇದ್ದ ದೇವೇಗೌಡರ ಕುಟುಂಬ ಈ ರೀತಿ ಮಾತನಾಡಿ ಜನರ ಕುತೂಹಲಕ್ಕೀಡಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಕುಮಾರಸ್ವಾಮಿ ಯಾಕೆ ಹೀಗೆ ಹೇಳಿದರು ಎಂಬ ವಿಚಾರದ ಹಿಂದಿನ ಗುಟ್ಟು ಈಗ ಹೊರ ಬಿದ್ದಿದೆ. ಆ ಪ್ರಕಾರ, ದೇಣಿಗೆ ಎತ್ತುವ ನೆಪದಲ್ಲಿ ತಮ್ಮ ಪಕ್ಷದ ಮತಬ್ಯಾಂಕ್​ ಮೇಲೆ ಕಣ್ಣಿಟ್ಟಿರುವ  ಬಿಜೆಪಿ ಕಾರ್ಯಕರ್ತರು ತೆರೆ ಹಿಂದೆ ಕೆಲಸ ಮಾಡಿದ್ದಾರೆ ಎಂಬ ಸಂಶಯಕ್ಕೆ ತುತ್ತಾಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಏನಾಗಿತ್ತು ದೇಣಿಗೆ ಎತ್ತುವ ಸಂದರ್ಭದಲ್ಲಿ?
ಪಕ್ಷದ ಮೂಲಗಳ ಪ್ರಕಾರ ಕುಮಾರಸ್ವಾಮಿಯವರಿಗೆ ಕಳೆದ ವಾರ ಒಂದು ವರದಿ ಬಂತು. ಅದನ್ನು ನೋಡಿದ ಕುಮಾರಸ್ವಾಮಿ ಸ್ವಲ್ಪ ವಿಚಲಿತರಾರದು. ಅಯೋಧ್ಯೆಯಲ್ಲಿ ಕಟ್ಟಲು ಹೊರಟಿರುವ ಶ್ರೀರಾಮ ದೇವಸ್ಥಾನಕ್ಕಾಗಿ ದೇಣಿಗೆ ಎತ್ತಲು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಹಳೇ ಮೈಸೂರು ಭಾಗದ ಅದರಲ್ಲಿಯೂ ಗೌಡರ ಮನೆಯ ಫ್ಯಾನ್​ ಆಗಿರುವ ಲಕ್ಷಾಂತರ ಮತದಾರರ ಮನೆ ಮನೆಗೆ ಹೋಗುತ್ತಲಿದ್ದಾರೆ. ಜನ ದೇಣಿಗೆ ಕೊಡುತ್ತಲಿದ್ದಾರೆ. ಇಷ್ಟೇ ಆಗಿದ್ದರೆ ಕುಮಾರಸ್ವಾಮಿಗೆ ಸಿಟ್ಟು ಬರುತ್ತಿರಲಿಲ್ಲ.

ಮನೆಮನೆಗೆ ಹೋಗುತ್ತಿರುವ ರಾಮ ಭಕ್ತರು ಜೆಡಿಎಸ್​ ಪಕ್ಷಕ್ಕೆ ಹೇಗೆ ಭವಿಷ್ಯ ಇಲ್ಲ ಎಂದು ಮಾತಾಡುತ್ತಿದ್ದುದು ಕುಮಾರಸ್ವಾಮಿ ಅವರ ಕಿವಿಗೆ ಬಿದ್ದಿದೆ. ಈ ರೀತಿಯ ಮಾತುಕತೆ ಚುನಾವಣೆ ಸಂದರ್ಭದಲ್ಲಿ ನಡೆವಂತೆ ಬಿಸಿ ಬಿಸಿಯಾಗಿ ನಡೆಯುತ್ತಿಲ್ಲ. ತರ್ಕಬದ್ಧವಾಗಿ ದನಿಯೇರಿಸದೇ ಉದಾಹರಣೆ ಮೂಲಕ ತಾಸುಗಟ್ಟಲೇ ವಿವರಿಸಿ ಹೊರಡುವ ಕಾರ್ಯಕರ್ತರ ತಂತ್ರಕ್ಕೆ ಕುಮಾರಸ್ವಾಮಿ ತತ್ತರಿಸಿ ಹೋಗಿದ್ದಾರೆ. ಕುಮಾರಸ್ವಾಮೀ ಮಾತ್ರ ಏಕೆ ಪ್ರಾಯಶಃ ದೊಡ್ಡ ಗೌಡರು ಭಯಬಿದ್ದಿರಬಹುದು. 2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದ ಕುಡಿಯನ್ನು ಗೆಲ್ಲಿಸಿಕೊಂಡು ಬರಲಾಗಲಿಲ್ಲ ಎಂಬ ನೋವಿನಲ್ಲಿರುವ ಕುಮಾರಸ್ವಾಮಿ ಕಿವಿಗೆ ಈ ವಿಚಾರ ಬಿದ್ದಿದ್ದೇ, ಅವರು ಕಂಗಾಲಾಗಲು ಕಾರಣವಾಗಿದೆ.

ಹಳೇ ಮೈಸೂರು ಭಾಗಲದಲ್ಲಿ ಈಗಾಗಲೇ ಹೊಸ ತರುಣರು ಮೋದಿಯತ್ತ ಮುಖಮಾಡಿದ್ದಾರೆ ಎಂಬುದು ಅವರಿಗೆ ಜೀರ್ಣ ಮಾಡಿಕೊಳ್ಳಲಾಗದ ವಿಚಾರವಾಗಿತ್ತು. ಅದೇ ಹೊತ್ತಲ್ಲಿ ರಾಮ ದೇವಸ್ಥಾನಕ್ಕೆ ದೇಣಿಗೆ ಎತ್ತಲು ಬಂದವರು ತನ್ನ ಭವಿಷ್ಯವನ್ನು ಬರೆದು ಹೋದರೇ ಎಂಬ ಸಂಶಯ ಕಾಡಲು ಪ್ರಾರಂಭವಾಗಿದ್ದೇ ಅವರಿಗೆ ಸಿಟ್ಟು ಬಂದಿದೆ.
ಇದು ಗೊತ್ತಾಗುತ್ತಲೇ ಕುಮಾರಸ್ವಾಮಿ ತಡಮಾಡಲೇ ಇಲ್ಲ. ಪತ್ರಿಕಾಗೋಷ್ಠಿ ಕರೆದು ಬಿಜೆಪಿ ಮತ್ತು ಆರ್​ಎಸ್​ಎಸ್​ನ್ನು ಹಿಗ್ಗಾಮುಗ್ಗಾ ಜಾಡಿಸಿ ತಮ್ಮ ಮತ ಬಾಂಧವರಲ್ಲಿ ಹೀರೋ ಆಗಲು ಪ್ರಯತ್ನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲ, ಎಂದಿನಂತೆ ಮುಸ್ಲಿಂ ಮತದಾರರಿಗೆ ಮತ್ತು ಕಾಂಗ್ರೆಸ್ಸಿಗೆ ಕೂಡ ಸಂದೇಶ ಕಳಿಸಿದ್ದಾರೆ. ತಾವು ಈಗಲೂ ಸೆಕ್ಯುಲರ್ ಎಂಬುದನ್ನು ಒಂದು ಕಡೆ ನಿರೂಪಿಸಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲ ಅಧಿಕೃತ ವಿರೋಧ ಪಕ್ಷ ಮಾಡಬೇಕಾಗಿದ್ದ ಕೆಲಸವನ್ನು ತಾನು ಮಾಡಿ, ಡಿ.ಕೆ. ಶಿವಕುಮಾರ್​ ನೇತೃತ್ವದ ಕಾಂಗ್ರೆಸ್​ ಪಕ್ಷ ಜನರ ಪರವಾಗಿ ನಿಲ್ಲುವ ಪಕ್ಷ ಅಲ್ಲ, ತಮ್ಮದು ಮಾತ್ರ ನಿಜವಾದ ಪಕ್ಷ ಎನ್ನುವ ಸಂದೇಶ ಕಳಿಸಲು ಪ್ರಯತ್ನಿಸಿದ್ದಾರೆ. ಆ ಮೂಲಕ ತಮ್ಮ ಮತದಾರರಿಗೆ ಯಾವತ್ತೂ ಕುಮಾರಣ್ಣನೇ ಹೀರೋ ಎಂದು ನಿರೂಪಿಸಲು ಪ್ರಯತ್ನಿಸಿದ್ದಾರೆ. ಏಕೆಂದರೆ, ಈ ಬಾರಿ ನಡೆದ್ದು ಶ್ರೀರಾಮನ ಹೆಸರಿನ ಅಡಿ ನಡೆದ ರಾಜಕೀಯ ಪ್ರಚಾರ ಕಾರ್ಯವಾಗಿತ್ತು. ಇದು ಬಹಳ ಪ್ರಬಲವಾಗಿರಲೂಬಹುದು. ಹಾಗೇನಾದರೂ ಆದರೆ, ಕುಮಾರಸ್ವಾಮಿಯವರ ಈ ಹೆಡ್​ಲೈನ್​ ಪತ್ರಿಕಾಗೋಷ್ಠಿಗಳು ವಿಫಲವಾಗಿ ಪಕ್ಷಕ್ಕೆ ಹಾನಿ ತರಲೂಬಹುದು. ಇಲ್ಲಾಂದ್ರೆ ಅವರ ಪಕ್ಷದ ಪುನರುತ್ಥಾನಕ್ಕೆ ಇದೇ ನಾಂದಿ ಹಾಡಲೂಬಹುದು.

ಇದನ್ನೂ ಓದಿ: ಮಂದಿರಕ್ಕೆ ದೇಣಿಗೆ ಸಂಗ್ರಹ, ಟೂಲ್ ಕಿಟ್, ಪೆಟ್ರೋಲ್​ ದರ ಏರಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದೇನು?