ಅಡ್ಡಮತದಾನ ಮಾಡಿದ ಬಿಜೆಪಿ ಶಾಸಕ ಸೋಮಶೇಖರ್ ಅನರ್ಹವಾಗ್ತಾರಾ? ಏನು ಕ್ರಮವಾಗಬಹುದು? ಇಲ್ಲಿದೆ ವಿವರ
Karnataka Rajyasabha Election 2024: ಕರ್ನಾಟಕ ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅವರು ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜರಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರ ಮಧ್ಯೆ ಅವರು ಅವರು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿರುವ ಸೋಮಶೇಖರ್ ಮೇಲೆ ಯಾವ ಕ್ರಮವಾಗುತ್ತೆ? ಕಾನೂನಿನಲ್ಲೇನಿದೆ? ವಿಪ್ ಎಂದರೇನು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಫೆಬ್ರವರಿ 27): ಕರ್ನಾಟಕ ರಾಜ್ಯಸಭಾ ಚುನಾವಣೆಗೆ (Rajya sabha Election) ಸಂಬಂಧಿಸಿ ರಾಜ್ಯ ರಾಜಕಾರಣದಲ್ಲಿ (Karnataka Politics) ಅತಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿಯಿಂದ (BJP) ಗೆದ್ದ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಚುನಾವಣಾ ಏಜೆಂಟ್ ಆಗಿರುವ ಸುನಿಲ್ ಕುಮಾರ್ ಅವರು ಕೂಡಾ ಇದನ್ನು ಸ್ಪಷ್ಟಪಡಿಸಿದ್ದಾರೆ. ಈಗ ಸೋಮಶೇಖರ್ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಮೊದಲಿನಿಂದಲೇ ಪಕ್ಷದಿಂದ ಅಂತರ ಕಾಪಾಡಿಕೊಂಡಿರುವ ಸೋಮಶೇಖರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಬಿಜೆಪಿ ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದ್ರೆ, ಅಡ್ಡ ಮತದಾನ ಮಾಡಿದ್ದರೂ ಸಹ ಎಸ್.ಟಿ.ಸೋಮಶೇಖರ್ ಸೇಫ್.
ವಿಪ್ ಎಂದರೇನು?
ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್ ಅನ್ನು ಅಸ್ತ್ರದಂತೆ ಬಳಸಬಹುದು. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ. ಪಕ್ಷದ ಮುಖ್ಯ ಸಚೇತಕರು ವಿಪ್ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ. ವಿಪ್ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ. ಪಕ್ಷದ ‘ಬಿ’ ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.
ಇದನ್ನೂ ಓದಿ: Rajya Sabha Election 2024: ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅಡ್ಡ ಮತದಾನ
ಸೋಮಶೇಖರ್ ಅನರ್ಹ ಕಷ್ಟ ಸಾಧ್ಯ
ಈಗ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ. ಹೀಗಾಗಿ, ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದರಿಂದ ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದು ಮಾಡಬಹುದು ಎನ್ನುವ ಚರ್ಚೆಗಳು ನಡೆದಿವೆ. ಆದ್ರೆ, ಅಡ್ಡ ಮತದಾನವಾದರೂ ಸಹ ಪಕ್ಷಾಂತರ ನಿಷೇಧ ಕಾಯ್ದೆಯಡಿ ಎಸ್.ಟಿ.ಸೋಮಶೇಖರ್ ಅನರ್ಹಗೊಳ್ಳುವುದಿಲ್ಲ.
2006ರಲ್ಲಿ ಸುಪ್ರೀಂಕೋರ್ಟ್ ಏನು ಹೇಳಿತ್ತು ಗೊತ್ತಾ?
ಇಂತಹದ್ದೇ ಒಂದು ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ 2006ರಲ್ಲಿ ತೀರ್ಪುವೊಂದನ್ನು ನೀಡಿದೆ. ರಾಜ್ಯಸಭಾ ಚುನಾವಣೆ ಮತದಾನ ವಿಧಾನಸಭೆಯ ನಡಾವಳಿಯಲ್ಲ. ಹೀಗಾಗಿ ವಿಪ್ ಉಲ್ಲಂಘನೆ ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರಲ್ಲ ಎಂದು ಕುಲದೀಪ್ ನಾಯರ್ vs ಯೂನಿಯನ್ ಆಫ್ ಇಂಡಿಯಾ ಕೇಸ್‌ನಲ್ಲಿ 2006ರಲ್ಲಿ ಸುಪ್ರೀಂಕೋರ್ಟ್ ಪೂರ್ಣ ಪೀಠ ತೀರ್ಪು ನೀಡಿದೆ. ಹೀಗಾಗಿ ಸೋಮಶೇಖರ್ ಅವರು ಅನರ್ಹಗೊಳ್ಳುವುದಿಲ್ಲ.
ಇದನ್ನೂ ಓದಿ: ಪೂಜ್ಯ ತಂದೆ, ಅವರ ಮಗ ವಿಫಲ: ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯ ಯಾರ ಬಗ್ಗೆ ನೋಡಿ
ಹೈಕೋರ್ಟ್ ವಕೀಲರರ ಜತೆ ಬಿಜೆಪಿ ಚರ್ಚೆ
ಎಸ್ಟಿ ಸೋಮಶೇಖರ್ ಅವರ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಅವರ ವಿರುದ್ಧ ಸೂಕ್ತ ಕ್ರಮಗುಳ್ಳಲು ಕಾನೂನಿನಲ್ಲಿ ಏನೆಲ್ಲಾ ಅವಕಾಶಗಳು ಇವೆ ಎನ್ನುವುದರ ಬಗ್ಗೆ ಹೈಕೋರ್ಟ್ ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಸೇರಿದಂತೆ ಇನ್ನಿತರರು ಹೈಕೋರ್ಟ್‌ನಿಂದ ವಕೀಲರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ವಿಪ್ ಉಲ್ಲಂಘನೆಯನ್ನು ಮಾಡಲಾಗಿದೆ. ಈ ಬಗ್ಗೆ ಯಾವೆಲ್ಲ ಕ್ರಮವನ್ನು ತೆಗೆದುಕೊಳ್ಳಬಹುದು? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಹೀಗಾಗಿ ಯಾವ ಕ್ರಮವನ್ನು ಕೈಗೊಳ್ಳಬಹುದು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿ ಏನು ಮಾಡಬಹುದು?
ಇನ್ನು ಪಕ್ಷ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು. ಪಕ್ಷದಿಂದ ಎಸ್.ಟಿ.ಸೋಮಶೇಖರ್‌ರನ್ನು ಉಚ್ಚಾಟಿಸಬಹುದು. ಅಡ್ಡ ಮತದಾನ, ಪಕ್ಷವನ್ನು ತೊರೆದ ಕ್ರಮವೆಂದು ಆರೋಪಿಸಿ ಎಸ್.ಟಿ.ಸೋಮಶೇಖರ್ ಅವರನ್ನು ಅನರ್ಹಗೊಳಿಸುವಂತೆ ದೂರು ನೀಡಬಹುದು. ಆದರೆ ವಿಪ್ ಉಲ್ಲಂಘನೆ ಆಧರಿಸಿ ಕ್ರಮ ಕಷ್ಟಕರ. ಸ್ಪೀಕರ್ ಸಹ ಕಾಂಗ್ರೆಸ್ ಮೂಲದವರಾಗಿರುವುದರಿಂದ ಸೋಮಶೇಖರ್ ವಿರುದ್ಧ ಕ್ರಮ ಕಷ್ಟ ಸಾಧ್ಯ.
ವಜಾಗೊಳಿಸುವ ಮುನ್ನವೇ ರಾಜಿನಾಮೆ ಸಲ್ಲಿಕೆ ಸಾಧ್ಯತೆ
ಇನ್ನು ಬಿಜೆಪಿ ವಿಪ್ ಜಾರಿ ಮಾಡಿದ ನಂತರವೂ ಅಡ್ಡ ಮತದಾನ ಮಾಡಿದ ಶಾಸಕ ಎಸ್.ಟಿ. ಸೋಮಶೇಖರ್ ಅವರು ತಮ್ಮನ್ನು ಬಿಜೆಪಿ ವಜಾಗೊಳಿಸುವ ಮುನ್ನವೇ ತಾವೇ ಸ್ವತಃ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಈ ಮೂಲಕ ತಾವು ಪಕ್ಷಾಂತರ ನಿಷೇಧ ಕಾಯ್ದೆಯಡಿ ವಜಾಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Tue, 27 February 24