ಅಪ್ರಾಪ್ತ ವ್ಯಕ್ತಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರವೇ ಹೊರತು ಸಮ್ಮತದ ಸೆಕ್ಸ್‌ ಅಲ್ಲ

ಕೇವಲ 13 ವರ್ಷದ ಅಪ್ರಾಪ್ತ ವ್ಯಕ್ತಿಯೊಂದಿಗೆ ನಡೆಸಿದ ಲೈಂಗಿಕ ಕ್ರಿಯೆಯಲ್ಲಿ, ಅಪ್ರಾಪ್ತನಿಗೆ ಯಾವುದೇ ಬಾಹ್ಯ ಗಾಯಗಳಾಗಿಲ್ಲದಿದ್ದರೂ ಅದನ್ನು ಒಮ್ಮತದಿಂದ ನಡೆದ ಲೈಂಗಿಕ ಕ್ರಿಯೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಎನ್‌ಜಿಓ ಒಂದರಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಾಗರ್ ಸಾಯಿ ಎಂಬ ವ್ಯಕ್ತಿ, 2015ರಲ್ಲಿ ಅಪ್ರಾಪ್ತ ವಯಸ್ಕನ ಮೇಲೆ ಅತ್ಯಾಚಾರ ಎಸಗಿದ್ದ. ಇದು ಸಾಬಿತಾಗಿ ಕಳೆದ ವರ್ಷ ನ್ಯಾಯಾಲಯ ಆತನಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಾಗರ ಸಾಯಿ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ಅತ್ಯಾಚಾರದಿಂದ ಬದುಕುಳಿದಿದ್ದ ವ್ಯಕ್ತಿಯ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ವೈದ್ಯಕೀಯ ವರದಿಯಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಇದು ಒಮ್ಮತದಿಂದ ನಡೆದ ಕ್ರಿಯೆಯಾಗಿದ್ದು, ಅತ್ಯಾಚಾರವಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದ್ದರು.

ಆದರೆ ಈ ವಾದವನ್ನು ನ್ಯಾಯಮೂರ್ತಿ ಭಡಾಂಗ್ ಅವರ ನ್ಯಾಯಪೀಠ ತಳ್ಳಿ ಹಾಕಿದೆ. ಭಾರತೀಯ ದಂಡ ಸಂಹಿತೆಯ ಕಲಂ 375 ರ ಅಡಿಯಲ್ಲಿ ಅತ್ಯಾಚಾರದ ವ್ಯಾಖ್ಯಾನವನ್ನು ಉಲ್ಲೇಖಿಸುತ್ತಾ, ಬಾಹ್ಯ ಗಾಯಗಳ ಅನುಪಸ್ಥಿತಿಯನ್ನು ಆರೋಪಿಗಳ ಪರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿ ಆರೋಪಿಯ ಮೇಲ್ಮನವಿಯನ್ನು ತಳ್ಳಿಹಾಕಿದೆ.

Related Tags:

Related Posts :

Category: