ಸಿಎಂ ಪಟ್ಟ ಉಳಿಸಿಕೊಳ್ಳಲು ದೀದಿಗೆ ನೆರವಾಗುತ್ತಾ ಪ್ರಶಾಂತ್​ ಕಿಶೋರ್​ನ ರಾಜಕೀಯ ದಾಳ?

ಕೋಲ್ಕತ್ತ: ಭಾರತೀಯ  ರಾಜಕಾರಣದಲ್ಲಿ ತಮ್ಮ ತಂತ್ರಗಾರಿಕೆ, ಸ್ಟ್ರಾಟಜಿಯಿಂದಲೇ ಹೆಸರು ಪಡೆದ ಪ್ರಶಾಂತ ಕಿಶೋರ್ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿದ್ದಾರೆ.

  • guruganesh bhat
  • Published On - 19:37 PM, 24 Nov 2020
ಪ್ರಶಾಂತ್​ ಕಿಶೋರ್​ (ಎಡ) ; ಮಮತಾ ಬ್ಯಾನರ್ಜಿ (ಬಲ)

ಕೋಲ್ಕತ್ತ: ಭಾರತೀಯ  ರಾಜಕಾರಣದಲ್ಲಿ ತಮ್ಮ ತಂತ್ರಗಾರಿಕೆ, ಸ್ಟ್ರಾಟಜಿಯಿಂದಲೇ ಹೆಸರು ಪಡೆದ ಪ್ರಶಾಂತ ಕಿಶೋರ್ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿದ್ದಾರೆ. ಹೌದು, 2021ರಲ್ಲಿ ನಡೆಯಲಿರುವ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್​ಗೆ ಗೆಲುವಿನ ದಾರಿ ತೋರಿಸುವ ಜವಾಬ್ದಾರಿ ಹೊತ್ತು ಕಿಶೋರ್ ಬಂಗಾಳಕ್ಕೆ ಅಡಿಯಿಟ್ಟಿದ್ದಾರೆ. ಆದರೆ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಕಿಶೋರ್​ಗೆ ವಿರೋಧ ವ್ಯಕ್ತವಾಗಿದೆ.
ಕಾರ್ಯಕರ್ತರಿಗೇಕೆ ಕಿಶೋರ್​ ಬಗ್ಗೆ ವಿರೋಧ?
ತೃಣಮೂಲ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿರುವ ಸೂಚನೆ ದೀದಿಗೆ ಸಿಕ್ಕಿದೆ. ಹೀಗಾಗಿ, ಕಿಶೋರ್​ಗೆ ಚುನಾವಣಾ ರಣತಂತ್ರ ರೂಪಿಸುವ ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಐ ಪ್ಯಾಕ್ ಸದಸ್ಯರ ಅಡಿ ತಳಮಟ್ಟದ ಕಾರ್ಯಕರ್ತರು ಪ್ರಚಾರ ಮಾಡುವಂತಾಗಿದೆ. ಇದು ಕಾರ್ಯಕರ್ತರ ಮುಜುಗರಕ್ಕೆ ಕಾರಣವಾಗಿದೆ. ಅಲ್ಲದೇ, ಕಿಶೋರ್ ತಂಡದ ಕಾರ್ಯವೈಖರಿ ಜಿಲ್ಲಾ ಮಟ್ಟದ ನಾಯಕರಿಗೆ ತೃಪ್ತಿ ನೀಡುತ್ತಿಲ್ಲ. ಹಾಗಾಗಿ, ಕೆಲ ಪ್ರಭಾವಿ ನಾಯಕರೂ ಪ್ರಶಾಂತ್​ ವಿರುದ್ಧ ಸಿಡಿದೇಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಏನಿದು ಐ ಪ್ಯಾಕ್ ?
ಪ್ರಶಾಂತ್ ಕಿಶೋರ್ ‘ಐ ಪ್ಯಾಕ್’ ಸಂಸ್ಥೆ ಚುನಾವಣಾ ಸ್ಟ್ರಾಟಜಿ ರೂಪಿಸುತ್ತದೆ. ಚುನಾವಣೆಗೂ ಮೊದಲೇ, ಯಾವುದೇ ಪಕ್ಷ ಅವರಿಗೆ ಕಾಂಟ್ರಾಕ್ಟ್ ಕೊಡಬಹುದು. ಆ ಪಕ್ಷದ ಪರ ಜನಬೆಂಬಲ ರೂಪಿಸಲು ಐ ಪ್ಯಾಕ್ ತಂತ್ರ ಹೆಣೆಯುತ್ತದೆ. ಸ್ಟ್ರಾಟಜಿ ರೂಪಿಸಲು ನಿರಾಕರಿಸುವ ಆಯ್ಕೆಯನ್ನೂ ಸಹ ಸಂಸ್ಥೆ ಉಳಿಸಿಕೊಂಡಿದೆ.

ಈ ನಾಯಕರ ಗೆಲುವಿನ ಹಿಂದಿದೆ ಕಿಶೋರ್ ಕೈವಾಡ
2014ರಲ್ಲಿ ಮೋದಿ, 2015ರಲ್ಲಿ ನಿತೀಶ್ ಕುಮಾರ್, 2017ರಲ್ಲಿ ಪಂಜಾಬ್ ಕಾಂಗ್ರೆಸ್​ನ ಅಮರಿಂದರ್​ ಸಿಂಗ್, 2019ರಲ್ಲಿ ಆಂಧ್ರದ ಜಗನ್ಮೋಹನ ರೆಡ್ಡಿ, 2020ರಲ್ಲಿ ಅರವಿಂದ್ ಕೇಜ್ರಿವಾಲ್ ಗೆಲುವಿನ ಹಿಂದಿರುವುದು ಇದೇ ಪ್ರಶಾಂತ್ ಕಿಶೋರ್ ಎಸೆದ ಚುನಾವಣಾ ದಾಳಗಳು. ಕಿಶೋರ್ ಯಾವುದೇ ಪಕ್ಷಕ್ಕೆ ನೆರವಾದರೆ ಎದುರಾಳಿ ಪಕ್ಷಕ್ಕೆ ಕೊಂಚ ಭಯ ಹುಟ್ಟುವುದು ಸಹಜ ಎಂಬ ಪರಿಸ್ಥಿತಿ ದೇಶದ ರಾಜಕಾರಣದಲ್ಲಿದೆ.

ಸೋತ ಉದಾಹರಣೆಯೂ ಇದೆ!
ಹೌದು, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಶಾಂತ್ ಕಿಶೋರ್​ರನ್ನು ನೇಮಿಸಿಕೊಂಡಿತ್ತು. ಆದರೂ, ಹೀನಾಯವಾಗಿ ನೆಲಕಚ್ಚಿತ್ತು. ಬಿಜೆಪಿ ಬರೋಬ್ಬರಿ 300 ಸ್ಥಾನಗಳಲ್ಲಿ ಗೆದ್ದು ದಾಖಲೆ ನಿರ್ಮಿಸಿತ್ತು.

ಡಿಎಂಕೆಗೂ ನೆರವಾಗಲಿದ್ದಾರೆ ಕಿಶೋರ್!
ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲೂ ಪ್ರಶಾಂತ್ ಕಿಶೋರ್​ಗೆ ಕೈತುಂಬಾ ಕೆಲಸ. ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಈಗಲೇ ಕಿಶೋರ್ ನೆರವು ಕೇಳಿದ್ದಾರೆ. 2016ರ ಚುನಾವಣೆಯಲ್ಲಿ ಪಾರಮ್ಯ ಸಾಧಿಸಿದ್ದ ಎಐಡಿಎಂಕೆಗೆ ತಕ್ಕ ಏಟು ಕೊಡಲು ಡಿಎಂಕೆ ದಾಳ ಉರುಳಿಸಿದೆ.

ಹೇಗೆ ಎದುರಿಸುತ್ತಾರೆ ದೀದಿ?
ಇದೀಗ, ದೀದಿ ವಿರುದ್ಧ ಪಕ್ಷದ ಕಾರ್ಯಕರ್ತರು ಮತ್ತು ನಾಯಕರೇ ಸಿಡಿದು ಬೀಳುವ ಸಾಧ್ಯತೆಗಳಿದೆ. ದೀದಿ ಆಂತರಿಕ ಕಲಹಕ್ಕೆ ಆಸ್ಪದ ಕೊಡದೆ ಹೇಗೆ ಸಮನ್ವಯ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.