ದೇಶದ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ತಲುಪಿಸುವ ಕೆಲಸ ಸರ್ಕಾರ ಮಾಡಲಿದೆ -ಪ್ರಧಾನಿ ಮೋದಿ

  • KUSHAL V
  • Published On - 18:52 PM, 20 Oct 2020

ದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಜನ ಕಷ್ಟಪಟ್ಟಿದ್ದಾರೆ. ಜನತಾ ಕರ್ಫ್ಯೂನಿಂದ ಹಿಡಿದು ಈವರೆಗೂ ಸರ್ಕಾರಕ್ಕೆ ಸಾಥ್ ಕೊಟ್ಟಿದ್ದಾರೆ ಎಂದು ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಷಣ ಮಾಡಿದರು.

ಆರ್ಥಿಕ ಚಟುವಟಿಕೆ ಆರಂಭಗೊಂಡ ಹಿನ್ನೆಲೆಯಲ್ಲಿ ಜನ ಹೊರಗೆ ಓಡಾಡುತ್ತಿದ್ದಾರೆ. ಜೊತೆಗೆ, ಹಬ್ಬಗಳಿರುವ ಹಿನ್ನೆಲೆಯಲ್ಲಿ ಜನ ಮಾರುಕಟ್ಟೆಗಳಲ್ಲಿ ಸಹ ಹೆಚ್ಚಾಗಿ ಓಡಾಡ್ತಿದ್ದಾರೆ. ಆದರೆ, ಕೊರೊನಾ ಮಹಾಮಾರಿ ನಮ್ಮನ್ನು ಬಿಟ್ಟು ತೊಲಗಿಲ್ಲ. ಹೀಗಾಗಿ, ಎಚ್ಚರಿಕೆಯಿಂದ ಓಡಾಡುವುದು ಒಳ್ಳೆಯದು ಎಂದು ಪ್ರಧಾನಿ ಹೇಳಿದ್ದಾರೆ.

‘ಗುಣಮುಖರಾಗುವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ’
ದೇಶದಲ್ಲಿ ಗುಣಮುಖರಾಗುವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಮುಂದುವರಿದ ದೇಶಗಳಿಗಿಂತ ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ. ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಮೃತರ ಸಂಖ್ಯೆ ಕೇವಲ 83. ಕ್ವಾರಂಟೈನ್ ಕೇಂದ್ರಗಳ ನಿರ್ಮಾಣದಿಂದ ಹಿಡಿದು ಟೆಸ್ಟಿಂಗ್ ವಿಚಾರದಲ್ಲಿ ನಾವು ಎಲ್ಲರಿಗಿಂತ ಮುಂದಿದ್ದೇವೆ. ಆದರೆ, ಕೊರೊನಾದಿಂದ ಮುಕ್ತರಾಗಿದ್ದೇವೆ, ಏನೂ ಆಗುವುದಿಲ್ಲ ಎಂಬುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
‘ಎಲ್ಲಿವರೆಗೂ ಔಷಧಿ ಸಿಗುವುದಿಲ್ಲವೋ ಅಲ್ಲಿಯವರೆಗೆ ನಿರ್ಲಕ್ಷ್ಯ ಬೇಡ’
ಕೊರೊನಾ ನಿಯಮಗಳನ್ನು ಪಾಲಿಸದೆ ಇರುವುದು. ಮಾಸ್ಕ್ ಧರಿಸದೆ ಹೊರಗಡೆ ಬರುವುದು. ನಿಮಗೆ, ನಿಮ್ಮ ಪರಿವಾರಕ್ಕೆ ಅಪಾಯಕಾರಿ ಎಂದು ಎಚ್ಚರಿಕೆ ಸಹ ನೀಡಿದರು. ಕೊರೊನಾ ವಿರುದ್ಧ ಸಂಪೂರ್ಣ ಜಯ ಸಿಗದ ಹೊರತು ಬೇಜವಾಬ್ದಾರಿತನ ಒಳ್ಳೆಯದಲ್ಲ. ಭಾರತದಲ್ಲಿ ಕೊರೊನಾ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳು ನಿರತರಾಗಿದ್ದಾರೆ. ನಮ್ಮ ವಿಜ್ಞಾನಿಗಳು ಪ್ರಾಣ ಒತ್ತೆ ಇಟ್ಟು ಪ್ರಯತ್ನ ನಡೆಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ತಲುಪಿಸುವ ಕೆಲಸ ಸರ್ಕಾರ ಮಾಡಲಿದೆ.

ಅದಕ್ಕೆ ಬೇಕಾಗಿರುವ ಅಗತ್ಯ ಸಿದ್ಧತೆಗಳೂ ನಡೆದಿವೆ. ಎಲ್ಲಿವರೆಗೂ ಔಷಧಿ ಸಿಗುವುದಿಲ್ಲವೋ ಅಲ್ಲಿಯವರೆಗೆ ನಿರ್ಲಕ್ಷ್ಯ ಬೇಡ. ನಾನು ನಿಮ್ಮಲ್ಲಿ ಮತ್ತೆ ಮತ್ತೆ ಪ್ರಾರ್ಥನೆ ಮಾಡುತ್ತೇನೆ. ಪ್ರತಿಯೊಬ್ಬರೂ ಮಾಸ್ಕ್​ ಧರಿಸಿ, ದೈಹಿಕ ಅಂತರ ಪಾಲಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಮಾಡಿ. ಎಷ್ಟು ಸಾಧ್ಯವೋ ಅಷ್ಟು ಮುಂಜಾಗ್ರತೆ ವಹಿಸಲು ಆಂದೋಲನ ನಡೆಸಿ ಎಂದು ಹೇಳಿದರು.

ಈಗ ಬರುವ ಸಾಲುಸಾಲು ಹಬ್ಬಗಳು ಉಲ್ಲಾಸ, ಖುಷಿ ತರುತ್ತವೆ. ಆದರೆ, ಹಬ್ಬಗಳ ಖುಷಿಯಲ್ಲಿ ಎಚ್ಚರಿಕೆ ಕಳೆದುಕೊಳ್ಳುವುದು ಬೇಡ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

ಪ್ರಧಾನಿ ಮೋದಿ ಭಾಷಣದ ಸಂಪೂರ್ಣ ವಿಡಿಯೋ