ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಲಸಿಕಾ ಅಭಿಯಾನ ಚಾಲನೆಗೆ ದೆಹಲಿಯ ಎರಡು ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಕೆಲ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

  • TV9 Web Team
  • Published On - 15:42 PM, 14 Jan 2021
ಸಂಗ್ರಹ ಚಿತ್ರ

ದೆಹಲಿ: ಜನವರಿ 16ರಿಂದ ದೇಶಾದ್ಯಂತ ಆರಂಭವಾಗಲಿರುವ ಲಸಿಕೆ ವಿತರಣಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಜೊತೆಗೆ, ಕೊವಿನ್ ಆ್ಯಪ್​​ನ್ನೂ ಉದ್ಘಾಟಿಸಲಿದ್ದಾರೆ.

ಲಸಿಕಾ ಅಭಿಯಾನ ಚಾಲನೆಗೆ ದೆಹಲಿಯ ಎರಡು ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ, ಪ್ರಧಾನಿ ಮೋದಿ ಕೆಲ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಬಗ್ಗೆ, ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್​ ಮಾಹಿತಿ ನೀಡಿದ್ದಾರೆ.

ಜನವರಿ 16, ಶನಿವಾರದಿಂದ ದೇಶದಲ್ಲಿ 3 ಸಾವಿರ‌ ಸ್ಥಳಗಳಲ್ಲಿ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಲಿದೆ. ಜನವರಿ ಅಂತ್ಯದ ವೇಳೆಗೆ 5 ಸಾವಿರ ಸ್ಥಳದಲ್ಲಿ ಲಸಿಕೆ ನೀಡಿಕೆ ನಡೆಯಲಿದೆ ಹಾಗೂ ಮಾರ್ಚ್ ಅಂತ್ಯಕ್ಕೆ ದೇಶದ 12 ಸಾವಿರ ಸ್ಥಳದಲ್ಲಿ ಲಸಿಕೆ ವಿತರಣೆಯಾಗಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಲಸಿಕೆ ವಿತರಣೆಯ ಮೊದಲ ದಿನ ಪ್ರತಿಯೊಂದು ಸ್ಥಳದಲ್ಲಿ ನೂರು ಮಂದಿಗೆ ಲಸಿಕೆ ನೀಡಲಾಗುವುದು. ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಐದು ಮಂದಿ ಸಿಬ್ಬಂದಿ ಇರುತ್ತಾರೆ. ಪ್ರತಿ ಲಸಿಕಾ ಕೇಂದ್ರದಲ್ಲಿ ಯಾವುದಾದರೂ ಒಂದು ಬ್ರಾಂಡ್​ನ ಲಸಿಕೆ ಮಾತ್ರ ಲಭ್ಯವಾಗಲಿದೆ. ಮೊದಲ ಡೋಸ್ ನೀಡಿದ ಲಸಿಕೆಯ ಬ್ರಾಂಡ್​ನ್ನೇ ಲಸಿಕೆಯ ಎರಡನೇ ಡೋಸ್ ಆಗಿ ನೀಡಲಾಗುತ್ತದೆ. ಹೀಗಾಗಿ ಲಸಿಕೆಯ ಬ್ರಾಂಡ್ ಗೊಂದಲಕ್ಕೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಲಸಿಕೆ ಬಗೆಗಿನ ಮಾಹಿತಿ ಕೋವಿನ್ ಆ್ಯಪ್​ನಲ್ಲಿ ದಾಖಲಾಗಲಿದೆ ಎಂದು ವಿ.ಕೆ.ಪೌಲ್ ಹೇಳಿದ್ದಾರೆ.

Explainer | ಕೊರೊನಾ ಲಸಿಕೆ ಸಾಗಣೆ ಬಾಕ್ಸ್ ಮೇಲೆ ಸರ್ವೇ ಸಂತು ನಿರಾಮಯಾಃ.. ಏನಿದರ ಅರ್ಥ?