ಮೊದಲ ಹಂತದಲ್ಲಿ ರಾಜಕಾರಣಿಗಳಿಗೆ ಲಸಿಕೆ ಇಲ್ಲ: ಪ್ರಧಾನಿ ಮೋದಿ ಸ್ಪಷ್ಟ ನಿಲುವು

ಸೆರಮ್​ ಇನ್ಸ್​ಟಿಟ್ಯೂಟ್​ನಿಂದ 1.1 ಕೋಟಿ ಕೊವಿಶೀಲ್ಡ್​ ಲಸಿಕೆ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ್ದು, ಒಂದು ಡೋಸ್​​ಗೆ 200 ರೂ. ನಿಗದಿ ಮಾಡಲಾಗಿದೆ. ಇಂದು ಸಂಜೆಯೇ 1 ಕೋಟಿ ಕೊರೊನಾ ಲಸಿಕೆ ಪುಣೆಯಿಂದ ವಿವಿಧ ರಾಜ್ಯಗಳಿಗೆ ರವಾನೆಯಾಗಲಿದೆ.

  • TV9 Web Team
  • Published On - 15:55 PM, 11 Jan 2021
ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಜ.16ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು,  ಲಸಿಕೆ ವಿತರಣೆಯು ಮಾರ್ಗಸೂಚಿಯ ಅನ್ವಯವೇ ನಡೆಯಲಿದೆ. ರಾಜಕಾರಣಿಗಳು ಕೊರೊನಾ ವಾರಿಯರ್ಸ್​ ಅಲ್ಲ. ಅವರಿಗೆ ನಂತರದ ದಿನಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಇಂದು ದೇಶದ ಇತಿಹಾಸದಲ್ಲೇ ಹೆಮ್ಮೆಯ ದಿನ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ​, ಎರಡನೇ ಹಂತದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರಿಗೆ ಮತ್ತು ಮೂರನೇ ಹಂತದಲ್ಲಿ ಜನಸಾಮಾನ್ಯರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಲಸಿಕೆಯನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿವೆ. ಕೊವಿಡ್​-19 ಬಿಕ್ಕಟ್ಟಿನಲ್ಲಿ ನಾವೆಲ್ಲ ಒಗ್ಗೂಡಿ ನಿಂತು ಕೆಲಸ ಮಾಡಿದ್ದೇವೆ. ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಾಗಿದೆ. ಇದೆಲ್ಲದರ ಪರಿಣಾಮ ಭಾರತದಲ್ಲಿ ಕೊರೊನಾ ಬಹುದೊಡ್ಡ ಪ್ರಮಾಣದಲ್ಲಿ ಪ್ರಸರಣ ಆಗಲಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ನೀಡಲಾಗಿದೆ.

ಕೊರೊನಾ ಭಯದಿಂದ ಜನರು ಹೊರಬಂದಿದ್ದಾರೆ. ಕಳೆದ 8-9 ತಿಂಗಳ ಹಿಂದೆ ಇದ್ದ ಭಯ ಈಗಿಲ್ಲ. ದೇಶದ ಆರ್ಥಿಕತೆಯೂ ಸುಧಾರಿತವಾಗುತ್ತಿದೆ. ಜನವರಿ 16ರಿಂದ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ. ಸದ್ಯ ನೀಡಲಾಗುತ್ತಿರುವ ಎರಡೂ ಲಸಿಕೆಗಳು ಭಾರತದಲ್ಲೇ ತಯಾರಾಗಿದ್ದಾಗಿದೆ. ಆದರೆ ವಿದೇಶಿ ಲಸಿಕೆಗಳನ್ನು ಅವಲಂಬಿಸಿದ್ದರೆ ತುಂಬ ಕಷ್ಟವಾಗುತ್ತಿತ್ತು. ಇದೀಗ ಭಾರತದಲ್ಲಿ ತಯಾರಾಗಿರುವ ಎರಡೂ ಲಸಿಕೆಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಲಸಿಕೆ ವಿಚಾರದಲ್ಲಿ ವಿಜ್ಞಾನಿಗಳ ಮಾತನ್ನು ಕೇಳೋಣ ಎಂದು ಹೇಳಿದರು

ಚುನಾವಣೆ ಮಾದರಿಯಲ್ಲಿ ಲಸಿಕೆ ವಿತರಣೆ
ಇನ್ನು ಚುನಾವಣೆ ಮಾದರಿಯಲ್ಲಿಯೇ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಬೂತ್​ ಮಟ್ಟದಲ್ಲಿ ಕಾರ್ಯತಂತ್ರವನ್ನು ಅಳವಡಿಸಲಾಗುವುದು. ಇನ್ನು ಲಸಿಕೆಯ ಬಗ್ಗೆ ಕೊವಿನ್​ ರಿಯಲ್​ ಟೈಮ್​ ಆ್ಯಪ್​ನಲ್ಲಿ ಸಂಪೂರ್ಣ ಮಾಹಿತಿ ಅಪ್​ಲೋಡ್ ಆಗಲಿದೆ. ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನೇಶನ್​ ಮಾಡಲಾಗುವುದು.  ಈ ಮೂರು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವ ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.  ಎರಡನೇ ಹಂತದಲ್ಲಿ ಫ್ರಂಟ್​ ಲೈನ್​ ವರ್ಕರ್ಸ್​ ಜತೆ   50 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು. ಹಾಗೇ, ಲಸಿಕೆ ಬಗ್ಗೆ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದೂ ಸಲಹೆ ನೀಡಿದರು.

ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ ಕೂಡ ಭಾಗವಹಿಸಿದ್ದರು. ಎಲ್ಲ ರಾಜ್ಯಗಳಲ್ಲಿ ಇರುವ ಕೊರೊನಾ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ ಪ್ರಧಾನಿ ಮೋದಿ, ಕೊರೊನಾ ಲಸಿಕೆ ವಿತರಣೆಗೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಚರ್ಚಿಸಿದರು.

ಲಸಿಕೆ ದರ ನಿಗದಿ
ಸೆರಮ್​ ಇನ್ಸ್​ಟಿಟ್ಯೂಟ್​ನಿಂದ 1.1 ಕೋಟಿ ಕೊವಿಶೀಲ್ಡ್​ ಲಸಿಕೆ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ್ದು, ಒಂದು ಡೋಸ್​​ಗೆ 200 ರೂ. ನಿಗದಿ ಮಾಡಲಾಗಿದೆ. ಇಂದು ಸಂಜೆಯೇ 1 ಕೋಟಿ ಕೊರೊನಾ ಲಸಿಕೆ ಪುಣೆಯಿಂದ ವಿವಿಧ ರಾಜ್ಯಗಳಿಗೆ ರವಾನೆಯಾಗಲಿದೆ.