ಕಲಬುರಗಿಯಲ್ಲಿ ಪ್ರತಿಯೊಂದು ಅಕ್ರಮಕ್ಕೂ ಫಿಕ್ಸ್​ ಆಗಿದೆ ದರ: ಶಾಸಕರಿಂದ ರೇಟ್​ ಕಾರ್ಡ್​ ಬಿಡುಗಡೆ!

ಕಲಬುರಗಿ: ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್​, ಜೂಜಾಟದಂಥ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

  • KUSHAL V
  • Published On - 19:53 PM, 24 Nov 2020

ಕಲಬುರಗಿ: ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್​, ಜೂಜಾಟದಂಥ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇದಕ್ಕೆಲ್ಲ ಬಿಜೆಪಿ ಸರ್ಕಾರವೇ ಕಾರಣ ಎಂದು ದೂಷಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಪ್ರಿಯಾಂಕ್​ ಖರ್ಗೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜಿಲ್ಲೆಯಲ್ಲಿ ಗಾಂಜಾ, ಮಾದಕ ವಸ್ತುಗಳ ಮಾರಾಟ, ಜೂಜು, ಐಪಿಎಲ್​ ಬೆಟ್ಟಿಂಗ್​, ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ, ಉದ್ಯಮಿಗಳ ಕಿರುಕುಳ, ನಿಷೇಧಿತ ಗುಟ್ಕಾ ದಂಧೆ, ನಾಗರಿಕರಿಂದ ಸುಲಿಗೆ ಮಾಡುವ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಅಕ್ರಮ ದಂಧೆಗೆ 1 ಲಕ್ಷ ರೂ.ನಿಂದ 12 ಲಕ್ಷ ರೂ.ವರೆಗೆ ಪ್ರತಿ ತಿಂಗಳೂ ಹಫ್ತಾ ವಸೂಲಿ ಮಾಡಲಾಗುತ್ತಿದೆ. ಪ್ರತಿ ವೈನ್ ಶಾಪ್‌ನಿಂದ1,350 ರೂಪಾಯಿಯಂತೆ ಪ್ರತಿ ತಿಂಗಳು ₹1,20,000 ಹಫ್ತಾ ವಸೂಲಿ‌ ಮಾಡಲಾಗುತ್ತಿದೆ. ಗುಟ್ಕಾ ವ್ಯವಹಾರದಿಂದ ಪ್ರತಿ ತಿಂಗಳು 5,00,000 ರೂ., ಅಕ್ರಮ ಅಕ್ಕಿ ಮಾರಾಟ ಹಾಗೂ ಸಾಗಣೆಯಿಂದ 6,00,000 ರೂ., 80 ಟಿಪ್ಪರ್​ಗಳಲ್ಲಿ ಸಾಗಿಸುವ ಅಕ್ರಮ ಮರಳು ದಂಧೆಕೋರದಿಂದ 12,00,000 ರೂ., ▪️ಇಸ್ಪೀಟ್ ಅಡ್ಡೆಗಳ ಮಾಲೀಕರಿಂದ 5,00,000 ರೂ., ಅಕ್ರಮ ಜಿಲೆಟಿನ್ ಕಡ್ಡಿ ಸಂಗ್ರಹಿಸಿಟ್ಟಿರುವವರಿಂದ 1,00,000 ರೂ. ಹಫ್ತಾ ವಸೂಲಿ‌ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

‘ಆಂಧ್ರಪ್ರದೇಶದಿಂದ ಜನ ಜೂಜಾಡಲು ಬರುತ್ತಿದ್ದಾರೆ’
ಹಾಗೇ ನಮ್ಮ ಕಲಬುರಗಿಗೆ ಆಂಧ್ರಪ್ರದೇಶದಿಂದ ಜನ ಜೂಜಾಡಲು ಬರುತ್ತಿದ್ದಾರೆ. ಖಣದಾಳ್, ಸೇಡಂ ಹಾಗೂ ಆಳಂದ ರಸ್ತೆಯಲ್ಲಿ ಮೂರು ಜೂಜು ಅಡ್ಡೆಗಳಿವೆ. ಇಲ್ಲಿ ಪ್ರತಿ ಅಡ್ಡೆಗೆ ದಿನವೊಂದಕ್ಕೆ 60 ಸಾವಿರ ರೂ. ಬಾಡಿಗೆ ಇದೆ. ಈ ಎಲ್ಲಾ ಹಣ ಕಲಬುರಗಿ ಯುವಕರ ಜೇಬಿಂದ ಕಸಿಯಲಾಗುತ್ತಿದೆ. IPL ಬೆಟ್ಟಿಂಗ್ ಹಾಗು ಜೂಜಾಟವನ್ನು ಯಾರು ಪ್ರೋತ್ಸಾಹಿಸುತ್ತಿದ್ದಾರೆ? Recreational ಕ್ಲಬ್‌ಗಳಿಗೆ ಯಾರು ಮತ್ತು ಏಕೆ ಅನುಮತಿ ನೀಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಹೊರಗಿನ ಪೊಲೀಸರು ಅಕ್ರಮ ದಂಧೆಗಳ ಮಟ್ಟ ಹಾಕುವ ಕೆಲಸ ಮಾಡಿದ್ದಾರೆ. ಗಾಂಜಾ ಜಪ್ತಿ ಮಾಡಿದ್ದು ಬೆಳಗಾವಿ/ಬೆಂಗಳೂರು ಸಿಸಿಬಿ ಪೊಲೀಸರು, IPL ದಂಧೆ ಬಯಲಿಗೆಳೆದಿದ್ದು ಸೊಲ್ಲಾಪುರ ಪೊಲೀಸರು. ಅಂದ ಮೇಲೆ ಸ್ಥಳೀಯ ಪೊಲೀಸರ ಕೈಯನ್ನು ಈ ದಂಧೆಕೋರರು ಕಟ್ಟಿಹಾಕಿದ್ದಾರೆ ಎಂದಾಯಿತು. ಈ ಎಲ್ಲ ಅಕ್ರಮ ಚಟುವಟಿಕೆಗಳು ಈಗ ಜಿಲ್ಲೆಯಲ್ಲಿ ‌ರಾಜಾರೋಷವಾಗಿ ತಲೆ ಎತ್ತಿವೆ. ಇದು ಕಲಬುರಗಿ ನಗರದ ಮಾಹಿತಿ ಮಾತ್ರ. ಈ ನಿಟ್ಟಿನಲ್ಲಿ ತಾವು ದಯವಿಟ್ಟು ಜಿಲ್ಲೆಯಲ್ಲಿ ಸಭೆ ಮಾಡಿ. ನಾನು ನಿಮಗೆ ಜಿಲ್ಲೆಯ ಮಾಹಿತಿಯನ್ನು ಮತ್ತು ಅದಕ್ಕೆ ಕಾರಣರಾಗಿರುವ ವ್ಯಕ್ತಿಗಳ ಮಾಹಿತಿಯನ್ನು ನೀಡುತ್ತೇನೆ ಅಂತಾ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

ಜಿಲ್ಲೆಯನ್ನು ಕಾಯಬೇಕಾದವರೇ ಹಣದಾಸೆಗೆ ಅದನ್ನು ಬಲಿ ಕೊಡುತ್ತಿದ್ದಾರೆ. ಇದಕ್ಕೆ ಆಡಳಿತ ಪಕ್ಷದ ಕೃಪಾಕಟಾಕ್ಷವಿದ್ದು, ಅವರ ಮೂಗಿನ ಕೆಳಗೇ ಇದೆಲ್ಲವೂ ನಡೆಯುತ್ತಿದೆ. ಕಲಬುರಗಿ ಯುವಕರ ಭವಿಷ್ಯಕ್ಕೆ ಈ ಬಿಜೆಪಿ ಸರ್ಕಾರದಲ್ಲಿ ಬೆಲೆ ಇದೆಯೇ? ಎಂದು ಪ್ರಿಯಂಕ್​ ಖರ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.