ಕಾಮನ್ವೆಲ್ತ್ ಯೂತ್ ಇನ್ನೊವೇಷನ್ ಹಬ್ ಪಾಲುದಾರ ಸಮಿತಿಯ ಸದಸ್ಯೆಯಾಗಿ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಆಯ್ಕೆಯಾಗಿದ್ದಾರೆ. ಇಂದಿನಿಂದ ಆರಂಭಗೊಂಡು (ಜ.14) ಎರಡು ವರ್ಷಗಳ ಅವಧಿಗೆ ಅವರು ಸಮಿತಿಯ ಸದಸ್ಯೆಯಾಗಿರಲಿದ್ದಾರೆ.
ಕಾಮನ್ವೆಲ್ತ್ ಯೂತ್ ಇನ್ನೊವೇಷನ್ ಹಬ್ ಪಾಲುದಾರ ಸಮಿತಿಯ ಸದಸ್ಯೆಯಾಗಿ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಆಯ್ಕೆಯಾಗಿದ್ದಾರೆ. ಇಂದಿನಿಂದ ಆರಂಭಗೊಂಡು (ಜ.14) ಎರಡು ವರ್ಷಗಳ ಅವಧಿಗೆ ಅವರು ಸಮಿತಿಯ ಸದಸ್ಯೆಯಾಗಿರಲಿದ್ದಾರೆ. ಜನವರಿ 6ರಂದು, ಮಲೇಷಿಯಾದ ಕೌಲಾಲಾಂಪುರ್ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ, ಕಾಮನ್ವೆಲ್ತ್ ಯೂತ್ ಇನ್ನೊವೇಷನ್ ಹಬ್ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿರುವ ಪ್ರಿಯಾಂಕಾ ಚತುರ್ವೇದಿ, ಶಿವಸೇನೆಯ ಉಪನಾಯಕಿ ಹಾಗೂ ರಾಷ್ಟ್ರೀಯ ವಕ್ತಾರರಾಗಿದ್ದರು. ಅದಕ್ಕೂ ಮೊದಲು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರು. ಭಾರತೀಯ ರಾಜಕಾರಣ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಆರೋಗ್ಯ ವಿಚಾರಗಳಲ್ಲಿ ವಿಶೇಷ ಜ್ಞಾನ ಹೊಂದಿದ್ದರು.
ಪ್ರಿಯಾಂಕಾ ಚತುರ್ವೇದಿ, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನ (ISB) 10,000 ಮಹಿಳಾ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಭಾಗವಾಗಿದ್ದರು. ಅವರನ್ನು ಯುಕೆ ಹಾಗೂ ಯುಎಸ್ನ ಆಯೋಗವು ಯುವ ರಾಜಕೀಯ ನಾಯಕರಾಗಿ ಅನುಮೋದಿಸಿತ್ತು. ಆ ಮೂಲಕ, ಪ್ರಿಯಾಂಕಾ ಚತುರ್ವೇದಿ ಅಮೆರಿಕಾ ಹಾಗೂ ಇಂಗ್ಲೆಂಡ್ಗೆ ಭೇಟಿ ನೀಡಿದ್ದರು. ಅಲ್ಲಿನ ಪ್ರಜಾಪ್ರಭುತ್ವ ಮತ್ತು ಚುನಾವಣಾ ಕಾರ್ಯಗಳ ಬಗ್ಗೆ ಅಧ್ಯಯನ ಪ್ರವಾಸ ನಡೆಸಿದ್ದರು. ಭಾರತ-ಆಸ್ಟ್ರೇಲಿಯಾ ಸಂಬಂಧ, ಭಾರತ-ಇಸ್ರೇಲ್ ದೇಶಗಳ ಸಂಬಂಧ ವೃದ್ಧಿಗೂ ಪ್ರಿಯಾಂಕಾ ಶ್ರಮಿಸಿದ್ದರು. ಮಹಿಳೆ ಮತ್ತು ನಾಯಕತ್ವ, ಶಿಕ್ಷಣ ಮುಂತಾದ ವಿಚಾರಗಳ ಕುರಿತು ವಿದೇಶಗಳಲ್ಲಿ ತಮ್ಮ ವಿಚಾರ ಹಂಚಿಕೊಂಡಿದ್ದರು. ಇತ್ತೀಚೆಗೆ, ಅಮೆರಿಕಾ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ತಂಡದಲ್ಲೂ ಪ್ರಿಯಾಂಕಾ ಭಾಗವಹಿಸಿದ್ದರು.
ನ್ಯೂಜಿಲ್ಯಾಂಡ್, ಜಮೈಕಾ, ಮಲೇಷಿಯಾ, ಬ್ರಿಟನ್ ಮುಂತಾದ ದೇಶಗಳ ಸದಸ್ಯರಿರುವ ಈ ಸಮಿತಿಯಲ್ಲಿ ಪ್ರಿಯಾಂಕಾ ಚತುರ್ವೇದಿ ಸದಸ್ಯೆಯಾಗಿ ಕಾರ್ಯಾರಂಭ ಮಾಡಿದ್ದಾರೆ. ತಾನ್ ಶ್ರಿ ದಾತೊ ಶ್ರಿ ಪಾದುಕ ಡಾ. ಲಿಮ್ ಕೊಕ್ ವಿಂಗ್ ಹಬ್ನ ಗ್ಲೋಬಲ್ ತಂಡದ ಸಹ ಅಧ್ಯಕ್ಷೆಯಾಗಿದ್ದಾರೆ. ಕಿಶ್ವ ಅಂಬಿಗಾಪತಿ ಕಾರ್ಯದರ್ಶಿಯಾಗಿದ್ದಾರೆ. ಸುಮೇಧ್ ಗಾಯಕ್ವಾಡ್ ಸಂಸ್ಥೆಯ ಭಾರತದ ಮುಖ್ಯಸ್ಥರಾಗಿದ್ದಾರೆ.
ಕಾಮನ್ವೆಲ್ತ್ ಯೂತ್ ಇನ್ನೊವೇಷನ್ ಹಬ್, ಮಾನವ ಸಂಪನ್ಮೂಲದ ಸದ್ಭಳಕೆಗಾಗಿ ಇರುವ ಸಂಸ್ಥೆಯಾಗಿದೆ. ಮಾನವ ಸಂಪನ್ಮೂಲವನ್ನು ಆರ್ಥಿಕ ಹಾಗೂ ಸಾಮಾಜಿಕ ಆವಿಷ್ಕಾರಗಳಿಗಾಗಿ ಬಳಸಿಕೊಳ್ಳುವಂತೆ ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಸುಸ್ಥಿರ ಪರಿಣಾಮ ಬೀರುವ ಮೂಲಕ ಏಕತೆಯನ್ನು ಸಾಧಿಸಲು ಹಾಗೂ ಸಾಮಾಜಿಕ ಬದಲಾವಣೆ ತರಲು ಶ್ರಮಿಸುವ ಸಂಸ್ಥೆಯಾಗಿ ಕಾಣಿಸಿಕೊಂಡಿದೆ. ಕಾಮನ್ವೆಲ್ತ್ ಯೂತ್ ಇನ್ನೊವೇಷನ್ ಹಬ್ನ್ನು 2017ರಲ್ಲಿ ಮಲೇಷಿಯಾದಲ್ಲಿ ಪ್ರಾರಂಭಿಸಲಾಯಿತು. ಯುವಜನತೆಯ ಮೂಲಕ, ಸರ್ಕಾರಿ ಸಂಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿ ಅಭಿವೃದ್ಧಿ ಕೆಲಸ ಮಾಡುವಲ್ಲಿಯೂ ಸಮಿತಿ ಕಾಳಜಿ ವಹಿಸಿದೆ.