ಗಲ್ವಾನ್ ಕಣಿವೆಯಲ್ಲಿ ಚೀನಾ ಕಾಲ್ಕೆರೆತ: ಪ್ರತ್ಯುತ್ತರಕ್ಕೆ ಭಾರತ ಯುದ್ಧೋಪಾದಿಯಲ್ಲಿ ಸಜ್ಜು!

ಚೀನಾ ಕಾಲ್ಕೆರೆತ ಆಗಾಗ ನಡೆಯುತ್ತಲೇ ಇರುತ್ತದೆ. ಆದ್ರೆ ಪ್ರತ್ಯುತ್ತರ ನೀಡಲು ಹಿಂದೆಮುಂದೆ ನೋಡದ ಭಾರತ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿರುತ್ತದೆ. ಎರಡು ವರ್ಷದ ಹಿಂದೆ ದೊಕ್ಲಾಮ್ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಿಸಿದ್ದ ಚೀನಾ ಕೊನೆಗೆ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿತ್ತು. ಈಗ, ಮೊದಲು ಕೊರೊನಾ ಛೂಬಿಟ್ಟ ಚೀನಾ ಅದರ ಮಧ್ಯೆಯೇ ಭಾರತದ ಗಡಿಯಲ್ಲಿ ತಂಟೆ ತೆಗೆದಿದೆ.

ಗಡಿಯಲ್ಲಿ ನಿಶ್ಚಿತವಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಕಳೆದ 28 ದಿನಗಳಿಂದ ಕಾಲು ಕೆರೆದುಕೊಂಡು ಯುದ್ಧೋನ್ಮಾದದಲ್ಲಿರುವ ಚೀನಾಕ್ಕೆ ಪ್ರತ್ಯುತ್ತರ ನೀಡಲು ಗಲ್ವಾನ್ ಕಣಿವೆಯಲ್ಲಿ ಲಡಾಕ್​ನತ್ತ ಭಾರತ ಸಹ ಯುದ್ಧ ಸಾಮಾಗ್ರಿಗಳ ಜಮಾವಣೆಯಲ್ಲಿ ತೊಡಗಿದೆ ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ, ವರದಿಗಳು ತಿಳಿಸಿವೆ.

ಗಲ್ವಾನ್ ಕಣಿವೆಯಲ್ಲಿ ಡರ್ಬಾಕ್ ಗ್ರಾಮಸ್ಥರು ದಿನಾ ರಾತ್ರಿ ವೇಳೆ ಭಾರತೀಯ ಸೇನಾ ತುಕಡಿಗಳ ಸಂಚಾರವನ್ನು ಕಣ್ಣಾರೆ ನೋಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಆದ್ರೆ ಚಳಿಗಾಲದಲ್ಲಿ ಇಂತಹ ಸಿದ್ಧತೆಗಳು ಸಾಮಾನ್ಯ. ಈ ಬಾರಿ ಬೇಸಿಗೆ ಕಾಲದಲ್ಲಿ ಕೊರೊನಾ ಸೋಂಕಿನ ಹಾವಳಿ ಇದ್ದಿದ್ದರಿಂದ ಲಡಾಕ್ ಭಾಗದಲ್ಲಿ ಸೇನಾ ಚಟುವಟಿಕೆಗಳು ಕುಗ್ಗಿದ್ದವು. ಅದನ್ನು ಸರಿದೂಗಿಸಲು ಈಗ ವೇಗ ಪಡೆದುಕೊಂಡಿದೆ. ಕೊರೊನಾ ಹಾವಳಿ ಇದ್ದಾಗ ಚೀನಾ ಸಮರ ಸಿದ್ಧತೆಯಲ್ಲಿ ತೊಡಗಿರುವುದು ಬೆನ್ನಿಗೆ ಚೂರಿ ಹಾಕಿದಂತಿದೆ ಎಂದೂ ಉನ್ನತಾಧಿಕಾರಿಯೊಬ್ಬರು ವಿವರಿಸಿದ್ದಾರೆ.

ಈ ಮಧ್ಯೆ, ಗಲ್ವಾನ್ ಕಣಿವೆಯಲ್ಲಿ ಭಾರತ ಸೇನಾ ಚಟುವಟಿಕೆಗಳನ್ನು ಕೈಗೊಂಡಿರುವುದರಿಂದ ಟ್ಯಾಂಕ್​ಗಳು, ಹೆಲಿಕಾಪ್ಟರ್​ಗಳು, ಅತ್ಯಾಧುನಿಕ ಡ್ರೋನ್​ಗಳನ್ನು ಚೀನಾ ಜಮಾವಣೆ ಮಾಡುತ್ತಿದೆ ಎಂದು ಚೀನಾ ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾದ ಗ್ಲೋಬಲ್ ಟೈಮ್ಸ್ ಹೇಳಿಕೊಂಡಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more