ರಾಯಚೂರು: ನಕಲಿ ದಾಖಲೆ ಸೃಷ್ಟಿಸಿ ಅಭಿವೃದ್ಧಿ ಹೆಸ್ರಲ್ಲಿ ಕೋಟಿ ಕೋಟಿ ದೋಖಾ!

ರಾಯಚೂರು: ಎಲ್ಲಾ ಅಂದ್ಕೊಂಡಂತೆ ನಡೆದಿದ್ರೆ ಆ ಕೆರೆಗಳ ರಾಜ್ಯದ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಪಾಲಿಗೆ ಸಂಜೀವನಿಯಾಗ್ತಿದ್ದವು. ಆದ್ರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಧನದಾಹಕ್ಕೆ ಆ ಕೆರೆಗಳ ಅಭಿವೃದ್ದಿ ಬಲಿಯಾಗಿದೆ.

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ರಾಜ್ಯದ್ಯಂತ ಸಾವಿರಾರು ಕೆರೆಗಳ ಅಭಿವೃದ್ಧಿ ನೆಪದಲ್ಲಿ ಕೋಟಿ ಕೋಟಿ ಅಕ್ರಮ ಎಸಗಿದ್ದಾರೆ. ನಿತ್ಯ ಕೆರೆ ಒಡಲಿಗೆ ಕನ್ನ.. ಭೂ ಒತ್ತುವರಿದಾರರ ಅಟ್ಟಹಾಸ. ರಾಜಾರೋಷವಾಗಿ ಉಳುಮೆ.. ಕೆರೆ ಒಡಲಿಗೆ ನೀರು ಹರಿಸೋ ಕಾಲುವೆಗಳೇ ಮುಚ್ಚಿ ಹೋಗಿವೆ.

ಅಂದ್ಹಾಗೆ ಇದು ರಾಯಚೂರು ತಾಲೂಕಿನ ಚಂದ್ರಬಂಡ ಗ್ರಾಮದ ಸಮೀಪದಲ್ಲಿರುವ ಸರ್ಕಾರಿ ಕೆರೆಯ ವಾಸ್ತವ ಸ್ಥಿತಿ. ಇದು ಕೇವಲ ಉದಾಹರಣೆ ಅಷ್ಟೆ. ಜಿಲ್ಲೆಯಾದ್ಯಂತ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿರುವ ಕೆರೆಗಳೆಲ್ಲ ಒತ್ತುವರಿಯಾಗಿವೆ. ಹೀಗಾಗಿ, ಈ ಕೆರೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಸರ್ಕಾರ ಹಣದ ಹೊಳೆಯನ್ನೇ ಹರಿಸುತ್ತಿದೆ.

ಆದ್ರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಧನದಾಹಕ್ಕೆ ಬಹುಪಾಲು ಹಣ ದುರ್ಬಳಕೆಯಾಗ್ತಿದೆ. ಶಾಸನಬದ್ಧ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೆ ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿ ರಾಜ್ಯಾದ್ಯಂತ 2,259 ಕೆರೆಗಳ ಅಭಿವೃದ್ದಿ ನೆಪದಲ್ಲಿ 89 ಕೋಟಿ 95 ಲಕ್ಷ ಹಣ ದುರ್ಬಳಕೆ ಮಾಡ್ಲಾಗಿದೆ. ಕೆರೆಗಳ ಸುತ್ತಲೂ ಅವೈಜ್ಞಾನಿಕ ಕಂದಕಗಳನ್ನ ತೋಡಿ ಕಲ್ಲುಗಳನ್ನಿಟ್ಟು ಸರಹದ್ದು ನಿರ್ಮಿಸಲಾಗಿದೆ ಎಂಬ ದಾಖಲೆ ಸೃಷ್ಟಿಸಿ ಹಣ ಲೂಟಿ ಮಾಡಿರೋದು ಬಟಾ ಬಯಲಾಗಿದೆ.

ಸಣ್ಣ ನೀರಾವರಿ ಕೆರೆಗಳಲ್ಲಿ ಸಂಗ್ರಹವಾಗುವ ನೀರನ್ನ ಸಣ್ಣ ಮತ್ತು ಮಧ್ಯಮ ರೈತರ ಜಮೀನಿಗೆ ನೀರು ಹರಿಸಲಾಗ್ತಿತ್ತು. ಇದಕ್ಕೋಸ್ಕರ ಕೆರೆಯ 4 ದಿಕ್ಕಿನಲ್ಲೂ ಪೋಷ ಕಾಲುವೆಗಳನ್ನು ನಿರ್ಮಿಸಲಾಗಿದೆ. ಆದ್ರೆ, ಬಹುತೇಕ ಪೋಷ ಕಾಲುವೆಗಳೆಲ್ಲ ಮುಚ್ಚಿ ಹೋಗಿದ್ದು, ಗಿಡಗಂಟಿಗಳು ಬೆಳೆದು ನಿಂತಿವೆ. ಇದಕ್ಕಾಗಿ ಸರ್ಕಾರ ಈ ಕೆರೆಗಳ ಅಭಿವೃದ್ಧಿಗೆ 100 ಕೋಟಿ ಹಣ ಮೀಸಲಿಟ್ಟಿತ್ತು.

ಆದ್ರೆ, ಅಧಿಕಾರಿಗಳು ಕೆರೆಗಳ ಅಭಿವೃದ್ಧಿ ನೆಪದಲ್ಲಿ ಭಾರಿ ಅಕ್ರಮ ಎಸಗಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನೋದು ರೈತರ ಒತ್ತಾಯ. ಒಟ್ನಲ್ಲಿ, ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಅಭಿವೃದ್ಧಿ ನೆಪದಲ್ಲಿ ಭಾರಿ ಗೋಲ್ ಮಾಲ್ ನಡೆದಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ರೆ, ತನಿಖೆ ನಡೆಸಿ ತಪ್ಪಿತಸ್ಥರಿಗೆ ಸರ್ಕಾರ ಯಾವ ಕ್ರಮ ಜರುಗಿಸುತ್ತೋ ಕಾದು ನೋಡ್ಬೇಕು.

Related Posts :

Category:

error: Content is protected !!