YTPSಗೆ ಕಲ್ಲಿದ್ದಲು ಅಭಾವ: ಬೇಸಿಗೆಯಲ್ಲಿ ವಿದ್ಯುತ್ ಕ್ಷಾಮ ಎದುರಾಗೋ ಆತಂಕ!

ರಾಯಚೂರು: ರಾಜ್ಯದ ಅತ್ಯಂತ ಪ್ರಮುಖ ವಿದ್ಯುತ್ ಉತ್ಪಾದನಾ ಯೋಜನೆಗಳಲ್ಲಿ ಯರಮರಸ್ ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕವೂ ಒಂದು. ಇಂತಾ ವೈಟಿಪಿಎಸ್​ಗೆ ಡಬಲ್ ಶಾಕ್ ಎದುರಾಗಿದ್ದು, ಒಂದ್ಕಡೆ ಕಲ್ಲಿದ್ದಲು ಅಭಾವ ಎದುರಾಗಿದ್ರೆ.. ಮತ್ತೊಂದೆಡೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ವೈಟಿಪಿಎಸ್ ಯೋಜನೆಯೇ ನಿರರ್ಥಕವಾಗೋ ಸಾಧ್ಯತೆಗಳು ಕಂಡು ಬರ್ತಿವೆ.

ರಾಜ್ಯದ ಅತ್ಯಂತ ಪ್ರಮುಖ ವಿದ್ಯುತ್ ಉತ್ಪಾದನಾ ಯೋಜನೆಗಳು. ಅದ್ರಲ್ಲೂ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನಾ ಕೇಂದ್ರಗಳು ಅಂದ್ರೆ ಜನರ ಕಣ್ಣ ಮುಂದೆ ಬರೋದೇ ಆರ್​ಟಿಪಿಎಸ್ ಮತ್ತು ವೈಟಿಪಿಎಸ್. ಇದ್ರಲ್ಲಿ ಯರಮರಸ್​ನಲ್ಲಿರೋ ವಿದ್ಯುತ್ ಉತ್ಪಾದನಾ ಘಟಕದಲ್ಲಿ 1,600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು.

ವಿದ್ಯುತ್ ಕ್ಷಾಮ ಎದುರಾಗೋ ಆತಂಕ:
ಇಂತಾ ವೈಟಿಪಿಎಸ್​ಗೆ ಶಾಶ್ವತ ಕಲ್ಲಿದ್ದಲು ಪೂರೈಸಲು, ತೆಲಂಗಾಣದ ಸಿಂಗರೇಣಿ ಕಲ್ಲಿದ್ದಲು ಗಣಿ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವೈಟಿಪಿಎಸ್​ಗೆ ವರ್ಷಕ್ಕೆ 58 ಲಕ್ಷ ಟನ್ ಕಲ್ಲಿದ್ದಲು ಬೇಕಿದೆ. ಆದ್ರೆ, ಅಷ್ಟು ಕಲ್ಲಿದ್ದಲು ಪೂರೈಕೆ ಆಗ್ತಿಲ್ಲ. ಇದ್ರಿಂದಾಗಿ ಬೇಸಿಗೆಯಲ್ಲಿ ವಿದ್ಯುತ್ ಕ್ಷಾಮ ಎದುರಾಗೋ ಆತಂಕ ಸೃಷ್ಟಿಯಾಗಿದೆ.

ಕಲ್ಲಿದ್ದಲು ಖರೀದಿಯಲ್ಲಿ ಅವ್ಯವಹಾರ ಆರೋಪ:
ಇದರ ಜೊತೆಗೆ ಕಲ್ಲಿದ್ದಲು ಖರೀದಿ ಮತ್ತು ಸಾಗಾಣಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ವೈಟಿಪಿಎಸ್ ಘಟಕಕ್ಕೆ ಕಲ್ಲಿದ್ದಲು ಪೂರೈಸೋ ಸಿಂಗರೇಣಿ ಕಲ್ಲಿದ್ದಲು ಗಣಿಗೆ ಕಳೆದ ವರ್ಷ ಒಪ್ಪಂದದ ದರ ಮೀರಿ 15 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಪಾವತಿಸಲಾಗಿದೆ ಅನ್ನೋ ಆರೋಪವೂ ಇದೆ. ಇನ್ನು ಆರ್​ ಟಿಪಿಎಸ್​ನಿಂದ ಕಲ್ಲಿದ್ದಲು ಸಾಗಾಣಿಕೆಗೆ 25 ಕೋಟಿ ಹಣ ಖರ್ಚು ಮಾಡಲಾಗಿದೆ.

2015 ರಲ್ಲೇ ವೈಟಿಪಿಎಸ್ ಘಟಕಕ್ಕೆ ಕಲ್ಲಿದ್ದಲು ಸಾಗಿಸುವ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಎರಡು ಏಜೆನ್ಸಿಗಳಿಗೆ ರೈಲ್ವೆ ಟ್ರಾಕ್ ನಿರ್ಮಾಣ ಕಾಮಗಾರಿಯನ್ನ 1 ವರ್ಷದೊಳಗೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿತ್ತು. ಇದುವರೆಗೆ ಈ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ, ಏನೇನೋ ಹೇಳಿ ಜಾರಿಕೊಳ್ತಿದ್ದಾರೆ.

ಒಟ್ನಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳ ಬೇಜವಾಬ್ದಾರಿಯಿಂದ ವೈಟಿಪಿಎಸ್ ಘಟಕಕ್ಕೆ ಕಲ್ಲಿದ್ದಲು ಸಾಗಿಸುವ ರೈಲ್ವೆ ಮಾರ್ಗದ ನಿರ್ಮಾಣ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ರೈಲ್ವೆ ಟ್ರಾಕ್ ಕಾಮಗಾರಿ ಪೂರ್ಣಗೊಳಿಸುವತ್ತ ಗಮನ ಹರಿಸಿದ್ರೆ, ವೈಟಿಪಿಎಸ್​ನಲ್ಲಿ ನಿಗದಿತ ಪ್ರಮಾಣ ಉತ್ಪಾದನೆ ಸಾಧ್ಯವಾಗಬಹುದು ಅಂತಾ ತಜ್ಞರು ಹೇಳ್ತಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!