ಓದು ಮಗು ಓದು: ಭಾಷೆ ಸಂವಹನಕ್ಕಷ್ಟೇ ಅಲ್ಲ ಸಂವೇದನೆಗಳನ್ನು ವಿಸ್ತರಿಸುವ ಸಾಧನ

‘ಕನ್ನಡವನ್ನು ಓದಲು, ಬರೆಯಲು ಕಲಿತ ಮಕ್ಕಳಿಗೆ ಕನ್ನಡದ ಓದು ಒದಗಿಸುವ ಪ್ರಯತ್ನಗಳು ಕೂಡ ಅಮೆರಿಕದಲ್ಲಿ ಅಷ್ಟಿಷ್ಟು ನಡೆಯುತ್ತಿವೆ. ಇತ್ತೀಚೆಗೆ, ಕನ್ನಡದ ಕಲಿಕೆಗೆ ಇಲ್ಲಿನ ಶಾಲೆಗಳಲ್ಲೂ ಮಾನ್ಯತೆ  ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸಗಳಾಗುತ್ತಿವೆ. ಬರುವ ದಿನಗಳಲ್ಲಿಇದು ಇನ್ನಷ್ಟು ಹೆಚ್ಚಾಗಬಹುದು. ಇದಲ್ಲದೆ ಈಗಾಗಲೇ ಕನ್ನಡವನ್ನು ಒಂದು ಐಚ್ಛಿಕ ಭಾಷೆಯಾಗಿ ಇಲ್ಲಿನ ಕೆಲವು ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಅವಕಾಶ ಇದೆ.’- ಮೀರಾ ಪಿ. ಆರ್.

  • TV9 Web Team
  • Published On - 13:12 PM, 14 Jan 2021
ಸಾಂದರ್ಭಿಕ ಚಿತ್ರ

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್  tv9kannadadigital@gmail.com

ನ್ಯೂಜೆರ್ಸಿಯಿಂದ ಲೇಖಕಿ ಮೀರಾ ಪಿ. ಆರ್. ಬರೆದ ಲೇಖನ ನಿಮ್ಮೆದುರು.

ಪಠ್ಯದ ಹೊರತಾಗಿ ಓದುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸುವುದು ಅವರ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ತುಂಬಾ ಮುಖ್ಯ ಪಾತ್ರವಹಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ಈಗಾಗಲೇ ದೃಢಪಟ್ಟಿರುವ ಸಂಗತಿ. ನಮ್ಮ ಮಕ್ಕಳಿಗೆ ಎಲ್ಲಕ್ಕಿಂತ ಉತ್ತಮವಾದದ್ದನ್ನೇ ಕೊಡಬೇಕು ಎನ್ನುವುದು ದೇಶಕಾಲಗಳ ಹಂಗಿಲ್ಲದೆ ಲೋಕದ ಎಲ್ಲಾ ತಂದೆತಾಯಿಗಳೂ ಬಯಸುವ ಸಂಗತಿಯೂ ಹೌದು. ಆದರೆ ಮಕ್ಕಳಲ್ಲಿ ಓದಿನ ಅಭ್ಯಾಸವನ್ನು ಬೆಳೆಸುವ ವಿಷಯಕ್ಕೆ ಬಂದಾಗ ಪೋಷಕರು, ಶಾಲೆ, ಸಾಮಾಜಿಕ ಪರಿಸರ, ಪರಿಸ್ಥಿತಿಗಳೆಲ್ಲವೂ ಇದಕ್ಕೆ ಒತ್ತಾಗಿ ನೆರವಾಗುವ ಪರಿಸ್ಥಿತಿ ಇರಬೇಕಾಗುತ್ತದೆ. ನಾನು ನೋಡಿದಂತೆ ಅಮೆರಿಕಾದಲ್ಲಿ ಶಿಶುಅವಸ್ಥೆಯಿಂದಲೂ ಮಕ್ಕಳನ್ನು ಪುಸ್ತಕಕ್ಕೆ ಮತ್ತು ಆ ಮೂಲಕ ಓದಿಗೆ ಪರಿಚಯಿಸುವ, ಕುತೂಹಲ ಮೂಡಿಸುವ ಕೆಲಸ ಶುರುವಾಗುತ್ತದೆ. ವರ್ಷವೂ ತುಂಬದ ಶಿಶುಗಳಿಗೆಂದೇ ಕಾರ್ಡ್​ಬೋರ್ಡು, ಬಟ್ಟೆಗಳಲ್ಲಿ ಮಾಡಿದ, ಬಣ್ಣದ ಚಿತ್ರಗಳೂ ಜೊತೆಯಲ್ಲಿ ಒಂದೋ ಎರಡೋ ಪದಗಳಿರುವ ಪುಸ್ತಕಗಳೊಂದಿಗೆ ಮಕ್ಕಳು ಆಡುತ್ತಲೇ ಅದರ ಅಂದ ನೋಡುತ್ತಲೇ ಉಳಿದ ವಸ್ತುಗಳಂತೆ ಅದನ್ನು ಬಾಯಿಗಿಟ್ಟು ಕಚ್ಚಿ ರುಚಿ ನೋಡುತ್ತಲೇ (ಹೀಗಾಗಿಯೇ ಹರಿಯದ ಹಾಳಾಗದ ಕಾರ್ಡ್​ಬೋರ್ಡು, ಬಟ್ಟೆಯ ಬಳಕೆ) ಪುಸ್ತಕ ಪ್ರಪಂಚಕ್ಕೆ ಕಾಲಿಟ್ಟು ಬಿಡುತ್ತಾರೆ. ತಮ್ಮಉಳಿದ ಆಟಿಕೆಗಳಂತೆಯೇ ಪುಸ್ತಕವೂ ಒಂದು ಮುದನೀಡುವ, ಅಚ್ಚರಿ ತುಂಬಿದ ವಸ್ತುವಾಗಿಯೇ ಅವರ ಜೊತೆಯಾಗುತ್ತದೆ. ಪುಸ್ತಕದ ಒಳಗೂ ಕೆಂಪು ಬಣ್ಣದ ಸೇಬಿನ ಚಿತ್ರದೊಂದಿಗೆ ಇರುವ ‘Apple’ ಎನ್ನುವ ಪದವೂ ಆ ಚಿತ್ರದ ಹಾಗೆಯೇ ಅವರ ಮೆದುಳಿನಲ್ಲಿ ಅಚ್ಚೊತ್ತಿಬಿಡುತ್ತದೆ.

ಇಲ್ಲಿನ ಲೈಬ್ರರಿಗಳಲ್ಲೂ ಪುಸ್ತಕದಂಗಡಿಗಳಲ್ಲೂ ಹೀಗೆಯೇ ಪುಸ್ತಕವೊಂದನ್ನು ಶಿಶುಗಳಿಗೆ ತೋರಿಸುತ್ತಾ ಮುಟ್ಟಿಸುತ್ತಾ ಅವರಿಗೆ ಪುಸ್ತಕ ಓದುವ ‘ಶಿಶುಕಥಾಸಮಯ’ವೆಂಬ ನಿಯಮಿತವಾಗಿ ನಡೆಯುವ ಕಾರ್ಯಕ್ರಮಗಳಿರುತ್ತವೆ. ಅಮೆರಿಕಾದಲ್ಲಿರುವ ಬಹುತೇಕ ಪೋಷಕರು ಮಕ್ಕಳಿಗೆ ಓದುವುದು ಬಂದಮೇಲೆಯೂ ಅವರೊಟ್ಟಿಗೆ ಪುಸ್ತಕ ಹಿಡಿದು ಕೂತು ಗಟ್ಟಿಯಾಗಿ ಓದುವ ಅಭ್ಯಾಸವನ್ನು ಸಾಧ್ಯವಾದಷ್ಟೂ ಮಾಡಲು ಇಷ್ಟಪಡುತ್ತಾರೆ.

ಮಕ್ಕಳಿಗೆ ಕಥೆ ಹೇಳುವ ಹಾಗೆಯೇ ಕಥೆಯನ್ನುಓದುವುದೂ ಕೂಡ ಅವರಲ್ಲಿ ಓದುವ ಅಭ್ಯಾಸವನ್ನು ಬೆಳೆಸುತ್ತದೆ ಎನ್ನುವುದು ಇಲ್ಲಿನವರ ನಂಬಿಕೆ. ಅದು ನಿಜ ಕೂಡ. ನಾನು ಗಮನಿಸಿದಂತೆ ಅಮೆರಿಕಾದಲ್ಲಿ ಸಾಕಷ್ಟು ದೊಡ್ದ ಸಂಖ್ಯೆಯಲ್ಲಿಯೇ ಮಕ್ಕಳು ಸುಮಾರು ಹೈಸ್ಕೂಲಿಗೆ ಬರುವವರೆಗೂ ಪುಸ್ತಕ ಓದುವ, ಲೈಬ್ರರಿಗೆ ನಿಯಮಿತವಾಗಿ ಭೇಟಿಕೊಡುವ, ಪುಸ್ತಕ ಕೊಳ್ಳುವ ಮತ್ತು ಅವರದ್ದೇ ಪುಸ್ತಕ ಸಂಗ್ರಹವನ್ನು ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ವಿವಿಧ ವಯೋಮಾನದವರನ್ನೇ ಗುರಿಯಾಗಿಸಿಕೊಂಡು ಅವರಿಗೆ ಬೇಕಾದ ಸೃಜನಶೀಲ ಮತ್ತು ಸೃಜನೇತರ ಓದು ಒದಗಿಸುವ ಲೇಖಕರೂ ಪ್ರಕಾಶಕರೂ ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ. ಶಾಲೆಗಳಲ್ಲೂ ಮಕ್ಕಳು ಚಿಕ್ಕವರಿದ್ದಾಗ ಭಾಷಿಕ ಓದು, ಬರಹ ಮತ್ತು ಗಣಿತಕ್ಕೆ ಉಳಿದೆಲ್ಲಾ ವಿಷಯಗಳಿಗಿಂತಲೂ ಹೆಚ್ಚಿನ ಆದ್ಯತೆ. ನಂತರದ ದಿನಗಳಲ್ಲಿ ಈ ಮೂರು ವಿಷಯಗಳ ತಳಪಾಯದ ಮೇಲೇ ಉಳಿದೆಲ್ಲ ವಿಷಯಗಳನ್ನೂ ಸರಿಯಾದ ರೀತಿಯಲ್ಲಿ ಅರಿಯಬಹುದೆನ್ನುವುದು ಈ ನಿಲುವಿನ ಹಿಂದಿರುವ ತರ್ಕ.

ಸಾಂದರ್ಭಿಕ ಚಿತ್ರ

ಬೇಸಿಗೆಯಲ್ಲಿಯೂ ವಿದ್ಯಾರ್ಥಿಗಳು ಓದಬಹುದಾದ ಪುಸ್ತಕಗಳ ಜೊತೆಗೆ ಓದಲೇಬೇಕಾದ ಪುಸ್ತಕಗಳ ಪಟ್ಟಿಯೂ ಇರುತ್ತದೆ. ಆದರೂ ಹೈಸ್ಕೂಲು, ಕಾಲೇಜಿಗೆ ಬರುವ ವೇಳೆಗೆ ಅವರ ಶಾಲಾ ಚಟುವಟಿಕೆಗಳು ಮತ್ತು ಹೆಚ್ಚಿನ ಓದಿನ ಕಾರಣದಿಂದಾಗಿಯೇ ಪಠ್ಯೇತರ ಓದು ಇಲ್ಲಿನ ಮಕ್ಕಳಲ್ಲೂ ಗಣನೀಯವಾಗಿ ಕಡಿಮೆಯಾಗುವ ಹಾಗೆ ಕಾಣುವುದು. ಚೆನ್ನಾಗಿ ಓದಿನರುಚಿ ಹತ್ತಿದವರು ಮಾತ್ರ ಓದುವುದಕ್ಕೆಂತೇ ಸಮಯ ಮೀಸಲಿಟ್ಟು ಅದನ್ನು ಮುಂದುವರೆಸುವುದೂ ಉಂಟು. ಒಮ್ಮೆ ಪುಸ್ತಕದ ರುಚಿ ಕಂಡವರಿಗೆ ಮತ್ತೆ ಸಾಧ್ಯದಾಗಲೆಲ್ಲ ಓದಿಗೆ ಮರಳುವ ಅಭ್ಯಾಸವೊಂದಿರುತ್ತದೆ. ಹಾಗಾಗಿ ಇಲ್ಲಿ ದೊಡ್ದವರಲ್ಲೂ ಸಾಕಷ್ಟು ಓದಿನ, ಅಧ್ಯಯನದ ಅಭ್ಯಾಸ ಇಟ್ಟುಕೊಳ್ಳುವುದುಂಟು. ಇದಕ್ಕೆ ಪೂರಕವಾಗಿ ಇಲ್ಲಿನ ಪುಸ್ತಕೋದ್ಯಮವೂ ಇದೆ. ಬರೆಯುವುದು, ಪ್ರಕಟಿಸುವುದು ಲಾಭದಾಯಕವಾದ ಕೆಲಸವೆಂದು ಬರಹಗಾರರಿಗೂ ಪ್ರಕಾಶಕರಿಗೂ ಅನ್ನಿಸುವ ವ್ಯವಸ್ಥೆಯಲ್ಲಿ ಸಹಜವಾಗಿಯೇ ಪುಸ್ತಕಗಳ ಸಂಖ್ಯೆಯೂ ಸದಾ ಹೆಚ್ಚಾಗಿಯೇ ಇರುವುದುಂಟು. ಇದರಲ್ಲಿ ಕಾಳಿನ ಹಾಗೆಯೇ ಜೊಳ್ಳು ಕೂಡ ಇದ್ದು, ಬೇಕಾದ್ದನ್ನು ಆರಿಸಿಕೊಳ್ಳುವ ಅವಕಾಶ ಅವರವರ ಅಭಿರುಚಿಗೆ ಬಿಟ್ಟಿದ್ದೂಆಗಿರುತ್ತದೆ. ಇತ್ತೀಚೆಗಿನ ದಶಕಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಓದು ಎಲ್ಲ ವಯೋಮಾನದವರಿಗೂ ಒದಗಿಬರುತ್ತಿದೆ.

ಇಲ್ಲಿ ಹುಟ್ಟಿ ಬೆಳೆಯುತ್ತಿರುವ ಕನ್ನಡಿಗರ ಮಕ್ಕಳ ಓದಿನಲ್ಲಿ ಕನ್ನಡ ಪುಸ್ತಕಗಳು ಅಪರೂಪಕ್ಕೆ ಚಿಕ್ಕವಯಸ್ಸಿನಲ್ಲಿ ಒಂದಿಷ್ಟು ವರ್ಷಗಳು ಜೊತೆಯಾಗುವ ಸಂಭಾವ್ಯತೆ ಇದ್ದರೂ ನಂತರದ ದಿನಗಳಲ್ಲಿಅದು ಸಹಜವಾಗಿಯೇ ಅದು ಸಾಧ್ಯವಾಗುವುದಿಲ್ಲ. ನಾವು ಹೆಚ್ಚಾಗಿ ಮಾತನಾಡುವ,ಕೇಳಿಸಿಕೊಳ್ಳುವ ಮತ್ತು ನಾವಿರುವ ಪರಿಸರದ ಭಾಷೆಯಲ್ಲೇ ನಮಗೆ ಓದು ಒದಗಿ ಬಂದಾಗ ಮಾತ್ರ ಅದು ಒಂದು  ಅಭ್ಯಾಸವಾಗಿ ಬೆಳೆಯುವ ಸಾಧ್ಯತೆ ಸಹಜವಾಗಿ ಒದಗಿಬರಬಹುದು. ಆದರೆ ಇಲ್ಲಿ ಬೆಳೆಯುತ್ತಿರುವ ಕನ್ನಡ ಮಕ್ಕಳ ಪರಿಸರದಲ್ಲಿ ಕನ್ನಡ ಒಂದು ಭಾಷೆಯಾಗಿ ಅವರಿಗೆ ಜೊತೆಯಾಗುವುದು ಮನೆಯ ಒಳಗೆ ಮತ್ತು ನಿಶ್ಚಿತ ಸಂದರ್ಭಗಳಲ್ಲಿ ಮಾತ್ರ.

ಈ ದೇಶವಾಸಿಯಾಗುವುದಕ್ಕೂ ಮುನ್ನ ನಾನು ಹುಟ್ಟಿ ಬೆಳೆದದ್ದು, ನನ್ನ ಓದು ಉದ್ಯೋಗ ಎಲ್ಲವೂ ನನಗೆ ಕರ್ನಾಟಕದಲ್ಲಿಯೇ ಒದಗಿದ್ದಿದ್ದೂ ಕಾರಣವಾಗಿ ಮತ್ತು ಅದಕ್ಕಿಂತಲೂ ಮುಖ್ಯವಾಗಿ ನಾನು ಬೆಳೆದ ಪರಿಸರದಲ್ಲಿ ಕನ್ನಡವೇ ಎಲ್ಲ ಕಾಲಕ್ಕೂ ಡಾಮಿನೆಂಟ್ ಆದ ಭಾಷೆಯಾಗಿದ್ದ ಕಾರಣದಿಂದಾಗಿ ನನ್ನ ಮನೋಲೋಕದಲ್ಲೂ ಭಾವಲೋಕದಲ್ಲೂ ಕನ್ನಡವು ಸಶಕ್ತವಾಗಿಉಳಿದುಕೊಂಡಿದೆ ಎಂದು ಅಂದುಕೊಂಡಿದ್ದೇನೆ. ಯಾಕೆಂದರೆ ನಮ್ಮ ಪರಿಸರದ ಭಾಷೆ ಯಾವುದಿರುತ್ತದೆ ಅದು ನಮ್ಮ ಸಂಪರ್ಕಕ್ಕೆ ಬರುವ ಉಳಿದೆಲ್ಲ ಭಾಷೆಗಳಿಗಿಂತ ಭಿನ್ನವಾಗಿ ನಮ್ಮನ್ನು ಬೆಳೆಸುತ್ತದೆ, ನಮ್ಮ ಸಂವೇದನೆಗಳನ್ನೂ ರೂಪಿಸಿರುತ್ತದೆ.

ನಮ್ಮ ನಮ್ಮ ಮನೆ ಮಾತಾಗಿ ನಮಗೆ ಪರಿಚಯವಾಗುವ ಭಾಷೆಯೊಂದು ನಮ್ಮನ್ನು ನಮ್ಮ ಕುಟುಂಬ ಅಥವಾ ಸಮುದಾಯವೆನ್ನುವ ಪುಟ್ಟದೊಂದು ಆವರಣಕ್ಕೆ ಬೆಸೆಯುವ ಪಾತ್ರವಹಿಸಿದರೆ, ಪರಿಸರದ ಭಾಷೆ (ಮನೆಮಾತಿಗಿಂತ ಭಿನ್ನವಾದ ಇನ್ನೊಂದು ಭಾಷೆಯಾಗಿದ್ದಾಗಲೂ) ನಮ್ಮನ್ನು ಬದುಕಿನ ಹಲವು ಸಾಧ್ಯತೆಗಳಿಗೆ ಪರಿಚಯಿಸುವ, ನಮ್ಮ ಮನೋಲೋಕವನ್ನೂ ಭಾವಲೋಕವನ್ನೂ ವಿಸ್ತರಿಸುವ ಕೆಲಸ ಮಾಡುತ್ತದೆ ಅನ್ನಿಸುತ್ತದೆ. ಕನ್ನಡದ ಎಷ್ಟೋ ಹೆಸರಾಂತ ಬರಹಗಾರರ ಮನೆ ಮಾತು ಕನ್ನಡವಲ್ಲ.

ಸಾಂದರ್ಭಿಕ ಚಿತ್ರ

ಆದರೆ ಕನ್ನಡ ಅವರ ಪರಿಸರದ ಭಾಷೆಯಾದ ಕಾರಣದಿಂದಲೇ ಅದು ಅವರ ಅಭಿವ್ಯಕ್ತಿಯ ಮಾಧ್ಯಮವೂ ಆಗಿದೆ. ಸಾಮಾನ್ಯವಾಗಿ ಎಲ್ಲರೂ ಸಹಜವಾಗಿಯೇ ನಮ್ಮ ಪರಿಸರದ ಭಾಷೆಗೇ ಹೆಚ್ಚು ತೆರೆದುಕೊಳ್ಳುವುದು ಮತ್ತು ಅದರಿಂದಲೇ ಹೆಚ್ಚು ಪಡೆದುಕೊಳ್ಳುವುದು ಸಹ.
ಇಲ್ಲಿ, ಅಂದರೆ ಅಮೆರಿಕಾದಲ್ಲಿ ಹುಟ್ಟಿ ಬೆಳೆಯುತ್ತಿರುವ, ಕನ್ನಡ ಮನೆಮಾತಾಗಿರುವ ಮಕ್ಕಳನ್ನುಗಮನಿಸುವಾಗ ಈ ಸಂಗತಿ ನನಗೆ ಇನ್ನಷ್ಟು ಹೆಚ್ಚು ಸ್ಪಷ್ಟವಾಗುತ್ತಿದೆ. ಇನ್ನೂ ಒಂದು ಗಮನಿಸಬೇಕಾದ ವಿಷಯವೆಂದರೆ, ಇಲ್ಲಿರುವ ಕನ್ನಡಿಗರ ಮಕ್ಕಳೆಲ್ಲರ ಮನೆಮಾತು ಬರಿಯ ಕನ್ನಡವಷ್ಟೇ ಆಗಿರುವುದೂ ಇಲ್ಲ. ಕೆಲವರಿಗೆ ಅದು ತುಳು,ಕೊಂಕಣಿ ಅಥವಾ ಕನ್ನಡವಲ್ಲದ ಕರ್ನಾಟಕದ್ದೇ ಆದ ಇನ್ಯಾವುದಾದರೂ ಭಾಷೆಯೂ ಆಗಿರಬಹುದು. ಜೊತೆಗೆ ಕನ್ನಡದ್ದೇ ಆದ ಡಯಲೆಕ್ಟುಗಳನ್ನು ಕೂಡ ಇಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳು ನಮಗಿಂತ ಭಿನ್ನವಾಗಿ ಗ್ರಹಿಸುತ್ತಾರೆ. ಯಾಕೆಂದರೆ ಈ ಡಯಲೆಕ್ಟುಗಳ ಆವರಣವಂತೂ ಅವರಿಗೆ ತುಂಬಾ ಚಿಕ್ಕದಾಗಿರುವ ಸಾಧ್ಯತೆಯೇ ಹೆಚ್ಚು.

ಭಾಷೆಯೊಂದನ್ನು ಆಡುವ, ಓದುವ ಮತ್ತು ಬರೆಯುವ ಕೌಶಲಗಳು ಕೂಡ ಬೇರೆಬೇರೆ ನೆಲೆಯವು. ಮನೆಮಾತು ಕನ್ನಡವಾಗಿರುವ ಇಲ್ಲಿನ ಬಹುತೇಕ ಮಕ್ಕಳು ಶಿಶುವಾಗಿದ್ದಾಗಿನಿಂದ ಸುಮಾರು ಐದು ಅಥವಾ ಹೆಚ್ಚೆಂದರೆ ಏಳೆಂಟು ವರ್ಷಗಳಾಗುವವರೆಗೆ ಕನ್ನಡವನ್ನು ಸಾಕಷ್ಟು ಮಾತನಾಡುತ್ತಾರೆ. ಆ ನಂತರದ ಪ್ರೀ-ಟೀನ್​ ವಯಸ್ಸಿನಿಂದ ಕನ್ನಡವು ಮಾತನಾಡುವ ಭಾಷೆಯಾಗಿ ಉಳಿಯುವುದು ಅಷ್ಟು ಸುಲಭವಲ್ಲ. ಕನ್ನಡದಲ್ಲಿ ಸಲೀಸಾಗಿ ಹಾಡುವ, ಅಷ್ಟಿಷ್ಟು ಓದು ಬರಹವನ್ನೂ ಮಾಡುವ ಬಹಳಷ್ಟು ಮಕ್ಕಳು ಅಷ್ಟು ಸುಲಭವಾಗಿ ಕನ್ನಡದಲ್ಲಿ ಮಾತನಾಡುವುದನ್ನು ಮುಂದುವರಿಸುವುದು ಕಷ್ಟ. ಅವರು ಬೆಳೆಯುತ್ತಿರುವ ಇಲ್ಲಿನ ಪರಿಸರದ ಭಾಷೆಯಾದ ಇಂಗ್ಲಿಷ್  ಅವರ ಅನುಭವಲೋಕವನ್ನೂ ಓದನ್ನೂ ಆ ಮೂಲಕ ಅವರ ಸಂವೇದನೆಗಳನ್ನು ಹಿಗ್ಗಿಸುವ ಪಾತ್ರವನ್ನೂ ಸಹಜವಾಗಿಯೇ ನಿರ್ವಹಿಸುತ್ತಿರುವುದೂ ವಿಸ್ತರಿಸುತ್ತಿರುವುದೂ ಇದಕ್ಕೆ ಕಾರಣ ಎಂದು ನನ್ನ ಇಂದಿನ ಗ್ರಹಿಕೆ. ಇದಕ್ಕೆ ಅಪವಾದವಾಗಿ ಕನ್ನಡವನ್ನು ಚೆನ್ನಾಗಿಯೇ ಮಾತನಾಡುವ ಮಕ್ಕಳು ಕೆಲವರಿದ್ದರೂ ಅವರ ಸಂಖ್ಯೆ ಬಹಳ ಕಮ್ಮಿಯಿದೆ.

ಇದೆಲ್ಲವನ್ನೂ ಅರಿತೂ ಮಕ್ಕಳಿಗೆ ನಮ್ಮ ಕೈಲಾದಷ್ಟು ನಮ್ಮ ನಮ್ಮ ಭಾಷೆಯನ್ನು ಒದಗಿಸುವ ಕಳಕಳಿಯನ್ನು ನಾನು ಇಲ್ಲಿನ ಎಲ್ಲಾ ಭಾಷಿಕರಲ್ಲೂ ಕಂಡಿದ್ದೇನೆ. ಈ ಪ್ರಯತ್ನಗಳು ಕೂಡ ಅಲ್ಲಲ್ಲಿನ  ಆ ಭಾಷೆ ಮಾತನಾಡುವ ಪರಿಸರ ಎಷ್ಟು ವಿಸ್ತಾರವಾಗಿದೆ ಮತ್ತು ಶಕ್ತವಾಗಿದೆ ಅದರ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತದೆ. ವಲಸಿಗರ ದೇಶವಾದ ಅಮೆರಿಕಾದಲ್ಲಿ 350ಕ್ಕೂ ಹೆಚ್ಚು ಬೇರೆ ಬೇರೆ ಭಾಷೆಗಳ ಹಿನ್ನೆಲೆಯಿಂದ ಬಂದವರಿದ್ದಾರೆ. ಒಂದೆರಡು ವರ್ಷಗಳ ಹಿಂದಿನ ಜನಗಣತಿಯ ಆಧಾರದಿಂದ ನೋಡುವುದಾದರೆ, ಈ ದೇಶದಲ್ಲಿಸುಮಾರು 48,000ದಷ್ಟು ಜನ ಕನ್ನಡ ಮಾತಾಡುವವರು ಇದ್ದಾರೆ. ಹೆಚ್ಚಾಗಿ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿ ಕನ್ನಡಿಗರು ಹೆಚ್ಚಾಗಿ ನೆಲೆಸಿರುವುದರಿಂದ ಕನ್ನಡದ ಪರಿಸರವೂ ಅಷ್ಟಿಷ್ಟಾದರೂ ಇರುವುದು ಇಲ್ಲಿಯೇ. ಅದರಲ್ಲೂ ಮಹಾನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಾಗಿದ್ದು, ನಗರಗಳಿಂದ ದೂರವಾದಷ್ಟೂ ಈ ಪರಿಸರ ತೆಳುವಾಗುತ್ತಾ ಹೋಗುತ್ತದೆ.

ನ್ಯೂಜೆರ್ಸಿ, ಕ್ಯಾಲಿಫೋರ್ನಿಯಾಗಳಂಥ  ರಾಜ್ಯಗಳಲ್ಲಿ ಅತಿಹೆಚ್ಚುಅಂದರೆ ಐದರಿಂದ ಹತ್ತುಸಾವಿರಗಳಷ್ಟು ಸಂಖ್ಯೆಯ ಕನ್ನಡ ಭಾಷಿಕರಿದ್ದಲ್ಲಿ, ಕೇವಲ ಹದಿನೈದೋ ಇಪ್ಪತ್ತೋ ಜನ ಕನ್ನಡ ಭಾಷಿಕರಿರುವ ರಾಜ್ಯಗಳೂ ಇವೆ. ಹಾಗೆಯೇ ಕನ್ನಡ ಮಾತನಾಡುವ ಒಬ್ಬರೂ ಇಲ್ಲದ ರಾಜ್ಯಗಳೂ ಇವೆ. ಹೀಗಾಗಿ ಈ ಬೇರೆಬೇರೆ ರಾಜ್ಯಗಳಲ್ಲಿ ಬೆಳೆಯುತ್ತಿರುವ ಕನ್ನಡದ ಮಕ್ಕಳ ಭಾಷಿಕ ವಲಯವೂ ಅದರ ಸಾಧ್ಯತೆಗಳೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಸಂತೋಷದ ವಿಚಾರವೆಂದರೆ, ಇಷ್ಟೆಲ್ಲಾ ಮಿತಿಗಳ ಹಿನ್ನೆಲೆಯಲ್ಲೂ ಮಕ್ಕಳಿಗೆ ಕನ್ನಡ ಕಲಿಸಬೇಕೆಂದು ಬಯಸುವ ಮತ್ತು ಅದಕ್ಕಾಗಿ ಶ್ರಮಿಸುವ ಜನ ಮತ್ತು ಸಂಘ ಸಂಸ್ಥೆಗಳ ಸಂಖ್ಯೆ ಅಮೆರಿಕಾದಲ್ಲಿ ಹೆಚ್ಚುತ್ತಲೇ ಇದೆ. ಒಂದಕ್ಕಿಂತ ಹೆಚ್ಚು ಭಾಷೆಗೆ ಮಗು ತೆರೆದುಕೊಂಡಷ್ಟೂ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅದು ನೆರವಾಗುತ್ತದೆ ಎಂಬ ಅರಿವು ಹೆಚ್ಚಾಗಿರುವುದು ಮತ್ತು ನಾವಾಡುವ ಭಾಷೆ ನಮ್ಮ ಮಕ್ಕಳಿಗೂ ಸಿಗುವುದಾದರೆ ಚೆಂದ ಎನ್ನುವ ಸಹಜ ಆಸೆಯೂ ಇದಕ್ಕೆ ಕಾರಣವಾಗಿದೆ.

ಸುಮಾರು 70ರ ದಶಕದಿಂದ ಅಲ್ಲಲ್ಲಿ ಪ್ರಾರಂಭವಾದ ಇಲ್ಲಿನ ಕನ್ನಡ ಕೂಟಗಳು, ಈಗ ಕನ್ನಡಿಗರಿರುವ ಎಲ್ಲೆಡೆಯೂ ಇವೆ ಮತ್ತು ಮಕ್ಕಳಿಗೆ ಕನ್ನಡದ ಪರಿಸರವನ್ನೂ, ಕಲಿಕೆಯನ್ನೂ ಒದಗಿಸುವ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳನ್ನೂ ಮಾಡುತ್ತಿವೆ. ಇಂತಹ ಕೂಟಗಳು ನಡೆಸುವ ‘ಕನ್ನಡಕಲಿ’ ತರಗತಿಗಳಲ್ಲಿ ಕೆಲಸ ಮಾಡುವವರೆಲ್ಲರೂ ಸ್ವಯಂ ಸೇವಕ ಶಿಕ್ಷಕ ಶಿಕ್ಷಕಿಯರು. ನಾನು ಕೂಡ ಸುಮಾರು ಮೂರು ವರ್ಷಗಳಷ್ಟು ಕಾಲ ಈ ಕೆಲಸವನ್ನು ಮಾಡಿದ್ದೇನೆ. ದಶಕಗಳಿಂದಲೂ ಇಲ್ಲಿ ಕನ್ನಡವನ್ನು ಕಲಿಸುತ್ತಿರುವವರೂ ಇದ್ದಾರೆ. ಕನ್ನಡವನ್ನು ಓದಲು, ಬರೆಯಲು ಕಲಿತ ಮಕ್ಕಳಿಗೆ ಕನ್ನಡದ ಓದು ಒದಗಿಸುವ ಪ್ರಯತ್ನಗಳು ಕೂಡ ಇಲ್ಲಿ ಅಷ್ಟಿಷ್ಟು ನಡೆದಿವೆ. ಮಕ್ಕಳಿಗೆಂದೇ ಬರೆಯುವ ಮತ್ತು ಮಕ್ಕಳಿಂದಲೇ ಬರೆಸುವ ಚಟುವಟಿಕೆಗಳು ನಡೆಯುತ್ತಿವೆ. ತೀರಾ ಇತ್ತೀಚೆಗೆ, ಈ ಕನ್ನಡದ ಕಲಿಕೆಗೆ ಇಲ್ಲಿನ ಶಾಲೆಗಳಲ್ಲೂ ಮಾನ್ಯತೆ  ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸಗಳಾಗುತ್ತಿವೆ. ಬರುವ ದಿನಗಳಲ್ಲಿಇದು ಇನ್ನಷ್ಟು ಹೆಚ್ಚಾಗಬಹುದು. ಇದಲ್ಲದೆ ಈಗಾಗಲೇ ಕನ್ನಡವನ್ನು ಒಂದು ಐಚ್ಛಿಕ ಭಾಷೆಯಾಗಿ ಇಲ್ಲಿನ ಕೆಲವು ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಅವಕಾಶ ಇದೆ.

ಸಾಂದರ್ಭಿಕ ಚಿತ್ರ

ಇವೆಲ್ಲಾ ಏನಿದ್ದರೂ ಇಲ್ಲಿನ ‘ಸೆಕೆಂಡ್​ ಜನರೇಷನ್ ಇಂಡಿಯನ್ ಅಮೇರಿಕನ್’ ಆಗಿ ಬೆಳೆಯುತ್ತಿರುವ ನಮ್ಮ ಮಕ್ಕಳಲ್ಲಿ ಕನ್ನಡವು ಒಂದು ಭಾಷೆಯಾಗಿ ಎಷ್ಟರ ಮಟ್ಟಿಗೆ ಉಳಿದುಕೊಳ್ಳಲಿದೆ ಎನ್ನುವುದನ್ನು ನಾವು ಕಾದುನೋಡಬೇಕಿದೆ. ನನ್ನದೇ ಅನುಭವದಲ್ಲಿ ಹೇಳುವುದಾದರೆ, ಈಗ ಹದಿನೈದು ತುಂಬಿರುವ ನನ್ನ ಮಗ ಐದಾರು ವರ್ಷದವನಿದ್ದಾಗ ಕನ್ನಡದ ಮಾತು, ಓದು, ಬರಹ ಎಲ್ಲವೂ ಅವನಲ್ಲಿ ಇನ್ನಷ್ಟು ಶಕ್ತವಾಗಿತ್ತು. ಈಗ ಹರೆಯದ ಈ ಹುಡುಗನ ಇಂದಿನ ಅಪಾರವಾದ ಓದಿನ ಹಸಿವಿಗೆ ಇಂಗ್ಲೀಷ್​ ಅವನಿಗೆ ಬೇಕಾದದ್ದನ್ನೆಲ್ಲಾಒದಗಿಸುತ್ತಿದೆ. ಅವನ ಆಸಕ್ತಿಯ ಕ್ಷೇತ್ರಗಳಾದ ರಾಜಕಾರಣದ ವಿದ್ಯಮಾನಗಳು, ಸಾಮಾಜಿಕ ಅರ್ಥಶಾಸ್ತ್ರ, ಸಾಹಿತ್ಯ, ವಿಜ್ಞಾನ, ಅಷ್ಟಿಷ್ಟು ಅಧ್ಯಾತ್ಮವೂ ಕೂಡ ಅವನಿಗೆ ಅವನ ಪರಿಸರ ಭಾಷೆಯ ಮೂಲಕವೇ ದೊರಕುತ್ತಿದೆ. ಇದನ್ನೆಲ್ಲಾ ಅವನು ಕನ್ನಡದಲ್ಲಿಓದುವುದನ್ನು ಈ ಸದ್ಯದಲ್ಲಿ ನಾನು ಕಲ್ಪಿಸಿಕೊಳ್ಳಲಾರೆ. ಆದರೆ ಕಾರ್ಲ್​ಮಾರ್ಕ್ಸ್​ ಜರ್ಮನಿ ಭಾಷೆಯಲ್ಲಿ ಬರೆದ ‘ಕ್ಯಾಪಿಟಲ್’ ಕೃತಿಯನ್ನುಇಂಗ್ಲೀಷ್​ ಅನುವಾದದಲ್ಲಿ ಓದಿ, ಸ್ವಾತಂತ್ರ್ಯ ಪೂರ್ವ ಭಾರತದ ಸ್ಥಿತಿಗತಿಗಳ ಬಗ್ಗೆ ಹೆಚ್ಚು ತಿಳಿಯುವ ಕುತೂಹಲವನ್ನುಅವನು ತೋರಿಸುವಾಗ, ಪಶ್ಚಿಮದ ಅಸ್ತಿತ್ವವಾದ, ನಿರಾಕರಣವಾದಗಳ ಮೂಲಕವೆ ಭಾರತೀಯ ತತ್ವಶಾಸ್ತ್ರದ ಕುರಿತೂ ಕುತೂಹಲ ತಾಳುವ, ಜಿಡ್ಡುಅವರನ್ನೂ ಕೈಗೆತ್ತಿಕೊಂಡು ಓದುವ ಅವನನ್ನು ನೋಡುವಾಗ ನನಗೆ ಅದು ಇನ್ನೊಂದು ಸಾಧ್ಯತೆಯನ್ನು ತೋರಿಸುತ್ತಿದೆ.

ಅವನ ಓದಿನ ಹಸಿವು ನಾಳೆ ಅವನು ಕನ್ನಡದ ಯಾವುದೋ ಕೃತಿಯೊಂದನ್ನು ಮೂಲ ಕನ್ನಡದಲ್ಲಿಯೇ ಓದಬೇಕೆನ್ನುವ ಹಂಬಲವನ್ನು ಅವನಲ್ಲಿ ಹುಟ್ಟಿಸಬಹುದು. ಭಾಷೆಯನ್ನು ನಾವು ಬಳಕೆ ಮಾಡುವುದು ಸಂವಹನಕ್ಕಾಗಿಯೇ ಆದರೂ ಭಾಷೆ ನಮಗೆ ನಮ್ಮ ಸಂವೇದನೆಗಳನ್ನು ವಿಸ್ತರಿಸುವ ಸಾಧನವಾಗಿ ಒದಗಿಬರುತ್ತದೆ. ಎಷ್ಟೆಂದರೆ ಈ ವಿಸ್ತರಣೆಗಾಗಿಯೇ ಮುಂದೊಮ್ಮೆ ಎಲ್ಲವನ್ನೂ ಅದರ ಮೂಲದಲ್ಲಿಯೇ ಓದಿ ಅರಿಯುವ ಹಂಬಲ ಹುಟ್ಟಿಸುವಷ್ಟು. ಇಂಗ್ಲೀಷಿನ ಮೂಲಕವೇ ವಿಸ್ತಾರಗೊಳ್ಳುವ ಇಲ್ಲಿನ ಮಕ್ಕಳ ಸಂವೇದನಾಲೋಕದಲ್ಲಿ ಮುಂದೆ ಒಂದು ದಿನ ಕನ್ನಡವನ್ನು ಮೂಲದಲ್ಲಿಯೇ ಓದಿ ಅರಿಯುವ ಹಂಬಲ ಮೂಡಬಹುದು, ಅದು ಅಸಾಧ್ಯವಲ್ಲ. ಕಲಿತು ಮರೆಯುವ ಕನ್ನಡದ ಲೋಕಕ್ಕೆ ಅವರು ನಾಳೆ ತಾವಾಗಿಯೇ ಬಂದು ಬಾಗಿಲು ತಟ್ಟಬಹುದು! ಅಥವಾ ಮರೆಯದಷ್ಟು ಸಶಕ್ತವಾಗಿ ಅವರ ಇಲ್ಲಿನ ಕನ್ನಡ ಪರಿಸರವೇ ಕೊಂಚ ಬದಲಾಗಲೂಬಹುದು.

ಕನ್ನಡದ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿಇಂಗ್ಲೀಷಿಗೆ ಅನುವಾದಗೊಂಡು, ಅವರ ಓದಿಗೆ ಸಿಕ್ಕುವುದಾದಲ್ಲಿ ಈ ಸಾಧ್ಯತೆಗೆ ಇನ್ನಷ್ಟು ಬಲ ಬರಬಹುದು. ಆ ನಿಟ್ಟಿನಲ್ಲಿ ಹೆಚ್ಚು ಕೆಲಸಗಳು ನಡೆಯಬೇಕಿದೆ ಅನ್ನಿಸತ್ತೆ. ಮಕ್ಕಳಾಗಲೀ ದೊಡ್ಡವರಾಗಲಿ, ಅಮೆರಿಕಾದಲ್ಲಿ ಓದುವ ಹವ್ಯಾಸ ಸಾಕಷ್ಟಿದೆ. ಇತರ ದೇಶಭಾಷೆಗಳನ್ನೂ ಸಾಂಸ್ಕೃತಿಕ ಹಿನ್ನೆಲೆಯನ್ನೂ ಆದರಿಸುವ ಮನೋಭಾವವೂ ಅಮೆರಿಕಾದ ಸಂಸ್ಕೃತಿಯ ಭಾಗವೇ ಆಗಿರುವುದನ್ನು ಕೂಡ ನಾವು ಮರೆಯಬಾರದು. ಕರ್ನಾಟಕದಲ್ಲೇ ಬೆಳೆಯುತ್ತಿರುವ ಕನ್ನಡದ ಮಕ್ಕಳು ಓದಿಗೆ, ಅದರಲ್ಲೂ ಕನ್ನಡದ ಓದಿಗೆ ಎಷ್ಟು ತೆರೆದುಕೊಂಡಿದ್ದಾರೆ ತಿಳಿಯುವ ಕುತೂಹಲ ಯಾವತ್ತೂ ನನಗೆ. ಸದ್ಯಕ್ಕಂತೂ ಓದಲು, ಬರೆಯಲು ಕಲಿತಿದ್ದ ಕನ್ನಡವನ್ನು ಮರೆಯದಿರಲು ಪ್ರತಿ ಬೇಸಿಗೆಯಲ್ಲಿ ನನ್ನ ಮಗನಿಗೆ ಕನ್ನಡದ ಪುಸ್ತಕವೊಂದರಿಂದ ದಿನಕ್ಕೆ ಒಂದು ವಾಕ್ಯವನ್ನು ಬರೆಯಿಸುವ ಮತ್ತು ಓದಿಸುವ ಪ್ರಯತ್ನ ಮಾಡುತ್ತೇನೆ. ಆಗೀಗ ಅವನ ಫೋನಿಗೆ ಕನ್ನಡದಲ್ಲಿ ಟೆಕ್ಸ್ಟ್​ ಕಳಿಸಿ ಓದಿಸುತ್ತೇನೆ. ಇದೆಲ್ಲದರ ಜೊತೆಗೆ ಇದಾವುದೂ ಅವನಿಗೆ ಬಲವಂತದ ಮಾಘಸ್ನಾನವಾಗದಿರುವ ಎಚ್ಚರಿಕೆ ವಹಿಸುತ್ತೇನೆ.

ಲೇಖಕಿ ಮೀರಾ ಪಿ. ಆರ್.

ಪರಿಚಯ: ಹುಟ್ಟಿದ್ದು ಗುಂಡ್ಲುಪೇಟೆಯಲ್ಲಿ. ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ತುಮಕೂರು ಮತ್ತು ಮೈಸೂರಿನಲ್ಲಿ. ಅಮೆರಿಕಾದ ಬಾಸ್ಟನ್ ನಲ್ಲಿ 8 ವರ್ಷಗಳನ್ನು ಕಳೆದು, 2008 ರಿಂದ ನ್ಯೂಜೆರ್ಸಿಯಲ್ಲಿ ನೆಲೆ ನಿಂತಿದ್ದಾರೆ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಮೀರಾ ಶಿಕ್ಷಕಿಯಾಗಿ ಹಾಗೂ ಮೈಸೂರು, ಬೆಂಗಳೂರು ಆಕಾಶವಾಣಿಯಲ್ಲಿ ಹಲವು ವರ್ಷ ಅರೆಕಾಲಿಕ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಹಲವು ನಿಯತಕಾಲಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಮತ್ತು ವೆಬ್ ಪೋರ್ಟಲ್ ಗಳಲ್ಲಿ, ಕನ್ನಡ ಸಾಹಿತ್ಯ ರಂಗ ಮತ್ತು ಅಮೆರಿಕದ ಕನ್ನಡ ಕೂಟಗಳ ಹಲವು ಪ್ರಕಟಣೆಗಳಲ್ಲಿ ಇವರ ಹಲವು ಕಥೆ, ಕವಿತೆ, ಪ್ರಬಂಧ, ವಿಮರ್ಶೆ, ಅಂಕಣ ಬರಹಗಳು ಪ್ರಕಟವಾಗಿವೆ. ಮಕ್ಕಳ ಸಾಹಿತ್ಯ ಇವರ ವಿಶೇಷ ಪ್ರೀತಿ.

ಓದು ಮಗು ಓದು: ನಾನಂತೂ ಅಜ್ಜಿ-ತಾತನಿಗೇ ಕಥೆ ಹೇಳಿಬಿಟ್ಟೆ…