ಓದು ಮಗು ಓದು: ನಾನಂತೂ ಅಜ್ಜಿ-ತಾತನಿಗೇ ಕಥೆ ಹೇಳಿಬಿಟ್ಟೆ…

ಬೆಂಗಳೂರಿನ ಜ್ಞಾನವಿಜ್ಞಾನ ವಿದ್ಯಾಪೀಠದಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಸುಮನ್ಯು ಪಿ. ರಾವ್ ಗೆ, ಅವನ ಸ್ನೇಹಿತೆ ಹುಟ್ಟುಹಬ್ಬಕ್ಕೆ ಕೊಟ್ಟ ಪುಸ್ತಕ ಯಾವುದಾಗಿತ್ತು, ಹಾಗೆಯೇ ಅವನ ಅಮ್ಮ ಪುಸ್ತಕ ಪ್ರದರ್ಶನದಿಂದ ತಂದುಕೊಟ್ಟ ಪುಸ್ತಕಗಳಲ್ಲಿ ಏನೆಲ್ಲ ಕಥೆಗಳಿವೆ?

  • TV9 Web Team
  • Published On - 18:09 PM, 13 Jan 2021
ತನ್ನ ನೆಚ್ಚಿನ ಪುಸ್ತಕಗಳೊಂದಿಗೆ ಸುಮನ್ಯು

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್  tv9kannadadigital@gmail.com

ಬೆಂಗಳೂರಿನ ಸುಮನ್ಯು ಪಿ. ರಾವ್ ಆಯ್ಕೆಗಳು ಹೀಗಿವೆ.

ಪು: Wow! The Visual encyclopedia of everything (General Knowledge)
ಲೇ: Linda Esposito (Managing Editor)
ಪ್ರ
 DK Penguin Random House

Wow! visual encyclopedia- ಇದು ನನಗೆ ತುಂಬಾ ಇಷ್ಟವಾದ ಪುಸ್ತಕ. ಪ್ರಕೃತಿ, ಮಾನವದೇಹ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ, ಭೂಮಿ, ಜನರು ಮತ್ತು ಜಗತ್ತು, ಚರಿತ್ರೆ, ಕಲೆ ಮತ್ತು ಸಂಸ್ಕೃತಿ ಹೀಗೆ ಎಂಟು ವಿಭಾಗಗಳಿವೆ. ಅದರಲ್ಲೂ ಕೀಟ ಪ್ರಪಂಚ ತುಂಬಾ ಚಿತ್ರಗಳೊಂದಿಗೆ ಕುತೂಹಲಕಾರಿ ಆಗಿದೆ. ಕಪ್ಪೆ ಹಾಗೂ ಸರ್ಪಗಳ ಬಗ್ಗೆ ವಿಶೇಷ ಮಾಹಿತಿ ಇದೆ. ಬಣ್ಣಬಣ್ಣದ ರತ್ನಗಳು ನೋಡಲು ಆಕರ್ಷಕವಾಗಿವೆ.

ಮಾನವ ದೇಹದ ಅಂಗಾಗ ರಚನೆ ಉಣ್ಣೆ ನೂಲಿನ ಮೂಲಕ ತುಂಬಾ ಚೆನ್ನಾಗಿ ಚಿತ್ರಗಳನ್ನು ತೋರಿಸಿ ವಿವರಿಸಲಾಗಿದೆ. ಸುಮಾರು 300 ಪುಟಗಳು ಇರುವ ಈ ಪುಸ್ತಕ ಹೂವಿನ ಬಿಡಿ ಭಾಗಗಳಿಂದ ಹಿಡಿದು 20 ನೇ ಶತಮಾನದ ತಂತ್ರಜ್ಞಾನದವರಗೆ, ಮಾನವನ ಜೀವಕೋಶಗಳಿಂದ ಶಸ್ತ್ರಚಿಕಿತ್ಸೆಯ ಉಪಕರಣಗಳವರಗೆ ಹೀಗೇ ಅನೇಕ ವಿಷಯಗಳನ್ನು ಸವಿಸ್ತಾರವಾಗಿ ತಿಳಿಸಲಾಗಿದೆ. ಈ ಪುಸ್ತಕ ಓದಿ ನಾನು ತುಂಬಾ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಂಡೆ.

ಪ್ರ: ಜಾತಕ ಕಥೆಗಳು (ಜಾನಪದ ನೀತಿ ಕಥೆಗಳು)
ಪ್ರ: ವಿಲ್ಕೋ ಪಿಕ್ಚರ್ ಲೈಬ್ರರಿ

ಇದು ನನಗೆ ಕನ್ನಡದ ಪ್ರಿಯವಾದ ಪುಸ್ತಕ. ಕಥೆಗಳಲ್ಲಿ ಜಾತಕ ಕಥೆಗಳು ನಮ್ಮ ಗಮನ ಸೆಳೆಯುತ್ತವೆ. ಕಾಮಿಕ್ಸ್​ ಥರದ  ಪಾತ್ರಧಾರಿಗಳ ಸಂಭಾಷಣೆ ಇದೆ. ನಮಗೆ ವಿವಿಧ ವಿಷಯಗಳ ಬಗ್ಗೆ ಜ್ಞಾನ ನೀಡುವ, ಹಾಸ್ಯಯುಕ್ತ, ಆಕರ್ಷಕ ಚಿತ್ರಗಳಿಂದ ಕೂಡಿದ, ಸರಳ ಆದರೆ ಕುತೂಹಲಕರ ವಿವರಣೆ, ಸಂವಾದಗಳಿಂದ ಕೂಡಿದೆ. ಓದುತ್ತಿದ್ದರೆ ಎಲ್ಲಾ ಪಾತ್ರಧಾರಿಗಳು ಕಣ್ಣಮುಂದೆ ಬರುತ್ತಾರೆ. ಅದರಲ್ಲೂ ‘ಎಮ್ಮೆ ಮತ್ತು ಕೋತಿ’ ಕಥೆ ತುಂಬಾ ತಮಾಷೆಯಾಗಿದೆ.

ಪು: Great Stories for Children (Mythological stories)
ಲೇ: Anurag Mehta
ಪ್ರ: Nita Mehta Wiskidz

ಈ ಪುಸ್ತಕ ನನಗೆ ಸ್ನೇಹಿತೆಯಿಂದ ಸಿಕ್ಕ ಹುಟ್ಟಿದ ಹಬ್ಬದ ಉಡುಗೊರೆ. ವರ್ಣರಂಜಿತ ಆಸಕ್ತಿದಾಯಕ ಪುಸ್ತಕ. ಈ ಪುಸ್ತಕವು ಭಾರತೀಯ ಜಾನಪದ ಮತ್ತು ಪುರಾಣಗಳ ಕಥೆಗಳ ಸಂಗ್ರಹವಾಗಿದೆ. ಇದು ಕೆಂಪು, ಹಳದಿ, ಹಸಿರು, ನೀಲಿ, ಗುಲಾಬಿ, ನೇರಳೆ, ಕಂದು ಮತ್ತು ಕಿತ್ತಳೆ ಎಂಬ ಎಂಟು ಪುಸ್ತಕಗಳ ಸರಣಿಯಾಗಿದೆ. ಪುರಾಣಕಥೆಯ ಅನೇಕ ವ್ಯಕ್ತಿಗಳ ಹಾಗೂ ಪ್ರಸಂಗದ ಬಗ್ಗೆ ಮೊದಲ ಸಾರಿ ತಿಳಿದುಕೊಂಡೆ.  ‘Brahma tests Krishna’ and ‘How Kali was created?’ ಈ ಎರಡು ಕಥೆ ಎಲ್ಲೂ ಕೇಳಿರಲಿಲ್ಲ. ಅಜ್ಜಿತಾತನಿಗೂ ಈ ಕಥೆಗಳನ್ನು ಹೇಳಿದೆ.

ಪು: Nature Cross-Section (General Knowledge)
ಲೇ: Moira Butterfield & Richard Orr
ಪ್ರ: Dorling Kindersley

Nature’s Cross section-ನನ್ನ ಅಮ್ಮ ನನಗೆ ಪುಸ್ತಕ ಪ್ರದರ್ಶನದಿಂದ ತಂದುಕೊಟ್ಟಳು. ಪುಸ್ತಕ ನೋಡಿ ತುಂಬಾ ಖುಷಿ ಆಯಿತು. ನನಗೆ ಎಷ್ಟು ಇಷ್ಟಅಂದ್ರೆ ದಿನ-ರಾತ್ರಿ ಓದಿಪೂರ್ತಿ ಮುಗಿಸಿದೆ. ಬೀವರ್​ಗಳು ಅಣೆಕಟ್ಟು ಹೇಗೆ ನಿರ್ಮಿಸುತ್ತಾರೆ? ಜೇನುಗೂಡಿನೊಳಗೆ ಏನು ನಡೆಯುತ್ತದೆ? ಮಳೆ ಅರಣ್ಯ ಸಂರಕ್ಷಣೆ ಏಕೆ ಮುಖ್ಯ? ನೈಸರ್ಗಿಕ ಜಗತ್ತಿನಲ್ಲಿ ಮೂಲ, ರೋಮಾಂಚಕಾರಿ. ಪ್ರಾಣಿಗಳು ತಮ್ಮ ಮನೆಗಳನ್ನು ಹೇಗೆ ಮಾಡುತ್ತವೆ ಮತ್ತು ಸಂರಕ್ಷಣೆ ಏಕೆ ಮುಖ್ಯವಾಗಿದೆ ಎಂಬುದನ್ನು ವಿವರಿಸುತ್ತದೆ. ಅದರಲ್ಲೂ ಮಳೆ ಅರಣ್ಯದ ಬಗ್ಗೆ ಎಷ್ಟು ವಿಷಯ ಇದೆ ಗೊತ್ತಾ? ಅಬ್ಬಬ್ಬಾ! ಮಳೆ ಅರಣ್ಯದ ಬಗ್ಗೆ ನಾನು ಒಂದು PPT ಮಾಡಿದ್ದೆ. ಶಾಲೆಯ ಯೂಟ್ಯೂಬ್ ಚಾನೆಲ್​ನಲ್ಲಿದೆ: https://youtu.be/evXoCACqzuI

ಪು: ದಿನಕ್ಕೊಂದುಕಥೆ
ಲೇ: ಅನುಪಮಾ ನಿರಂಜನ
ಪ್ರ: ಡಿವಿಕೆ ಮೂರ್ತಿ

ಇದು ನಮ್ಮ ಅಮ್ಮನಿಗೆ ಅವರ ಅಪ್ಪ(ತಾತ) ಕೊಡಿಸಿದ ಪುಸ್ತಕ. ಅಮ್ಮ ಜೋಪಾನಮಾಡಿ ನನಗೆ ಕೊಟ್ಟಿದ್ದಾಳೆ. 12 ಮಾಸದ 12 ಸಂಚಿಕೆ. 365 ಕಥೆಗಳು. ಭಾರತದ ಪಂಚತಂತ್ರ, ಇತಿಹಾಸ, ಹಿತೋಪದೇಶ, ಪುರಾಣ ಮೂಲದ ಕಥೆಗಳು. ಪ್ರಾಚೀನ ಗ್ರೀಸ್​ನ ಈಸೋಪನ ನೀತಿಕಥೆಗಳು, ಯೂರೋಪಿನ ಗ್ರಿಮ್​ ಸಹೋದರರು ಮತ್ತು ಹಾನ್ಸ್​ ಕ್ರಿಶ್ಚಿಯನ್ ಆಂಡರ್ಸನ್​ ಮತ್ತಿತರ ಕಥೆಗಳನ್ನು ಆಧರಿಸಿದೆ. ಈಗ ನಾನು ನನ್ನ ಅಜ್ಜಿಯಿಂದ ದಿನಾ ಆ ಪುಸ್ತಕದಿಂದ ಒಂದು ಕಥೆ ಕೇಳುತ್ತೇನೆ. ‘ಮೂರು ಜನ ಸೋಮಾರಿಗಳು’, ‘ಹಾರುವ ಪಂದ್ಯ’, ‘ಕಪ್ಪುಜೇಡ’ ಇಂತಹ ಅನೇಕ ಹಾಸ್ಯ ರೋಚಕ ಕತೆಗಳಿವೆ.

ಓದು ಮಗು ಓದು: ತಮ್ಮಣ್ಣ ಸರ್ ಕ್ಲಾಸ್ ಖಂಡಿತ ವಿದ್ಯಾರ್ಥಿಗಳಿಗಲ್ಲ!